
ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ದಫನ್‌ನ್ನು ಮಶಾದ್ ನಗರದಲ್ಲಿ ನಡೆಸಲಾಯಿತು.
ಖಮೇನಿ ಅಂತ್ಯಕ್ರಿಯೆ ಬೆನ್ನಲ್ಲೇ ಭುಗಿಲೆದ್ದ ಯುದ್ಧ; ಇರಾನ್ ಮೇಲೆ ಅಮೆರಿಕ ಜಂಟಿ ದಾಳಿ
ಮಶಾದ್ ನಗರದಲ್ಲಿ ದಫನ್ ಮಾಡಲಾದ ಇರಾನ್‌ನ ಎರಡನೇ ಆಡಳಿತಗಾರ ಖಮೇನಿ ಆಗಿದ್ದಾರೆ. ಇದಕ್ಕೂ ಮುನ್ನ 1747 ರಲ್ಲಿ ಹತ್ಯೆಗೀಡಾಗಿದ್ದ ನಾದಿರ್ ಷಾ ಅವರನ್ನು ಇಲ್ಲಿ ಸಮಾಧಿ ಮಾಡಲಾಗಿತ್ತು.
ಇರಾನ್-ಇಸ್ರೇಲ್ ಯುದ್ಧದ ಆರಂಭಿಕ ಹಂತದಲ್ಲಿ ಮೃತಪಟ್ಟಿದ್ದ ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆ ತಿಂಗಳುಗಳ ಬಳಿಕ ನೆರವೇರಿದೆ. ಇರಾನ್‌ನಾದ್ಯಂತ ಶೋಕಾಚರಣೆಯ ನಂತರ, ಶುಕ್ರವಾರ ಮುಂಜಾನೆ ಅವರ ತವರು ನಗರವಾದ ಮಶಾದ್‌ನಲ್ಲಿ ಕಟ್ಟುನಿಟ್ಟಿನ ಭದ್ರತೆಯೊಂದಿಗೆ ಖಮೇನಿ ಅಂತ್ಯಕ್ರಿಯೆ ನಡೆಸಲಾಯಿತು.
ಕಳೆದ ಫೆ.28 ರಂದು ಯುದ್ಧ ಆರಂಭಿಸಿದ ಅಮೆರಿಕ ಮತ್ತು ಇಸ್ರೇಲಿ ಪಡೆಗಳ ಜಂಟಿ ವೈಮಾನಿಕ ದಾಳಿಯಲ್ಲಿ ಖಮೇನಿ ಮೃತಪಟ್ಟಿದ್ದರು. ಸುಮಾರು 37 ವರ್ಷಗಳ ಕಾಲ ಇರಾನ್‌ನ್ನು ತನ್ನ ಆಳಿದ್ದ ಖಮೇನಿ ಅವರ ಅಂತ್ಯಕ್ರಿಯೆಯ ಮೆರವಣಿಗೆಗಳು ಕಳೆದ ಶನಿವಾರವೇ ಆರಂಭವಾಗಿದ್ದವು. ರಾಜಧಾನಿ ಟೆಹ್ರಾನ್ ಸೇರಿದಂತೆ ಪ್ರಮುಖ ನಗರಗಳಲ್ಲಿ ವಾಯುಪ್ರದೇಶ, ರಸ್ತೆ ಸಾರಿಗೆ ಹಾಗೂ ದೈನಂದಿನ ಜನಜೀವನವನ್ನು ಸ್ಥಗಿತಗೊಳಿಸಿ ಅಧಿಕಾರಿಗಳು ಬಿಗಿ ಭದ್ರತೆ ವಹಿಸಿದ್ದರು. ಮಶಾದ್ ನಗರದಲ್ಲಿ ದಫನ್ ಮಾಡಲಾದ ಇರಾನ್‌ನ ಎರಡನೇ ಆಡಳಿತಗಾರ ಖಮೇನಿ ಆಗಿದ್ದಾರೆ. ಇದಕ್ಕೂ ಮುನ್ನ 1747 ರಲ್ಲಿ ಹತ್ಯೆಗೀಡಾಗಿದ್ದ ನಾದಿರ್ ಷಾ ಅವರನ್ನು ಇಲ್ಲಿ ಸಮಾಧಿ ಮಾಡಲಾಗಿತ್ತು.
ಮುರಿದುಬಿದ್ದ ಕದನ ವಿರಾಮ
ಅತ್ತ ಸುಪ್ರೀಂ ನಾಯಕನ ಅಂತ್ಯಕ್ರಿಯೆ ನಡೆಯುತ್ತಿದ್ದರೆ, ಇತ್ತ ಅಮೆರಿಕ ಇರಾನ್ ಮೇಲೆ ಮತ್ತೆ ಭೀಕರ ವೈಮಾನಿಕ ದಾಳಿಗಳನ್ನು ಮುಂದುವರಿಸಿದೆ. ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಮೇಲೆ ಇರಾನ್ ನಡೆಸಿದ ದಾಳಿಗಳೇ ಇದಕ್ಕೆ ಕಾರಣ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. "ಇರಾನ್ ತನ್ನ ಪ್ರಚೋದನಾತ್ಮಕ ದಾಳಿಗಳನ್ನು ನಿಲ್ಲಿಸದಿದ್ದರೆ ಸಂಘರ್ಷ ಇನ್ನಷ್ಟು ಉಲ್ಬಣಗೊಳ್ಳಲಿದೆ" ಎಂದು ಟ್ರಂಪ್ ಎಚ್ಚರಿಸಿದ್ದಾರೆ. ಅಮೆರಿಕದ ಈ ದಾಳಿಯಿಂದಾಗಿ ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪಿಸಲು ಮಾಡಿಕೊಳ್ಳಲಾಗಿದ್ದ ಮಧ್ಯಂತರ ಕದನ ವಿರಾಮ ಒಪ್ಪಂದವು ಸಂಪೂರ್ಣವಾಗಿ ಮುರಿದುಬಿದ್ದಿದೆ.
ಮಿತ್ರರಾಷ್ಟ್ರಗಳ ಮೇಲೂ ಇರಾನ್ ಕ್ಷಿಪಣಿ ಮಳೆ!
ಅಮೆರಿಕದ ದಾಳಿಗೆ ಪ್ರತಿಕಾರವಾಗಿ ಇರಾನ್ ಪಡೆಗಳು ಯುಎಸ್ ಮಿತ್ರರಾಷ್ಟ್ರಗಳಾದ ಬಹ್ರೇನ್, ಕುವೈತ್, ಕತಾರ್ ಮತ್ತು ಜೋರ್ಡಾನ್ ದೇಶಗಳತ್ತ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿವೆ. ಅಮೆರಿಕ ನೌಕಾಪಡೆಯ 5ನೇ ಫ್ಲೀಟ್ ಪ್ರಧಾನ ಕಚೇರಿ ಇರುವ ಬಹ್ರೇನ್‌ನಲ್ಲಿ ಕನಿಷ್ಠ ಮೂರು ಬಾರಿ ಸೈರನ್‌ಗಳು ಮೊಳಗಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ. ಇರಾನ್ ಹಾರಿಸಿದ 3 ಬ್ಯಾಲಿಸ್ಟಿಕ್ ಕ್ಷಿಪಣಿ, 1 ಕ್ರೂಸ್ ಕ್ಷಿಪಣಿ ಮತ್ತು 10 ಡ್ರೋನ್‌ಗಳನ್ನು ಕುವೈತ್ ಮಿಲಿಟರಿ ಹೊಡೆದುರುಳಿಸಿದೆ. ಕ್ಷಿಪಣಿಯ ಅವಶೇಷಗಳು ಬಿದ್ದ ಪರಿಣಾಮ ಒಬ್ಬರು ಗಾಯಗೊಂಡಿದ್ದಾರೆ. ಜೋರ್ಡಾನ್‌ನಲ್ಲಿರುವ ಯುಎಸ್ ಮಿಲಿಟರಿ ನೆಲೆಗಳ ಮೇಲೂ ಇರಾನ್‌ನ ಅರೆಸೈನಿಕ ಕ್ರಾಂತಿಕಾರಿ ಗಾರ್ಡ್ಸ್ ಕ್ಷಿಪಣಿ ದಾಳಿ ನಡೆಸಿದ್ದಾರೆ. ಆದರೆ ಈ ಎಲ್ಲಾ ದಾಳಿಗಳನ್ನು ಯಶಸ್ವಿಯಾಗಿ ತಡೆಯಲಾಗಿದೆ ಎಂದು ಜೋರ್ಡಾನ್ ಸರ್ಕಾರ ತಿಳಿಸಿದೆ.
ಇರಾನ್ ಮೇಲೆ ಯುಎಸ್ ದಾಳಿ 14 ಸಾವು
ಇರಾನ್‌ನ ರನ್‌ವೇಗಳು, ಕ್ಷಿಪಣಿ ಲಾಂಚರ್‌ಗಳು ಸೇರಿದಂತೆ 90 ಸ್ಥಳಗಳ ಮೇಲೆ ಅಮೆರಿಕ ದಾಳಿ ಮಾಡಿದ್ದು, ಕನಿಷ್ಠ 14 ಜನ ಮೃತಪಟ್ಟಿದ್ದು, 78 ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ. ಇರಾನ್‌ನ ಏಕೈಕ ಪರಮಾಣು ವಿದ್ಯುತ್ ಸ್ಥಾವರದ ಸುತ್ತಲಿನ ಪ್ರದೇಶವನ್ನು ಗುರಿಯಾಗಿಸಿಕೊಂಡೂ ಅಮೆರಿಕ ವಾಯುದಾಳಿ ನಡೆಸಿದೆ ಎಂದು ಇರಾನ್ ಅಧಿಕಾರಿಗಳು ಆರೋಪಿಸಿದ್ದಾರೆ. ಜಾಗತಿಕ ತೈಲ ಮತ್ತು ಅನಿಲ ವಹಿವಾಟಿನ ಐದನೇ ಒಂದು ಭಾಗ ಹಾದುಹೋಗುವ ಹಾರ್ಮುಜ್ ಜಲಸಂಧಿಯಲ್ಲಿ ಇರಾನ್‌ನ ನೌಕಾ ಸಾಮರ್ಥ್ಯವನ್ನು ಕುಗ್ಗಿಸುವುದೇ ಈ ದಾಳಿಯ ಪ್ರಮುಖ ಉದ್ದೇಶ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ಸ್ಪಷ್ಟಪಡಿಸಿದೆ. "ನಾವು ಅನುಭವಿಸಿದ್ದಕ್ಕಿಂತ ಮುಂದೆ ಇರುವುದು ಇನ್ನೂ ಕಠಿಣವಾಗಿದೆ ಎಂದು ನಮಗೆ ತಿಳಿದಿದೆ, ಆದರೆ ದೇಶಕ್ಕಾಗಿ ನಾವು ಯಾವುದನ್ನೂ ಎದುರಿಸಲು ಸಿದ್ಧರಿದ್ದೇವೆ." ಎಂದು ಇರಾನ್ ಸರ್ಕಾರದ ಪ್ರಮುಖ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ.
ಪ್ರಸ್ತುತ ಇಡೀ ಜಾಗತಿಕ ಆರ್ಥಿಕತೆಗೆ ನಿರ್ಣಾಯಕವಾಗಿರುವ ಇಂಧನ ಸಾಗಣೆಯ ಜಲಸಂಧಿಯಲ್ಲೇ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ತೈಲ ಬೆಲೆ ಏರಿಕೆಯ ಭೀತಿ ಎದುರಾಗಿದೆ.

