150 ವರ್ಷದ ಸಂಪ್ರದಾಯಕ್ಕೆ ಅಂತ್ಯ?: ಕುದುರೆ ಗಾಡಿಗಳ ನಿಷೇಧಕ್ಕೆ ಹೆಚ್ಚಿದ ಒತ್ತಾಯ
x

150 ವರ್ಷದ ಸಂಪ್ರದಾಯಕ್ಕೆ ಅಂತ್ಯ?: ಕುದುರೆ ಗಾಡಿಗಳ ನಿಷೇಧಕ್ಕೆ ಹೆಚ್ಚಿದ ಒತ್ತಾಯ

ನ್ಯೂಯಾರ್ಕ್ ನಗರದ ಪ್ರಸಿದ್ಧ ಸೆಂಟ್ರಲ್ ಪಾರ್ಕ್‌ನಲ್ಲಿ ನಡೆದ ಭೀಕರ ಅಪಘಾತದಲ್ಲಿ ಭಾರತದ 18 ವರ್ಷದ ವಿದ್ಯಾರ್ಥಿ ರೋಮಾಂಚ ಮಹಾಜನ್ ಸಾವನ್ನಪ್ಪಿದ್ದು, ಇದು ಇಡೀ ನಗರವನ್ನು ಬೆಚ್ಚಿಬೀಳಿಸಿದೆ.


Click the Play button to hear this message in audio format

ಅಮೆರಿಕದ ನ್ಯೂಯಾರ್ಕ್ ನಗರದ ಪ್ರಸಿದ್ಧ ಸೆಂಟ್ರಲ್ ಪಾರ್ಕ್‌ನಲ್ಲಿ ನಡೆದ ಭೀಕರ ಅಪಘಾತವೊಂದು 150 ವರ್ಷಗಳ ಇತಿಹಾಸವಿರುವ ಕುದುರೆ ಗಾಡಿಗಳ ಸಂಚಾರವನ್ನು ನಿಷೇಧಿಸುವಂತೆ ಜಾಗತಿಕ ಮಟ್ಟದಲ್ಲಿ ಒತ್ತಾಯಕ್ಕೆ ಕಾರಣವಾಗಿದೆ. ಈ ಅಪಘಾತದಲ್ಲಿ ಭಾರತದ 18 ವರ್ಷದ ವಿದ್ಯಾರ್ಥಿ ರೋಮಾಂಚ ಮಹಾಜನ್ ಸಾವನ್ನಪ್ಪಿದ್ದು, ಇದು ಇಡೀ ನಗರವನ್ನು ಬೆಚ್ಚಿಬೀಳಿಸಿದೆ.

ಜೂನ್ 17ರಂದು ತನ್ನ ಕುಟುಂಬದೊಂದಿಗೆ ನ್ಯೂಯಾರ್ಕ್ ಪ್ರವಾಸಕ್ಕೆ ಬಂದಿದ್ದ 18 ವರ್ಷದ ರೋಮಾಂಚ ಮಹಾಜನ್, ಸೆಂಟ್ರಲ್ ಪಾರ್ಕ್‌ನಲ್ಲಿ ಕುದುರೆ ಗಾಡಿಯಲ್ಲಿ ಸವಾರಿ ಮಾಡುತ್ತಿದ್ದರು. ಕುಟುಂಬದ ಫೋಟೋ ತೆಗೆಸಿಕೊಳ್ಳಲು ಚಾಲಕ ಗಾಡಿಯನ್ನು ನಿಲ್ಲಿಸಿದ್ದಾಗ, ಇದ್ದಕ್ಕಿದ್ದಂತೆ ಕುದುರೆ ಬೆದರಿ ಅತಿಯಾದ ವೇಗದಲ್ಲಿ ಓಡಲಾರಂಭಿಸಿದೆ. ನಿಯಂತ್ರಣ ಕಳೆದುಕೊಂಡ ಕುದುರೆಯು ಫುಟ್‌ಪಾತ್ ಮೇಲೆ ಹತ್ತಿ, ಹುಲ್ಲುಹಾಸಿನ ಮೇಲೆ ಅಪ್ಪಳಿಸಿದೆ. ಗಾಡಿಯಿಂದ ಕೆಳಗೆ ಬಿದ್ದ ತನ್ನ ತಾಯಿಯನ್ನು ರಕ್ಷಿಸಲು ಹೋದಾಗ ರೋಮಾಂಚ ಮಹಾಜನ್ ಗಂಭೀರವಾಗಿ ಗಾಯಗೊಂಡು ಅಸುನೀಗಿದ್ದಾರೆ. ಕಳೆದ 150 ವರ್ಷಗಳಲ್ಲಿ ಸೆಂಟ್ರಲ್ ಪಾರ್ಕ್‌ನಲ್ಲಿ ಕುದುರೆ ಗಾಡಿ ಅಪಘಾತದಿಂದ ಸಂಭವಿಸಿದ ಮೊದಲ ಮಾನವ ಸಾವು ಇದಾಗಿದೆ ಎಂದು ವರದಿಯಾಗಿದೆ.

ನಿಷೇಧಕ್ಕೆ ಬಲವಾದ ಒತ್ತಾಯ

ಈ ಘಟನೆಯು ಕುದುರೆ ಗಾಡಿಗಳ ವಿರುದ್ಧ ಇರುವ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿದೆ. ನ್ಯೂಯಾರ್ಕ್ ಸಿಟಿ ಕೌನ್ಸಿಲ್ ಸದಸ್ಯ ಕ್ರಿಸ್ಟೋಫರ್ ಮಾರ್ಟೆ ಈ ಕುರಿತು ಮಾತನಾಡಿ, ಇದು ಕೇವಲ ಒಂದು ಪ್ರತ್ಯೇಕ ಘಟನೆಯಲ್ಲ. ಇನ್ನು ಮುಂದೆ ಇಂತಹ ದುರಂತಗಳಿಗೆ ಅವಕಾಶ ನೀಡಬಾರದು ಎಂದು ಹೇಳಿದ್ದಾರೆ. ಅವರು ಮುಂದಿನ ವರ್ಷದ ಅಂತ್ಯದ ವೇಳೆಗೆ ಕುದುರೆ ಗಾಡಿಗಳನ್ನು ನಿಷೇಧಿಸುವ ಮಸೂದೆಯನ್ನು ಮಂಡಿಸಿದ್ದಾರೆ. 2025ರ ಮೇ ತಿಂಗಳಿನಿಂದ ಈವರೆಗೆ ಸೆಂಟ್ರಲ್ ಪಾರ್ಕ್ ಸುತ್ತಮುತ್ತ ಎಂಟು ಬಾರಿ ಕುದುರೆ ಸಂಬಂಧಿತ ಅಪಘಾತಗಳು ನಡೆದಿವೆ. ಪ್ರಾಣಿ ಹಕ್ಕುಗಳ ಸಂಘಟನೆಗಳು ಈ ವ್ಯವಸ್ಥೆಯು ಪ್ರಾಣಿಗಳಿಗೂ ಸುರಕ್ಷಿತವಲ್ಲ ಮತ್ತು ಮನುಷ್ಯರಿಗೂ ಅಪಾಯಕಾರಿ ಎಂದು ವಾದಿಸುತ್ತಿವೆ.

'ರೈಡರ್ಸ್ ಲಾ' ಎಂದರೇನು?

ಈ ದುರಂತದ ನಂತರ 'ರೈಡರ್ಸ್ ಲಾ' ಎಂಬ ಕಾನೂನಿನ ಚರ್ಚೆ ಮುನ್ನೆಲೆಗೆ ಬಂದಿದೆ. 2022ರಲ್ಲಿ ರೈಡರ್ ಎಂಬ ಹೆಸರಿನ ಕುದುರೆಯೊಂದು ರಸ್ತೆಯಲ್ಲೇ ಕುಸಿದು ಬಿದ್ದು ಸತ್ತಿದ್ದ ಘಟನೆ ನಡೆದ ನಂತರ ಈ ಕಾನೂನಿನ ಪ್ರಸ್ತಾವನೆ ಬಂದಿತ್ತು. ಇದರ ಪ್ರಮುಖ ಅಂಶಗಳು ನ್ಯೂಯಾರ್ಕ್ ನಗರದಲ್ಲಿ ಕುದುರೆ ಗಾಡಿಗಳ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ನಿಷೇಧಿಸುವುದು. ಇನ್ನು ಮುಂದೆ ಕುದುರೆ ಗಾಡಿಗಳಿಗೆ ಹೊಸ ಲೈಸೆನ್ಸ್ ನೀಡುವುದಿಲ್ಲ. ಕುದುರೆಗಳನ್ನು ಕಸಾಯಿಖಾನೆಗೆ ಅಥವಾ ಅಕ್ರಮ ಚಟುವಟಿಕೆಗಳಿಗೆ ಮಾರಾಟ ಮಾಡುವುದನ್ನು ತಡೆಯುವುದು. ಕುದುರೆ ಗಾಡಿ ಓಡಿಸುವ ಚಾಲಕರು ಮತ್ತು ಕಾರ್ಮಿಕರಿಗೆ ಪರ್ಯಾಯ ಉದ್ಯೋಗಾವಕಾಶ ಕಲ್ಪಿಸುವ ಕಾರ್ಯಕ್ರಮಗಳನ್ನು ರೂಪಿಸುವುದಾಗಿದೆ.

ಪ್ರಾಣಿ ಹಕ್ಕುಗಳ ಹೋರಾಟ

ಪ್ರಸಿದ್ಧ ಪ್ರಾಣಿ ಹಕ್ಕುಗಳ ಸಂಘಟನೆ ಪೀಟಾ, ಕುದುರೆಗಳು ಯಂತ್ರಗಳಲ್ಲ, ಅವು ಸಾಮಾಜಿಕ ಪ್ರಾಣಿಗಳು. ಕಾಂಕ್ರೀಟ್ ರಸ್ತೆಗಳಲ್ಲಿ, ಟ್ರಾಫಿಕ್ ನಡುವೆ ಪ್ರವಾಸಿಗರನ್ನು ಹೊತ್ತು ಸಾಗುವುದು ಅವುಗಳಿಗೆ ಹಿಂಸೆಯಾಗಿದೆ ಎಂದು ಕಿಡಿಕಾರಿದೆ. ನ್ಯೂಯಾರ್ಕ್ ನಗರದ ಮೇಯರ್ ಜೋರಾನ್ ಮಾಮ್ದಾನಿ ಕೂಡ ಈ ಉದ್ಯಮವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಕೌನ್ಸಿಲ್‌ನೊಂದಿಗೆ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ. ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡುತ್ತಲೇ, ಈ ವ್ಯವಸ್ಥೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸುವುದು ನಮ್ಮ ಉದ್ದೇಶ ಎಂದು ತಿಳಿಸಿದ್ದಾರೆ. ಒಂದೆಡೆ ಪ್ರಾಣಿ ಹಕ್ಕುಗಳ ಹೋರಾಟಗಾರರು ನಿಷೇಧಕ್ಕೆ ಆಗ್ರಹಿಸುತ್ತಿದ್ದರೆ, ಮತ್ತೊಂದೆಡೆ ಕುದುರೆ ಗಾಡಿಗಳ ಉದ್ಯಮವನ್ನು ನಂಬಿ ಬದುಕುತ್ತಿರುವವರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. 150 ವರ್ಷಗಳ ಸಂಪ್ರದಾಯವನ್ನು ಉಳಿಸಿಕೊಳ್ಳಬೇಕೆಂದು ಕೆಲವರು ವಾದಿಸುತ್ತಿದ್ದಾರೆ. ಆದರೆ, ಮಾನವ ಜೀವದ ಹಾನಿಯ ನಂತರ ಈಗ ಈ ವಾದಗಳು ಕ್ಷೀಣಿಸಿವೆ.

Read More
Next Story