
ಸಾಂದರ್ಭಿಕ ಚಿತ್ರ
ಎಚ್-1ಬಿ ವೀಸಾ: ಅಮೆಜಾನ್ ನಂತರ ಟಿಸಿಎಸ್‌ಗೆ ಅತಿ ಹೆಚ್ಚು ಅನುಮೋದನೆ; ಟ್ರಂಪ್ ಹೊಸ ಶುಲ್ಕದ ನಡುವೆ ವರದಿ ಬಹಿರಂಗ
ಯುಸಿಎಸ್ಐಸಿ ಅಂಕಿಅಂಶಗಳ ಪ್ರಕಾರ, 2025ರ ಜೂನ್ ವೇಳೆಗೆ ಅಮೆಜಾನ್ 10,044 ವೀಸಾಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಟಿಸಿಎಸ್ 5,505 ವೀಸಾಗಳನ್ನು ಪಡೆದಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಚ್-1ಬಿ ವೀಸಾಗಳ ಮೇಲೆ 1,00,000 ವಾರ್ಷಿಕ ಶುಲ್ಕ ವಿಧಿಸಿರುವ ಬೆನ್ನಲ್ಲೇ, ಯುಎಸ್ ಪೌರತ್ವ ಮತ್ತು ವಲಸೆ ಸೇವೆಗಳು (USCIS) 2025ರ ಆರ್ಥಿಕ ವರ್ಷದ ವೀಸಾ ಅನುಮೋದನೆಗಳ ಕುರಿತು ಮಹತ್ವದ ಡೇಟಾ ಬಿಡುಗಡೆ ಮಾಡಿವೆ. ಈ ವರದಿಯ ಪ್ರಕಾರ, ಅಮೆಜಾನ್ ನಂತರ, ಭಾರತದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಅತಿ ಹೆಚ್ಚು ಎಚ್-1ಬಿ ವೀಸಾಗಳನ್ನು ಪಡೆದ ಎರಡನೇ ಅತಿದೊಡ್ಡ ಕಂಪನಿಯಾಗಿ ಹೊರಹೊಮ್ಮಿದೆ.
ಯುಸಿಎಸ್ಐಸಿ ಅಂಕಿಅಂಶಗಳ ಪ್ರಕಾರ, 2025ರ ಜೂನ್ ವೇಳೆಗೆ ಅಮೆಜಾನ್ 10,044 ವೀಸಾಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಟಿಸಿಎಸ್ 5,505 ವೀಸಾಗಳನ್ನು ಪಡೆದಿದೆ. ಇತರೆ ಪ್ರಮುಖ ಕಂಪನಿಗಳಾದ ಮೈಕ್ರೋಸಾಫ್ಟ್ 5,189, ಮೆಟಾ 5,123, ಆಪಲ್ 4,202, ಮತ್ತು ಗೂಗಲ್ 4,181 ವೀಸಾಗಳನ್ನು ಪಡೆದಿವೆ. ಭಾರತೀಯ ಐಟಿ ದೈತ್ಯ ಕಂಪನಿಗಳಾದ ಇನ್ಫೋಸಿಸ್ 2,004, ವಿಪ್ರೋ 1,523, ಮತ್ತು ಟೆಕ್ ಮಹೀಂದ್ರಾ ಅಮೆರಿಕಾಸ್ 951 ವೀಸಾಗಳನ್ನು ಪಡೆದುಕೊಂಡಿವೆ.
ಟ್ರಂಪ್ ಆಡಳಿತವು ಎಚ್-1ಬಿ ವೀಸಾ ಕಾರ್ಯಕ್ರಮದ "ವ್ಯವಸ್ಥಿತ ದುರುಪಯೋಗ"ವನ್ನು ತಡೆಯುವ ಉದ್ದೇಶದಿಂದ ಈ ಕಠಿಣ ಶುಲ್ಕವನ್ನು ವಿಧಿಸಿದೆ ಎಂದು ಹೇಳಿದೆ. ಈ ಕುರಿತು ಹೊರಡಿಸಲಾದ ಘೋಷಣೆಯ ಪ್ರಕಾರ, 2000 ಮತ್ತು 2019ರ ನಡುವೆ ಅಮೆರಿಕದಲ್ಲಿ ವಿದೇಶಿ STEM (ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಮತ್ತು ಗಣಿತ) ಉದ್ಯೋಗಿಗಳ ಸಂಖ್ಯೆ ದ್ವಿಗುಣಗೊಂಡಿದೆ. ಮಾಹಿತಿ ತಂತ್ರಜ್ಞಾನ (ಐಟಿ) ಸಂಸ್ಥೆಗಳು ಈ ವ್ಯವಸ್ಥೆಯನ್ನು ವ್ಯಾಪಕವಾಗಿ ದುರುಪಯೋಗಪಡಿಸಿಕೊಂಡು, ಅಮೆರಿಕನ್ ಉದ್ಯೋಗಿಗಳಿಗೆ ಹಾನಿ ಮಾಡಿವೆ ಎಂದು ಆರೋಪಿಸಲಾಗಿದೆ.
ಅಧ್ಯಯನವೊಂದರ ಪ್ರಕಾರ, ಎಚ್-1ಬಿ ಪ್ರವೇಶ ಮಟ್ಟದ ಹುದ್ದೆಗಳಿಗೆ ಸಾಂಪ್ರದಾಯಿಕ ಅಮೆರಿಕನ್ ಉದ್ಯೋಗಿಗಳಿಗೆ ಹೋಲಿಸಿದರೆ 36% ಕಡಿಮೆ ವೇತನ ನೀಡಲಾಗುತ್ತಿದೆ. ಈ ಕಡಿಮೆ ಕಾರ್ಮಿಕ ವೆಚ್ಚದ ಲಾಭ ಪಡೆಯಲು, ಕಂಪನಿಗಳು ತಮ್ಮ ಐಟಿ ವಿಭಾಗಗಳನ್ನು ಮುಚ್ಚಿ, ಅಮೆರಿಕನ್ ಸಿಬ್ಬಂದಿಯನ್ನು ವಜಾಗೊಳಿಸಿ, ಕಡಿಮೆ ಸಂಬಳದ ವಿದೇಶಿ ಕಾರ್ಮಿಕರನ್ನು ನೇಮಿಸಿಕೊಳ್ಳುತ್ತಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅನೇಕ ಟೆಕ್ ಕಂಪನಿಗಳು ತಮ್ಮ ಅರ್ಹ ಅಮೆರಿಕನ್ ಉದ್ಯೋಗಿಗಳನ್ನು ವಜಾಗೊಳಿಸಿ, ಅದೇ ಸಮಯದಲ್ಲಿ ಸಾವಿರಾರು ಎಚ್-1ಬಿ ಕೆಲಸಗಾರರನ್ನು ನೇಮಿಸಿಕೊಂಡಿವೆ ಎಂದು ಘೋಷಣೆಯು ಉದಾಹರಣೆ ಸಮೇತ ವಿವರಿಸಿದೆ. ಉದಾಹರಣೆಗೆ, ಒಂದು ಸಾಫ್ಟ್‌ವೇರ್ ಕಂಪನಿಯು 2025ರಲ್ಲಿ 5,000ಕ್ಕೂ ಹೆಚ್ಚು ಎಚ್-1ಬಿ ವೀಸಾಗಳಿಗೆ ಅನುಮೋದನೆ ಪಡೆದಿದ್ದು, ಅದೇ ಸಮಯದಲ್ಲಿ 15,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿತ್ತು.