ಖಮೇನಿ ಹತ್ಯೆಗೆ ಪ್ರತೀಕಾರ: ಇಸ್ರೇಲ್ ಮೇಲೆ ಮುಗಿಬಿದ್ದ ಹಿಜ್ಬುಲ್ಲಾ
x

ತಮ್ಮ ನಾಯಕನ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವ ನಿಟ್ಟಿನಲ್ಲಿ ಇರಾನ್ ಬೆಂಬಲಿತ ಲೆಬನಾನ್‌ನ ಬಂಡುಕೋರ ಸಂಘಟನೆ 'ಹಿಜ್ಬುಲ್ಲಾ' ಇಸ್ರೇಲ್ ಮೇಲೆ ಭಾರಿ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದೆ. 

ಖಮೇನಿ ಹತ್ಯೆಗೆ ಪ್ರತೀಕಾರ: ಇಸ್ರೇಲ್ ಮೇಲೆ ಮುಗಿಬಿದ್ದ ಹಿಜ್ಬುಲ್ಲಾ

ಹಿಜ್ಬುಲ್ಲಾದ ಈ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳಿಗೆ ಇಸ್ರೇಲ್ ಕೂಡ ತಕ್ಷಣವೇ ಪ್ರಬಲ ಪ್ರತ್ಯುತ್ತರ ನೀಡಿದೆ. ಸೋಮವಾರ ಬೆಳಗಿನ ಜಾವ ಲೆಬನಾನ್ ರಾಜಧಾನಿ ಬೈರುತ್‌ನ ಮೇಲೆ ಇಸ್ರೇಲ್ ಸೇನಾಪಡೆಗಳು ಭಾರಿ ವೈಮಾನಿಕ ದಾಳಿ ನಡೆಸಿವೆ.


Click the Play button to hear this message in audio format

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯ ಬೆನ್ನಲ್ಲೇ ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ. ತಮ್ಮ ನಾಯಕನ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವ ನಿಟ್ಟಿನಲ್ಲಿ ಇರಾನ್ ಬೆಂಬಲಿತ ಲೆಬನಾನ್‌ನ ಬಂಡುಕೋರ ಸಂಘಟನೆ 'ಹಿಜ್ಬುಲ್ಲಾ' ಇಸ್ರೇಲ್ ಮೇಲೆ ಭಾರಿ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದೆ. ಭಾನುವಾರ ರಾತ್ರಿ ಈ ದಾಳಿ ನಡೆದಿದ್ದು, ಇಸ್ರೇಲ್‌ನ ಹಲವು ಪ್ರಮುಖ ನೆಲೆಗಳನ್ನು ಗುರಿಯಾಗಿಸಲಾಗಿದೆ ಎಂದು ಸಂಘಟನೆ ಸೋಮವಾರ ಸ್ಪಷ್ಟಪಡಿಸಿದೆ.

ತನ್ನ ಅಧಿಕೃತ ಪ್ರಕಟಣೆಯಲ್ಲಿ ದಾಳಿಯ ಹೊಣೆ ಹೊತ್ತುಕೊಂಡಿರುವ ಹಿಜ್ಬುಲ್ಲಾ, "ಅಯತೊಲ್ಲಾ ಇಮಾಮ್ ಸಯ್ಯದ್ ಅಲಿ ಅಲ್-ಹುಸೇನಿ ಖಮೇನಿ ಅವರ ಪವಿತ್ರ ರಕ್ತಕ್ಕೆ ಪ್ರತೀಕಾರವಾಗಿ, ಲೆಬನಾನ್ ರಾಷ್ಟ್ರ ಹಾಗೂ ಅಲ್ಲಿನ ಜನರ ರಕ್ಷಣೆಗಾಗಿ ಮತ್ತು ಇಸ್ರೇಲ್ ನಡೆಸುತ್ತಿರುವ ನಿರಂತರ ಸರಣಿ ದಾಳಿಗಳಿಗೆ ಪ್ರತಿಯಾಗಿ ನಾವು ಇಸ್ರೇಲ್ ಮೇಲೆ ಡ್ರೋನ್‌ಗಳು ಹಾಗೂ ಕ್ಷಿಪಣಿಗಳ ಸುರಿಮಳೆಗೈದಿದ್ದೇವೆ" ಎಂದು ಉಗ್ರವಾಗಿ ಘೋಷಿಸಿದೆ. ಇರಾನ್‌ನ ಪರಮೋಚ್ಚ ನಾಯಕನಾಗಿದ್ದ ಖಮೇನಿ ಹತ್ಯೆಯು ಇರಾನ್ ಬೆಂಬಲಿತ ಎಲ್ಲಾ ಉಗ್ರಗಾಮಿ ಸಂಘಟನೆಗಳನ್ನು ಕೆರಳಿಸಿದ್ದು, ಇಸ್ರೇಲ್ ವಿರುದ್ಧದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದೆ.

ಬೈರುತ್ ಮೇಲೆ ಮುಗಿಬಿದ್ದ ಇಸ್ರೇಲ್

ಹಿಜ್ಬುಲ್ಲಾದ ಈ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳಿಗೆ ಇಸ್ರೇಲ್ ಕೂಡ ತಕ್ಷಣವೇ ಪ್ರಬಲ ಪ್ರತ್ಯುತ್ತರ ನೀಡಿದೆ. ಸೋಮವಾರ ಬೆಳಗಿನ ಜಾವ ಲೆಬನಾನ್ ರಾಜಧಾನಿ ಬೈರುತ್‌ನ ಮೇಲೆ ಇಸ್ರೇಲ್ ಸೇನಾಪಡೆಗಳು ಭಾರಿ ವೈಮಾನಿಕ ದಾಳಿ ನಡೆಸಿವೆ. ಮುಖ್ಯವಾಗಿ ಹಿಜ್ಬುಲ್ಲಾದ ಭದ್ರಕೋಟೆಗಳಾಗಿರುವ ಬೈರುತ್‌ನ ದಕ್ಷಿಣ ಉಪನಗರಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಈ ದಾಳಿ ನಡೆಸಿದೆ ಎಂದು ಲೆಬನಾನ್ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಉಭಯ ಬಣಗಳ ನಡುವಿನ ಈ ಸರಣಿ ಪ್ರತಿದಾಳಿಗಳಿಂದಾಗಿ ಇಡೀ ಗಲ್ಫ್ ಪ್ರದೇಶದಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ದಟ್ಟವಾಗಿದ್ದು, ಜಾಗತಿಕ ಮಟ್ಟದಲ್ಲಿ ತೀವ್ರ ಕಳವಳ ಮೂಡಿಸಿದೆ.

Read More
Next Story