ಹಾರ್ಮುಜ್ ಜಲಸಂಧಿ ಬಂದ್ ಮಾಡಿದ ಇರಾನ್‌; ಭಾರತದಿಂದ ನಾವಿಕರಿಗೆ ತುರ್ತು ಎಚ್ಚರಿಕೆ
x

ಹಾರ್ಮುಜ್ ಜಲಸಂಧಿ ಬಂದ್ ಮಾಡಿದ ಇರಾನ್‌; ಭಾರತದಿಂದ ನಾವಿಕರಿಗೆ ತುರ್ತು ಎಚ್ಚರಿಕೆ

ಮುಂದಿನ ಆದೇಶದವರೆಗೆ ಇರಾನ್‌ಗೆ ಭಾರತೀಯ ಸಿಬ್ಬಂದಿಯನ್ನು ನಿಯೋಜಿಸದಂತೆ ಡಿಜಿ ಶಿಪ್ಪಿಂಗ್ ಈ ಹಿಂದೆಯೇ ಸೂಚನೆ ನೀಡಿತ್ತು.


Click the Play button to hear this message in audio format

ಪ್ರಮುಖ ತೈಲ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಹಡಗು ಸಂಚಾರವನ್ನು ತಡೆಹಿಡಿದಿದೆ. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನೌಕಾಪಡೆಯು ಈ ಮಾರ್ಗವಾಗಿ ಸಾಗುವ ಹಡಗುಗಳಿಗೆ ವಿಎಚ್‌ಎಫ್ ರೇಡಿಯೋ ಮೂಲಕ ಎಚ್ಚರಿಕೆ ನೀಡುತ್ತಿದ್ದು, ಯಾವುದೇ ಹಡಗಿಗೆ ಪ್ರವೇಶಾವಕಾಶವಿಲ್ಲ ಎಂದು ಸ್ಪಷ್ಟಪಡಿಸಿದೆ.

ಹಾರ್ಮುಜ್ ಜಲಸಂಧಿಯು ಜಾಗತಿಕ ತೈಲ ಪೂರೈಕೆಯ ಶೇಕಡಾ 25 ರಷ್ಟು ಪಾಲನ್ನು ಹೊಂದಿರುವ ಪ್ರಮುಖ ಸಮುದ್ರ ಮಾರ್ಗವಾಗಿದೆ. ಪರ್ಷಿಯನ್ ಕೊಲ್ಲಿಯನ್ನು ಒಮಾನ್ ಕೊಲ್ಲಿಯೊಂದಿಗೆ ಸಂಪರ್ಕಿಸುವ ಈ ಕಿರಿದಾದ ಮಾರ್ಗದಲ್ಲಿ ಯಾವುದೇ ವ್ಯತ್ಯಯವಾದರೂ ಅದು ಜಾಗತಿಕ ಮಟ್ಟದಲ್ಲಿ ತಕ್ಷಣದ ಪರಿಣಾಮ ಬೀರಲಿದೆ. ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಹಡಗು ವಿಮಾ ವೆಚ್ಚ ಹೆಚ್ಚಾಗುವ ಸಾಧ್ಯತೆಗಳಿವೆ.

ಈ ಮಧ್ಯೆ, ಇರಾನ್‌ನಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಡೈರೆಕ್ಟರೇಟ್ ಜನರಲ್ ಆಫ್ ಶಿಪ್ಪಿಂಗ್ (ಡಿಜಿ ಶಿಪ್ಪಿಂಗ್) ಫೆಬ್ರವರಿ 28 ರಂದು ಭಾರತೀಯ ನಾವಿಕರು ಮತ್ತು ಕಡಲ ಪಾಲುದಾರರಿಗೆ ತುರ್ತು ಎಚ್ಚರಿಕೆಯನ್ನು ನೀಡಿದೆ. ಇರಾನ್‌ನಲ್ಲಿರುವ ಭಾರತೀಯರು ಆದಷ್ಟು ಬೇಗ ವಾಣಿಜ್ಯ ಸಾರಿಗೆಯನ್ನು ಬಳಸಿಕೊಂಡು ದೇಶ ಬಿಡುವಂತೆ ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಒತ್ತಾಯಿಸಿದೆ. ಇರಾನ್ ಪ್ರವಾಸವನ್ನು ಮುಂದೂಡುವಂತೆಯೂ ಸೂಚಿಸಿದೆ.

ಮುಂದಿನ ಆದೇಶದವರೆಗೆ ಇರಾನ್‌ಗೆ ಭಾರತೀಯ ಸಿಬ್ಬಂದಿಯನ್ನು ನಿಯೋಜಿಸದಂತೆ ಡಿಜಿ ಶಿಪ್ಪಿಂಗ್ ಈ ಹಿಂದೆಯೇ ಸೂಚನೆ ನೀಡಿತ್ತು. ಇದೀಗ ಇರಾನ್ ನೀರಿನಲ್ಲಿ ಅಥವಾ ಹತ್ತಿರದ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಸಿಬ್ಬಂದಿಯ ಸುರಕ್ಷತೆ ಮತ್ತು ಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲು ಪಾಲುದಾರರಿಗೆ ನಿರ್ದೇಶಿಸಲಾಗಿದೆ.

ಇರಾನ್‌ನಲ್ಲಿರುವ ಭಾರತೀಯ ನಾವಿಕರು ಅನಗತ್ಯ ಓಡಾಟವನ್ನು ತಪ್ಪಿಸಬೇಕು. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹೊರಡಿಸಿದ ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮತ್ತು ರಾಯಭಾರ ಕಚೇರಿಯಲ್ಲಿ ತಮ್ಮ ವಿವರಗಳನ್ನು ತುರ್ತಾಗಿ ನೋಂದಾಯಿಸಿಕೊಳ್ಳುವಂತೆ ಸೂಚಿಸಲಾಗಿದೆ.

ಸ್ಥಳೀಯ ಅಧಿಕಾರಿಗಳು ಸೂಚಿಸಿದ ಸುರಕ್ಷತಾ ಪ್ರೋಟೋಕಾಲ್‌ಗಳಿಗೆ ಬದ್ಧವಾಗಿರಲು ಮತ್ತು ಸಾಧ್ಯವಾದಲ್ಲೆಲ್ಲಾ ಸುರಕ್ಷಿತ ನಿರ್ಗಮನವನ್ನು ಸುಲಭಗೊಳಿಸಲು ಸಂಬಂಧಪಟ್ಟ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಲು ನಿರ್ದೇಶಿಸಲಾಗಿದೆ. ಇರಾನ್, ಇರಾನ್ ಜಲ ಪ್ರದೇಶ ಅಥವಾ ಹತ್ತಿರದ ಪ್ರದೇಶಗಳಲ್ಲಿರುವ ಭಾರತೀಯ ಸಿಬ್ಬಂದಿಯ ವಿವರಗಳನ್ನು ತುರ್ತಾಗಿ ಸಲ್ಲಿಸುವಂತೆಯೂ ಡಿಜಿ ಶಿಪ್ಪಿಂಗ್ ಸೂಚಿಸಿದೆ. ಇರಾನ್ ಬಂದರುಗಳಿಗೆ ಭೇಟಿ ನೀಡುವ ಅಥವಾ ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವ ಭಾರತೀಯ ಧ್ವಜದ ಹಡಗುಗಳು ಮತ್ತು ವಿದೇಶಿ ಧ್ವಜದ ಹಡಗುಗಳಲ್ಲಿರುವ ಭಾರತೀಯ ನಾವಿಕರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಲಾಗಿದೆ.

Read More
Next Story