ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಸಾವು: ಸಂದಿಗ್ಧದಲ್ಲಿ ಇರಾನ್‌
x

ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಸಾವು: ಸಂದಿಗ್ಧದಲ್ಲಿ ಇರಾನ್‌

ಇರಾನಿನ ಮೇಲೆ ವಿಧಿಸಲಾದ ಅಂತಾರಾಷ್ಟ್ರೀಯ ನಿರ್ಬಂಧಗಳಿಂದ ಹಣದುಬ್ಬರ, ನಿರುದ್ಯೋಗ ಹೆಚ್ಚಳವಲ್ಲದೆ, ಅದರ ದೇಶಿ ಕರೆನ್ಸಿಯ ಅಪಮೌಲ್ಯಕ್ಕೆ ಕಾರಣವಾಗಿವೆ


ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾಹ್ ಅವರ ಸಾವಿನ ಬಳಿಕ ಈ ಪ್ರದೇಶದಲ್ಲಿ ತನ್ನ ಪ್ರಭಾವ ಉಳಿಸಿಕೊಳ್ಳಲು ಇರಾನ್ ಹೆಣಗಾಡುತ್ತಿದೆ. ನಸ್ರಲ್ಲಾ ಸಾವು ಹಿಜ್ಬುಲ್ಲಾ ಮಾತ್ರವಲ್ಲದೆ, ಕಳೆದ ಕೆಲವು ದಶಕಗಳಿಂದ ಗುಂಪಿಗೆ ಶಸ್ತ್ರಾಸ್ತ್ರ ಮತ್ತು ಹಣ ಪೂರೈಸುತ್ತಿರುವ ಇರಾನ್‌ಗೆ ಬಹು ದೊಡ್ಡ ಹೊಡೆತ ನೀಡಿದೆ.

ಲೆಬನಾನ್‌ನಲ್ಲಿ ಹಿಜ್ಬುಲ್ಲಾ, ಗಾಜಾದಲ್ಲಿ ಹಮಾಸ್, ಯೆಮೆನ್‌ನಲ್ಲಿ ಹೌತಿಗಳು ಮತ್ತು ಇತರ ಉಗ್ರಗಾಮಿ ಗುಂಪುಗಳನ್ನು ಬೆಂಬಲಿಸುವ ಮೂಲಕ ಇರಾನ್ ಈ ಪ್ರದೇಶದಲ್ಲಿ ತನ್ನ ಪ್ರಭಾವ ಹೆಚ್ಚಿಸಿಕೊಂಡಿದೆ. ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ನಸ್ರಲ್ಲಾ ಅವರ ಸಾವು ʻವ್ಯರ್ಥವಾಗುವುದಿಲ್ಲʼ ಎಂದು ಪ್ರತಿಜ್ಞೆ ಮಾಡಿದ್ದಾರೆ. ಇರಾನಿನ ಮೊದಲ ಉಪಾಧ್ಯಕ್ಷ ಮೊಹಮ್ಮದ್ ರೆಜಾ, ʻಹಿಜ್ಬುಲ್ಲಾ ಮುಖ್ಯಸ್ಥನ ಹತ್ಯೆ ಇಸ್ರೇಲಿನ ವಿನಾಶವನ್ನು ತರುತ್ತದೆ,ʼ ಎಂದು ಹೇಳಿದ್ದಾರೆ.

ಇರಾನ್‌ನ ಸಂದಿಗ್ಧ: ಪ್ರತೀಕಾರ ಹೇಳಿಕೆಗಳ ಹೊರತಾಗಿಯೂ, ಇರಾನ್ ಈಗ ಗಂಭೀರ ಸಂದಿಗ್ಧವನ್ನು ಎದುರಿಸುತ್ತಿದೆ ಎಂದು ಇಂಟರ್ನ್ಯಾಷನಲ್ ಕ್ರೈಸಿಸ್ ಗ್ರೂಪ್‌ನ ವಿಶ್ಲೇಷಕ ಅಲಿ ವಾಜ್ ಹೇಳಿದ್ದಾರೆ. ʻನಸ್ರಲ್ಲಾ ಹತ್ಯೆಯು ಇರಾನ್ ಸಂಘರ್ಷದಲ್ಲಿ ನೇರವಾಗಿ ತೊಡಗಿಸಿಕೊಳ್ಳಲು ಬಯಸುವುದಿಲ್ಲ ಎಂಬ ಅಂಶವನ್ನು ಬದಲಿಸುವುದಿಲ್ಲ,ʼ ಎಂದು ಹೇಳಿದ್ದಾರೆ.

ಹಿಜ್ಬುಲ್ಲಾದ ಅಳಿದುಳಿದ ಭಾಗದ ಸಂರಕ್ಷಣೆಗೆ ಇರಾನ್ ಸಕಲ ಆಸಕ್ತಿ ಹೊಂದಿದೆ. ಹಿಜ್ಬುಲ್ಲಾ ಇರಾನಿನ ಗುರಾಣಿ. ಒಂದು ಡಜನ್ ಜನರ ಹತ್ಯೆಯಾಗಿದೆ ಎಂಬ ಕಾರಣಕ್ಕೆ ಇರಾನ್ ಸುಮಾರು 40 ವರ್ಷಗಳ ಈ ಯೋಜನೆಯನ್ನು ರಾತ್ರೋರಾತ್ರಿ ಕೈಬಿಡುವುದಿಲ್ಲ ಎಂದು ವಾಜ್ ಹೇಳಿದರು.

ಆದರೆ, ಇತ್ತೀಚಿನ ಸ್ಫೋಟಗಳಿಂದ ಪೇಜರ್‌ಗಳು ಮತ್ತು ವಾಕಿಟಾಕಿಗಳಿಗೆ ಹಾನಿಯಾದ ನಂತರ ಇರಾನ್‌ಗೆ ಹಿಜ್ಬುಲ್ಲಾದೊಂದಿಗೆ ಸಂವಹನ ಕಷ್ಟಕರವಾಗಿದೆ. ಇರಾನಿಗೆ ಕ್ರಮ ತೆಗೆದುಕೊಳ್ಳಳು ಇಷ್ಟವಿಲ್ಲವೋ ಅಥವಾ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲವೋ ಎನ್ನುವುದು ಗೊತ್ತಾಗುತ್ತಿಲ್ಲ. ನಸ್ರಲ್ಲಾ ಮತ್ತು ಇತರ ನಾಯಕರ ಮರಣದ ನಂತರ ಹಿಜ್ಬುಲ್ಲಾ ಚೇತರಿಸಿಕೊಳ್ಳುತ್ತದೆ ಮತ್ತು ಇಸ್ರೇಲ್ ಮೇಲೆ ದಾಳಿ ಮಾಡುತ್ತದೆ ಎಂದು ಇರಾನ್ ಆಶಿಸುತ್ತಿದೆ ಎಂದು ವಾಜ್ ಭಾವಿಸಿದ್ದಾರೆ.

ಆರ್ಥಿಕ ಸವಾಲುಗಳು: ಟೆಹರಾನ್ ಮೂಲದ ಅಂತಾರಾಷ್ಟ್ರೀಯ ಸಂಬಂಧಗಳ ಪ್ರೊ. ಮೆಹದಿ ಝಕೆರಿಯನ್, ಇರಾನ್ ಬೆಂಬಲಿತ ಪಡೆಗೆ ಇಸ್ರೇಲನ್ನು ತಡೆಯಲು ಆಗಲಿಲ್ಲ; ಜೊತೆಗೆ, ಅದು ಗಂಭೀರ ಹೊಡೆತ ಅನುಭವಿಸಿತು,ʼ ಎಂದು ಹೇಳಿದರು.

ಆರ್ಥಿಕ ಸವಾಲು ಎದುರಿಸುತ್ತಿ‌ರುವ ಇರಾನಿಗೆ ಹಿಜ್ಬುಲ್ಲಾದ ಮರುನಿರ್ಮಾಣ ಸವಾಲಾಗಿ ಪರಿಣಮಿಸಲಿದೆ. ಲೆಬನಾನಿನ ಪುನರ್‌ ನಿರ್ಮಾಣ ಅಥವಾ ಹಿಜ್ಬುಲ್ಲಾವನ್ನು ಮರುಸಜ್ಜುಗೊಳಿಸುವಿಕೆಯು ಆರ್ಥಿಕ ಬಿಕ್ಕಟ್ಟನ್ನು ಉಲ್ಬಣಗೊಳಿಸುತ್ತದೆ ಎಂದು ಹೇಳಿದರು.

ಇರಾನಿನ ಮೇಲೆ ವಿಧಿಸಿದ ಅಂತಾರಾಷ್ಟ್ರೀಯ ನಿರ್ಬಂಧದಿಂದ ಹಣದುಬ್ಬರ, ನಿರುದ್ಯೋಗ ಹೆಚ್ಚಳ ಮತ್ತು ಅದರ ಕರೆನ್ಸಿಯ ತೀವ್ರ ಅಪಮೌಲ್ಯವಾಗಿದೆ.

ಕಠಿಣ ನಿರ್ಧಾರ: ಗಂಭೀರವಾದ ಆರ್ಥಿಕ ಸವಾಲು ಎದುರಿಸುತ್ತಿರುವಾಗ ಉಗ್ರಗಾಮಿ ಗುಂಪುಗಳಿಗೆ ಬೆಂಬಲ ಮುಂದುವರಿಸಬೇಕೇ ಎಂಬ ಕಠಿಣ ನಿರ್ಧಾರ ಇರಾನ್ ತೆಗೆದುಕೊಳ್ಳಬೇಕಿದೆ.

ʻಇರಾನ್ ಹಿಜ್ಬುಲ್ಲಾವನ್ನು ತ್ಯಜಿಸಲು ಸಾಧ್ಯವಿಲ್ಲ. ಹಾಗೆ ಮಾಡಿದಲ್ಲಿ ಅದು ತನ್ನ ಇತರ ಮಿತ್ರರಾಷ್ಟ್ರಗಳನ್ನು ಕೂಡ ಕಳೆದುಕೊಳ್ಳುತ್ತದೆ,ʼ ಎಂದು ಝಕೆರಿಯನ್ ಹೇಳಿದರು.

ಬೈರೂತ್ ವಿಮಾನ ನಿಲ್ದಾಣದ ಮೂಲಕ ಹಿಜ್ಬುಲ್ಲಾಗಳಿಗೆ ಶಸ್ತ್ರಾಸ್ತ್ರ ಪೂರೈಕೆ ತಡೆಯುವುದಾಗಿ ಇಸ್ರೇಲ್‌ ಸೇನೆ ಪ್ರತಿಜ್ಞೆ ಮಾಡಿದೆ. ಅದರ ಯುದ್ಧ ವಿಮಾನಗಳು ಲೆಬನಾನ್ ರಾಜಧಾನಿ ಮೇಲೆ ಆಕಾಶದಲ್ಲಿ ಗಸ್ತು ತಿರುಗುತ್ತಿವೆ ಎಂದು ಹೇಳಿದರು.

ನಸ್ರಲ್ಲಾ ಸಾವು ದೃಢ: ಹಸನ್ ನಸ್ರಲ್ಲಾ ಅವರು ಸಾವನ್ನಪ್ಪಿದ್ದಾರೆ ಎಂದು ಶನಿವಾರ (ಸೆಪ್ಟೆಂಬರ್ 28) ಹಿಜ್ಬುಲ್ಲಾ ದೃಢಪಡಿಸಿದೆ. ದಾಳಿ ಸ್ಥಳದಿಂದ ನಸ್ರಲ್ಲಾ ಅವರ ದೇಹವನ್ನು ವಶಪಡಿಸಿಕೊಳ್ಳಲಾಗಿದೆ. ಸಾವಿಗೆ ʻಸ್ಫೋಟದಿಂದ ಉಂಟಾದ ಆಘಾತʼ ಕಾರಣ ಎಂದು ಹೇಳಿದೆ.

ಲೆಬನಾನ್‌ನಲ್ಲಿ 1000 ಮಂದಿ ಸಾವು: ಕಳೆದ ಎರಡು ವಾರಗಳಿಂದ ಇಸ್ರೇಲ್ ದಾಳಿಯಿಂದ 1,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 6,000 ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನ್ ಹೇಳಿದೆ. ದಕ್ಷಿಣದ ಸಿಡಾನ್ ಮತ್ತು ದೇಶದ ಇತರೆಡೆ ಭಾನುವಾರ (ಸೆಪ್ಟೆಂಬರ್ 29) ಇಸ್ರೇಲಿ ದಾಳಿಯಿಂದ 105 ಜನ ಮೃತಪಟ್ಟು, 360 ಜನರು ಗಾಯಗೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

Read More
Next Story