
ಅಮೆರಿಕದಲ್ಲಿ ಭಾರತೀಯ ಮೂಲದ ಯುವತಿಯ ಕೊಲೆ- ಹಂತಕ ಪ್ರಿಯಕರ ಭಾರತಕ್ಕೆ ಎಸ್ಕೇಪ್
ಅಮೆರಿಕ ಮೇರಿಲ್ಯಾಂಡ್‌ನಲ್ಲಿ ನಾಪತ್ತೆಯಾಗಿದ್ದ ಭಾರತೀಯ ಯುವತಿ ನಿಕಿತಾ ಗೋಡಿಶಾಲ ಶವವಾಗಿ ಪತ್ತೆಯಾಗಿದ್ದಾರೆ. ಕೊಲೆ ಆರೋಪ ಹೊತ್ತಿರುವ ಮಾಜಿ ಪ್ರಿಯತಮ ಅರ್ಜುನ್ ಶರ್ಮಾ ಭಾರತಕ್ಕೆ ಪರಾರಿಯಾಗಿದ್ದಾನೆ.
ಅಮೆರಿಕದಲ್ಲಿ ಕಳೆದ ವಾರ ನಾಪತ್ತೆಯಾಗಿದ್ದ 27 ವರ್ಷದ ಭಾರತೀಯ ಮೂಲದ ಯುವತಿಯು ಶವವಾಗಿ ಪತ್ತೆಯಾಗಿದ್ದು, ಆಕೆಯನ್ನು ಕೊಂದ ಆಕೆಯ ಮಾಜಿ ಪ್ರಿಯತಮ ಭಾರತಕ್ಕೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಎಲಿಕಾಟ್ ಸಿಟಿಯ ನಿಕಿತಾ ಗೋಡಿಶಾಲ ಜನವರಿ 2 ರಂದು ನಾಪತ್ತೆಯಾಗಿದ್ದರು. ಮೇರಿಲ್ಯಾಂಡ್‌ನ ಕೊಲಂಬಿಯಾದಲ್ಲಿರುವ ಅವರ ಮಾಜಿ ಪ್ರಿಯತಮ 26 ವರ್ಷದ ಅರ್ಜುನ್ ಶರ್ಮಾನ ಅಪಾರ್ಟ್‌ಮೆಂಟ್‌ನಲ್ಲಿ ನಿಕಿತಾ ಅವರ ಮೃತದೇಹ ಪತ್ತೆಯಾಗಿದೆ ಎಂದು ಹೊವಾರ್ಡ್ ಕೌಂಟಿ ಪೊಲೀಸರು ತಿಳಿಸಿದ್ದಾರೆ. ನಿಕಿತಾ ಅವರ ದೇಹದ ಮೇಲೆ ಚಾಕು ಇರಿತದ ಗಾಯಗಳಿದ್ದವು ಎಂದು ಅವರು ತಿಳಿಸಿದ್ದಾರೆ.
ಪೊಲೀಸರು ಅರ್ಜುನ್ ಶರ್ಮಾ ವಿರುದ್ಧ ಮೊದಲ ಮತ್ತು ಎರಡನೇ ಹಂತದ ಕೊಲೆ ಪ್ರಕರಣ ದಾಖಲಿಸಿಕೊಂಡು ಬಂಧನದ ವಾರೆಂಟ್ ಹೊರಡಿಸಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ, ಅರ್ಜುನ್ ಶರ್ಮಾ ಅವರೇ ಜನವರಿ 2 ರಂದು ಪೊಲೀಸರಿಗೆ ದೂರು ನೀಡಿ ನಿಕಿತಾ ಕಾಣೆಯಾಗಿದ್ದಾರೆ ಎಂದು ತಿಳಿಸಿದ್ದರು. ಡಿಸೆಂಬರ್ 31 ರಂದು ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ನಿಕಿತಾ ಅವರನ್ನು ಕೊನೆಯದಾಗಿ ನೋಡಿದ್ದಾಗಿ ಸುಳ್ಳು ಹೇಳಿದ್ದರು.
ತನಿಖೆಯ ವೇಳೆ ಪೊಲೀಸರಿಗೆ ತಿಳಿದುಬಂದಿದ್ದೇನೆಂದರೆ, ಅರ್ಜುನ್ ದೂರು ನೀಡಿದ ದಿನವೇ (ಜನವರಿ 2) ವಿಮಾನದ ಮೂಲಕ ಭಾರತಕ್ಕೆ ಪ್ರಯಾಣ ಬೆಳೆಸಿದ್ದಾರೆ. ಮರುದಿನ ಪೊಲೀಸರು ಆತನ ಮನೆಯನ್ನು ಶೋಧಿಸಿದಾಗ ನಿಕಿತಾ ಶವ ಪತ್ತೆಯಾಗಿದೆ. ನಿಕಿತಾ ಅವರನ್ನು ಡಿಸೆಂಬರ್ 31 ರ ರಾತ್ರಿ 7 ಗಂಟೆಯ ಸುಮಾರಿಗೆ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.
ರಾಯಭಾರ ಕಚೇರಿಯ ನೆರವು
ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಈ ಬಗ್ಗೆ ಎಕ್ಸ್ (X) ನಲ್ಲಿ ಮಾಹಿತಿ ನೀಡಿದ್ದು, "ನಾವು ನಿಕಿತಾ ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇವೆ ಮತ್ತು ಅವರಿಗೆ ಅಗತ್ಯವಿರುವ ಎಲ್ಲಾ ರಾಯಭಾರ ನೆರವುಗಳನ್ನು ನೀಡುತ್ತಿದ್ದೇವೆ. ಸ್ಥಳೀಯ ಅಧಿಕಾರಿಗಳೊಂದಿಗೆ ನಾವು ನಿರಂತರ ಸಂಪರ್ಕದಲ್ಲಿದ್ದೇವೆ," ಎಂದು ತಿಳಿಸಿದೆ. ಸದ್ಯ ಅಮೆರಿಕದ ಫೆಡರಲ್ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಸೇರಿ ಪೊಲೀಸರು ಅರ್ಜುನ್ ಶರ್ಮಾ ಪತ್ತೆಗಾಗಿ ತನಿಖೆ ನಡೆಸುತ್ತಿದ್ದಾರೆ.

