Iran invites India for Khameneis final pilgrimage: Will PM Modi go to Tehran?
x

ಇರಾನ್‌ನ ಮಾಜಿ ಸರ್ವೋಚ್ಚ ನಾಯಕ, ಮೃತ ಅಯತೊಲ್ಲಾ ಅಲಿ ಖಮೇನಿ ಹಾಗೂ ಪ್ರಧಾನಿ ಮೋದಿ

ಅಮೆರಿಕ ದಾಳಿಗೆ ಬಲಿಯಾದ ಇರಾನ್ ಸುಪ್ರೀಂ ಲೀಡರ್ ಖಮೇನಿ ಅಂತ್ಯಕ್ರಿಯೆಗೆ ಮೋದಿಗೆ ಆಹ್ವಾನ

ಫೆಬ್ರವರಿ ತಿಂಗಳಲ್ಲಿ ನಡೆದ ಅಮೆರಿಕ ಮತ್ತು ಇಸ್ರೇಲ್ ಜಂಟಿ ವೈಮಾನಿಕ ದಾಳಿಯಲ್ಲಿ ಹತರಾಗಿದ್ದ ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತಿಮ ವಿದಾಯ ಸಮಾರಂಭಗಳು ಜು. 4 ರಿಂದ 9 ರವರೆಗೆ ನಡೆಯಲಿವೆ.


Click the Play button to hear this message in audio format

ಇರಾನ್‌ನ ರಾಜಕೀಯ ಹಾಗೂ ಧಾರ್ಮಿಕ ಇತಿಹಾಸದಲ್ಲಿ ಮಹತ್ವದ ಘಟ್ಟವೆಂದು ಪರಿಗಣಿಸಲಾಗುತ್ತಿರುವ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತಿಮ ವಿದಾಯ ಸಮಾರಂಭಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಜುಲೈ 4ರಿಂದ 9ರವರೆಗೆ ಆರು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇರಾನ್ ಸರ್ಕಾರ ಅಧಿಕೃತ ಆಹ್ವಾನ ನೀಡಿದೆ ಎಂದು ಅಲ್ಲಿನ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.

ಇತ್ತೀಚೆಗೆ ನಡೆದ ಅಮೆರಿಕ ಮತ್ತು ಇಸ್ರೇಲ್ ಜಂಟಿ ವೈಮಾನಿಕ ದಾಳಿಯಲ್ಲಿ ಖಮೇನಿ ಮೃತಪಟ್ಟಿದ್ದರು ಎಂಬ ವರದಿಗಳ ಬೆನ್ನಲ್ಲೇ, ದೇಶವ್ಯಾಪಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಲಕ್ಷಾಂತರ ಜನರು ಹಾಗೂ ವಿವಿಧ ರಾಷ್ಟ್ರಗಳ ಪ್ರತಿನಿಧಿಗಳು ಅಂತಿಮ ಗೌರವ ಸಲ್ಲಿಸುವ ನಿರೀಕ್ಷೆಯಿದೆ.

ಟೆಹ್ರಾನ್‌ನಿಂದ ಮಶ್ಹಾದ್‌ವರೆಗೆ ಆರು ದಿನಗಳ ಕಾರ್ಯಕ್ರಮ

ಜುಲೈ 4ರಿಂದ ಆರಂಭವಾಗಲಿರುವ ಧಾರ್ಮಿಕ ವಿಧಿವಿಧಾನಗಳ ಅಂಗವಾಗಿ ಖಮೇನಿ ಹಾಗೂ ದಾಳಿಯಲ್ಲಿ ಮೃತಪಟ್ಟ ಅವರ ಕುಟುಂಬ ಸದಸ್ಯರ ಪಾರ್ಥಿವ ಶರೀರಗಳನ್ನು ಟೆಹ್ರಾನ್‌ನ ಗ್ರ್ಯಾಂಡ್ ಮೊಸಲ್ಲಾ ಸಂಕೀರ್ಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇರಾನ್ ಸರ್ಕಾರ ರಾಜಧಾನಿ ಟೆಹ್ರಾನ್‌ನಲ್ಲಿ ಮೂರು ದಿನಗಳ ಸಾರ್ವಜನಿಕ ರಜೆಯನ್ನು ಘೋಷಿಸಿದೆ.

ಜುಲೈ 4 ಮತ್ತು 5ರಂದು ಸಾರ್ವಜನಿಕ ದರ್ಶನ ಹಾಗೂ ಪ್ರಾರ್ಥನಾ ಸಭೆಗಳು ನಡೆಯಲಿದ್ದು, ಜುಲೈ 6ರಂದು ಟೆಹ್ರಾನ್ ನಗರದಲ್ಲಿ ಭವ್ಯ ಸಾರ್ವಜನಿಕ ಅಂತ್ಯಯಾತ್ರೆ ಆಯೋಜಿಸಲಾಗಿದೆ. ನಂತರ ಜುಲೈ 7ರಂದು ಪವಿತ್ರ ನಗರ ಕೋಮ್‌ನಲ್ಲಿ ಮೆರವಣಿಗೆ ನಡೆಯಲಿದೆ.

ಅದರ ಮುಂದುವರಿದ ಭಾಗವಾಗಿ ಜುಲೈ 8ರಂದು ಇರಾಕ್‌ನ ಶಿಯಾ ಸಮುದಾಯದ ಪ್ರಮುಖ ಧಾರ್ಮಿಕ ಕೇಂದ್ರಗಳಾದ ನಜಾಫ್ ಮತ್ತು ಕರ್ಬಲಾದಲ್ಲಿ ವಿಶೇಷ ಪ್ರಾರ್ಥನೆಗಳು ನಡೆಯಲಿವೆ. ಜುಲೈ 9ರಂದು ಖಮೇನಿ ಅವರ ತವರು ನಗರ ಮಶ್ಹಾದ್‌ನಲ್ಲಿರುವ ಪ್ರಸಿದ್ಧ ಇಮಾಮ್ ರೆಜಾ ದೇಗುಲದ ಆವರಣದಲ್ಲಿ ಅಂತಿಮ ವಿಧಿವಿಧಾನಗಳು ನೆರವೇರಲಿವೆ.

ಭಾರತದ ನಿರ್ಧಾರದತ್ತ ರಾಜತಾಂತ್ರಿಕ ವಲಯದ ಚಿತ್ತ

ಖಮೇನಿ ನಿಧನದ ಬಳಿಕ ಭಾರತ ಸರ್ಕಾರ ಅಧಿಕೃತವಾಗಿ ಸಂತಾಪ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ನವದೆಹಲಿಯಲ್ಲಿರುವ ಇರಾನ್ ರಾಯಭಾರ ಕಚೇರಿಗೆ ಭೇಟಿ ನೀಡಿ ಸಂತಾಪ ಪುಸ್ತಕದಲ್ಲಿ ಸಹಿ ಹಾಕಿದ್ದರು.

ಆದರೆ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಸ್ವತಃ ಇರಾನ್‌ಗೆ ತೆರಳಲಿದ್ದಾರೆಯೇ ಅಥವಾ ಭಾರತದ ಪರವಾಗಿ ಉನ್ನತ ಮಟ್ಟದ ಪ್ರತಿನಿಧಿಯನ್ನು ಕಳುಹಿಸಲಾಗುತ್ತದೆಯೇ ಎಂಬ ಬಗ್ಗೆ ಇನ್ನೂ ಅಧಿಕೃತ ನಿರ್ಧಾರ ಪ್ರಕಟವಾಗಿಲ್ಲ. ವಿದೇಶಾಂಗ ಸಚಿವ ಎಸ್. ಜೈಶಂಕರ್, ಉಪರಾಷ್ಟ್ರಪತಿ ಅಥವಾ ಇತರ ಹಿರಿಯ ಪ್ರತಿನಿಧಿಗಳ ಹೆಸರುಗಳೂ ಚರ್ಚೆಯಲ್ಲಿವೆ.

ಈ ಹಿಂದೆ 2024ರಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಾಗ ಭಾರತ ಒಂದು ದಿನದ ರಾಷ್ಟ್ರೀಯ ಶೋಕಾಚರಣೆ ಘೋಷಿಸಿತ್ತು. ಆ ಸಂದರ್ಭದಲ್ಲಿ ಭಾರತದ ಪರವಾಗಿ ಉಪರಾಷ್ಟ್ರಪತಿ ಜಗದೀಪ್ ಧನ್​ಕರ್​ ಇರಾನ್‌ಗೆ ತೆರಳಿ ಅಂತಿಮ ಗೌರವ ಸಲ್ಲಿಸಿದ್ದರು.

ಬಿಕ್ಕಟ್ಟಿನ ನಡುವೆಯೂ ಗಟ್ಟಿಯಾದ ಭಾರತ-ಇರಾನ್ ಸಂಬಂಧ

ಭಾರತ ಮತ್ತು ಇರಾನ್ ನಡುವಿನ ಸಂಬಂಧ ಕೇವಲ ರಾಜತಾಂತ್ರಿಕ ಮಟ್ಟಕ್ಕೆ ಸೀಮಿತವಾಗಿಲ್ಲ. ಎರಡೂ ರಾಷ್ಟ್ರಗಳ ನಡುವೆ ಶತಮಾನಗಳ ಐತಿಹಾಸಿಕ, ಸಾಂಸ್ಕೃತಿಕ ಮತ್ತು ವಾಣಿಜ್ಯ ಬಾಂಧವ್ಯವಿದೆ. ಇತ್ತೀಚೆಗೆ ಬ್ರಿಕ್ಸ್ ಸಭೆಯ ಹಿನ್ನೆಲೆಯಲ್ಲಿ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಭಾರತಕ್ಕೆ ಭೇಟಿ ನೀಡಿ ಪ್ರಧಾನಿ ಮೋದಿ ಹಾಗೂ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದ್ದರು.

ಪಶ್ಚಿಮ ಏಷ್ಯಾದಲ್ಲಿ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆಯ ನಡುವೆಯೂ ಭಾರತ ತನ್ನ ಕಾರ್ಯತಂತ್ರದ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಇರಾನ್‌ನೊಂದಿಗೆ ಸಂಬಂಧವನ್ನು ಮುಂದುವರಿಸಿಕೊಂಡು ಬಂದಿದೆ. ವಿಶೇಷವಾಗಿ ಚಬಹಾರ್ ಬಂದರು ಯೋಜನೆ ಭಾರತಕ್ಕೆ ಮಧ್ಯ ಏಷ್ಯಾ ರಾಷ್ಟ್ರಗಳೊಂದಿಗೆ ಸಂಪರ್ಕ ಸಾಧಿಸಲು ಪ್ರಮುಖ ದ್ವಾರವೆಂದು ಪರಿಗಣಿಸಲಾಗಿದೆ.

ರಾಜಕೀಯದ ಕೇಂದ್ರಬಿಂದುವಾಗಲಿರುವ ಕಾರ್ಯಕ್ರಮ

ಖಮೇನಿ ಅವರ ಅಂತ್ಯಕ್ರಿಯೆ ಕೇವಲ ಧಾರ್ಮಿಕ ಅಥವಾ ರಾಷ್ಟ್ರೀಯ ಕಾರ್ಯಕ್ರಮವಾಗಿರದೆ, ಜಾಗತಿಕ ರಾಜಕೀಯದ ದೃಷ್ಟಿಯಿಂದಲೂ ಮಹತ್ವದ ಬೆಳವಣಿಗೆಯಾಗಿ ಪರಿಣಮಿಸಿದೆ. ಭಾರತದ ಜೊತೆಗೆ ರಷ್ಯಾ, ಚೀನಾ, ಪಾಕಿಸ್ತಾನ, ಅಫ್ಘಾನಿಸ್ತಾನ, ಸಿರಿಯಾ, ಲೆಬನಾನ್ ಹಾಗೂ ಇರಾಕ್ ಸೇರಿದಂತೆ ಹಲವು ರಾಷ್ಟ್ರಗಳಿಗೆ ಇರಾನ್ ಸರ್ಕಾರ ಆಹ್ವಾನ ನೀಡಿದೆ.

ಪಶ್ಚಿಮ ಏಷ್ಯಾದ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮದಲ್ಲಿ ವಿವಿಧ ರಾಷ್ಟ್ರಗಳ ಪ್ರತಿನಿಧಿಗಳ ಉಪಸ್ಥಿತಿ ಜಾಗತಿಕ ರಾಜತಾಂತ್ರಿಕ ಸಮೀಕರಣಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಭಾರತದಿಂದ ಯಾರು ಭಾಗವಹಿಸಲಿದ್ದಾರೆ ಎಂಬ ಬಗ್ಗೆ ಅಧಿಕೃತ ಪ್ರಕಟಣೆ ಶೀಘ್ರದಲ್ಲೇ ಹೊರಬೀಳುವ ನಿರೀಕ್ಷೆಯಿದೆ.

Read More
Next Story