ಲಂಡನ್‌ನ ಸೌತ್‌ಹಾಲ್‌ನಲ್ಲಿ  26 ವರ್ಷದ ಭಾರತೀಯ ಮೂಲದ ಯುವಕನ ಬರ್ಬರ ಹತ್ಯೆ
x

ಲಂಡನ್‌ನ ಪಶ್ಚಿಮ ಭಾಗದ ಸೌತ್‌ಹಾಲ್‌ನಲ್ಲಿ ತಡರಾತ್ರಿ ನಡೆದ ಚಾಕು ಇರಿತದ ಘಟನೆಯಲ್ಲಿ 26 ವರ್ಷದ ಭಾರತೀಯ ಮೂಲದ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. 

ಲಂಡನ್‌ನ ಸೌತ್‌ಹಾಲ್‌ನಲ್ಲಿ 26 ವರ್ಷದ ಭಾರತೀಯ ಮೂಲದ ಯುವಕನ ಬರ್ಬರ ಹತ್ಯೆ

ಲಂಡನ್‌ನ ಸೌತ್‌ಹಾಲ್‌ನಲ್ಲಿ ಭಾರತೀಯ ಮೂಲದ 26 ವರ್ಷದ ಗುರ್ಭೇಜ್ ಸಿಂಗ್ ಎಂಬ ಯುವಕನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿದ್ದು, ಮೆಟ್ರೋಪಾಲಿಟನ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


Click the Play button to hear this message in audio format

ಲಂಡನ್‌ನ ಪಶ್ಚಿಮ ಭಾಗದ ಸೌತ್‌ಹಾಲ್‌ನಲ್ಲಿ ತಡರಾತ್ರಿ ನಡೆದ ಚಾಕು ಇರಿತದ ಘಟನೆಯಲ್ಲಿ 26 ವರ್ಷದ ಭಾರತೀಯ ಮೂಲದ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಘಟನೆ ಲಂಡನ್‌ನಲ್ಲಿ ನೆಲೆಸಿರುವ ಭಾರತೀಯರಲ್ಲಿ ತೀವ್ರ ಆತಂಕ ಸೃಷ್ಟಿಸಿದ್ದು, ಪ್ರಕರಣದ ಕುರಿತು ಲಂಡನ್‌ನ ಮೆಟ್ರೋಪಾಲಿಟನ್ ಪೊಲೀಸರು ಕೊಲೆ ಮೊಕದ್ದಮೆ ದಾಖಲಿಸಿಕೊಂಡು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ದುಷ್ಕರ್ಮಿಗಳ ಭೀಕರ ದಾಳಿಗೆ ಬಲಿಯಾದ ಯುವಕನನ್ನು ಗುರ್ಭೇಜ್ ಸಿಂಗ್ ಎಂದು ಗುರುತಿಸಲಾಗಿದೆ. ಸೌತ್‌ಹಾಲ್‌ನ ನಾರ್ತ್ ರೋಡ್ ಹಾಗೂ ಡಾರ್ಮರ್ಸ್ ವೆಲ್ಸ್ ಲೇನ್ ಜಂಕ್ಷನ್ ಬಳಿ ಈ ಘೋರ ಕೃತ್ಯ ನಡೆದಿದೆ. ಬುಧವಾರ ಮಧ್ಯರಾತ್ರಿ 12:30ರ ಸುಮಾರಿಗೆ ಅಂಗಡಿಯೊಂದರ ಹೊರಗೆ ಗುರ್ಭೇಜ್ ಸಿಂಗ್ ಮೇಲೆ ಏಕಾಏಕಿ ಹಲ್ಲೆ ನಡೆಸಲಾಗಿದೆ. ಘಟನೆಯ ಬಗ್ಗೆ ಮಾಹಿತಿ ಲಭ್ಯವಾದ ತಕ್ಷಣ ಸ್ಥಳಕ್ಕೆ ಧಾವಿಸಿದ ಲಂಡನ್ ಆಂಬ್ಯುಲೆನ್ಸ್ ಸೇವೆ ಹಾಗೂ ವೈದ್ಯಕೀಯ ಸಿಬ್ಬಂದಿ ಯುವಕನ ಪ್ರಾಣ ಉಳಿಸಲು ತೀವ್ರ ಪ್ರಯತ್ನ ನಡೆಸಿದರು. ಆದರೆ, ಚಾಕುವಿನಿಂದ ತೀವ್ರವಾಗಿ ಗಾಯಗೊಂಡಿದ್ದ ಗುರ್ಭೇಜ್ ಸಿಂಗ್ ವಿಪರೀತ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮತ್ತೊಬ್ಬ ವ್ಯಕ್ತಿಗೆ ಗಾಯ

ಈ ದಾಳಿಯ ವೇಳೆ 30 ವರ್ಷದ ಆಸುಪಾಸಿನ ಮತ್ತೊಬ್ಬ ವ್ಯಕ್ತಿಗೂ ಗಾಯಗಳಾಗಿವೆ. ಘಟನೆ ನಡೆದ ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಿ ಅಗತ್ಯ ಚಿಕಿತ್ಸೆ ನೀಡಲಾಗಿದೆ. ಸದ್ಯ ಆತನ ಆರೋಗ್ಯ ಸುಧಾರಿಸಿದ್ದು, ಚಿಕಿತ್ಸೆಯ ನಂತರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾನೆ ಎಂದು ವರದಿಯಾಗಿದೆ.

ಘಟನೆಗೆ ಸಂಬಂಧಿಸಿದಂತೆ ಕೊಲೆ ಶಂಕೆಯ ಆಧಾರದ ಮೇಲೆ 20ರಿಂದ 30 ವರ್ಷದೊಳಗಿನ ಏಳು ಮಂದಿಯನ್ನು ಪೊಲೀಸರು ಘಟನಾ ಸ್ಥಳದಲ್ಲೇ ಬಂಧಿಸಿದ್ದರು. ಆದರೆ, ಪ್ರಾಥಮಿಕ ವಿಚಾರಣೆ ಹಾಗೂ ಪರಿಶೀಲನೆಯ ಬಳಿಕ ಆರು ಜನರನ್ನು ಯಾವುದೇ ಮುಂದಿನ ಕ್ರಮಗಳಿಲ್ಲದೆ ಬಿಡುಗಡೆ ಮಾಡಲಾಗಿದೆ. ಏಳನೇ ಶಂಕಿತನನ್ನು ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದ್ದು, ತನಿಖೆ ಮುಂದುವರಿದಂತೆ ಆತನನ್ನು ಮತ್ತೆ ಹೆಚ್ಚಿನ ವಿಚಾರಣೆಗೆ ಕರೆಯುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ.

ಸಿಸಿಟಿವಿ ದೃಶ್ಯಾವಳಿಗಳಿಗಾಗಿ ಪೊಲೀಸರ ಮನವಿ

ಮೆಟ್ರೋಪಾಲಿಟನ್ ಪೊಲೀಸರ ಸ್ಪೆಷಲಿಸ್ಟ್ ಕ್ರೈಮ್ ಕಮಾಂಡ್‌ನ ಡಿಟೆಕ್ಟಿವ್ ಚೀಫ್ ಇನ್ಸ್‌ಪೆಕ್ಟರ್ ಅಲಿಸನ್ ಫಾಕ್ಸ್‌ವೆಲ್ ಈ ಪ್ರಕರಣದ ತನಿಖೆಯ ನೇತೃತ್ವ ವಹಿಸಿದ್ದಾರೆ. ಗುರ್ಭೇಜ್ ಸಿಂಗ್ ಅವರ ಸಾವು ಅತ್ಯಂತ ಖೇದಕರವಾಗಿದ್ದು , ಅಪರಾಧಿಗಳನ್ನು ಪತ್ತೆಹಚ್ಚಲು ನಮ್ಮ ತಂಡ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ, ಘಟನೆ ನಡೆದ ಸಮಯದಲ್ಲಿ ಆ ಪ್ರದೇಶದಲ್ಲಿ ಓಡಾಡಿದವರು ಅಥವಾ ಸುತ್ತಮುತ್ತಲಿನ ಕಟ್ಟಡಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಹೊಂದಿರುವ ಸ್ಥಳೀಯರು ಹೆಚ್ಚಿನ ಮಾಹಿತಿಗಾಗಿ ಪೊಲೀಸರನ್ನು ಸಂಪರ್ಕಿಸುವಂತೆ ಅವರು ಸಾರ್ವಜನಿಕರಲ್ಲಿ ಕಳಕಳಿಯ ಮನವಿ ಮಾಡಿದ್ದಾರೆ.

ಸದ್ಯ ಪೊಲೀಸರು ಘಟನೆಗೆ ನಿಖರವಾದ ಕಾರಣಗಳನ್ನು ಪತ್ತೆಹಚ್ಚಲು ಸಾಕ್ಷ್ಯಾಧಾರಗಳನ್ನು ಕಲೆಹಾಕುವಲ್ಲಿ ನಿರತರಾಗಿದ್ದಾರೆ. ದುರಂತದಲ್ಲಿ ಪ್ರಾಣ ಕಳೆದುಕೊಂಡ ಸಂತ್ರಸ್ತ ಗುರ್ಭೇಜ್ ಸಿಂಗ್ ಅವರ ಕುಟುಂಬಕ್ಕೆ ವಿಶೇಷ ಪೊಲೀಸ್ ಅಧಿಕಾರಿಗಳ ಮೂಲಕ ಸೂಕ್ತ ಸಾಂತ್ವನ ಹಾಗೂ ಬೆಂಬಲವನ್ನು ಒದಗಿಸಲಾಗುತ್ತಿದೆ.

Read More
Next Story