Series of explosions in Dubai, Doha, Manama, oil tanker destroyed in Kuwait
x

ಸಾಂದರ್ಭಿಕ ಚಿತ್ರ

ದುಬೈ, ದೋಹಾ, ಮನಾಮದಲ್ಲಿ ಸರಣಿ ಸ್ಫೋಟ, ಕುವೈತ್‌ನಲ್ಲಿ ತೈಲ ಟ್ಯಾಂಕರ್‌ ಧ್ವಂಸ

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ರಾಜಧಾನಿ ಅಬುಧಾಬಿಯ ಕೈಗಾರಿಕಾ ವಲಯದಲ್ಲಿ ಇರಾನ್ ಹಾರಿಸಿದ್ದ ಡ್ರೋನ್‌ಗಳನ್ನು ವಾಯು ರಕ್ಷಣಾ ಪಡೆಗಳು ಹೊಡೆದುರುಳಿಸಿವೆ.


Click the Play button to hear this message in audio format

ಅಮೆರಿಕ ಮತ್ತು ಇಸ್ರೇಲ್‌ನ ಸೇನಾ ಕಾರ್ಯಾಚರಣೆಗೆ ಪ್ರತಿಯಾಗಿ ಇರಾನ್ ತನ್ನ ಪ್ರತಿದಾಳಿಯನ್ನು ತೀವ್ರಗೊಳಿಸಿದ್ದು, ಇದೀಗ ಗಲ್ಫ್ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದೆ. ದುಬೈ, ದೋಹಾ ಮತ್ತು ಮನಾಮ ನಗರಗಳಲ್ಲಿರುವ ಅಮೆರಿಕದ ಸೇನಾ ನೆಲೆಗಳು, ರಾಯಭಾರ ಕಚೇರಿಗಳು ಹಾಗೂ ನಾಗರಿಕ ಮೂಲಸೌಕರ್ಯಗಳ ಮೇಲೆ ಇರಾನ್ ಗುರುವಾರ ಸರಣಿ ದಾಳಿ ನಡೆಸಿದ್ದು, ಗಲ್ಫ್ ವಲಯದಲ್ಲಿ ಯುದ್ಧದ ಭೀತಿ ಹೆಚ್ಚಾಗಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ರಾಜಧಾನಿ ಅಬುಧಾಬಿಯ ಕೈಗಾರಿಕಾ ವಲಯದಲ್ಲಿ ಇರಾನ್ ಹಾರಿಸಿದ್ದ ಡ್ರೋನ್‌ಗಳನ್ನು ವಾಯು ರಕ್ಷಣಾ ಪಡೆಗಳು ಹೊಡೆದುರುಳಿಸಿವೆ. ಈ ಡ್ರೋನ್‌ಗಳ ಅವಶೇಷಗಳು ಬಿದ್ದು ಪಾಕಿಸ್ತಾನ ಹಾಗೂ ನೇಪಾಳ ಮೂಲದ ಕಾರ್ಮಿಕರು ಸೇರಿದಂತೆ ಒಟ್ಟು ಆರು ಮಂದಿ ಗಾಯಗೊಂಡಿದ್ದಾರೆ. ಮತ್ತೊಂದೆಡೆ ಕತಾರ್ ರಾಜಧಾನಿ ದೋಹಾದಲ್ಲೂ ಸರಣಿ ಸ್ಫೋಟಗಳು ಸಂಭವಿಸಿದ್ದು, ನಗರದಾದ್ಯಂತ ದಟ್ಟ ಹೊಗೆ ಆವರಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ದೋಹಾದಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಸಮೀಪದ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ತ್ವರಿತವಾಗಿ ಸ್ಥಳಾಂತರಿಸಲಾಗುತ್ತಿದೆ.

ಕುವೈತ್‌ನಲ್ಲಿ ತೈಲ ಟ್ಯಾಂಕರ್ ಸ್ಫೋಟ, ಸೌದಿಯಲ್ಲಿ ಕ್ಷಿಪಣಿಗಳು ಪತನ

ಇರಾನ್ ಶನಿವಾರದಿಂದ ಆರಂಭಿಸಿದ ಈ ಸರಣಿ ದಾಳಿಗಳಲ್ಲಿ ಈವರೆಗೆ ಕೊಲ್ಲಿ ರಾಷ್ಟ್ರಗಳಲ್ಲಿ ಕನಿಷ್ಠ 13 ಜನರು ಮೃತಪಟ್ಟಿದ್ದಾರೆ. ಇವರಲ್ಲಿ ಏಳು ಮಂದಿ ನಾಗರಿಕರು ಸೇರಿದ್ದರೆ, ಕುವೈತ್‌ನಲ್ಲಿ ನಾಲ್ವರು ಸೇರಿದಂತೆ ಒಟ್ಟು ಆರು ಮಂದಿ ಅಮೆರಿಕನ್ ಯೋಧರು ಬಲಿಯಾಗಿದ್ದಾರೆ ಎಂದು ಅಮೆರಿಕ ಸ್ಪಷ್ಟಪಡಿಸಿದೆ. ಇದೇ ವೇಳೆ ಕುವೈತ್ ಕರಾವಳಿ ಸಮೀಪ ತೈಲ ಟ್ಯಾಂಕರ್ ಮೇಲೆ ಸ್ಫೋಟ ಸಂಭವಿಸಿದ್ದು, ಭಾರಿ ಪ್ರಮಾಣದ ತೈಲ ಸೋರಿಕೆಯಾಗಿದೆ ಎಂದು ಬ್ರಿಟನ್‌ನ ಕಡಲ ಭದ್ರತಾ ಸಂಸ್ಥೆ (UKMTO) ಖಚಿತಪಡಿಸಿದೆ. ಜೊತೆಗೆ ಬಹರೇನ್ ರಾಜಧಾನಿ ಮನಾಮದಲ್ಲಿ ಸ್ಫೋಟದ ಸದ್ದು ಕೇಳಿಬಂದಿದ್ದು, ಸೌದಿ ಅರೇಬಿಯಾದ ಅಲ್-ಖರ್ಜ್ ನಗರದ ಹೊರವಲಯದಲ್ಲಿ ಮೂರು ಕ್ರೂಸ್ ಕ್ಷಿಪಣಿಗಳು ಹಾಗೂ ಹಲವು ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಸೌದಿ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.

ಕತಾರ್ ಪ್ರಧಾನಿ ವಾಗ್ದಾಳಿಯ ಬೆನ್ನಲ್ಲೇ ಈ ಕೃತ್ಯ

ಇರಾನ್‌ನ ಈ ದಾಳಿಗಳ ಹಿಂದೆ ರಾಜತಾಂತ್ರಿಕ ಬಿಕ್ಕಟ್ಟು ಕೂಡ ಪ್ರಮುಖ ಕಾರಣವಾಗಿದೆ. ಇತ್ತೀಚೆಗಷ್ಟೇ ಉಭಯ ದೇಶಗಳ ನಡುವೆ ನಡೆದ ಉನ್ನತ ಮಟ್ಟದ ಮಾತುಕತೆ ವೇಳೆ ಕತಾರ್ ಪ್ರಧಾನಿ ಶೇಕ್ ಮೊಹಮ್ಮದ್ ಬಿನ್ ಅಬ್ದುಲ್ ರಹಮಾನ್ ಅಲ್ ಥಾನಿ ಅವರು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರನ್ನು ಕಟುವಾಗಿ ಟೀಕಿಸಿದ್ದರು. ಇರಾನ್ ತನ್ನ ನೆರೆಹೊರೆಯ ರಾಷ್ಟ್ರಗಳಿಗೆ ಹಾನಿ ಮಾಡುತ್ತಿದ್ದು, ತಮ್ಮದಲ್ಲದ ಯುದ್ಧಕ್ಕೆ ಗಲ್ಫ್ ದೇಶಗಳನ್ನು ಬಲವಂತವಾಗಿ ಎಳೆಯಲು ಯತ್ನಿಸುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದರು. ಈ ಬೆಳವಣಿಗೆ ನಡೆದ ಕೆಲವೇ ಗಂಟೆಗಳಲ್ಲಿ ಕತಾರ್ ಅನ್ನು ಗುರಿಯಾಗಿಸಿಕೊಂಡು ಇರಾನ್ ಈ ದಾಳಿ ನಡೆಸಿದೆ.

Read More
Next Story