
ಮಾನವಹಕ್ಕುಗಳನ್ನು ರಾಜಕೀಯ ದಾಳವಾಗಿ ಬಳಸಬೇಡಿ; ವಿಶ್ವಸಂಸ್ಥೆಯಲ್ಲಿ ಭಾರತ ತಿರುಗೇಟು
ಏಕಪಕ್ಷೀಯ ಆರೋಪಗಳ ಮೂಲಕ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಹೆಸರಿಗೆ ಮಸಿ ಬಳಿಯುವ ಯಾವುದೇ ಪ್ರಯತ್ನವನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.
ದೆಹಲಿಯಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಗಳನ್ನು ಮುಂದಿಟ್ಟುಕೊಂಡು, ಭಾರತದ ವಿರುದ್ಧ ಕಳವಳ ವ್ಯಕ್ತಪಡಿಸಿದ್ದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ತಜ್ಞರಿಗೆ ಭಾರತವು ಅಂತಾರಾಷ್ಟ್ರೀಯ ವೇದಿಕೆಯಲ್ಲೇ ಅತ್ಯಂತ ಖಡಕ್ ಪ್ರತ್ಯುತ್ತರ ನೀಡಿದೆ.
ಮಾನವ ಹಕ್ಕುಗಳನ್ನು ಯಾವುದೇ ದೇಶದ ವಿರುದ್ಧ ರಾಜಕೀಯ ಒತ್ತಡ ಹೇರುವ ಅಸ್ತ್ರವನ್ನಾಗಿಯಾಗಲಿ ಅಥವಾ ನಿರ್ದಿಷ್ಟ ದೇಶವನ್ನು ಆಯ್ದು ಗುರಿಯಾಗಿಸುವ ಸಾಧನವನ್ನಾಗಿಯಾಗಲಿ ಬಳಸಬಾರದು ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತ ಗುಡುಗಿದೆ. ಪರಿಶೀಲಿಸದ ವರದಿಗಳು, ಅರೆಬರೆ ಅಂಕಿ-ಅಂಶಗಳು ಹಾಗೂ ಏಕಪಕ್ಷೀಯ ಆರೋಪಗಳ ಮೂಲಕ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಹೆಸರಿಗೆ ಮಸಿ ಬಳಿಯುವ ಯಾವುದೇ ಪ್ರಯತ್ನವನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದೆ.
ದೆಹಲಿಯಲ್ಲಿ ಸಿಜೆಪಿ ಸೇರಿದಂತೆ ಹಲವು ನಾಗರಿಕ ಸಂಘಟನೆಗಳು ಹಾಗೂ ಯುವಕರ ಗುಂಪುಗಳು ವಿವಿಧ ವಿಚಾರಗಳನ್ನಿಟ್ಟುಕೊಂಡು ಪ್ರತಿಭಟನೆ ನಡೆಸಿದ್ದವು. ಮುಖ್ಯ ಚುನಾವಣಾ ಆಯುಕ್ತರ ಕಚೇರಿಯ ಮುಂಭಾಗದಲ್ಲೂ ಪ್ರತಿಭಟನೆಗಳು ನಡೆದಿದ್ದವು. ಅಲ್ಲದೆ, ಯುವ ಸಮುದಾಯವು ವಿಡಂಬನಾತ್ಮಕ ರಾಜಕೀಯ ಆಂದೋಲನಗಳನ್ನೂ ಹಮ್ಮಿಕೊಂಡಿತ್ತು. ಈ ಪ್ರತಿಭಟನೆಗಳ ವೇಳೆ ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡಲು ಪ್ರತಿಭಟನಾಕಾರರನ್ನು, ನಾಯಕರನ್ನು, ಕೆಲ ವಕೀಲರು ಹಾಗೂ ಪತ್ರಕರ್ತರನ್ನು ವಶಕ್ಕೆ ಪಡೆದಿದ್ದರು. ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಹೇಳಿಕೊಂಡ ಜಿನೀವಾದ 20ಕ್ಕೂ ಹೆಚ್ಚು ವಿಶ್ವಸಂಸ್ಥೆಯ ಸ್ವತಂತ್ರ ಮಾನವ ಹಕ್ಕುಗಳ ತಜ್ಞರು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದರು. "ದೆಹಲಿಯಲ್ಲಿ ಶಾಂತಿಯುತವಾಗಿ ನಡೆಯುತ್ತಿದ್ದ ಯುವಕರ ನೇತೃತ್ವದ ಪ್ರತಿಭಟನೆಗಳ ಮೇಲೆ ಪೊಲೀಸರು ಮಿತಿಮೀರಿದ ಬಲಪ್ರಯೋಗ ಮಾಡಿದ್ದಾರೆ. ಸಾಮೂಹಿಕ ಬಂಧನಗಳನ್ನು ಮಾಡಲಾಗಿದೆ ಮತ್ತು ಮಾನವ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ. ಭಾರತ ಸರ್ಕಾರ ತಕ್ಷಣವೇ ಈ ಬಗ್ಗೆ ನ್ಯಾಯ ಒದಗಿಸಬೇಕು ಎಂದು ಕಳವಳ ವ್ಯಕ್ತಪಡಿಸಿದ್ದರು. ಈ ಹಿಂದೆ ಸಹ ಇಂತಹದ್ದೇ ವರದಿಯೊಂದನ್ನು ಬಿಡುಗಡೆ ಮಾಡಿದ್ದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಕಚೇರಿಯ ಹೇಳಿಕೆಯನ್ನು ಭಾರತವು ಆಧಾರರಹಿತ ಮತ್ತು ಅನಗತ್ಯ ಎಂದು ತಳ್ಳಿಹಾಕಿತ್ತು. ಇದೀಗ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿಕೃತ ಅಧಿವೇಶನದಲ್ಲೇ ಭಾರತ ಇದಕ್ಕೆ ತಿರುಗೇಟು ನೀಡಿದೆ.
ವಿಶ್ವಸಂಸ್ಥೆಯಲ್ಲಿ ಭಾರತದ ಪರ ಧ್ವನಿ ಎತ್ತಿದ ಬರ್ಖಾ ತಾಮ್ರಕರ್
ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆದ ಯುಎನ್ಜಿಎಯ ಮೂರನೇ ಸಮಿತಿಯ ಬಲವಂತದ ನಾಪತ್ತೆ ಕುರಿತ ಕಾರ್ಯನಿರತ ಗುಂಪು ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವಾಲಯದ ಉಪ ಕಾರ್ಯದರ್ಶಿ ಬರ್ಖಾ ತಾಮ್ರಕರ್ ಅವರು ಭಾರತದ ನಿಲುವನ್ನು ಅತ್ಯಂತ ಸ್ಪಷ್ಟವಾಗಿ ಮತ್ತು ಪ್ರಬುದ್ಧವಾಗಿ ಮಂಡಿಸಿದರು. "ಮಾನವ ಹಕ್ಕುಗಳ ರಕ್ಷಣೆಯು ಎಲ್ಲರಿಗೂ ಮುಖ್ಯ. ಆದರೆ, ಕೆಲವು ದೇಶಗಳನ್ನು ಅಥವಾ ಸಂಸ್ಥೆಗಳನ್ನು ಮಾತ್ರ ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ರಾಜಕೀಯ ಲಾಭಕ್ಕಾಗಿ ಅಥವಾ ಒತ್ತಡ ಹೇರಲು ಮಾನವ ಹಕ್ಕುಗಳ ವೇದಿಕೆಯನ್ನು ದುರುಪಯೋಗಪಡಿಸಿಕೊಳ್ಳಬಾರದು. ಭಾರತವು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳೊಂದಿಗೆ ಸದಾ ಕೈಜೋಡಿಸಲು ಸಿದ್ಧವಿದೆ. ಆದರೆ ಆ ಸಹಕಾರವು ಮುಕ್ತ ಸಂವಾದ, ಸಮಾಲೋಚನೆ, ಪಾರದರ್ಶಕತೆ ಮತ್ತು ನಿಷ್ಪಕ್ಷಪಾತತೆಯ ತತ್ವಗಳ ಮೇಲೆ ಆಧಾರಿತವಾಗಿರಬೇಕು" ಎಂದು ಅವರು ಪ್ರತಿಪಾದಿಸಿದರು.
ಯಾವುದೇ ಒಂದು ಘಟನೆ ನಡೆದಾಗ ಮಾನವೀಯ ನೆಲೆಯಲ್ಲಿ ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳುವುದು ಸಹಜ ಪ್ರಕ್ರಿಯೆ. ಆದರೆ, "ಮಾನವೀಯ ಸಂವಹನವೊಂದನ್ನೇ ಅಂತಿಮ ತೀರ್ಪಿನ ಮಟ್ಟಕ್ಕೆ ಹಿಗ್ಗಿಸುವುದು ಅತ್ಯಂತ ತಪ್ಪು ನಡವಳಿಕೆ. ನಮಗೆ ಯಾವುದೇ ಪ್ರಕರಣದ ಬಗ್ಗೆ ವಾಸ್ತವ ಸಂಗತಿಗಳನ್ನು ಸ್ಪಷ್ಟಪಡಿಸಲು ಯಾವುದೇ ಹಿಂಜರಿಕೆಯಿಲ್ಲ. ಆದರೆ, ಸತ್ಯಾಸತ್ಯತೆಯನ್ನು ಪರಿಶೀಲಿಸದೆ, ವಾಸ್ತವ ಅರಿಯದೆ ನೀಡಲಾಗುವ ಯಾವುದೇ ಪೂರ್ವಗ್ರಹಪೀಡಿತ ತೀರ್ಪುಗಳನ್ನು ಭಾರತ ಒಪ್ಪುವುದಿಲ್ಲ ಎಂದು ತಾಮ್ರಕರ್ ಎಚ್ಚರಿಸಿದರು.
ಅಪೂರ್ಣ ಅಂಕಿ-ಅಂಶಗಳಿಂದ ದೇಶಕ್ಕೆ ಕಳಂಕ ತರುವ ಯತ್ನ
ಭಾರತವು 140 ಕೋಟಿ ಜನರಿರುವ, ಬಲಿಷ್ಠ ಸಂವಿಧಾನ ಹಾಗೂ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯನ್ನು ಹೊಂದಿರುವ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶ. ಕೇವಲ ಸಾಮಾಜಿಕ ಮಾಧ್ಯಮಗಳ ಮಾಹಿತಿ ಅಥವಾ ಅಪೂರ್ಣ ಅಂಕಿ-ಅಂಶಗಳನ್ನು ಆಧರಿಸಿ ಭಾರತವನ್ನು ನಕಾರಾತ್ಮಕವಾಗಿ ಜಗತ್ತಿನ ಮುಂದೆ ಬಿಂಬಿಸಲು ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ. ಇಂತಹ ಪಟ್ಟಭದ್ರ ವರದಿಗಳನ್ನು ಭಾರತವು ಅಧಿಕೃತವಾಗಿ ಮತ್ತು ಸಾರಾಸಗಟಾಗಿ ವಿರೋಧಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರವು ಈ ಹಿಂದಿನಿಂದಲೂ ಒಂದು ಕಠಿಣ ನಿಲುವನ್ನು ತಳೆದಿದೆ. ಭಾರತದಲ್ಲಿ ನಡೆಯುವ ಪ್ರತಿಭಟನೆಗಳು, ಕಾನೂನು ಸುವ್ಯವಸ್ಥೆ ಮತ್ತು ನ್ಯಾಯಾಂಗ ಪ್ರಕ್ರಿಯೆಗಳು ಸಂಪೂರ್ಣವಾಗಿ ದೇಶದ ಸಂವಿಧಾನದ ಚೌಕಟ್ಟಿನಲ್ಲಿ ನಡೆಯುವ ಆಂತರಿಕ ವಿಷಯಗಳಾಗಿವೆ. ದೆಹಲಿಯ ಪ್ರತಿಭಟನೆಗಳ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ಬಾರದಂತೆ ತಡೆಯುವುದು ಸ್ಥಳೀಯ ಪೊಲೀಸರ ಕರ್ತವ್ಯವಾಗಿತ್ತು. ಸಾರ್ವಜನಿಕ ಆಸ್ತಿಗೆ ಹಾನಿಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೆಲವರನ್ನು ತಾತ್ಕಾಲಿಕವಾಗಿ ವಶಕ್ಕೆ ಪಡೆದು, ಕಾನೂನು ಪ್ರಕಾರವೇ ಬಿಡುಗಡೆ ಮಾಡಲಾಗಿತ್ತು. ಪ್ರಜಾಪ್ರಭುತ್ವದಲ್ಲಿ ಶಾಂತಿಯುತ ಪ್ರತಿಭಟನೆಗೆ ಸಂಪೂರ್ಣ ಹಕ್ಕಿದೆ, ಆದರೆ ಅದರ ನೆಪದಲ್ಲಿ ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶವಿಲ್ಲ. ಹೀಗಿರುವಾಗ, ವಾಸ್ತವವನ್ನು ಪರಿಶೀಲಿಸದ ವಿಶ್ವಸಂಸ್ಥೆಯ ತಜ್ಞರ ತಂಡವು ಭಾರತದ ಪೊಲೀಸರ ಕ್ರಮವನ್ನು 'ದಮನಕಾರಿ' ಎಂದು ಬಿಂಬಿಸುವುದು "ಭಾರತದ ಆಂತರಿಕ ವ್ಯವಹಾರಗಳಲ್ಲಿ ಮಾಡಲಾಗುತ್ತಿರುವ ಅನಗತ್ಯ ಮತ್ತು ಸ್ವೀಕಾರಾರ್ಹವಲ್ಲದ ಹಸ್ತಕ್ಷೇಪ" ಎಂದು ವಿದೇಶಾಂಗ ಸಚಿವಾಲಯ ಈಗಾಗಲೇ ಖಂಡಿಸಿದೆ.
