ಅಮೆರಿಕದ ಶಕ್ತಿ ಶಾಲಿ ಎಫ್-35 ಯುದ್ಧ ವಿಮಾನದ ಮೇಲೆ ಇರಾನ್ ದಾಳಿ
x

ಅಮೆರಿಕದ ಶಕ್ತಿ ಶಾಲಿ ಎಫ್-35 ಯುದ್ಧ ವಿಮಾನದ ಮೇಲೆ ಇರಾನ್ ದಾಳಿ

ಪರ್ಷಿಯನ್ ಹೊಸವರ್ಷದ (ನೌರುಜ್) ದಿನದಂದೇ ನಡೆದಿರುವ ಈ ದಾಳಿಯು ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧದ ಕಾವು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.


Click the Play button to hear this message in audio format

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಭೀಕರ ಸಂಘರ್ಷವು ಮತ್ತೊಂದು ಅಪಾಯಕಾರಿ ಘಟ್ಟವನ್ನು ತಲುಪಿದೆ. ಯುದ್ಧರಂಗದಲ್ಲಿ 'ಅಜೇಯ' (Unkillable) ಎಂದೇ ಪರಿಗಣಿಸಲಾಗುವ ಅಮೆರಿಕದ ಐದನೇ ತಲೆಮಾರಿನ ಎಫ್-35 (F-35) ಯುದ್ಧ ವಿಮಾನವೊಂದರ ಮೇಲೆ ಇರಾನ್ ಯಶಸ್ವಿ ದಾಳಿ ನಡೆಸಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ದಾಳಿಗೊಳಗಾದ ಈ ಅತ್ಯಾಧುನಿಕ ವಿಮಾನವು ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ವಾಯುನೆಲೆಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ಪರ್ಷಿಯನ್ ಹೊಸವರ್ಷದ (ನೌರುಜ್) ದಿನದಂದೇ ನಡೆದಿರುವ ಈ ದಾಳಿಯು ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧದ ಕಾವು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

ಗುರುವಾರ (ಮಾರ್ಚ್ 19) ಮುಂಜಾನೆ ಮಧ್ಯ ಇರಾನ್‌ನ ಆಕಾಶದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಎಫ್-35 ಸ್ಟೆಲ್ತ್ ಫೈಟರ್ ಜೆಟ್ ಮೇಲೆ ದಾಳಿ ನಡೆಸಿ, ಅದನ್ನು ತೀವ್ರವಾಗಿ ಹಾನಿಗೊಳಿಸಿರುವುದಾಗಿ ಇರಾನ್‌ನ ಐಆರ್‌ಜಿಸಿ ಖಚಿತಪಡಿಸಿದೆ. ಅಮೆರಿಕದ ಸೇನಾಪಡೆಯ ಸೆಂಟ್ರಲ್ ಕಮಾಂಡ್ ವಕ್ತಾರ ಕ್ಯಾಪ್ಟನ್ ಟಿಮ್ ಹಾಕಿನ್ಸ್ ಅವರು, ಇರಾನ್ ವಾಯುಪ್ರದೇಶದಲ್ಲಿ ಯುದ್ಧ ಕಾರ್ಯಾಚರಣೆಯಲ್ಲಿದ್ದ ಯುದ್ಧವಿಮಾನವು ತುರ್ತು ಭೂಸ್ಪರ್ಶ ಮಾಡಿದೆ ಮತ್ತು ಪೈಲಟ್ ಸುರಕ್ಷಿತವಾಗಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಆದರೆ, ಈ ದಾಳಿಯ ಹಿಂದೆ ಇರಾನ್ ಕೈವಾಡವಿದೆಯೇ ಎಂಬುದನ್ನು ಖಚಿತಪಡಿಸದ ಅವರು, ಘಟನೆಯ ಬಗ್ಗೆ ಕೂಲಂಕಷ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಟೆಹ್ರಾನ್ ಟೈಮ್ಸ್ ಹಂಚಿಕೊಂಡಿರುವ ವಿಡಿಯೋದಲ್ಲಿ, ಸ್ಥಳೀಯ ಕಾಲಮಾನ ಮುಂಜಾನೆ 2.50ರ ಸುಮಾರಿಗೆ ಯುದ್ಧ ವಿಮಾನಕ್ಕೆ ಗುರಿಯಿಟ್ಟು ಹೊಡೆದಿರುವುದು, ಸ್ಫೋಟದ ನಂತರ ಹೊಗೆಗುಳುತ್ತಾ ವಿಮಾನವು ಆಕಾಶದಲ್ಲಿ ನಿಯಂತ್ರಣ ಕಳೆದುಕೊಳ್ಳುವ ದೃಶ್ಯಗಳು ಸೆರೆಯಾಗಿವೆ. ಫೆಬ್ರವರಿ 28 ರಂದು ಆರಂಭವಾದ ಈ ಯುದ್ಧದಲ್ಲಿ ಅಮೆರಿಕದ ವಿಮಾನವೊಂದರ ಮೇಲೆ ಇರಾನ್ ನೇರ ದಾಳಿ ನಡೆಸಿರುವುದು ಇದೇ ಮೊದಲು.

ಎಫ್-35: ರೇಡಾರ್‌ಗೆ ಸಿಗದ 100 ಮಿಲಿಯನ್ ಡಾಲರ್‌ನ ಯುದ್ಧ ವಿಮಾನ

ಎಫ್-35 ಎಂಬುದು ಐದನೇ ತಲೆಮಾರಿನ, ಸಿಂಗಲ್-ಎಂಜಿನ್ ಹೊಂದಿರುವ ಅತ್ಯಾಧುನಿಕ ಬಹುಪಾತ್ರದ ಸ್ಟೆಲ್ತ್ ಫೈಟರ್ ವಿಮಾನವಾಗಿದೆ. ಶತ್ರುಗಳ ರೇಡಾರ್‌ಗೆ ಬಹುತೇಕ ಅದೃಶ್ಯವಾಗಿ ಕಾರ್ಯಾಚರಣೆ ನಡೆಸುವಂತೆ ಇದನ್ನು ವಿನ್ಯಾಸಗೊಳಿಸಲಾಗಿದ್ದು, ಇದರ ಮೌಲ್ಯ 100 ಮಿಲಿಯನ್ ಡಾಲರ್‌ಗೂ ಅಧಿಕವಾಗಿದೆ. ಅಡ್ವಾನ್ಸ್ಡ್ ಸೆನ್ಸಾರ್ ಫ್ಯೂಷನ್ ಮತ್ತು ಎಲೆಕ್ಟ್ರಾನಿಕ್ ವಾರ್‌ಫೇರ್ ಸಿಸ್ಟಮ್‌ಗಳನ್ನು ಹೊಂದಿರುವ ಈ ವಿಮಾನವನ್ನು ಅಮೆರಿಕ ಮತ್ತು ಅದರ 19 ಮಿತ್ರ ರಾಷ್ಟ್ರಗಳು ಬಳಸುತ್ತಿವೆ. ಇದೇ ಯುದ್ಧದಲ್ಲಿ ಇಸ್ರೇಲ್ ಕೂಡ ಇರಾನ್ ಕಾರ್ಯಾಚರಣೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ತನ್ನದೇ ಆದ ಎಫ್-35 ಐ (F-35I Adir) ಪಡೆಯನ್ನು ನಿಯೋಜಿಸಿದೆ. 125ಕ್ಕೂ ಹೆಚ್ಚು ಅಮೆರಿಕ-ಇಸ್ರೇಲ್ ಡ್ರೋನ್‌ಗಳನ್ನು ತಡೆದ ನಂತರ ಈ ಕಾರ್ಯಾಚರಣೆ ನಡೆಸಲಾಗಿದ್ದು, ಇದು ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆಯ ಸುಧಾರಣೆಗೆ ಸಾಕ್ಷಿಯಾಗಿದೆ ಎಂದು ಐಆರ್‌ಜಿಸಿ ಹೇಳಿಕೊಂಡಿದೆ.

ಅಮೆರಿಕದ ವಿಶ್ವಾಸ ಮತ್ತು ವಿಸ್ತರಿಸುತ್ತಿರುವ ಸಂಘರ್ಷ

ಮಾಧ್ಯಮ ವರದಿಗಳ ಪ್ರಕಾರ, ನಡೆಯುತ್ತಿರುವ ಸಂಘರ್ಷದಲ್ಲಿ ಅಮೆರಿಕದ ಕನಿಷ್ಠ 16 ಸೇನಾ ವಿಮಾನಗಳು ನಾಶವಾಗಿವೆ ಎಂದು ಅಂದಾಜಿಸಲಾಗಿದೆ. ಇರಾನ್ ಕೂಡ ಸುಮಾರು 50 ವಿಮಾನಗಳನ್ನು ಕಳೆದುಕೊಂಡಿದೆ ಎಂದು ಉಪಗ್ರಹ ಚಿತ್ರಗಳು ಮತ್ತು ಗುಪ್ತಚರ ವರದಿಗಳು ಸೂಚಿಸುತ್ತವೆ. ಇಷ್ಟೆಲ್ಲಾ ನಷ್ಟದ ನಡುವೆಯೂ, ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರು ಗುರುವಾರ ಮಾತನಾಡಿ, ಅಮೆರಿಕವು 'ನಿರ್ಣಾಯಕವಾಗಿ ಗೆಲ್ಲುತ್ತಿದೆ' ಮತ್ತು ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆಯನ್ನು 'ಸಂಪೂರ್ಣವಾಗಿ ನೆಲಸಮಗೊಳಿಸಲಾಗಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ನಡುವೆ ಇಸ್ರೇಲ್, ಪರ್ಷಿಯನ್ ಹೊಸವರ್ಷ 'ನೌರುಜ್' ಆಚರಿಸುತ್ತಿರುವ ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ಶುಕ್ರವಾರ (ಮಾರ್ಚ್ 20) ವಾಯುದಾಳಿ ನಡೆಸಿದೆ. ಇರಾನ್ ರೆಡ್ ಕ್ರೆಸೆಂಟ್ ಸೊಸೈಟಿಯ ಪ್ರಕಾರ, ಈ ಯುದ್ಧದಲ್ಲಿ ಇರಾನ್‌ನಲ್ಲಿ ಇದುವರೆಗೆ ಕನಿಷ್ಠ 204 ಮಕ್ಕಳು ಸೇರಿದಂತೆ 1,444 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.

Read More
Next Story