ಪಾಕಿಸ್ತಾನ ಚುನಾವಣೆ: ಗೆಲುವು ಪ್ರತಿಪಾದಿಸಿದ ಇಮ್ರಾನ್ ಖಾನ್ ಪಕ್ಷ
ಫಲಿತಾಂಶ ತಿರುಚಲು ಘೋಷಣೆ ವಿಳಂಬಗೊಳಿಸಲಾಗುತ್ತಿದೆ ಎಂದು ಆರೋಪಿಸಿರುವ ಪಿಟಿಐ ಪಕ್ಷವು ಚುನಾವಣೆಯಲ್ಲಿ ತಾವು ಗೆದ್ದಿರುವುದಾಗಿ ಹೇಳಿಕೊಂಡಿದೆ.
ಪಾಕಿಸ್ತಾನದ ಚುನಾವಣಾ ಆಯೋಗವು ಘೋಷಿಸಿದ 139 ಸ್ಥಾನಗಳ ಫಲಿತಾಂಶಗಳಲ್ಲಿ 55 ಸ್ಥಾನಗಳಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷದ ಬೆಂಬಲಿತ ಸ್ವತಂತ್ರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಫಲಿತಾಂಶ ಘೋಷಣೆಯಲ್ಲಿ ಅಸಹಜ ವಿಳಂಬವು ಫಲಿತಾಂಶ ತಿರುಚುವಿಕೆ ಆರೋಪಕ್ಕೆ ಕಾರಣವಾಗಿದೆ.
ಗುರುವಾರದ ಸಾರ್ವತ್ರಿಕ ಚುನಾವಣೆಯ ನಂತರ ಪಾಕಿಸ್ತಾನದಲ್ಲಿ ಮತಗಳನ್ನು ಎಣಿಕೆ ಮಾಡಲಾಗುತ್ತಿದೆ. ಮತ ತಿರುಚುವಿಕೆ ಆರೋಪದ ಬಳಿಕ ಅಲ್ಲಲ್ಲಿ ವಿರಳ ಹಿಂಸಾಚಾರ ನಡೆದಿದ್ದು, ದೇಶಾದ್ಯಂತ ಮೊಬೈಲ್ ಫೋನ್ ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿದೆ.
ಚುನಾವಣಾ ಕಣದಲ್ಲಿ ಹಲವಾರು ಪಕ್ಷಗಳು ಇವೆಯಾದರೂ, ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ), ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಮತ್ತು ಬಿಲಾವಲ್ ಭುಟ್ಟೋ ಜರ್ದಾರಿಯ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (PPP) ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ.
ಸರ್ಕಾರ ರಚಿಸಲು, ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಪಕ್ಷವು 265 ರಲ್ಲಿ 133 ಸ್ಥಾನಗಳನ್ನು ಗೆಲ್ಲಬೇಕಿದೆ. ಒಂದು ಸ್ಥಾನದಲ್ಲಿ ಅಭ್ಯರ್ಥಿಯ ಮರಣದ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದೂಡಲಾಗಿದೆ. ಒಟ್ಟಾರೆಯಾಗಿ, ಅಸೆಂಬ್ಲಿಯ ಒಟ್ಟು 336 ಸ್ಥಾನಗಳಲ್ಲಿ ಸರಳ ಬಹುಮತವನ್ನು ಪಡೆಯಲು 169 ಸ್ಥಾನಗಳ ಅಗತ್ಯವಿದೆ. ಇದರಲ್ಲಿ ಮಹಿಳೆಯರು ಮತ್ತು ಅಲ್ಪಸಂಖ್ಯಾತರಿಗೆ ಮೀಸಲಾದ ಸ್ಥಾನಗಳು ಕೂಡಾ ಸೇರಿವೆ.
ಜನಾದೇಶದ ಕಳ್ಳತನ: ಪಿಟಿಐ ಆರೋಪ
ಫಲಿತಾಂಶವನ್ನು ತಿರುಚಲು ಘೋಷಣೆ ವಿಳಂಬಗೊಳಿಸಲಾಗುತ್ತಿದೆ ಎಂದು ಆರೋಪಿಸಿರುವ ಪಿಟಿಐ ಪಕ್ಷವು ಚುನಾವಣೆಯಲ್ಲಿ ತಾವು ಗೆದ್ದಿರುವುದಾಗಿ ಹೇಳಿಕೊಂಡಿದೆ. ಮಾಹಿತಿಯ ಪ್ರಕಾರ ಸ್ಪರ್ಧೆ ನಡೆದ 265 ಸ್ಥಾನಗಳಲ್ಲಿ 150 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದೇವೆ ಎಂದು ಪಕ್ಷವು ಹೇಳಿದೆ.
2024 ರ ಚುನಾವಣೆಯಲ್ಲಿ ಸಂಪೂರ್ಣ ಬಹುಮತದೊಂದಿಗೆ ಪಿಟಿಐ ಗೆದ್ದಿದೆ. ಅದಕ್ಕೆ ಜಗತ್ತು ಸಾಕ್ಷಿಯಾಗಿದೆ. ಈಗ ಫಲಿತಾಂಶಗಳ ತಿರುಚುವಿಕೆಯು ಸಂಪೂರ್ಣ ಅವ್ಯವಸ್ಥೆ ಮತ್ತು ಅಸ್ಥಿರತೆಯನ್ನು ಹೊರತುಪಡಿಸಿ ಏನನ್ನೂ ಸಾಧಿಸುವುದಿಲ್ಲ. ಜನ ನಿರ್ಧರಿಸಿದ್ದಾರೆ. ಅವರ ನಿರ್ಧಾರವನ್ನು ಗೌರವಿಸಿ ಎಂದು ಪಕ್ಷ ಟ್ವೀಟ್ ಮಾಡಿದೆ.
“ಫಾರ್ಮ್ 45 ಗಳು ಅತ್ಯಂತ ತಳ ಮಟ್ಟದ ಚುನಾವಣಾ ಫಲಿತಾಂಶಗಳ ಪ್ರಾಥಮಿಕ ಮೂಲವಾಗಿದೆ. ಪ್ರತಿ ಅಭ್ಯರ್ಥಿಯ ಮತಗಳನ್ನು ಪ್ರತಿ ಮತಗಟ್ಟೆಯಲ್ಲಿ ಫಾರ್ಮ್ 45 ನಲ್ಲಿ ಪಟ್ಟಿ ಮಾಡಲಾಗಿದೆ. ಇದರ ಪ್ರತಿಗಳನ್ನು ಪಿಟಿಐ ಅಭ್ಯರ್ಥಿಗಳ ಪೋಲಿಂಗ್ ಏಜೆಂಟ್‌ಗಳು ಸಂಗ್ರಹಿಸಿದ್ದಾರೆ, ಇದು ಅವರು ಹೆಚ್ಚಿನ ಬಹುಮತದಿಂದ ಗೆದ್ದಿದ್ದಾರೆಂದು ತೋರಿಸುತ್ತದೆ. ವರದಿಗಳ ಪ್ರಕಾರ, ಪಿಟಿಐ 150 ಕ್ಕೂ ಹೆಚ್ಚು ರಾಷ್ಟ್ರೀಯ ಅಸೆಂಬ್ಲಿ ಸ್ಥಾನಗಳನ್ನು ಗೆದ್ದಿದೆ. ಸರ್ಕಾರವನ್ನು ರಚಿಸಲು ಸ್ಪಷ್ಟ ಬಹುಮತದ ಸ್ಥಿತಿಯಲ್ಲಿದೆ” ಎಂದು ಅದು ಹೇಳಿದೆ.
“ಆದಾಗ್ಯೂ, ತಡರಾತ್ರಿಯಲ್ಲಿ ಫಲಿತಾಂಶಗಳನ್ನು ತಿರುಚುವುದು ಸಂಪೂರ್ಣ ಅವಮಾನ. ಜನಾದೇಶದ ಕಳ್ಳತನ. ಪಾಕಿಸ್ತಾನದ ಜನರು ತಿರುಚಿದ ಫಲಿತಾಂಶಗಳನ್ನು ಕಟುವಾಗಿ ತಿರಸ್ಕರಿಸುತ್ತಾರೆ. ಜಗತ್ತು ಗಮನಿಸುತ್ತಿದೆ,” ಎಂದು ಪಿಟಿಐ ಪಕ್ಷವು ಪ್ರತಿಪಾದಿಸಿದೆ.