
ಭಾರತ-ಅಮೆರಿಕ ವ್ಯಾಪಾರ ಒಪ್ಪಂದ: 'ಸಂಭ್ರಮ ಬೇಡ, ಎಚ್ಚರವಿರಲಿ'; ಟ್ರಂಪ್ ಹೇಳಿಕೆಯ ಬಗ್ಗೆ ತಜ್ಞರ ಅನುಮಾನ
ನವದೆಹಲಿ ಮೂಲದ ಚಿಂತಕರ ಚಾವಡಿ 'ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಶಿಯೇಟಿವ್' (GTRI) ಸೋಮವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದೊಂದಿಗೆ ಬೃಹತ್ ವ್ಯಾಪಾರ ಒಪ್ಪಂದ ಮಾಡಿಕೊಂಡಿರುವುದಾಗಿ ಘೋಷಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಧಿಕೃತ ವಿವರಗಳು ಹೊರಬರುವವರೆಗೂ ಈ ಬಗ್ಗೆ ಸಂಭ್ರಮಿಸುವ ಬದಲು ಎಚ್ಚರಿಕೆ ವಹಿಸುವುದು ಅಗತ್ಯ ಎಂದು ವ್ಯಾಪಾರ ತಜ್ಞರು ಎಚ್ಚರಿಸಿದ್ದಾರೆ.
ನವದೆಹಲಿ ಮೂಲದ ಚಿಂತಕರ ಚಾವಡಿ 'ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಶಿಯೇಟಿವ್' (GTRI) ಸೋಮವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಟ್ರಂಪ್ ಅವರ 'ಟ್ರುತ್ ಸೋಷಿಯಲ್' ಪೋಸ್ಟ್ ಅನ್ನು ಕೇವಲ ರಾಜಕೀಯ ಸಂಕೇತವಾಗಿ ನೋಡಬೇಕೇ ಹೊರತು, ಇದನ್ನೇ ಅಂತಿಮ ಒಪ್ಪಂದ ಎಂದು ಭಾವಿಸಬಾರದು ಎಂದು ಎಚ್ಚರಿಸಿದೆ.
ಜಿಟಿಆರ್ಐ ಎತ್ತಿರುವ ಪ್ರಮುಖ ಪ್ರಶ್ನೆಗಳೇನು?
1. ಅಸ್ಪಷ್ಟತೆ: ಟ್ರಂಪ್ ಅವರ ಘೋಷಣೆಯಲ್ಲಿ ಮೂಲಭೂತ ವಿವರಗಳೇ ಇಲ್ಲ ಎಂದು GTRI ಸಂಸ್ಥಾಪಕ ಅಜಯ್ ಶ್ರೀವಾಸ್ತವ ಹೇಳಿದ್ದಾರೆ. "ಯಾವ ಉತ್ಪನ್ನಗಳಿಗೆ ಸುಂಕ ಕಡಿತ ಅನ್ವಯವಾಗುತ್ತದೆ? ಇದರ ಕಾಲಮಿತಿ ಏನು? ಕೃಷಿಯಂತಹ ಸೂಕ್ಷ್ಮ ವಲಯಗಳಲ್ಲಿ ಭಾರತ ನಿಜವಾಗಿಯೂ 'ಶೂನ್ಯ ಸುಂಕ'ಕ್ಕೆ ಒಪ್ಪಿದೆಯೇ? ಎಂಬಿತ್ಯಾದಿ ಪ್ರಮುಖ ಪ್ರಶ್ನೆಗಳಿಗೆ ಉತ್ತರವಿಲ್ಲ," ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
2. ಶೂನ್ಯ ಸುಂಕದ ಸಾಧ್ಯತೆ: ಅಮೆರಿಕದ ಉತ್ಪನ್ನಗಳ ಮೇಲಿನ ಸುಂಕವನ್ನು ಭಾರತ ಶೂನ್ಯಕ್ಕೆ ಇಳಿಸಲಿದೆ ಎಂಬ ಟ್ರಂಪ್ ಹೇಳಿಕೆಯ ಬಗ್ಗೆಯೂ ಸಂಶಯ ವ್ಯಕ್ತಪಡಿಸಲಾಗಿದೆ. ಭಾರತವು ಐತಿಹಾಸಿಕವಾಗಿ ಆಹಾರ ಧಾನ್ಯಗಳು, ತಳೀಯವಾಗಿ ಮಾರ್ಪಡಿಸಿದ ಉತ್ಪನ್ನಗಳು ಮತ್ತು ಇತರ ನಿಯಂತ್ರಿತ ಆಮದುಗಳ ವಿಷಯದಲ್ಲಿ ಕಠಿಣ ನಿಲುವು ತಳೆದುಬಂದಿದೆ. ಹೀಗಿರುವಾಗ ಇಷ್ಟೊಂದು ವ್ಯಾಪಕವಾದ ಬದ್ಧತೆಗೆ ಭಾರತ ಒಪ್ಪಿರಲು ಸಾಧ್ಯವೇ ಎಂಬ ಪ್ರಶ್ನೆ ಮೂಡಿದೆ.
3. ರಷ್ಯಾ ತೈಲ ಮತ್ತು ಸುಂಕ ಕಡಿತ: ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸಿದರೆ ಸುಂಕವನ್ನು ಶೇ. 25 ರಿಂದ ಶೇ. 18ಕ್ಕೆ ಇಳಿಸುವುದಾಗಿ ಟ್ರಂಪ್ ಹೇಳಿದ್ದರು (ನಂತರ ಶೇ. 50 ರಿಂದ 18ಕ್ಕೆ ಇಳಿಕೆ ಎಂಬ ಸ್ಪಷ್ಟನೆ ಬಂತು). ಆದರೆ, ಅಮೆರಿಕವು ಈಗಾಗಲೇ ಯುಕೆ, ಇಯು, ಜಪಾನ್, ಬಾಂಗ್ಲಾದೇಶ ಮತ್ತು ವಿಯೆಟ್ನಾಂನಂತಹ ದೇಶಗಳಿಗೆ ಶೇ. 10-20 ರಷ್ಟು ಪರಸ್ಪರ ಸುಂಕವನ್ನು ವಿಧಿಸಿದೆ. ಹೀಗಾಗಿ ಭಾರತಕ್ಕೆ ನೀಡಿರುವ ಆಫರ್ನಲ್ಲಿ ವಿಶೇಷವೇನಿಲ್ಲ ಎಂದು ಜಿಟಿಆರ್ಐ ಹೇಳಿದೆ.
4. 500 ಬಿಲಿಯನ್ ಡಾಲರ್ ಖರೀದಿ ಅಸಾಧ್ಯ?: ಭಾರತವು 500 ಬಿಲಿಯನ್ ಡಾಲರ್ಗೂ ಹೆಚ್ಚು ಮೌಲ್ಯದ ಅಮೆರಿಕನ್ ಸರಕುಗಳನ್ನು ಖರೀದಿಸಲಿದೆ ಎಂಬ ಹೇಳಿಕೆಯ ಬಗ್ಗೆಯೂ ತಜ್ಞರು ಸಂಶಯ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಭಾರತದ ವಾರ್ಷಿಕ ಆಮದು 50 ಬಿಲಿಯನ್ ಡಾಲರ್ಗಿಂತ ಕಡಿಮೆಯಿದೆ. 500 ಬಿಲಿಯನ್ ಡಾಲರ್ ತಲುಪಲು ಕನಿಷ್ಠ 20 ವರ್ಷಗಳೇ ಬೇಕಾಗಬಹುದು. ಇದು ಹತ್ತಿರದ ಭವಿಷ್ಯದಲ್ಲಿ ನಡೆಯುವ ಸಾಧ್ಯತೆ ಕಡಿಮೆ ಎಂದು ವರದಿ ಹೇಳಿದೆ.
5. ಉಳಿಯಲಿರುವ ಸುಂಕಗಳು: ಯಾವುದೇ ಒಪ್ಪಂದವಾದರೂ, ಉಕ್ಕು, ಅಲ್ಯೂಮಿನಿಯಂ ಮೇಲಿನ ಸೆಕ್ಷನ್ 232 ಸುಂಕಗಳು (ಶೇ. 50) ಮತ್ತು ಆಟೋ ಬಿಡಿಭಾಗಗಳ ಮೇಲಿನ ಸುಂಕಗಳು (ಶೇ. 25) ಹಾಗೆಯೇ ಮುಂದುವರಿಯಲಿವೆ. ಔಷಧಗಳು ಮತ್ತು ವಿಮಾನ ಬಿಡಿಭಾಗಗಳಿಗೆ ಈಗಾಗಲೇ ಶೂನ್ಯ ಸುಂಕವಿದ್ದು, ಅದರಲ್ಲಿ ಬದಲಾವಣೆ ಇಲ್ಲ.
"ಜಂಟಿ ಹೇಳಿಕೆ, ಅಧಿಕೃತ ಪಠ್ಯ ಮತ್ತು ಜಾರಿಗೊಳಿಸುವ ಪ್ರಕ್ರಿಯೆಯ ಬಗ್ಗೆ ಸ್ಪಷ್ಟತೆ ಸಿಗುವವರೆಗೂ ಇದನ್ನು ಅಂತಿಮ ಡೀಲ್ ಎಂದು ಕರೆಯಲಾಗದು. ಸದ್ಯಕ್ಕೆ ಸಂಭ್ರಮಕ್ಕಿಂತ ಎಚ್ಚರಿಕೆಯೇ ಮುಖ್ಯ," ಎಂದು ಅಜಯ್ ಶ್ರೀವಾಸ್ತವ ಸಲಹೆ ನೀಡಿದ್ದಾರೆ.

