
ಅಮೆರಿಕ ವೀಸಾಗೆ 1 ಕೋಟಿ ರೂ.; ನಿಯಮಗಳಲ್ಲಿ ಗೊಂದಲ, ಭಾರತೀಯ ಟೆಕ್ಕಿಗಳಲ್ಲಿ ಹೆಚ್ಚಿದ ಆತಂಕ!
ಅಮೆರಿಕದಲ್ಲಿರುವ ಕಂಪನಿಗಳಲ್ಲಿ ಒಟ್ಟು 6 ಲಕ್ಷ ವಿದೇಶಿಗರು ಕೆಲಸ ಮಾಡುತ್ತಿದ್ದಾರೆ. ಈ ಪೈಕಿ 4 ಲಕ್ಷ ಭಾರತೀಯರೇ ಇದ್ದಾರೆ ಎನ್ನಲಾಗಿದೆ. ಇದನ್ನು ಶೇಕಡಾವಾರು ನೋಡಿದಲ್ಲಿ ಶೇ.70ರಷ್ಟು ಮಂದಿ ಭಾರತೀಯರೇ ಹೆಚ್೧-ಬಿ ವೀಸಾ ಪಡೆದಿದ್ದಾರೆ.
ಅಮೆರಿಕದಲ್ಲಿ ಉದ್ಯೋಗದ ಕನಸು ಹೊತ್ತಿರುವ, ವಿಶೇಷವಾಗಿ ಭಾರತೀಯ ವೃತ್ತಿಪರರ ಭವಿಷ್ಯವನ್ನು ಅನಿಶ್ಚಿತತೆಗೆ ದೂಡುವಂತಹ ಮಹತ್ವದ ಬೆಳವಣಿಗೆಯೊಂದರಲ್ಲಿ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಚ್-1ಬಿ ವೀಸಾ ನೀತಿಗೆ ಸಂಬಂಧಿಸಿದಂತೆ ಕಠಿಣ ಆದೇಶಕ್ಕೆ ಸಹಿ ಹಾಕಿದ್ದಾರೆ. ಈ ಹೊಸ ನಿಯಮದ ಪ್ರಕಾರ, ಪ್ರತಿ ಎಚ್-1ಬಿ ವೀಸಾಕ್ಕೆ ವಾರ್ಷಿಕವಾಗಿ 100,000 ಡಾಲರ್ (ಸುಮಾರು 88 ಲಕ್ಷ ರೂಪಾಯಿ) ಶುಲ್ಕ ಪಾವತಿಸಬೇಕಾಗುತ್ತದೆ. ಅಮೆರಿಕದ ಉನ್ನತ ಹುದ್ದೆಗಳಲ್ಲಿ ವಿದೇಶಿಗರ ಬದಲು ಅಮೆರಿಕನ್ನರಿಗೇ ಆದ್ಯತೆ ನೀಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಟ್ರಂಪ್ ಆಡಳಿತ ಹೇಳಿಕೊಂಡಿದ್ದರೂ, ಈ ಆದೇಶದಲ್ಲಿನ ಹಲವಾರು ಗೊಂದಲಗಳು ಮತ್ತು ಅಸ್ಪಷ್ಟತೆಗಳು ವೀಸಾ ಆಕಾಂಕ್ಷಿಗಳು ಮತ್ತು ಈಗಾಗಲೇ ಅಮೆರಿಕದಲ್ಲಿರುವ ಉದ್ಯೋಗಿಗಳಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿವೆ.
ನಿಯಮಗಳಲ್ಲಿನ ಗೊಂದಲ ಮತ್ತು ಅನಿಶ್ಚಿತತೆ
ಟ್ರಂಪ್ ಅವರ ಈ ಹೊಸ ಆದೇಶವು ಸ್ಪಷ್ಟತೆಗಿಂತ ಹೆಚ್ಚು ಗೊಂದಲಗಳನ್ನು ಸೃಷ್ಟಿಸಿದೆ. ಈ ಬೃಹತ್ ಮೊತ್ತದ ಶುಲ್ಕವನ್ನು ಯಾರು ಪಾವತಿಸಬೇಕು ಎಂಬುದೇ ಮೊದಲ ಪ್ರಶ್ನೆ. ಸರ್ಕಾರದ ಪ್ರಕಾರ, ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಕಂಪನಿಗಳೇ ಈ ವೆಚ್ಚವನ್ನು ಭರಿಸಬೇಕು. ಆದರೆ, ಕಂಪನಿಗಳು ಈ ಹೊರೆಯನ್ನು ಉದ್ಯೋಗಿಗಳ ಮೇಲೆಯೇ ವರ್ಗಾಯಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಇದು ಜಾರಿಯಾದರೆ, ಮಧ್ಯಮ ವರ್ಗದ ವೃತ್ತಿಪರರಿಗೆ ಇಷ್ಟು ದೊಡ್ಡ ಮೊತ್ತವನ್ನು ಪಾವತಿಸುವುದು ಅಸಾಧ್ಯ ಮಾತು.
ಎರಡನೆಯದಾಗಿ, ಈ 100,000 ಡಾಲರ್ ಶುಲ್ಕವು ಒಂದು ವರ್ಷಕ್ಕೋ ಅಥವಾ ವೀಸಾದ ಸಂಪೂರ್ಣ ಅವಧಿಯಾದ ಮೂರರಿಂದ ಆರು ವರ್ಷಗಳಿಗೋ ಎಂಬ ಬಗ್ಗೆಯೂ ಸ್ಪಷ್ಟತೆ ಇಲ್ಲ. ವಾಣಿಜ್ಯ ಕಾರ್ಯದರ್ಶಿ ಹೋವರ್ಡ್ ಲುಟ್ನಿಕ್ ಅವರ ಹೇಳಿಕೆಗಳ ಪ್ರಕಾರ, ಇದು ವಾರ್ಷಿಕ ಶುಲ್ಕವಾಗಿರಲಿದೆ. ಹಾಗಾದಲ್ಲಿ, ಇದು ವೀಸಾ ಹೊಂದಿರುವವರಿಗೆ ಪ್ರತಿ ವರ್ಷವೂ ದೊಡ್ಡ ಆರ್ಥಿಕ ಹೊರೆಯಾಗಲಿದೆ.
ಮೂರನೆಯದಾಗಿ, ಈ ನಿಯಮವು ಹೊಸದಾಗಿ ವೀಸಾಕ್ಕೆ ಅರ್ಜಿ ಸಲ್ಲಿಸುವವರಿಗೆ ಮಾತ್ರ ಅನ್ವಯಿಸುತ್ತದೆಯೇ ಅಥವಾ ಈಗಾಗಲೇ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದು, ವೀಸಾ ನವೀಕರಣಕ್ಕಾಗಿ ಕಾಯುತ್ತಿರುವವರಿಗೂ ಅನ್ವಯವಾಗಲಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಕೆಲವು ವರದಿಗಳ ಪ್ರಕಾರ, ಇದು ದೇಶದ ಹೊರಗಿನಿಂದ ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಮಾತ್ರ ಅನ್ವಯವಾಗಬಹುದು ಎನ್ನಲಾಗಿದೆ. ಆದರೆ, ಸರ್ಕಾರದ ಹೇಳಿಕೆಗಳು ಎಲ್ಲರಿಗೂ ಅನ್ವಯವಾಗುವ ಸೂಚನೆ ನೀಡಿರುವುದರಿಂದ, ಈಗಾಗಲೇ ಅಮೆರಿಕದಲ್ಲಿ ನೆಲೆಸಿರುವ ಲಕ್ಷಾಂತರ ಭಾರತೀಯರು ಆತಂಕಕ್ಕೆ ಒಳಗಾಗಿದ್ದಾರೆ.
ಹೆಸರು ಹೇಳಲು ಇಚ್ಛಿಸದ ಕರ್ನಾಟಕದ ಮೂಲದ ಅಮೆರಿಕ ನಿವಾಸಿಬ್ಬರು ದ ಫೆಡರಲ್ ಕರ್ನಾಟಕದ ಜತೆ ಮಾತನಾಡಿ "ಹಲವು ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ. ಪ್ರತಿ ವರ್ಷ ಇಷ್ಟು ದೊಡ್ಡ ಮೊತ್ತವನ್ನು ಪಾವತಿಸಲು ನನ್ನಿಂದ ಸಾಧ್ಯವಿಲ್ಲ. ಕಂಪನಿ ಕೂಡ ಒಪ್ಪುವುದು ಅನುಮಾನ. ಈ ನಿಯಮದಿಂದ ನನ್ನ ಭವಿಷ್ಯವೇ ಅತಂತ್ರವಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
ಭಾರತೀಯರಿಗೇ ಹೆಚ್ಚು ಹೊಡೆತ
ಈ ಆದೇಶದಲ್ಲಿ ಏನೇ ಬದಲಾವಣೆಗಳಾದರೂ, ಅದರ ಅತಿ ದೊಡ್ಡ ಹೊಡೆತ ತಗಲುವುದು ಭಾರತೀಯರಿಗೇ. ಅಮೆರಿಕದಲ್ಲಿ ಎಚ್-1ಬಿ ವೀಸಾದ ಮೇಲೆ ಕೆಲಸ ಮಾಡುತ್ತಿರುವ ವಿದೇಶಿ ವೃತ್ತಿಪರರಲ್ಲಿ ಶೇಕಡ 70ಕ್ಕೂ ಹೆಚ್ಚು ಮಂದಿ ಭಾರತೀಯರೇ ಆಗಿದ್ದಾರೆ. ಟೆಕ್ ದೈತ್ಯ ಕಂಪನಿಗಳಾದ ಅಮೆಜಾನ್, ಟಿಸಿಎಸ್, ಮೈಕ್ರೋಸಾಫ್ಟ್, ಗೂಗಲ್‌ನಂತಹ ಸಂಸ್ಥೆಗಳಲ್ಲಿ ಸಾವಿರಾರು ಭಾರತೀಯರು ಉನ್ನತ ಹುದ್ದೆಗಳಲ್ಲಿದ್ದಾರೆ. ಈ ಆದೇಶ ಜಾರಿಯಾದರೆ, ಕಂಪನಿಗಳು ಹೊಸ ನೇಮಕ ಕಡಿಮೆ ಮಾಡಬಹುದು ಅಥವಾ ಭಾರತದಂತಹ ದೇಶಗಳಲ್ಲಿರುವ ತಮ್ಮ ಕಚೇರಿಗಳಿಗೆ ಯೋಜನೆಗಳನ್ನು ಸ್ಥಳಾಂತರಿಸಬಹುದು.
"ಅಮೆರಿಕದ ಆರ್ಥಿಕತೆಗೆ ನಮ್ಮ ಕೊಡುಗೆ ಅಪಾರ. ಆದರೂ ನಮ್ಮನ್ನು ಹೊರಗಿನವರೆಂಬಂತೆ ನೋಡಲಾಗುತ್ತಿದೆ. 'ಅಮೆರಿಕನ್ ಡ್ರೀಮ್' ಎಂಬುದು ಈಗ 'ಅಮೆರಿಕನ್ ನೈಟ್‌ಮೇರ್' ಆಗಿ ಬದಲಾಗುತ್ತಿದೆ. ಇಲ್ಲಿನ ಅನಿಶ್ಚಿತತೆಯ ಬದಲು ಭಾರತದಲ್ಲೇ ಉತ್ತಮ ಅವಕಾಶಗಳನ್ನು ಹುಡುಕುವುದು ಲೇಸು ಎನಿಸುತ್ತಿದೆ,'' ಎಂದು ಚಿಕ್ಕಮಗಳೂರು ಮೂಲದ ಅಮೆರಿಕ ಉದ್ಯೋಗಿಯೊಬ್ಬರು ಹೇಳಿಕೆ ನೀಡಿದ್ದಾರೆ.
ಕಾನೂನು ಹೋರಾಟದ ಸಾಧ್ಯತೆ
ಟ್ರಂಪ್ ಅವರ ಈ ಏಕಪಕ್ಷೀಯ ನಿರ್ಧಾರಕ್ಕೆ ಕಾನೂನಿನ ತೊಡಕುಗಳು ಎದುರಾಗುವ ಸಾಧ್ಯತೆಯಿದೆ. ಅಮೆರಿಕದ ಸಂಸತ್ತಿನ (ಕಾಂಗ್ರೆಸ್) ಅನುಮೋದನೆಯಿಲ್ಲದೆ ಇಂತಹ ಬೃಹತ್ ಶುಲ್ಕ ವಿಧಿಸುವುದು ಸಂವಿಧಾನಬಾಹಿರ ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈಗಾಗಲೇ ಹಲವು ವಲಸೆ ಸಂಬಂಧಿತ ಸಂಸ್ಥೆಗಳು ಮತ್ತು ಟೆಕ್ ಕಂಪನಿಗಳು ಈ ಆದೇಶದ ವಿರುದ್ಧ ನ್ಯಾಯಾಲಯದ ಮೊರೆ ಹೋಗುವ ಸಿದ್ಧತೆಯಲ್ಲಿವೆ.
"ಇದು ರಾಜಕೀಯ ಗಿಮಿಕ್‌ನಂತೆ ಕಾಣಿಸುತ್ತಿದೆ. ನಮ್ಮಂತಹ ಸಾವಿರಾರು ವೃತ್ತಿಪರರ ಜೀವನದೊಂದಿಗೆ ಆಟವಾಡಲಾಗುತ್ತಿದೆ. ಕಾನೂನು ಹೋರಾಟದಲ್ಲಿ ಈ ನಿಯಮ ಸೋಲಬಹುದು ಎಂಬ ಸಣ್ಣ ಭರವಸೆ ನಮ್ಮಲ್ಲಿದೆ. ಅಲ್ಲಿಯವರೆಗೂ ಆತಂಕದಲ್ಲಿ ಬದುಕಬೇಕಾದ ಪರಿಸ್ಥಿತಿ ನಮ್ಮದು." ಎಂದು ಕ್ಯಾಲಿಪೋರ್ನಿಯಾದಲ್ಲಿ ಅಡೊಬಿ ಕಂಪನಿಯಲ್ಲಿ ಕೆಲಸ ಮಾಡುವ ಮಂಗಳೂರು ಮೂಲದ ಉದ್ಯೋಗಿಯೊಬ್ಬರು ಹೇಳಿದ್ದಾರೆ.