H-1B Visa : ಅಮೆರಿಕದ ಅನಿವಾಸಿ ಕನ್ನಡಿಗರಿಗೆ ಎಚ್-1ಬಿ ವೀಸಾ ಆತಂಕವೇಕೆ?
H-1B Visa : ಚುನಾವಣೆಯುದ್ದಕ್ಕೂ ಟ್ರಂಪ್ ಬೆಂಬಲಿಸಿದ್ದ ಸಂಪ್ರದಾಯವಾದಿ ಮುಖಂಡರು ಹಾಗೂ ಸಂಘಟನೆಗಳು ವಲಸೆ ನೀತಿ ಬಿಗಿಗೊಳಿಸುವ ಭರವಸೆಯನ್ನು ಪದೇ ಪದೆ ಸ್ಮರಿಸುತ್ತಿವೆ. ಟ್ರಂಪ್‌ಗೆ ವಲಸೆ ನೀತಿ ಬಿಗಿಗೊಳಿಸುವ ಅನಿವಾರ್ಯತೆ ಖಂಡಿತಾ ಇದೆ.
ಅಮೆರಿಕದ ವಿಶ್ವ ವಿದ್ಯಾಲಯವೊಂದರಲ್ಲಿ ಅಧ್ಯಯನ ಮಾಡಿ ಅಲ್ಲಿನ ಐಟಿ ಕಂಪನಿಯಲ್ಲಿ ಇಂಟರ್ನ್‌ಶಿಪ್ ಮಾಡುತ್ತಿರುವ ಆಕಾಂಕ್ಷಾ ಬೆಂಗಳೂರಿನ ಸಹಕಾರ ನಗರದಲ್ಲಿರುವ ತಮ್ಮ ಮನೆಗೆ ರಜೆ ಮೇಲೆ ಬಂದಿದ್ದಳು. ಒಂದು ತಿಂಗಳು ಇದ್ದು ಹೋಗುವ ಯೋಜನೆ ಆಕೆಯದ್ದಾಗಿತ್ತು. ಏತನ್ಮಧ್ಯೆ, ಅಮೆರಿಕದ ಚುನಾವಣೆ ನಡೆದು ಟ್ರಂಪ್ ಚುನಾಯಿತರಾದರು. ತಕ್ಷಣವೇ ಆಕೆ ತರಬೇತಿ ಪಡೆಯುತ್ತಿರುವ ಸಂಸ್ಥೆ ಆದಷ್ಟು ಬೇಗ ಹೊರಟು ಬರುವಂತೆ ಕರೆ ಕೊಟ್ಟಿತು. ರಜೆ ಮೊಟಕುಗೊಳಿಸಿ ಆಕೆ ಅಮೆರಿಕಕ್ಕೆ ವಾಪಸಾದಳು. ಇಷ್ಟಕ್ಕೆಲ್ಲ ಕಾರಣ ನಿಯೋಜಿತ ಅಧ್ಯಕ್ಷ ಟ್ರಂಪ್ (Donald Trump) ಎಚ್-1ಬಿ ವೀಸಾ (H-1B Visa) ನಿಯಮ ಬದಲಾವಣೆ ಮಾಡುತ್ತಾರೆಂಬ ಆತಂಕ!
ಇದು ಆಕಾಂಕ್ಷಾ ಒಬ್ಬರ ಭಯವಲ್ಲ. ಅಮೆರಿಕದ ಚುನಾವಣೆ ನಡೆದು ಫಲಿತಾಂಶ ಬಂದ ಬಳಿಕ ಅಲ್ಲಿರುವ ಬಹುತೇಕ ಭಾರತೀಯರು ಎದುರಿಸುತ್ತಿರುವ ಅನಿಶ್ಚಿತತೆ. ಆಕಾಂಕ್ಷಾ ಅವರಂತೆ ಹಲವು ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ರಜೆ ಅರ್ಧಕ್ಕೆ ಮುಗಿಸಿ ಅಮೆರಿಕಕ್ಕೆ ಓಡಿ ಹೋಗಿದ್ದಾರೆ. ಕೇವಲ ಒಂದು ತಿಂಗಳ ಅವಧಿಯಲ್ಲಿ ಭಾರತದ ನಾನಾ ನಗರದ ವಿಮಾನ ನಿಲ್ದಾಣಗಳಿಂದ ಸಾವಿರಾರು ವಿದ್ಯಾರ್ಥಿಗಳು ಮತ್ತು ವೃತ್ತಿಪರರು ಏಕಾಏಕಿ ಅಮೆರಿಕಕ್ಕೆ ಹೋಗುವ ವಿಮಾನ ಏರಿದ್ದಾರೆ. ಏನಾದರೂ ಆಗಲಿ ಮತ್ತೆ ಅಮೆರಿಕ ಸೇರಿಕೊಂಡರೆ ಸಾಕು ಎಂಬ ಮನೋಭಾವ ಅವರೆಲ್ಲರದ್ದು.
ಮಲ್ಲೇಶ್ವರದ ಸಂದೇಶ್ ಅಮೆರಿಕದಲ್ಲಿಯೇ ಬಿಇ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪಿಜಿ ಮುಗಿಸಿದ್ದಾರೆ. ಮೆರ್‌ಕ್ಲೈನ್ ಟಕ್ನಾಲಾಜೀಸ್ ಕಂಪನಿಯಲ್ಲಿ ಆಪ್ಷನಲ್ ಪ್ರಾಕ್ಟಿಕಲ್ ಟ್ರೈನಿಂಗ್ (OPT) ಮಾಡುತ್ತಿದ್ದಾರೆ. ಆ ಕಂಪನಿ ಎಫ್1 ವೀಸಾದಿಂದ ಎಚ್- 1ಬಿ ವೀಸಾಗೆ ಪರಿವರ್ತಿಸುವ ಉದ್ಯೋಗದ ಭರವಸೆ ಕೊಟ್ಟಿದೆ. ಆದರೆ ಈ ಕ್ಷಣದಲ್ಲೇ ಯಾವುದೇ ಕಾರಣಕ್ಕೂ ಭಾರತಕ್ಕೆ ಮರಳದಂತೆ ಸೂಚಿಸಿದೆ . ಸಂದೇಶ್ ಪ್ರಕರಣದಲ್ಲಿ, ಕಂಪನಿಗೆ ತಾವು ಆಯ್ಕೆ ಮಾಡಿರುವ ಪ್ರತಿಭೆಗೆ ವೀಸಾ ಸಿಗುವ ಭಯವೂ ಎದುರಾಗಿದೆ.
ಇವರೆಲ್ಲರ ಆತಂಕ ಇನ್ನೂ ಹಲವು ದಿನಗಳು ಮುಂದುವರಿಯಲಿವೆ. ಯಾಕೆಂದರೆ ಟ್ರಂಪ್ ಬಂದು ಅಧ್ಯಕ್ಷರ ಕುರ್ಚಿಯಲ್ಲಿ ಕುಳಿತು ವಲಸೆ ನೀತಿ ಬಗ್ಗೆ ತೀರ್ಮಾನ ತೆಗದುಕೊಳ್ಳುವ ತನಕ ಅಮೆರಿಕದಲ್ಲಿ ಉದ್ಯೋಗದ ಕನಸು ಕಾಣುತ್ತಿರುವ ಲಕ್ಷಾಂತರ ಮಂದಿ ಭಾರತೀಯರದ್ದು ಇದೇ ಗೋಳು.
ಭಾರತೀಯರೆಲ್ಲರ ಈ ಗೊಂದಲಕ್ಕೆ ಕಾರಣ ಟ್ರಂಪ್ ಪ್ರತಿಪಾದಿಸುವ ವಲಸೆ ವಿರೋಧಿ ನೀತಿ. ಎಚ್-1ಬಿ ವೀಸಾ ನಿಯಮ ಕಠಿಣಗೊಳಿಸುವ ಭಯ. ಅಮೆರಿಕದ ಕೆಲವೊಂದು ವಿಶ್ವ ವಿದ್ಯಾಲಯಗಳು, ಕಂಪನಿಗಳು, ಭಾರತೀಯ ಮೂಲದ ವಿದ್ಯಾರ್ಥಿಗಳಿಗೆ ಹಾಗೂ ತರಬೇತಿ ಪಡೆಯುತ್ತಿರುವರಿಗೆ ತಕ್ಷಣವೇ ವಾಪಸ್ ಬರುವಂತೆ ಕೋರಿಕೊಂಡಿವೆ. ಯಾಕೆಂದರೆ, ಸೀಟ್ ಕೊಡಿಸುವಾಗ ಅವರೆಲ್ಲರೂ ವೀಸಾ ಭರವಸೆಯನ್ನೂ ಕೊಟ್ಟಿದ್ದಾರೆ. ಟ್ರಂಪ್ ಗದ್ದುಗೆಗೆ ಏರಿದ ಬಳಿಕ ವೀಸಾ ನೀತಿಯಲ್ಲಿ ಏನು ಬೇಕಾದರೂ ಆಗಬಹುದು. ಎಫ್ 1 ವೀಸಾ ಹೊಂದಿದವರಿಗೆ ಅಮೆರಿಕ ಬಾಗಿಲು ಮುಚ್ಚಬಹುದು. ತಕ್ಷಣವೇ ಅಮೆರಿಕಕ್ಕೆ ಬಂದು ಸೇರಿಕೊಳ್ಳಿ ಎಂದಿವೆ.
ಟ್ರಂಪ್ ಭಯ ಯಾಕೆ?
ಅಮೆರಿಕದ ಅಧ್ಯಕ್ಷರಾಗಿ ಟ್ರಂಪ್ ಆಯ್ಕೆಯಾದ ತಕ್ಷಣ ನಿರ್ಗಮಿತ ಅಧ್ಯಕ್ಷ ಜೋ ಬೈಡನ್ ಎಫ್1 (ವಿದ್ಯಾರ್ಥಿ ವೀಸಾ) ದಿಂದ ಎಚ್- 1ಬಿ ವೀಸಾಕ್ಕೆ (ಉದ್ಯೋಗದ ಆಧಾರಿತ ವೀಸಾ) ಪರಿವರ್ತನೆ ಮಾಡುವ ನಿಯಮಗಳಲ್ಲಿ ಸಡಿಲಿಕೆ ಮಾಡಿದ್ದರು. ವಾಸ್ತವದಲ್ಲಿ ಅದು ಅಮೆರಿಕದಲ್ಲಿ ಉದ್ಯೋಗದ ನಿರೀಕ್ಷೆಯಲ್ಲಿರುವ ಲಕ್ಷಾಂತರ ಭಾರತೀಯರಿಗೆ ಅನುಕೂಲಕರ. ಆದರೆ, ಬೈಡೆನ್ ಅವರದ್ದು ರಾಜಕೀಯ ತಂತ್ರ ಹಾಗೂ ದೀರ್ಘಕಾಲೀನ ಅಲ್ಲ ಎಂಬುದು ರಾಜಕೀಯ ವಿಶ್ಲೇಷಕರ ಹೇಳಿಕೆ. ಯಾಕೆಂದರೆ ಡೊನಾಲ್ಡ್ ಟ್ರಂಪ್ ವಲಸೆ ವಿರೋಧಿ ನೀತಿಯ ಕಟ್ಟರ್ ಪ್ರತಿಪಾದಕರು. ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ತಕ್ಷಣ ಬೈಡೆನ್ ಮಾಡಿದ ಸಡಿಲಿಕೆಗಳನ್ನು ತಡೆಯುವ ಜತೆಗೆ ಇಡಿ ವೀಸಾ ನೀತಿ ಬದಲಾಯಿಸುತ್ತಾರೆ ಎಂಬುದು ಅವರ ಊಹೆ.
ಡೊನಾಲ್ಡ್ ಟ್ರಂಪ್ ಜನವರಿ 20ರಂದು ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅವರ ಚುನಾವಣಾ ಭರವಸೆಗಳಲ್ಲಿ ಅಮೆರಿಕದ ಜನರನ್ನು ಹೆಚ್ಚು ಆಕರ್ಷಿಸಿದ್ದು ವಲಸೆ ವಿರೋಧಿ ನೀತಿ. ವೀಸಾ ನಿಯಮಗಳನ್ನು ಬಿಗಿಗೊಳಿಸುತ್ತೇವೆ ಎಂದು ಹೇಳಿದ್ದಕ್ಕಾಗಿಯೇ ಟ್ರಂಪ್‌ಗೆ ಲಕ್ಷಾಂತರ ಮತಗಳು ಬಿದ್ದಿವೆ ಎಂದು ಸಮೀಕ್ಷೆಗಳು ಹೇಳಿವೆ. ಚುನಾವಣಾ ಭಾಷಣಗಳಲ್ಲಿ ಟ್ರಂಪ್ ಪ್ರತಿಬಾರಿಯೂ ವಲಸಿಗರನ್ನು ಹೊರಗಟ್ಟುವ ಮಾತನ್ನು ದೃಢೀಕರಿಸುತ್ತಾ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಚುನಾವಣೆಯುದ್ದಕ್ಕೂ ಟ್ರಂಪ್ ಬೆಂಬಲಿಸಿದ್ದ ಸಂಪ್ರದಾಯವಾದಿ ಮುಖಂಡರು ಹಾಗೂ ಸಂಘಟನೆಗಳು ಈ ಒಂದು ಭರವಸೆಯನ್ನು ಪದೇ ಪದೆ ಸ್ಮರಿಸುತ್ತಿವೆ. ಹೀಗಾಗಿ ಟ್ರಂಪ್‌ಗೆ ವಲಸೆ ನೀತಿ ಬಿಗಿಗೊಳಿಸುವ ಅನಿವಾರ್ಯತೆ ಖಂಡಿತಾ ಇದೆ.
ಎಚ್-ಬಿ1 ವೀಸಾ ನೀತಿಯೇ ಅನಿಶ್ಚಿತ
ಬೆಂಗಳೂರಿನ ಐಟಿ ಉದ್ಯೋಗಿ ರಮೇಶ್ ಶೆಟ್ಟಿ ವೀಸಾ ಗೊಂದಲದ ಬಗ್ಗೆ ಮಾತನಾಡಿ, ಎಚ್- 1ಬಿ ವೀಸಾ ಪ್ರಕ್ರಿಯೆ ತೀರಾ ಅನಿಶ್ಚಿತ. ಅದು ಅದೃಷ್ಟದ ಮೇಲೆ ಒಲಿಯುವ ಲಾಟರಿಯಂತಾಗಿದ್ದು ಅರ್ಹತೆ ಆಧಾರಿತ ವ್ಯವಸ್ಥೆಯಾಗಿಲ್ಲ. ಹಲವು ವರ್ಷಗಳ ಅನುಭವ ಮತ್ತು ಎಲ್ಲಾ ಅವಶ್ಯಕತೆಗಳನ್ನು ಪೂರೈಸಿದರೂ ಈ ಅನಿಶ್ಚಿತತೆ ವೃತ್ತಿಜೀವನದ ಯೋಜನೆ ಮೇಲೆ ಪರಿಣಾಮ ಬೀರುತ್ತದೆ. ಕ್ಯಾಪ್ ವ್ಯವಸ್ಥೆಯು ನಮ್ಮಂತಹ ನುರಿತ ವೃತ್ತಿಪರರಿಗೆ ನಿರ್ಬಂಧಿತ ಎನಿಸಿಕೊಂಡಿದೆ " ಎಂದು ʼದ ಫೆಡರಲ್ ಕರ್ನಾಟಕʼದ ಜತೆ ಅಭಿಪ್ರಾಯಪಟ್ಟಿದ್ದಾರೆ.
"ಸುಧಾರಿತ ಜ್ಞಾನ ಹಾಗೂ ಹೆಚ್ಚೆಚ್ಚು ಅವಕಾಶಗಳನ್ನು ಪಡೆಯುವುದಕ್ಕಾಗಿ ನಮ್ಮಂಥ ಅನೇಕರು ಅಮೆರಿಕದಲ್ಲಿ ಅಧ್ಯಯನ ಮಾಡುವ ಕನಸು ಕಾಣುತ್ತೇವೆ. ಆದರೆ ಎಚ್ -1ಬಿ ವೀಸಾ ನೀತಿಗಳಲ್ಲಿನ ಬದಲಾವಣೆಗಳು ಈ ಬಗ್ಗೆ ನಮ್ಮನ್ನು ಎರಡೆರಡು ಬಾರಿ ಯೋಚಿಸುವಂತೆ ಮಾಡುತ್ತಿದೆ. ದುಬಾರಿ ವೆಚ್ಚದಲ್ಲಿ ಶಿಕ್ಷಣ ಪೂರ್ಣಗೊಳಿಸಿದ ನಂತರ ಕೆಲಸದ ವೀಸಾ ಸಿಗುವುದಿಲ್ಲ ಎಂಬ ಭಯ ನಮ್ಮ ಉತ್ಸಾಹಕ್ಕೆ ಭಂಗ ತರುತ್ತಿದೆ ಎಂದು ವೀಸಾಗೆ ಅರ್ಜಿ ಸಲ್ಲಿಸಿ ಮತ್ತು ಕ್ಲಿಯರೆನ್ಸ್‌ಗಾಗಿ ಕಾಯುತ್ತಿರುವ ಬೆಂಗಳೂರು ಮೂಲದ ವಿದ್ಯಾರ್ಥಿನಿ ಶ್ರುತಿ ಪಿ ಅಭಿಪ್ರಾಯಪಟ್ಟಿದ್ದಾರೆ. ʼʼತಾನಿನ್ನೂ 11ನೇ ತರಗತಿ ಕಲಿಕೆ ಪೂರ್ಣಗೊಳಿಸಿಲ್ಲ. ಈಗಿಂದಲೇ ಯುಎಸ್ಎಯಲ್ಲಿ ಪದವಿ ಪಡೆಯುವ ನಿರೀಕ್ಷೆ ಇಟ್ಟುಕೊಂಡಿದ್ದೇನೆ,ʼʼ ಎಂದೂ ಆಕೆ ʼದ ಫೆಡರಲ್ ಕರ್ನಾಟಕʼ ಹೇಳುತ್ತಾರೆ..
ʼʼಅಮೆರಿಕದಲ್ಲಿ ಶಿಕ್ಷಣಕ್ಕಾಗಿ ಲಕ್ಷಗಟ್ಟಲೆ ರೂಪಾಯಿ ಖರ್ಚು ಮಾಡಿದ ನಂತರ, ಎಚ್ 1ಬಿ ವೀಸಾ ಪಡೆಯಲು ಮಾಡಬೇಕಾದ ಹೋರಾಟವು ನಮಗೆ ಆತಂಕಕಾರಿ. ಅನಿಶ್ಚಿತತೆಯು ನಮ್ಮ ವೃತ್ತಿಜೀವನದ ಮೇಲೆ ಮಾತ್ರವಲ್ಲದೆ ನಮ್ಮ ಆರ್ಥಿಕ ಪರಿಸ್ಥಿತಿ ಮೇಲೂ ಪರಿಣಾಮ ಬೀರುತ್ತದೆ. ಶೈಕ್ಷಣಿಕ ಸಾಲಗಳು ನಮ್ಮ ಜೀವನದ ಮೇಲೆ ಭಾರಿ ಹೊರೆ ಹೊರಿಸುತ್ತದೆ,ʼʼ ಎಂದು ದಕ್ಷಿಣ ಕೆರೊಲಿನಾದಲ್ಲಿ ಪದವಿ ಪಡೆದಿರುವ ಆಕಾಶ್ ಎಂ ಫೆಡರಲ್ ಕರ್ನಾಟಕ ಜತೆ ಮಾತನಾಡುತ್ತಾ ಹೇಳುತ್ತಾರೆ.
"ಎಚ್ 1ಬಿ ವೀಸಾ ಪ್ರಕ್ರಿಯೆಯಲ್ಲಿನ ಗೊಂದಲಮಯ ಪರಿಸ್ಥಿತಿ ಅನೇಕ ವಿದ್ಯಾರ್ಥಿಗಳು ಮತ್ತು ವೃತ್ತಿಪರರನ್ನು ಗೊಂದಲಕ್ಕೆ ಈಡು ಮಾಡಿದೆ. ಅವರು ಅಮೆರಿಕ್ಕೆ ಹೋಗುವ ತಮ್ಮ ಯೋಜನೆ ಬಗ್ಗೆ ಮರು ಚಿಂತನೆ ಮಾಡುವಂತಾಗಿದೆ. ಇದರ ಪರಿಣಾಮವಾಗಿ, ಯುಎಸ್ ವೀಸಾ ಅರ್ಜಿಗಳ ವಿಚಾರಣೆಯಲ್ಲಿ ಇಳಿಕೆಯಾಗಿದ್ದು ಕೆನಡಾ ಮತ್ತು ಆಸ್ಟ್ರೇಲಿಯಾದಂತಹ ಇತರ ಅಧ್ಯಯನ ಮತ್ತು ಕೆಲಸದ ಸ್ಥಳಗಳಿಗೆ ಬೇಡಿಕೆ ಹೆಚ್ಚುತ್ತಿದೆ,ʼʼ ಎಂದು ಬೆಂಗಳೂರಿನ ಎಂಜಿ ರಸ್ತೆಯ ಟ್ರಾವೆಲ್ ಏಜೆಂಟ್ ರಾಜೇಶ್ ಹೇಮಂತ್ ಅಭಿಪ್ರಾಯಪಟ್ಟಿದ್ದಾರೆ.
ಒಪಿಟಿಗೆ ವಿರೋಧ
ಅಂತರರಾಷ್ಟ್ರೀಯ ಶೈಕ್ಷಣಿಕ ವಿನಿಮಯ ಓಪನ್ ಡೋರ್ಸ್ ವರದಿ ಪ್ರಕಾರ, ಭಾರತೀಯ ವಿದ್ಯಾರ್ಥಿಗಳು ಅಮೆರಿಕಕ್ಕೆ ಹೋಗುವ ಪ್ರಮಾಣ ತೀರಾ ಹೆಚ್ಚಾಗಿದೆ. 2023-24ರಲ್ಲಿ ಆಪ್ಷನಲ್ ಪ್ರಾಕ್ಟಿಕಲ್ ಟ್ರೈನಿಂಗ್‌ನಲ್ಲಿ (ಒಪಿಟಿ) 97,556 ಭಾರತೀಯ ವಿದ್ಯಾರ್ಥಿಗಳಿದ್ದರು. ಅದಕ್ಕಿಂತ ಹಿಂದಿನ ವರ್ಷಕ್ಕೆ ಹೋಲಿಸಿದರೆ 41% ಏರಿಕೆ .
ಅಮೆರಿಕದ ಕಾರ್ಮಿಕರು ನಡೆಸುತ್ತಿರುವ ಹಲವಾರು ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳು ಒಪಿಟಿ ವಿರುದ್ಧ ಧ್ವನಿ ಎತ್ತುತ್ತಲೇ ಇವೆ. ತಮ್ಮ ಉದ್ಯೋಗಕ್ಕೆ ಮಾರಕ ಎಂದು ಟೀಕಿಸುತ್ತಿವೆ. ವೀಸಾ ಯೋಜನೆಗಳಲ್ಲಿ ಸುಧಾರಣೆಗಳನ್ನು ತರಲೇಬೇಕು ಎಂದು ಒತ್ತಾಯಿಸಿವೆ. U.S.Tech ವರ್ಕರ್ಸ್ ಎಂಬ ಎಕ್ಸ್ ಹ್ಯಾಂಡಲ್. ವೀಡಿಯೊಗಳನ್ನು ಪೋಸ್ಟ್ ಮಾಡುತ್ತಾ ಎಚ್ 1-ಬಿ ವೀಸಾ ನಿಲ್ಲಿಸಬೇಕು ಎಂದು ಆಗ್ರಹ ಮುಂದಿಟ್ಟಿದೆ.
"ಒಪಿಟಿ ಯೋಜನೆ ವಿದೇಶಿ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ನೆಪದಲ್ಲಿ ಕೊಡುವ ಉದ್ಯೋಗ. ವಿಶ್ವವಿದ್ಯಾಲಯಗಳು ಶಿಕ್ಷಣದ ಬದಲು ಕೆಲಸದ ಪರವಾನಗಿಗಳನ್ನು ಮಾರಾಟ ಮಾಡುತ್ತಿವೆ. ಅಮೆರಿಕ ಮೂಲದವರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಲು ಒಪಿಟಿ ಕೊನೆಗೊಳಿಸಬೇಕು" ಎಂದು ಯುಎಸ್ ಟೆಕ್ ವರ್ಕರ್ಸ್ ಗ್ರೂಪ್ ಒತ್ತಾಯ ಮಾಡಿದೆ.
"ಒಪಿಟಿ ಪರಿಚಯಿಸಿದ ನಂತರ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಸಂಖ್ಯೆ, ವಿಶೇಷವಾಗಿ ಭಾರತ ಮತ್ತು ಚೀನಾದಿಂದ ಹೆಚ್ಚಾಗಿದೆ. ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳನ್ನು ಆಕರ್ಷಿಸಲು ಸ್ಟೆಮ್-ಒಪಿಟಿಯನ್ನೇ ಜಾಹೀರಾತು ಕೊಡುತ್ತಾ ಆದಾಯ ಹೆಚ್ಚಿಸಿಕೊಳ್ಳುತ್ತಿವೆ" ಎಂದು ಆರೋಪಿಸಿದೆ.
ಇಲ್ಲಿಯವರೆಗೆ ವೀಸಾ ನಿಯಂತ್ರಣದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದು ಯುಎಸ್ ದೂತಾವಾಸದ ಮೂಲಗಳು ದ ಫೆಡರಲ್‌ಗೆ ತಿಳಿಸಿವೆ. "ವೀಸಾ ಪ್ರಕ್ರಿಯೆಯ ಬಗ್ಗೆ ನಮಗೆ ಯಾವುದೇ ಮಾಹಿತಿ ಬಂದಿಲ್ಲ. ಆತಂಕ ಅಥವಾ ಯಾವುದೇ ಸಂದೇಹಗಳನ್ನು ಹೊಂದಿರುವ ವಿದ್ಯಾರ್ಥಿಗಳು ಸ್ಪಷ್ಟತೆಗಾಗಿ ಯುಎಸ್ಐಇಎಫ್ ಅನ್ನು ಸಂಪರ್ಕಿಸುವುದು ಉತ್ತಮ ಎಂದು ಸಲಹೆ ಕೊಟ್ಟಿವೆ.