
Iran-Israel War| ಇರಾನ್‌ನ ನೂತನ ಸರ್ವೋಚ್ಚ ನಾಯಕನಾಗಿ ಆಯ್ಕೆಯಾಗಿರುವ ಮೊಜ್ತಬಾ ಖಮೇನಿ ಯಾರು?
Iran Supreme Leader| ಆಯತೊಲ್ಲಾ ಅಲಿ ಖಮೇನಿ ಹತ್ಯೆಯ ನಂತರ ಅವರ ಪುತ್ರ ಮೊಜ್ತಬಾ ಇರಾನ್‌ನ ನೂತನ ಸರ್ವೋಚ್ಚ ನಾಯಕನಾಗಿ ಆಯ್ಕೆಯಾಗಿದ್ದಾರೆ.
ಇರಾನ್‌ನ ಪ್ರಭಾವಿ ಧಾರ್ಮಿಕ ಮತ್ತು ರಾಜಕೀಯ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ನಂತರ, ಅವರ ಎರಡನೇ ಪುತ್ರ ಮೊಜ್ತಬಾ ಖಮೇನಿ ಅವರನ್ನು ಇರಾನ್‌ನ ಮುಂದಿನ 'ಸುಪ್ರೀಂ ಲೀಡರ್' (ಸರ್ವೋಚ್ಚ ನಾಯಕ) ಆಗಿ ಆಯ್ಕೆ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಮಂಗಳವಾರ (ಮಾರ್ಚ್ 3) ನಡೆದ ಇರಾನ್‌ನ ಪ್ರಭಾವಿ ಧಾರ್ಮಿಕ ಮಂಡಳಿ 'ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್' ಸಭೆಯಲ್ಲಿ ಈ ಐತಿಹಾಸಿಕ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಯಾರು ಈ ಮೊಜ್ತಬಾ ಖಮೇನಿ?
1969 ರಲ್ಲಿ ಇರಾನ್‌ನ ಮಶಾದ್ ನಗರದಲ್ಲಿ ಜನಿಸಿದರು. ಇಸ್ಲಾಮಿಕ್ ಕ್ರಾಂತಿಯ ಸಂದರ್ಭದಲ್ಲಿ ತಮ್ಮ ತಂದೆಯ ರಾಜಕೀಯ ಹೋರಾಟವನ್ನು ಹತ್ತಿರದಿಂದ ಕಂಡವರು. 56 ವರ್ಷದ ಮೊಜ್ತಬಾ ಅವರು ಇರಾನ್‌ನ ಪ್ರಮುಖ ಶಿಯಾ ಧಾರ್ಮಿಕ ಕೇಂದ್ರವಾದ 'ಕೋಮ್'ನಲ್ಲಿ ಶಿಕ್ಷಣ ಪಡೆದಿದ್ದಾರೆ. ಅವರು 'ಹೊಜ್ಜತೊಲೆಸ್ಲಾಮ್' ಎಂಬ ಧಾರ್ಮಿಕ ಶ್ರೇಣಿಯನ್ನು ಹೊಂದಿದ್ದಾರೆ.
ಇವರು ಇದುವರೆಗೆ ಯಾವುದೇ ಚುನಾಯಿತ ಅಥವಾ ಅಧಿಕೃತ ಸರ್ಕಾರಿ ಹುದ್ದೆಯನ್ನು ಅಲಂಕರಿಸಿಲ್ಲ. ಆದರೆ, ತಮ್ಮ ತಂದೆಯ ಕಚೇರಿಯನ್ನು ನಿರ್ವಹಿಸುವಲ್ಲಿ ಮತ್ತು ಇರಾನ್‌ನ ಪ್ರಭಾವಿ ರೆವಲ್ಯೂಷನರಿ ಗಾರ್ಡ್ಸ್ (IRGC) ಜೊತೆ ನಿಕಟ ಸಂಬಂಧ ಹೊಂದುವ ಮೂಲಕ ತೆರೆಮರೆಯ ಪ್ರಬಲ ಶಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.
ಮೊಜ್ತಬಾ ಆಯ್ಕೆ ಏಕೆ ನಿರ್ಣಾಯಕ ಮತ್ತು ವಿವಾದಾತ್ಮಕ?
ಇರಾನ್‌ನ ರಾಜಕೀಯ ವ್ಯವಸ್ಥೆಯಲ್ಲಿ ತಂದೆಯ ನಂತರ ಮಗನೇ ಅಧಿಕಾರಕ್ಕೆ ಬರುವ 'ವಂಶಪಾರಂಪರ್ಯ ಆಡಳಿತ'ವನ್ನು ಶಿಯಾ ಧಾರ್ಮಿಕ ವಲಯಗಳಲ್ಲಿ ಸಾಮಾನ್ಯವಾಗಿ ಒಪ್ಪಿಕೊಳ್ಳುವುದಿಲ್ಲ. ಹೀಗಿದ್ದರೂ ಮೊಜ್ತಬಾ ಅವರನ್ನು ಆಯ್ಕೆ ಮಾಡಿರುವುದು ಇರಾನ್ ಇತಿಹಾಸದಲ್ಲಿ ಒಂದು ದೊಡ್ಡ ಬದಲಾವಣೆಯ ಮುನ್ಸೂಚನೆಯಾಗಿದೆ.
ಅಂತರಾಷ್ಟ್ರೀಯ ವಲಯದಲ್ಲಿ ಮೊಜ್ತಬಾ ಇಮೇಜ್
ಇಸ್ರೇಲ್ ಮಾಧ್ಯಮಗಳ ಪ್ರಕಾರ, ಮೊಜ್ತಬಾ ಅವರು ತಮ್ಮ ತಂದೆಗಿಂತಲೂ ಹೆಚ್ಚು ಕಠಿಣ ನಿಲುವುಳ್ಳವರು. ಇರಾನ್‌ನಲ್ಲಿ ನಡೆದ ಪ್ರತಿಭಟನೆಗಳನ್ನು ಹತ್ತಿಕ್ಕುವಲ್ಲಿ ಇವರ ಪಾತ್ರ ದೊಡ್ಡದಿದೆ ಎಂದು ಹೇಳಲಾಗುತ್ತದೆ. 2019 ರಲ್ಲಿ ಅಮೆರಿಕವು ಇವರ ಮೇಲೆ ಆರ್ಥಿಕ ನಿರ್ಬಂಧಗಳನ್ನು ಹೇರಿತ್ತು. ಯಾವುದೇ ಸರ್ಕಾರಿ ಹುದ್ದೆ ಇಲ್ಲದಿದ್ದರೂ ಸರ್ವೋಚ್ಚ ನಾಯಕನ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ಅಮೆರಿಕದ ಆರೋಪವಾಗಿತ್ತು.
ಸಂಪತ್ತು: ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಮೊಜ್ತಬಾ ಅವರು ಲಂಡನ್‌ನಲ್ಲಿ ಐಷಾರಾಮಿ ಆಸ್ತಿಗಳನ್ನು ಹೊಂದಿದ್ದಾರೆ. ಸ್ವಿಟ್ಜರ್ಲೆಂಡ್ ಮತ್ತು ಲೀಚ್ಟೆನ್‌ಸ್ಟೈನ್‌ನಂತಹ ದೇಶಗಳಲ್ಲಿ ಬ್ಯಾಂಕ್ ಖಾತೆಗಳಿದ್ದು, ಸುಮಾರು 1,229 ಕೋಟಿ ರೂ. (100 ಮಿಲಿಯನ್ ಬ್ರಿಟಿಷ್ ಪೌಂಡ್) ಮೌಲ್ಯದ ಆಸ್ತಿ ಹೊಂದಿದ್ದಾರೆ ಎನ್ನಲಾಗಿದೆ.
IRGC ಮತ್ತು ಸೈನ್ಯದ ಬೆಂಬಲ
ಮೊಜ್ತಬಾ ಅವರಿಗೆ ಇರಾನ್‌ನ ರಕ್ಷಣಾ ಪಡೆಗಳಾದ 'ಕುದ್ಸ್ ಫೋರ್ಸ್' ಮತ್ತು 'ಬಸಿಜ್ ಮಿಲಿಟಿಯಾ' ಕಮಾಂಡರ್‌ಗಳ ಜೊತೆ ಅತ್ಯಂತ ನಿಕಟ ಸಂಬಂಧವಿದೆ. ಈ ಸೈನ್ಯದ ಬೆಂಬಲವೇ ಅವರನ್ನು ಸರ್ವೋಚ್ಚ ನಾಯಕನ ಪಟ್ಟಕ್ಕೇರಿಸಲು ಪ್ರಮುಖ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

