Israel–Hamas war" ಇಸ್ರೇಲ್-ಹಮಾಸ್ ಶಾಂತಿ ಮಂತ್ರ; ಹಮಾಸ್‌ನಿಂದ 33 ಒತ್ತೆಯಾಳುಗಳ ಬಿಡುಗಡೆ?
Israel–Hamas War :2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿ ನಡೆಸಿದ್ದ ಹಮಾಸ್ ಉಗ್ರರು ಹಲವಾರು ಇಸ್ರೇಲಿಗರನ್ನು ಅಪಹರಣ ಮಾಡಿದ್ದರು. ಆ ವೇಳೆ ಒಟ್ಟು 94 ಇಸ್ರೇಲಿಗರನ್ನು ತಮ್ಮ ಜತೆಗೆ ಕೊಂಡೊಯ್ದಿದ್ದರು.
ಇಸ್ರೇಲ್-ಗಾಜಾ ಯುದ್ಧ ಅಂತ್ಯವಾಗುವ ಸೂಚನೆ ಸಿಕ್ಕಿದೆ. ಗಾಜಾಪಟ್ಟಿಯಲಕ್ಷಾಂತರ ಮಂದಿ ನಿಟ್ಟುಸಿರು ಬಿಡುವ ಸಮಯ ಬಂದಿದೆ. ಹಮಾಸ್ ಉಗ್ರರ ಹಾಗೂ ಇಸ್ರೇಲ್ ಸರ್ಕಾರದ ನಡುವಿನ ಕದನ ವಿರಾಮ ಒಪ್ಪಂದವು ನಿರ್ಣಾಯಕ ಹಂತಕ್ಕೆ ತಲುಪಿದ್ದು, 33 ಇಸ್ರೇಲಿ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರ ಅಧಿಕಾರಾವಧಿ ಮುಗಿಯುವ ಹೊತ್ತಲ್ಲೇ ಅಂದರೆ ಮುಂದಿನ ವಾರವೇ ಈ ಮಹತ್ವದ ಬೆಳವಣಿಗೆ ನಡೆಯಲಿದೆ. ತಕ್ಷಣವೇ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು. ಇಲ್ಲದೇ ಹೋದರೆ ಕಠಿಣ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಟ್ರಂಪ್ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.
2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿ ನಡೆಸಿದ್ದ ಹಮಾಸ್ ಉಗ್ರರು ಹಲವಾರು ಇಸ್ರೇಲಿಗರನ್ನು ಅಪಹರಣ ಮಾಡಿದ್ದರು. ಆ ವೇಳೆ ಒಟ್ಟು 94 ಇಸ್ರೇಲಿಗರನ್ನು ತಮ್ಮ ಜತೆಗೆ ಕೊಂಡೊಯ್ದಿದ್ದರು. ನಂತರ ನಡೆದ ಶಸ್ತ್ರಾಸ್ತ್ರ ಸಮರದಲ್ಲಿ ಆ ಪೈಕಿ ಕನಿಷ್ಠ 34 ಮಂದಿ ಸಾವಿಗೀಡಾಗಿದ್ದಾರೆ ಎಂದು ಇಸ್ರೇಲ್ ಅಂದಾಜಿಸಿದೆ. ಆರಂಭಿಕ 42 ದಿನಗಳ ಕದನ ವಿರಾಮದ ಸಂದರ್ಭದಲ್ಲಿ 33 ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡುವ ಸಾಧ್ಯತೆಯಿದೆ.
ಕೊನೇ ಹಂತದ ಮಾತುಕತೆ
ಅಮೆರಿಕ ವಿದೇಶಾಂಗ ಇಲಾಖೆಯನ್ನು ಉದ್ದೇಶಿಸಿ ಮಾತನಾಡಿರುವ ಅಧ್ಯಕ್ಷ ಜೋ ಬೈಡೆನ್, ಎರಡೂ ಕಡೆಯವರು ಸಂಧಾನ ಮಾತುಕತೆಯ ಅಂಚಿನಲ್ಲಿದ್ದಾರೆ. ಎಲ್ಲವೂ ಸುಖಾಂತ್ಯವಾಗಲಿದೆ ಎಂದು ಹೇಳಿಕೆ ನೀಡಿದ್ದರು. ಇದಾದ ಬಳಿಕ ನ್ಯೂಸ್ ಮ್ಯಾಕ್ಸ್ ಸಂದರ್ಶನದಲ್ಲಿ ಮಾತನಾಡಿದ್ದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೂ, ಮುಂದಿನ ಸೋಮವಾರ ನಡೆಯುವ ನನ್ನ ಪದಗ್ರಹಣ ಸಮಾರಂಭಕ್ಕೂ ಮುನ್ನವೇ ಕದನ ವಿರಾಮ ಘೋಷಣೆಯಾಗುವ ಸುಳಿವು ಸಿಕ್ಕಿದೆ ಎಂದಿದ್ದಾರೆ. ಟ್ರಂಪ್ ನೀಡಿರುವ ಎಚ್ಚರಿಕೆ ಹಾಗೂ ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಲು ಹಮಾಸ್ ಉಗ್ರರು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಏನೇನು ಒಪ್ಪಂದ?
ಮಂಗಳವಾರ ದೋಹಾದಲ್ಲಿ ಅಂತಿಮ ಹಂತದ ಮಾತುಕತೆ ನಡೆಯಲಿದೆ. ಸದ್ಯದ ಮಾಹಿತಿಯ ಪ್ರಕಾರ, ಮೊದಲ ಹಂತದಲ್ಲಿ ಬಿಡುಗಡೆಯಾಗುವ 33 ಒತ್ತೆಯಾಳುಗಳ ಪೈಕಿ ಮೃತ ಒತ್ತೆಯಾಳುಗಳ ದೇಹಗಳೂ ಸೇರಿರಬೇಕು ಎಂದು ಇಸ್ರೇಲ್ ಷರತ್ತು ವಿಧಿಸಿದೆ.
ಒತ್ತೆಯಾಳುಗಳ ಬಿಡುಗಡೆ ವೇಳೆ ಕೆಲವು ಒತ್ತೆಯಾಳುಗಳ ಕುಟುಂಬಗಳಿಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜತೆ ಸಂವಾದ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಶಾಂತಿ ಮಂತ್ರ ಪಠಿಸುತ್ತಿರುವ ನಡುವೆಯೂ ಈಜಿಪ್ಟ್-ಗಾಜಾ ಗಡಿಯಲ್ಲಿನ ಫಿಲಾಡೆಲ್ಫಿ ಕಾರಿಡಾರ್‌ನಲ್ಲಿ ಇಸ್ರೇಲ್ ಪಡೆಗಳ ಕಾರ್ಯಾಚರಣೆ ನಿರಂತವಾಗಿ ನಡೆಯುತ್ತಿದೆ. ಸದ್ಯ 33 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಬಳಿಕ ಮುಂದಿನ ಹಂತದ ಒಪ್ಪಂದ ಆರಂಭವಾಗಲಿದೆ. 16 ದಿನಗಳಲ್ಲಿ 2ನೇ ಹಂತದ ಸಂಧಾನ ಮಾತುಕತೆ ಆರಂಭವಾಗಲಿದ್ದು., ಯುದ್ಧವನ್ನು ಕೊನೆಗೊಳಿಸುವ ಒಪ್ಪಂದವಾಗಿರಲಿದೆ ಎಂದು ಮೂಲಗಳು ತಿಳಿಸಿವೆ.