India is a key partner country; Three senators announce resolution against Trump tariffs
x

ಡೊನಾಲ್ಡ್‌ ಟ್ರಂಪ್‌

ಟ್ರಂಪ್‌ರ 'ಭಾರತ ಸುಂಕ' ನೀತಿಗೆ ಅಮೆರಿಕ ಸೆನೆಟರ್‌ಗಳ ಬ್ರೇಕ್: ಶೇ. 50ರಷ್ಟು ತೆರಿಗೆ ರದ್ದತಿಗೆ ನಿರ್ಣಯ ಮಂಡನೆ

ಉತ್ತರ ಕೆರೊಲಿನಾದ ಸೆನೆಟರ್‌ ರಾಸ್, ಟೆಕ್ಸಾಸ್‌ನ ಮಾರ್ಕ್ ವೀಸಿ ಮತ್ತು ಇಲಿನಾಯ್ಸ್‌ನ ರಾಜಾ ಕೃಷ್ಣಮೂರ್ತಿ ಈ ನಿರ್ಣಯವನ್ನು ಮಂಡಿಸಿದ್ದಾರೆ.


Click the Play button to hear this message in audio format

ಭಾರತದಿಂದ ಆಮದಾಗುವ ಸರಕುಗಳ ಮೇಲೆ ಶೇ. 50ರಷ್ಟು ದುಬಾರಿ ಸುಂಕ ವಿಧಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಡೆಯನ್ನು ವಿರೋಧಿಸಿ ಅಮೆರಿಕದ ಮೂವರು ಪ್ರಮುಖ ಸೆನೆಟರ್‌ಗಳು ಕಾಂಗ್ರೆಸ್‌ನಲ್ಲಿ ಮಹತ್ವದ ನಿರ್ಣಯವೊಂದನ್ನು ಮಂಡಿಸಿದ್ದಾರೆ. ಟ್ರಂಪ್ ಘೋಷಿಸಿರುವ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಅಂತ್ಯಗೊಳಿಸುವ ಮೂಲಕ ವ್ಯಾಪಾರದ ಮೇಲಿನ ಸಾಂವಿಧಾನಿಕ ಅಧಿಕಾರವನ್ನು ಮರಳಿ ಕಾಂಗ್ರೆಸ್‌ಗೆ ನೀಡುವಂತೆ ಅವರು ಒತ್ತಾಯಿಸಿದ್ದಾರೆ.

ಉತ್ತರ ಕೆರೊಲಿನಾದ ಸೆನೆಟರ್ ಡೆಬ್ರಾ ರಾಸ್, ಟೆಕ್ಸಾಸ್‌ನ ಮಾರ್ಕ್ ವೀಸಿ ಮತ್ತು ಇಲಿನಾಯ್ಸ್‌ನ ರಾಜಾ ಕೃಷ್ಣಮೂರ್ತಿ ಶುಕ್ರವಾರ (ಡಿ.12) ಈ ನಿರ್ಣಯವನ್ನು ಮಂಡಿಸಿದ್ದು, ಟ್ರಂಪ್ ಅವರ ನಿರ್ಧಾರವು ಭಾರತದೊಂದಿಗಿನ ನಿರ್ಣಾಯಕ ಪಾಲುದಾರಿಕೆಯನ್ನು ದುರ್ಬಲಗೊಳಿಸುತ್ತದೆ ಎಂದು ಎಚ್ಚರಿಸಿದ್ದಾರೆ.

ಬೇಜವಾಬ್ದಾರಿಯುತ ಸುಂಕ ತಂತ್ರ

ಭಾರತೀಯ ಮೂಲದವರಾದ ಸೆನೆಟರ್ ರಾಜಾ ಕೃಷ್ಣಮೂರ್ತಿ ಅವರು ಟ್ರಂಪ್ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. "ಭಾರತದ ಕಡೆಗಿನ ಈ ಬೇಜವಾಬ್ದಾರಿಯುತ ಸುಂಕ ತಂತ್ರವು ಉಭಯ ದೇಶಗಳ ನಿರ್ಣಾಯಕ ಪಾಲುದಾರಿಕೆಯನ್ನು ಹಾಳುಗೆಡವುವ ವಿಧಾನವಾಗಿದೆ. ಇದು ಅಮೆರಿಕದ ಹಿತಾಸಕ್ತಿ ಅಥವಾ ಭದ್ರತೆಯನ್ನು ಹೆಚ್ಚಿಸುವ ಬದಲು, ಪೂರೈಕೆ ಸರಪಳಿಗಳನ್ನು (Supply chains) ಅಡ್ಡಿಪಡಿಸುತ್ತದೆ. ಅಂತಿಮವಾಗಿ ವಸ್ತುಗಳ ಬೆಲೆ ಏರಿಕೆಯಾಗಿ ಅಮೆರಿಕದ ಗ್ರಾಹಕರಿಗೇ ಹೊರೆಯಾಗಲಿದೆ," ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಬ್ರೆಜಿಲ್ ಮೇಲಿನ ಟ್ರಂಪ್ ಅವರ ಸುಂಕಗಳನ್ನು ಅಂತ್ಯಗೊಳಿಸಲು ಮತ್ತು ಆಮದು ಸುಂಕ ಹೆಚ್ಚಳಕ್ಕೆ ತುರ್ತು ಅಧಿಕಾರಗಳ ದುರ್ಬಳಕೆಯನ್ನು ತಡೆಯಲು ಸೆನೆಟ್ ಇತ್ತೀಚೆಗೆ ತೆಗೆದುಕೊಂಡ ದ್ವಿಪಕ್ಷೀಯ ಕ್ರಮದ ಮಾದರಿಯಲ್ಲೇ ಈ ನಿರ್ಣಯವನ್ನು ಮಂಡಿಸಲಾಗಿದೆ.

ಆರ್ಥಿಕ ಸಂಬಂಧಕ್ಕೆ ಧಕ್ಕೆ: ಸೆನೆಟರ್ ರಾಸ್ ಆತಂಕ

ಉತ್ತರ ಕೆರೊಲಿನಾದ ಆರ್ಥಿಕತೆಯು ಭಾರತದೊಂದಿಗೆ ಆಳವಾದ ನಂಟನ್ನು ಹೊಂದಿದೆ ಎಂದು ಸೆನೆಟರ್ ರಾಸ್ ಪ್ರತಿಪಾದಿಸಿದ್ದಾರೆ. "ಭಾರತೀಯ ಕಂಪನಿಗಳು ನಮ್ಮ ರಾಜ್ಯದ ಸಂಶೋಧನೆ, ಜೀವ ವಿಜ್ಞಾನ ಮತ್ತು ತಂತ್ರಜ್ಞಾನ ವಲಯಗಳಲ್ಲಿ ಒಂದು ಶತಕೋಟಿ ಡಾಲರ್‌ಗಳಿಗಿಂತ ಹೆಚ್ಚು ಹೂಡಿಕೆ ಮಾಡಿವೆ ಹಾಗೂ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಿವೆ. ಅಲ್ಲದೆ, ನಮ್ಮ ರಾಜ್ಯದಿಂದ ಔಷಧಗಳು, ರಾಸಾಯನಿಕಗಳು ಮತ್ತು ಯಂತ್ರೋಪಕರಣಗಳು ಸೇರಿದಂತೆ ಮಿಲಿಯನ್‌ಗಟ್ಟಲೆ ಡಾಲರ್ ಮೌಲ್ಯದ ಸರಕುಗಳು ಭಾರತಕ್ಕೆ ರಫ್ತಾಗುತ್ತಿವೆ," ಎಂದು ಅವರು ಅಂಕಿಅಂಶಗಳ ಸಮೇತ ವಿವರಿಸಿದ್ದಾರೆ.

ಟ್ರಂಪ್ ಅವರ ಸುಂಕ ನೀತಿಯಿಂದ ಈ ಸಂಬಂಧ ಅಸ್ಥಿರಗೊಂಡರೆ, ಅದು ಉತ್ತರ ಕೆರೊಲಿನಾದ ಉದ್ಯೋಗಗಳು, ಆವಿಷ್ಕಾರ ಮತ್ತು ದೀರ್ಘಕಾಲೀನ ಸ್ಪರ್ಧಾತ್ಮಕತೆಯನ್ನು ಅಪಾಯಕ್ಕೆ ಸಿಲುಕಿಸುತ್ತದೆ ಎಂದು ರಾಸ್ ಎಚ್ಚರಿಸಿದ್ದಾರೆ.

ಏನಿದು ನಿರ್ಣಯ?

ಅಂತರರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆ (IEEPA) ಅಡಿಯಲ್ಲಿ ಟ್ರಂಪ್ ಘೋಷಿಸಿರುವ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಈ ನಿರ್ಣಯವು ಕೊನೆಗೊಳಿಸಲು ಕೋರಿದೆ. ಆಗಸ್ಟ್ 27 ರಂದು ಜಾರಿಗೆ ಬಂದ ಹೆಚ್ಚುವರಿ ಶೇ. 25 ಸುಂಕವನ್ನು ಇದು ರದ್ದುಗೊಳಿಸಲಿದೆ. ಟ್ರಂಪ್ ಆಡಳಿತದ ಕ್ರಮಗಳಿಂದಾಗಿ ಪ್ರಸ್ತುತ ಭಾರತೀಯ ಮೂಲದ ಅನೇಕ ಉತ್ಪನ್ನಗಳ ಮೇಲಿನ ಸುಂಕವು ಒಟ್ಟಾರೆಯಾಗಿ ಶೇ. 50ಕ್ಕೆ ಏರಿಕೆಯಾಗಿದೆ.

Read More
Next Story