
ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್‌ನಲ್ಲಿ ಗುಂಡಿನ ದಾಳಿ: ಪ್ರವಾಸಿಗರಲ್ಲಿ ಆತಂಕ, ಒಬ್ಬರಿಗೆ ಗಾಯ
ಅಮೆರಿಕದ ನ್ಯೂಯಾರ್ಕ್ ನಗರದ ಟೈಮ್ಸ್ ಸ್ಕ್ವೇರ್‌ನಲ್ಲಿ ಗುಂಡಿನ ದಾಳಿ ನಡೆದಿದ್ದು, ಪ್ರವಾಸಿಗರು ಮತ್ತು ಸಾರ್ವಜನಿಕರಲ್ಲಿ ಆತಂಕ ಮೂಡಿದೆ.
ಅಮೆರಿಕದ ಪ್ರಸಿದ್ಧ ಪ್ರವಾಸಿ ತಾಣವಾದ ಟೈಮ್ಸ್ ಸ್ಕ್ವೇರ್‌ನಲ್ಲಿ ಗುರುವಾರ ಮಧ್ಯಾಹ್ನ ನಡೆದ ಗುಂಡಿನ ದಾಳಿಯಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಏಕಾಏಕಿ ಕೇಳಿಬಂದ ಗುಂಡಿನ ಸದ್ದಿನಿಂದ ಪ್ರವಾಸಿಗರು ಮತ್ತು ಸಾರ್ವಜನಿಕರು ಭಯಭೀತರಾಗಿ ಸುರಕ್ಷಿತ ಸ್ಥಳಗಳತ್ತ ಓಡಿದರು. ಘಟನೆ ವೇಳೆ ಒಬ್ಬ ವ್ಯಕ್ತಿ ಗಾಯಗೊಂಡಿದ್ದು, ಶಂಕಿತನನ್ನು ಪೊಲೀಸರು ಬೆನ್ನಟ್ಟಿ ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಯಾರ್ಕ್ ಅಗ್ನಿಶಾಮಕ ಇಲಾಖೆ ಮಾಹಿತಿ ಪ್ರಕಾರ, ಘಟನೆಯಲ್ಲಿ ಗಾಯಗೊಂಡ ಒಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅವರ ಆರೋಗ್ಯ ಸ್ಥಿತಿ ಕುರಿತು ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ಎನ್‌ಬಿಎ ಚಾಂಪಿಯನ್‌ಶಿಪ್ ಸಂಭ್ರಮದ ಬಳಿಕ ಘಟನೆ
ಎನ್‌ಬಿಎ ಚಾಂಪಿಯನ್ ಆಗಿರುವ ನ್ಯೂಯಾರ್ಕ್ ನಿಕ್ಸ್ ತಂಡದ ಗೌರವಾರ್ಥ ಆಯೋಜಿಸಿದ್ದ ಮೆರವಣಿಗೆಯ ಕೆಲವೇ ಗಂಟೆಗಳ ಬಳಿಕ ಈ ಘಟನೆ ನಡೆದಿದೆ. ಈ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ಭದ್ರತಾ ದೃಷ್ಟಿಯಿಂದ ಸುಮಾರು 10 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಇದರ ಜೊತೆಗೆ ಫಿಫಾ ವಿಶ್ವಕಪ್ ಪಂದ್ಯಾವಳಿಯ ಹಿನ್ನೆಲೆಯಲ್ಲಿ ನಗರದಲ್ಲಿ ಹೆಚ್ಚಿನ ಸಂಖ್ಯೆಯ ವಿದೇಶಿ ಪ್ರವಾಸಿಗರೂ ಇದ್ದರು ಎಂದು ನ್ಯೂಯಾರ್ಕ್ ಪೊಲೀಸ್ ಇಲಾಖೆ (NYPD) ತಿಳಿಸಿದೆ.
🇺🇸: Shots fired near 42nd Street and Broadway in Times Square, New York City
— World In Last 24hr (@world24x7hr) June 18, 2026
According to NYPD reports and eyewitness accounts, gunfire caused panic with crowds scattering. A suspect was quickly arrested, and a firearm was recovered at the scene. No injuries have been confirmed… pic.twitter.com/3Pbgnybtx1
ಗುಂಡಿನ ಸದ್ದು ಕೇಳುತ್ತಿದ್ದಂತೆ ಓಡಿದ ಜನ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋಗಳಲ್ಲಿ ಗುಂಡಿನ ಸದ್ದು ಕೇಳುತ್ತಿದ್ದಂತೆ ಜನರು ಆತಂಕದಿಂದ ಓಡಿ ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿರುವ ದೃಶ್ಯಗಳು ಕಾಣಿಸಿಕೊಂಡಿವೆ. ಕೆಲವರು ಅಂಗಡಿಗಳು ಹಾಗೂ ಕಟ್ಟಡಗಳೊಳಗೆ ಆಶ್ರಯ ಪಡೆದರೆ, ಇನ್ನೂ ಕೆಲವರು ರಸ್ತೆಯಿಂದ ಓಡಿ ಪಾರಾಗಲು ಯತ್ನಿಸಿದರು.
ಗುಂಡಿನ ದಾಳಿ ನಡೆದ ಸ್ಥಳದ ಸಮೀಪವೇ ಪೊಲೀಸ್ ವಾಹನ ನಿಲ್ಲಿಸಲಾಗಿತ್ತು ಎನ್ನುವುದು ಗಮನಾರ್ಹ. ಶಂಕಿತರು ಪರಾರಿಯಾಗಲು ಯತ್ನಿಸಿದಾಗ ಪೊಲೀಸರು ಬೆನ್ನಟ್ಟಿ ಹಿಡಿದಿದ್ದಾರೆ ಎಂದು ವರದಿಯಾಗಿದೆ.
ಕೆಲವೇ ದಿನಗಳ ಹಿಂದೆ ಮತ್ತೊಂದು ಘಟನೆ
ಜೂನ್ 16ರಂದು ಕೂಡ ಟೈಮ್ಸ್ ಸ್ಕ್ವೇರ್ ಪ್ರದೇಶದಲ್ಲಿ ಇದೇ ರೀತಿಯ ಗುಂಡಿನ ದಾಳಿ ನಡೆದಿತ್ತು. ನ್ಯೂಯಾರ್ಕ್ ನಿಕ್ಸ್ ತಂಡವು 53 ವರ್ಷಗಳ ಬಳಿಕ ಚಾಂಪಿಯನ್ ಪಟ್ಟ ಗೆದ್ದ ಸಂಭ್ರಮಾಚರಣೆಯ ವೇಳೆ ನಡೆದ ಗುಂಡಿನ ದಾಳಿಯಲ್ಲಿ 17 ವರ್ಷದ ಬಾಲಕನೊಬ್ಬ ಗಾಯಗೊಂಡಿದ್ದ.
ಆ ಸಂದರ್ಭದಲ್ಲಿ 42ನೇ ರಸ್ತೆ ಮತ್ತು ಬ್ರಾಡ್‌ವೇ ಜಂಕ್ಷನ್ ಸಮೀಪ ಕನಿಷ್ಠ ಏಳು ಸುತ್ತು ಗುಂಡು ಹಾರಾಟ ನಡೆದಿರುವುದು ವಿಡಿಯೋಗಳಲ್ಲಿ ದಾಖಲಾಗಿತ್ತು. ನಂತರ ಪೊಲೀಸರು ಒಬ್ಬ ವ್ಯಕ್ತಿಯಿಂದ ಲೋಡ್ ಆಗಿದ್ದ ಗನ್ ವಶಪಡಿಸಿಕೊಂಡಿದ್ದರು. ಗುರುವಾರ ನಡೆದ ಘಟನೆಯ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

