
ಪಾಕಿಸ್ತಾನವೇ ಭಯೋತ್ಪಾದನೆಯ ಕೇಂದ್ರ; ಬಲೂಚಿಸ್ತಾನ ರೈಲು ಹೈಜಾಕ್ ಸಂಚಿನ ಆರೋಪಕ್ಕೆ ಭಾರತ ತಿರುಗೇಟು
ಪಾಕಿಸ್ತಾನವು ತನ್ನ ವೈಫಲ್ಯಗಳನ್ನು ಮರೆಮಾಚಲು ಭಾರತದ ವಿರುದ್ಧ ಆರೋಪ ಮಾಡುತ್ತಿದೆ. ಹುರುಳಿಲ್ಲದ ಈ ಆರೋಪಗಳನ್ನು ಭಾರತ ಖಂಡಿಸುತ್ತದೆ ಎಂದು ಹೇಳಿದೆ.
ಬಲೂಚಿಸ್ತಾನದಲ್ಲಿ ಉಗ್ರರು ಜಾಫರ್ ಎಕ್ಸ್‌ಪ್ರೆಸ್ ರೈಲನ್ನು ಅಪಹರಣ ಮಾಡಿದ ಘಟನೆ ಹಿಂದೆ ಭಾರತದ ಸಂಚು ಇದೆ ಎಂದು ಆರೋಪ ಮಾಡಿದ ಪಾಕಿಸ್ತಾನಕ್ಕೆ ಭಾರತ ತಿರುಗೇಟು ನೀಡಿದೆ. "ಪಾಕಿಸ್ತಾನವೇ ಭಯೋತ್ಪಾದನೆಯ ಕೇಂದ್ರ ತಾಣ ಎಂಬುದು ಜಗತ್ತಿಗೆಲ್ಲ ತಿಳಿದಿರುವ ವಿಷಯ. ನಮ್ಮ ವಿರುದ್ಧ ಪಾಕಿಸ್ತಾನ ಮಾಡುವ ಆಧಾರರಹಿತ ಆರೋಪಗಳನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣದೀಪ್ ಜೈಸ್ವಾಲ್ ತಿರುಗೇಟು ನೀಡಿದ್ದು, ''ತನ್ನ ದೇಶದ ಆಂತರಿಕ ಬಿಕ್ಕಟ್ಟು ಮತ್ತು ವೈಫಲ್ಯಗಳಿಗೆ ಬೇರೆಯವರತ್ತ ಬೆರಳು ತೋರಿಸುವುದನ್ನು ಪಾಕಿಸ್ತಾನ ಬಿಡಬೇಕಿದೆ," ಎಂದು ಹೇಳಿದ್ದಾರೆ.
"ಪಾಕಿಸ್ತಾನವು ತನ್ನ ವೈಫಲ್ಯಗಳನ್ನು ಮರೆಮಾಚಲು ಭಾರತದ ವಿರುದ್ಧ ಆರೋಪ ಮಾಡುತ್ತಿದೆ. ಹುರುಳಿಲ್ಲದ ಈ ಆರೋಪಗಳನ್ನು ಭಾರತ ಖಂಡಿಸುತ್ತದೆ. ಪ್ರತಿ ಸಮಸ್ಯೆಗೂ ಬೇರೆಯವರತ್ತ ಬೆರಳು ತೋರಿಸುವ ಬದಲು, ಆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಪಾಕಿಸ್ತಾನ ಗಮನ ಹರಿಸುವುದು ಒಳಿತು" ಎಂದು ರಣದೀಪ್ ಜೈಸ್ವಾಲ್ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಪಾಕಿಸ್ತಾನದ ಆರೋಪಗಳು ಏನು?
ಬಲೂಚಿಸ್ತಾನದಲ್ಲಿ ಉಗ್ರರು ನಡೆಸಿದ ದಾಳಿಯ ನಂತರ, ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಶಾಫ್ ಕತ್ ಅಲಿ ಖಾನ್ ಭಾರತದ ವಿರುದ್ಧ ಆರೋಪ ಮಾಡಿದ್ದರು. "ರೈಲಿನ ಮೇಲೆ ದಾಳಿ ನಡೆಸುವ ಮೊದಲು ಉಗ್ರರು ಅಫಘಾನಿಸ್ತಾನದ ನಾಯಕರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದರು. ಪಾಕಿಸ್ತಾನದಲ್ಲಿ ಉಗ್ರವಾದ ಹರಡುವುದರ ಹಿಂದೆ ಭಾರತದ ಕೈವಾಡವಿದೆ" ಎಂದು ಅವರು ಆರೋಪಿಸಿದ್ದರು.
ಅದೇ ರೀತಿ ಅವರು ಅಫಘಾನಿಸ್ತಾವೂ ನೇರ ಹೊಣೆ ಎಂದಿದ್ದಾರೆ. " ರೈಲು ಅಪಹರಿಸಿದ ಉಗ್ರರು ಅಫಘಾನಿಸ್ತಾನದಲ್ಲಿ ನೆಲೆಸಿರುವ ಸಂಚುಕೋರರೊಂದಿಗೆ ಘಟನೆಗೆ ಮೊದಲು ಹಾಗೂ ನಂತರ ನೇರ ಸಂಪರ್ಕದಲ್ಲಿದ್ದರು" ಎಂದು ಆರೋಪಿಸಿದ್ದಾರೆ. ಪಾಕಿಸ್ತಾನವನ್ನು ಗುರಿಯಾಗಿಸಿ ಕಾರ್ಯನಿರ್ವಹಿಸುವ ಉಗ್ರ ಸಂಘಟನೆಗಳು ಅಫಘಾನಿಸ್ತಾನದ ಭೂಭಾಗವನ್ನು ಬಳಸದಂತೆ ಅಲ್ಲಿನ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಈ ಭಯಾನಕ ಉಗ್ರ ದಾಳಿಯ ರೂವಾರಿಗಳನ್ನು ಮತ್ತು ಹಣ ಪೂರೈಸಿದವರನ್ನು ಅಫಘಾನಿಸ್ತಾನ ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪಾಕಿಸ್ತಾನದ ಆರೋಪಗಳನ್ನು ತಾಲಿಬಾನ್ ಸರ್ಕಾರ ತಿರಸ್ಕರಿಸಿದೆ. ಅಫಘಾನಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ಅಬ್ದುಲ್ ಕಹಾರ್ ಬಲ್ಖಿ ಮಾತನಾಡಿ, ಈ ದಾಳಿಗೆ ನಮಗೂ ಯಾವುದೇ ಸಂಬಂಧವಿಲ್ಲ. ಪಾಕಿಸ್ತಾನ ತನ್ನ ಸ್ವಂತ ಭದ್ರತಾ ಸಮಸ್ಯೆಗಳನ್ನು ಪರಿಹರಿಸಲು ಗಮನ ಹರಿಸಬೇಕು ಮತ್ತು ಬೇಜವಾಬ್ದಾರಿ ಹೇಳಿಕೆಗಳನ್ನುನೀಡಬಾರದು ಎಂದು ಹೇಳಿದ್ದಾರೆ.
ಏನಿದು ಘಟನೆ?
ಜಾಫರ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಬಲೂಚಿಸ್ತಾನ ಲಿಬರೇಷನ್ ಆರ್ಮಿ (ಬಿಎಲ್ಎ) ಉಗ್ರರು ಕಳೆದ ಮಂಗಳವಾರ ದಾಳಿ ನಡೆಸಿ, ಸುಮಾರು 400 ಪ್ರಯಾಣಿಕರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದರು. ಈ ಘಟನೆಯ ನಂತರ ಪಾಕಿಸ್ತಾನ ಸೇನೆಯು ರಕ್ಷಣಾ ಕಾರ್ಯಾಚರಣೆ ಆರಂಭಿಸಿತ್ತು. ಉಗ್ರರ ದಾಳಿಯಲ್ಲಿ 21 ಪ್ರಯಾಣಿಕರು ಮತ್ತು ಪಾಕಿಸ್ತಾನದ ನಾಲ್ವರು ಸೈನಿಕರು ಹತರಾಗಿದ್ದಾರೆ. ಇದಲ್ಲದೆ, 33 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನ ತಿಳಿಸಿದೆ.