Indian becomes first to be deported from Britain to France under new deal!
x

ಬ್ರಿಟನ್ ಪ್ರಧಾನಿ ಕೀಮ್ ಸ್ಟಾರ್ಮರ್

ಅಕ್ರಮ ವಲಸೆ: ಬ್ರಿಟನ್-ಫ್ರಾನ್ಸ್ ಹೊಸ ಒಪ್ಪಂದದಡಿ ಗಡಿಪಾರಾದ ಮೊದಲ ವ್ಯಕ್ತಿ ಭಾರತೀಯ

ನಮ್ಮ ಗಡಿಯನ್ನು ಭದ್ರತೆ ಮಾಡಿಕೊಳ್ಳುವ ವಿಚಾರಕ್ಕೆ ನಾವು ಮೊದಲ ಆದ್ಯತೆ ನೀಡಿದ್ದೇವೆ. ಕಳ್ಳಸಾಗಾಣೆದಾರರ ಗುಂಪನ್ನು ಹತ್ತಿಕ್ಕುವ ನಿರ್ಧಾರ ಕೈಗೊಂಡಿದ್ದೇವೆ ಎಂದು ಬ್ರಿಟನ್ ಗೃಹ ಕಾರ್ಯದರ್ಶಿ ಶಬಾನಾ ಮೊಹಮೂದ್ ಹೇಳಿದ್ದಾರೆ.


ಅಕ್ರಮ ವಲಸೆ ಮತ್ತು ಮಾನವ ಕಳ್ಳಸಾಗಣೆ ಜಾಲಕ್ಕೆ ತಡೆಗೋಡೆಯೊಡ್ಡುವ ನಿಟ್ಟಿನಲ್ಲಿ ಬ್ರಿಟನ್ ಮತ್ತು ಫ್ರಾನ್ಸ್ ಐತಿಹಾಸಿಕ ಹೆಜ್ಜೆ ಇಟ್ಟಿವೆ. "ಒಬ್ಬರನ್ನು ಒಳಗೆ, ಮತ್ತೊಬ್ಬರನ್ನು ಹೊರಗೆ" ಎಂಬ ಹೊಸ ಒಪ್ಪಂದದ ಅಡಿಯಲ್ಲಿ, ಸಣ್ಣ ದೋಣಿಯ ಮೂಲಕ ಇಂಗ್ಲಿಷ್ ಕಡಲ್ಗಾಲುವೆ ದಾಟಿ ಬ್ರಿಟನ್‌ಗೆ ಅಕ್ರಮವಾಗಿ ಪ್ರವೇಶಿಸಿದ್ದ ಭಾರತೀಯ ಪ್ರಜೆಯೊಬ್ಬನನ್ನು ಯಶಸ್ವಿಯಾಗಿ ಫ್ರಾನ್ಸ್‌ಗೆ ಗಡಿಪಾರು ಮಾಡಲಾಗಿದೆ. ಈ ಮೂಲಕ, ಅಕ್ರಮ ವಲಸಿಗರಿಗೆ ಬ್ರಿಟನ್ ಸರ್ಕಾರವು ಕಠಿಣ ಸಂದೇಶ ರವಾನಿಸಿದೆ.

ಈ ಹೊಸ ಒಪ್ಪಂದವು ಅಕ್ರಮ ವಲಸೆ ಸಮಸ್ಯೆಗೆ ನೂತನ ಪರಿಹಾರವಾಗಿದೆ. ಇದರ ಅನ್ವಯ, ಸಣ್ಣ ದೋಣಿಗಳ ಮೂಲಕ ಅಪಾಯಕಾರಿ ಸಮುದ್ರಯಾನ ಮಾಡಿ ಬ್ರಿಟನ್‌ಗೆ ಬರುವ ಮತ್ತು ಆಶ್ರಯ ಕೋರಲು ಅನರ್ಹರಾದ ವಲಸಿಗರನ್ನು ಬ್ರಿಟನ್ ವಾಪಸ್ ಫ್ರಾನ್ಸ್‌ಗೆ ಕಳುಹಿಸುತ್ತದೆ. ಇದಕ್ಕೆ ಪ್ರತಿಯಾಗಿ, ಫ್ರಾನ್ಸ್‌ನಲ್ಲಿರುವ ಅಷ್ಟೇ ಸಂಖ್ಯೆಯ, ಕಾನೂನುಬದ್ಧವಾಗಿ ಅರ್ಜಿ ಸಲ್ಲಿಸಿರುವ ನಿರಾಶ್ರಿತರನ್ನು ಬ್ರಿಟನ್ ಅಧಿಕೃತವಾಗಿ ಸ್ವೀಕರಿಸುತ್ತದೆ. ಈ ವ್ಯವಸ್ಥೆಯು ಅಕ್ರಮ ಮಾರ್ಗಗಳನ್ನು ಸಂಪೂರ್ಣವಾಗಿ ನಿರುತ್ಸಾಹಗೊಳಿಸಿ, ಕಾನೂನುಬದ್ಧ ವಲಸೆಗೆ ಮಾತ್ರವೇ ಮನ್ನಣೆ ನೀಡುವ ಸ್ಪಷ್ಟ ಉದ್ದೇಶವನ್ನು ಹೊಂದಿದೆ.

ಈ ಗಡಿಪಾರು ಪ್ರಕರಣವು ನಮ್ಮ ಸರ್ಕಾರದ ಬದ್ಧತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಹೇಳಿದ್ದಾರೆ. "ಅಕ್ರಮ ವಲಸೆಯ ಜಾಲವನ್ನು ಸಂಪೂರ್ಣವಾಗಿ ಹತ್ತಿಕ್ಕುವ ನಮ್ಮ ಭರವಸೆಯನ್ನು ಈಡೇರಿಸುವಲ್ಲಿ ಇದೊಂದು ಮಹತ್ವದ ಮೊದಲ ಹೆಜ್ಜೆ," ಎಂದು ಅವರು ತಿಳಿಸಿದ್ದಾರೆ. ಗೃಹ ಕಾರ್ಯದರ್ಶಿ ಶಬಾನಾ ಮಹಮೂದ್ ಕೂಡಾ ಇದನ್ನೇ ಪ್ರತಿಧ್ವನಿಸಿದ್ದು, "ಬ್ರಿಟನ್‌ಗೆ ಅಕ್ರಮವಾಗಿ ಬಂದರೆ, ನಿಮ್ಮನ್ನು ಹುಡುಕಿ ಗಡಿಪಾರು ಮಾಡಲಾಗುವುದು ಎಂಬ ಖಚಿತ ಸಂದೇಶವನ್ನು ಈ ಮೂಲಕ ನೀಡಿದ್ದೇವೆ," ಎಂದಿದ್ದಾರೆ.

2026ರ ಜುಲೈವರೆಗೆ ಜಾರಿಯಲ್ಲಿರುವ ಈ ಒಪ್ಪಂದದ ಅಡಿಯಲ್ಲಿ, ಮುಂದಿನ ದಿನಗಳಲ್ಲಿ ಮತ್ತಷ್ಟು ಅಕ್ರಮ ವಲಸಿಗರ ಗಡಿಪಾರು ನಡೆಯಲಿದೆ. ಜೊತೆಗೆ, ಫ್ರಾನ್ಸ್‌ನಿಂದ ಕಾನೂನುಬದ್ಧ ವಲಸಿಗರ ಮೊದಲ ತಂಡವನ್ನು ಸೆಪ್ಟೆಂಬರ್ 20ರ ನಂತರ ಬರಮಾಡಿಕೊಳ್ಳಲು ಬ್ರಿಟನ್ ಸಿದ್ಧತೆ ನಡೆಸಿದೆ. ಈ ಮೂಲಕ, ಅಂತಾರಾಷ್ಟ್ರೀಯ ಸಹಕಾರದೊಂದಿಗೆ ವಲಸೆ ಸಮಸ್ಯೆಗೆ ಮಾನವೀಯ ಮತ್ತು ವ್ಯವಸ್ಥಿತ ಪರಿಹಾರ ಕಂಡುಕೊಳ್ಳುವತ್ತ ಎರಡೂ ದೇಶಗಳು ಸಾಗಿವೆ.

Read More
Next Story