
ಅಮೆರಿಕದಿಂದ ಶಸ್ತ್ರಾಸ್ತ್ರ ಖರೀದಿ ಸ್ಥಗಿತಗೊಳಿಸಿತೇ ಭಾರತ? ರಕ್ಷಣಾ ಸಚಿವಾಲಯದ ಹೇಳಿಕೆಯೇನು?
ಮೂವರು ಭಾರತೀಯ ಅಧಿಕಾರಿಗಳನ್ನು ಉಲ್ಲೇಖಿಸಿ ರಾಯಿಟರ್ಸ್ ಪ್ರಕಟಿಸಿದ ವರದಿಯ ಪ್ರಕಾರ, ಟ್ರಂಪ್ ಅವರ ಸುಂಕದ ನಿರ್ಧಾರಕ್ಕೆ ಪ್ರತಿಯಾಗಿ ಭಾರತವು ಅಮೆರಿಕದಿಂದ ಶಸ್ತ್ರಾಸ್ತ್ರ ಖರೀದಿಸುವ ಯೋಜನೆಗಳನ್ನು ತಡೆಹಿಡಿದಿದೆ.
ರಷ್ಯಾದಿಂದ ತೈಲ ಖರೀದಿಸಿದ್ದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತೀಯ ಸರಕುಗಳ ಮೇಲೆ ಹೆಚ್ಚುವರಿಯಾಗಿ 25% ಸುಂಕ ವಿಧಿಸಿ, ಒಟ್ಟು ಸುಂಕವನ್ನು 50%ಕ್ಕೆ ಏರಿಸಿದ ಬೆನ್ನಲ್ಲೇ, ಭಾರತವು ಅಮೆರಿಕದಿಂದ ಹೊಸ ಶಸ್ತ್ರಾಸ್ತ್ರ ಮತ್ತು ವಿಮಾನಗಳ ಖರೀದಿಯನ್ನು ಸ್ಥಗಿತಗೊಳಿಸಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ವರದಿಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಇದಕ್ಕೆ ಭಾರತದ ರಕ್ಷಣಾ ಸಚಿವಾಲಯವು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.
ಮೂವರು ಭಾರತೀಯ ಅಧಿಕಾರಿಗಳನ್ನು ಉಲ್ಲೇಖಿಸಿ ರಾಯಿಟರ್ಸ್ ಪ್ರಕಟಿಸಿದ ವರದಿಯ ಪ್ರಕಾರ, ಟ್ರಂಪ್ ಅವರ ಸುಂಕದ ನಿರ್ಧಾರಕ್ಕೆ ಪ್ರತಿಯಾಗಿ ಭಾರತವು ಅಮೆರಿಕದಿಂದ ಶಸ್ತ್ರಾಸ್ತ್ರ ಖರೀದಿಸುವ ಯೋಜನೆಗಳನ್ನು ತಡೆಹಿಡಿದಿದೆ. ಜನರಲ್ ಡೈನಾಮಿಕ್ಸ್ ನಿರ್ಮಿತ 'ಸ್ಟ್ರೈಕರ್' ಯುದ್ಧ ವಾಹನಗಳು, ರೇಥಿಯಾನ್ ಮತ್ತು ಲಾಕ್ಹೀಡ್ ಮಾರ್ಟಿನ್ ಅಭಿವೃದ್ಧಿಪಡಿಸಿದ 'ಜಾವೆಲಿನ್' ಟ್ಯಾಂಕ್ ನಿರೋಧಕ ಕ್ಷಿಪಣಿಗಳು ಹಾಗೂ 3.6 ಶತಕೋಟಿ ಡಾಲರ್ ಮೌಲ್ಯದ ಆರು 'ಬೋಯಿಂಗ್ P8I' ವಿಚಕ್ಷಣಾ ವಿಮಾನಗಳ ಖರೀದಿಯನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಕೆಲವು ರಕ್ಷಣಾ ಒಪ್ಪಂದಗಳನ್ನು ಅಂತಿಮಗೊಳಿಸಲು ವಾಷಿಂಗ್ಟನ್ಗೆ ತೆರಳಬೇಕಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಪ್ರವಾಸವನ್ನು ಕೂಡ ರದ್ದುಗೊಳಿಸಲಾಗಿದೆ ಎಂದು ವರದಿಯು ಉಲ್ಲೇಖಿಸಿದೆ.
ರಕ್ಷಣಾ ಸಚಿವಾಲಯದ ಸ್ಪಷ್ಟನೆ
ಈ ವರದಿಯನ್ನು ಭಾರತದ ರಕ್ಷಣಾ ಸಚಿವಾಲಯವು "ಸುಳ್ಳು ಮತ್ತು ಕಟ್ಟುಕಥೆ" ಎಂದು ಬಣ್ಣಿಸಿ, ಸಂಪೂರ್ಣವಾಗಿ ಅಲ್ಲಗಳೆದಿದೆ. "ಅಮೆರಿಕದೊಂದಿಗಿನ ರಕ್ಷಣಾ ಖರೀದಿಗಳಿಗೆ ಸಂಬಂಧಿಸಿದ ಮಾತುಕತೆಗಳನ್ನು ಭಾರತವು ಸ್ಥಗಿತಗೊಳಿಸಿದೆ ಎಂಬ ಸುದ್ದಿ ವರದಿಗಳು ಸುಳ್ಳು. ವಿವಿಧ ಖರೀದಿ ಪ್ರಕರಣಗಳು ಅಸ್ತಿತ್ವದಲ್ಲಿರುವ ಕಾರ್ಯವಿಧಾನಗಳ ಪ್ರಕಾರವೇ ಪ್ರಗತಿಯಲ್ಲಿವೆ" ಎಂದು ರಕ್ಷಣಾ ಸಚಿವಾಲಯದ ಮೂಲಗಳು ಸ್ಪಷ್ಟಪಡಿಸಿವೆ.
ರಾಜನಾಥ್ ಸಿಂಗ್ ಅವರ ಅಮೆರಿಕ ಪ್ರವಾಸದ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವೇ ಇರಲಿಲ್ಲ ಎಂದು ಕೂಡ ಸಚಿವಾಲಯ ತಿಳಿಸಿದೆ. ಅಸ್ತಿತ್ವದಲ್ಲಿರುವ ಒಪ್ಪಂದಗಳ ಅಡಿಯಲ್ಲಿ ಅಮೆರಿಕದಿಂದ ರಕ್ಷಣಾ ಸಾಮಗ್ರಿಗಳ ಪೂರೈಕೆ ಮುಂದುವರಿಯಲಿದೆ ಮತ್ತು ಮುಂದಿನ ಆದೇಶಗಳ ಕುರಿತ ಚರ್ಚೆಗಳು ಕೂಡ ನಡೆಯಲಿವೆ ಎಂದು ಸ್ಪಷ್ಟನೆ ನೀಡಿದೆ. ಹೀಗಾಗಿ, ಸುಂಕ ವಿವಾದದ ನಡುವೆಯೂ ಅಮೆರಿಕದೊಂದಿಗಿನ ರಕ್ಷಣಾ ಒಪ್ಪಂದಗಳ ಕುರಿತು ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ.