Assault on Beirut | ಹಿಜ್ಬುಲ್ಲಾ ಪ್ರಧಾನ ಕಚೇರಿ ಮೇಲೆ ವೈಮಾನಿಕ ದಾಳಿ
ಲೆಬನಾನ್‌ನೊಂದಿಗಿನ ತನ್ನ ಗಡಿಯನ್ನು ಭದ್ರಪಡಿಸುವುದಾಗಿ ಪ್ರತಿಜ್ಞೆ ಮಾಡಿರುವ ಇಸ್ರೇಲ್, ಸೋಮವಾರದಿಂದ ಪೂರ್ವ ಮತ್ತು ದಕ್ಷಿಣದಲ್ಲಿರುವ ಹಿಜ್ಬುಲ್ಲಾ ಭದ್ರಕೋಟೆಗಳ ಮೇಲೆ ದಾಳಿ ನಡೆಸಿದೆ.
ಲೆಬನಾನಿನ ರಾಜಧಾನಿ ಬೈರೂತ್ ನ ದಕ್ಷಿಣ ಭಾಗದ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ. ಉಗ್ರಗಾಮಿ ಗುಂಪಿನ ವಿರುದ್ಧ ಹೋರಾಡಲು ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಪ್ರತಿಜ್ಞೆ ಮಾಡಿದ ಕ್ಷಣಗಳ ನಂತರ ಹಿಜ್ಬುಲ್ಲಾದ ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ.
ಮೆಡಿಟರೇನಿಯನ್ ನಗರದಾದ್ಯಂತ ನಡೆದ ದಾಳಿಯಿಂದ ಹಿಜ್ಬುಲ್ಲಾದ ಭದ್ರಕೋಟೆಯಾದ ಜನನಿಬಿಡ ದಕ್ಷಿಣದ ಉಪನಗರಗಳ ಮೇಲೆ ಭಾರಿ ಹೊಗೆಯ ಮೋಡಗಳು ಸೃಷ್ಟಿಯಾದವು ಎಂದು ಎಎಫ್‌ಪಿ ವರದಿ ಮಾಡಿದೆ. ಲೆಬನಾನ್‌ನ ಆರೋಗ್ಯ ಸಚಿವಾಲಯ ಶನಿವಾರ ನೀಡಿದ ಮಾಹಿತಿ ಪ್ರಕಾರ, ದಾಳಿಯಲ್ಲಿ ಆರು ಜನ ಸಾವನ್ನಪ್ಪಿದ್ದು, 91 ಮಂದಿ ಗಾಯಗೊಂಡಿದ್ದಾರೆ.
ಉಗ್ರ ದಾಳಿ: ದಾಳಿಗಳು ತೀವ್ರ ಸ್ವರೂಪದವಾಗಿದ್ದವು. ʻದೇವರೇ, ಏನಾಗುತ್ತಿದೆ? ಕಟ್ಟಡ ನನ್ನ ಮೇಲೆ ಕುಸಿಯುತ್ತಿದೆ ಎಂದು ಅನಿಸಿತು,ʼ ಎಂದು ಬೈರೂತ್‌ನ ದಕ್ಷಿಣ ಉಪನಗರದ ವಾಸಿ ಶಿಕ್ಷಕ ಅಬಿರ್ ಹಮ್ಮೌದ್(40) ಹೇಳಿದರು.
ಲೆಬನಾನ್‌ನೊಂದಿಗಿನ ತನ್ನ ಗಡಿಯನ್ನು ಭದ್ರಪಡಿಸಿಕೊಳ್ಳಲು ಇಸ್ರೇಲ್, ಸೋಮವಾರದಿಂದ ದೇಶದ ಪೂರ್ವ ಮತ್ತು ದಕ್ಷಿಣದಲ್ಲಿರುವ ಹಿಜ್ಬುಲ್ಲಾ ಭದ್ರಕೋಟೆಗಳ ಮೇಲೆ ದಾಳಿ ನಡೆಸಿದೆ. ಹಿಂಸಾಚಾರವನ್ನು ನಿಲ್ಲಿಸಬೇಕೆಂಬ ಜಾಗತಿಕ ನಾಯಕರು ಮತ್ತು ನೆರವು ಸಂಸ್ಥೆಗಳ ಕರೆಗಳನ್ನು ತಿರಸ್ಕರಿಸಿದೆ.
ದಾಳಿಯಲ್ಲಿ ಏಳು ಕಟ್ಟಡಗಳನ್ನು ಕೆಡವಲಾಗಿದೆ.ಅಲ್ಲಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲಾಗಿತ್ತು ಎಂದು ಇಸ್ರೇಲಿ ಪಡೆಗಳು ಹೇಳಿಕೊಂಡಿವೆ. ಆದರೆ, ಆರೋಪವನ್ನು ಹಿಜ್ಬುಲ್ಲಾ ನಿರಾಕರಿಸಿದೆ.
ಹಿಜ್ಬುಲ್ಲಾ ಗುರಿ: ಇಸ್ರೇಲಿ ಮಿಲಿಟರಿ ವಕ್ತಾರ ಡೇನಿಯಲ್ ಹಗರಿ, ದಾಳಿಯು ಹಿಜ್ಬುಲ್ಲಾದ ಕೇಂದ್ರ ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಿದ್ದಾರೆ. ಇಸ್ರೇಲಿ ಟೆಲಿವಿಷನ್ ನೆಟ್‌ವರ್ಕ್‌ಗಳು ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಅವರು ದಾಳಿಯ ಗುರಿ ಎಂದು ವರದಿ ಮಾಡಿದೆ. ಆದರೆ, ಹಸನ್ ಅವರು ಚನ್ನಾಗಿದ್ದಾರೆ ಎಂದು ಹಿಜ್ಬುಲ್ಲಾ ಹೇಳಿದೆ.
ನೆತನ್ಯಾಹು ಅವರು ನ್ಯೂಯಾರ್ಕ್‌ನಲ್ಲಿ ವಿಶ್ವ ಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಭಾಷಣವನ್ನು ಮುಕ್ತಾಯಗೊಳಿಸಿದ ಕೆಲವೇ ಕ್ಷಣಗಳಲ್ಲಿ ದಾಳಿ ಸಂಭವಿಸಿದೆ. ಅವರು ಹಿಜ್ಬುಲ್ಲಾ ವಿರುದ್ಧ ದಾಳಿ ಮುಂದುವರಿಯಲಿದ್ದು, ಹಮಾಸ್ ವಿರುದ್ಧ ಗೆಲುವಿನವರೆಗೆ ಹೋರಾಡಲಾಗುತ್ತದೆ ಎಂದು ಪ್ರತಿಜ್ಞೆ ಮಾಡಿದ್ದರು.
ಹಿಜ್ಬುಲ್ಲಾ ವಿರುದ್ಧ ಹೋರಾಟ ಮುಂದುವರಿಕೆ: ʻಈ ತಿಂಗಳ ಆರಂಭದಲ್ಲಿ ಸ್ಥಳಾಂತರಗೊಂಡ ಸಾವಿರಾರು ಇಸ್ರೇಲಿಗಳು ತಮ್ಮ ಮನೆಗಳಿಗೆ ಹಿಂದಿರುಗುವವರೆಗೆ ಹಿಜ್ಬುಲ್ಲಾ ವಿರುದ್ಧ ಹೋರಾಡಲಾಗುತ್ತದೆ. ಹಿಜ್ಬುಲ್ಲಾ ಯುದ್ಧದ ಹಾದಿಯನ್ನು ಆರಿಸಿಕೊಂಡಿರುವುದರಿಂದ ಇಸ್ರೇಲಿಗೆ ಬೇರೆ ಆಯ್ಕೆಯಿಲ್ಲ. ಬೆದರಿಕೆಯನ್ನು ನಿವಾರಿಸಲು ಮತ್ತು ಇಸ್ರೇಲಿಗಳು ತಮ್ಮ ಮನೆಗೆ ಸುರಕ್ಷಿತವಾಗಿ ಹಿಂದಿರುಗಿಸಲು ನಮಗೆ ಎಲ್ಲ ಹಕ್ಕಿದೆ,ʼ ಎಂದು ನೆತನ್ಯಾಹು ಯುಎನ್ ಜನರಲ್ ಅಸೆಂಬ್ಲಿಗೆ ಹೇಳಿದ್ದರು.
ಹಿಜ್ಬುಲ್ಲಾ ಉತ್ತರ ಇಸ್ರೇಲಿನ ಟಿಬೇರಿಯಾಸ್‌ಗೆ ರಾಕೆಟ್‌ಗಳನ್ನು ಶುಕ್ರವಾರ ಹಾರಿಸಿದೆ. ಲೆಬನಾನಿನ ಪಟ್ಟಣಗಳು ಮತ್ತು ಹಳ್ಳಿಗಳ ಮೇಲೆ ನಡೆದ ದಾಳಿಗೆ ಇದು ಪ್ರತಿಕ್ರಿಯೆ ಎಂದು ಹೇಳಿದೆ.