
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಅಮೆರಿಕ-ಇರಾನ್ ಸುದೀರ್ಘ ಸಂಘರ್ಷಕ್ಕೆ ಮುಕ್ತಿ: ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದ ಡೊನಾಲ್ಡ್ ಟ್ರಂಪ್
ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ ಕೂಡ ಬುಧವಾರವೇ ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಈ ಕುರಿತು ಇರಾನ್ ಸರ್ಕಾರದಿಂದ ಯಾವುದೇ ತಕ್ಷಣದ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ಅಮೆರಿಕ ಮತ್ತು ಇರಾನ್ ನಡುವಿನ ಸುದೀರ್ಘ ಸಂಘರ್ಷಕ್ಕೆ ತೆರೆ ಎಳೆಯುವ ನಿಟ್ಟಿನಲ್ಲಿ ಪ್ರಮುಖ ಬೆಳವಣಿಗೆಯೊಂದು ನಡೆದಿದೆ. ಇರಾನ್ ಜೊತೆಗಿನ ಮಹತ್ವದ ತಿಳುವಳಿಕೆ ಒಪ್ಪಂದಕ್ಕೆ ತಾವೀಗಾಗಲೇ ಸಹಿ ಹಾಕಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕೃತವಾಗಿ ಘೋಷಿಸಿದ್ದಾರೆ.
ಫ್ರಾನ್ಸ್‌ನ ವರ್ಸೈಲ್ಸ್‌ನಿಂದ ಹೊರಡುವ ವೇಳೆ ವರದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷ ಟ್ರಂಪ್, "ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ನಾನು ವರ್ಸೈಲ್ಸ್‌ನಲ್ಲಿದ್ದಾಗಲೇ ಈ ಪ್ರಕ್ರಿಯೆ ಪೂರ್ಣಗೊಂಡಿದೆ," ಎಂದು ಸ್ಪಷ್ಟಪಡಿಸಿದರು. ಇರಾನ್‌ನಲ್ಲಿನ ಯುದ್ಧ ವಾತಾವರಣವನ್ನು ಕೊನೆಗೊಳಿಸುವ ಈ ಒಪ್ಪಂದಕ್ಕೆ ಟ್ರಂಪ್ ಸಹಿ ಹಾಕಿದ್ದಾರೆ ಎಂದು ಶ್ವೇತಭವನ ಧೃಢಪಡಿಸಿದೆ. ಆದರೆ, ಈ ಸಹಿ ಪ್ರಕ್ರಿಯೆಯು ಮಾಧ್ಯಮಗಳ ಕ್ಯಾಮೆರಾಗಳ ಕಣ್ಣಿಗೆ ಬಿದ್ದಿಲ್ಲ.
ಡಿಜಿಟಲ್ ಬಳಿಕ ಭೌತಿಕ ಸಹಿ
ಅಮೆರಿಕದ ಉನ್ನತ ಅಧಿಕಾರಿಯೊಬ್ಬರ ಮಾಹಿತಿ ಪ್ರಕಾರ, ಟ್ರಂಪ್ ಮತ್ತು ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ಕಳೆದ ಭಾನುವಾರವೇ ಡಿಜಿಟಲ್ ರೂಪದಲ್ಲಿ ಈ ಒಪ್ಪಂದಕ್ಕೆ ಸಹಿ ಮಾಡಿದ್ದರು. ಮುಂಬರುವ ಶುಕ್ರವಾರ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಅಧಿಕೃತ ವಿಧ್ಯುಕ್ತ ಸಹಿ ಕಾರ್ಯಕ್ರಮ ನಡೆಯಲಿದೆ ಎಂದು ಈ ಮುಂಚೆ ಹೇಳಲಾಗಿತ್ತು. ಆದರೆ, ಅದಕ್ಕೂ ಮುನ್ನವೇ ಬುಧವಾರ ವರ್ಸೈಲ್ಸ್‌ನಲ್ಲಿದ್ದಾಗ ಟ್ರಂಪ್ ಒಪ್ಪಂದಕ್ಕೆ ಭೌತಿಕವಾಗಿ ಸಹಿ ಹಾಕಿದ್ದಾರೆ ಎನ್ನಲಾಗಿದೆ.
ಇತ್ತ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ ಕೂಡ ಬುಧವಾರವೇ ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಈ ಕುರಿತು ಇರಾನ್ ಸರ್ಕಾರದಿಂದ ಯಾವುದೇ ತಕ್ಷಣದ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ಮುಂದೇನು? ಗೊಂದಲಗಳು ಹಾಗೇ ಇವೆ
ಈ ಒಪ್ಪಂದಕ್ಕೆ ಸಹಿ ಬಿದ್ದಿರುವುದರ ಬೆನ್ನಲ್ಲೇ ಕೆಲವು ತಾಂತ್ರಿಕ ಗೊಂದಲಗಳು ಎದ್ದಿವೆ. ಭಾನುವಾರ ನಡೆದ ಡಿಜಿಟಲ್ ಸಹಿಗೂ, ಈಗ ವರ್ಸೈಲ್ಸ್‌ನಲ್ಲಿ ನಡೆದಿರುವ ಸಹಿಗೂ ಇರುವ ವ್ಯತ್ಯಾಸವೇನು ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಅಲ್ಲದೆ, ಈ ಸಹಿ ಪ್ರಕ್ರಿಯೆಯು ಅಂತಿಮ ಒಪ್ಪಂದವನ್ನು ತಲುಪಲು ನಿಗದಿಪಡಿಸಲಾಗುವ 60 ದಿನಗಳ ಮಾತುಕತೆಯ ಗಡುವಿಗೆ ಚಾಲನೆ ನೀಡಿದೆಯೇ ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಸಿಕ್ಕಿಲ್ಲ.
ವರ್ಸೈಲ್ಸ್ ಇತಿಹಾಸ
ಜಾಗತಿಕ ಇತಿಹಾಸದಲ್ಲಿ ಫ್ರಾನ್ಸ್‌ನ ವರ್ಸೈಲ್ಸ್ ಅರಮನೆಗೆ ವಿಶೇಷ ಪ್ರಾಮುಖ್ಯತೆ ಇದೆ. ಶತಮಾನಗಳಿಂದಲೂ ಅನೇಕ ಪ್ರಮುಖ ಯುದ್ಧಗಳು ಮತ್ತು ಪ್ರಾದೇಶಿಕ ವಿವಾದಗಳನ್ನು ಕೊನೆಗೊಳಿಸುವ ಐತಿಹಾಸಿಕ ಒಪ್ಪಂದಗಳಿಗೆ ಈ ಸ್ಥಳ ಸಾಕ್ಷಿಯಾಗಿದೆ. ಇದರಲ್ಲಿ ಅತ್ಯಂತ ಪ್ರಮುಖವಾದದ್ದು 1919 ರ ಒಪ್ಪಂದ. ಇದು ಮೊದಲನೇ ಮಹಾಯುದ್ಧವನ್ನು ಅಧಿಕೃತವಾಗಿ ಕೊನೆಗೊಳಿಸಿತಾದರೂ, ಜರ್ಮನಿಯ ಮೇಲೆ ಹೇರಲಾದ ಕಠಿಣ ನಿಯಮಗಳು ನಂತರದ ದಿನಗಳಲ್ಲಿ ಎರಡನೇ ಮಹಾಯುದ್ಧಕ್ಕೆ ಅಡಿಪಾಯ ಹಾಕಿದವು ಎಂದು ಇತಿಹಾಸಕಾರರು ವಿಶ್ಲೇಷಿಸುತ್ತಾರೆ. ಈಗ ಅದೇ ಜಾಗದಲ್ಲಿ ಅಮೆರಿಕ-ಇರಾನ್ ನಡುವಿನ ಒಪ್ಪಂದಕ್ಕೆ ಸಹಿ ಬಿದ್ದಿರುವುದು ಜಾಗತಿಕ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ.

