
ಐಎಂಎಫ್ ತೊರೆದು ತೊರೆದು ಹಾರ್ವರ್ಡ್ ಕಡೆಗೆ ಹೊರಟ ಗೀತಾ ಗೋಪಿನಾಥ್
ಗೋಪಿನಾಥ್ ಅವರು ಇದೇ ವರ್ಷ ಸೆಪ್ಟೆಂಬರ್ 1 ರಂದು ಹಾರ್ವರ್ಡ್ ಅರ್ಥಶಾಸ್ತ್ರ ವಿಭಾಗಕ್ಕೆ 'ಗ್ರೇಗರಿ ಮತ್ತು ಅನಿಯಾ ಕಾಫಿ ಪ್ರೊಫೆಸರ್ ಆಫ್ ಎಕನಾಮಿಕ್ಸ್' ಗೌರವ ಹುದ್ದೆಗೆ ಸೇರಲಿದ್ದಾರೆ.
ಭಾರತ ಮೂಲದ ಮೆರಿಕನ್ ಅರ್ಥಶಾಸ್ತ್ರಜ್ಞೆ ಮತ್ತು ಅಂತರಾಷ್ಟ್ರೀಯ ಹಣಕಾಸು ನಿಧಿಯ (IMF) ಮೊದಲ ಉಪ ವ್ಯವಸ್ಥಾಪಕ ನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಿರುವ ಗೀತಾ ಗೋಪಿನಾಥ್ ಅವರು ತಮ್ಮ ಹುದ್ದೆ ತೊರೆದು, ಹಾರ್ವರ್ಡ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗಕ್ಕೆ ಮರಳುವುದಾಗಿ ಘೋಷಿಸಿದ್ದಾರೆ.
"ಐಎಂಎಫ್‌ನಲ್ಲಿನ ಸುಮಾರು 7 ಅದ್ಭುತ ವರ್ಷಗಳ ಸೇವೆ ನಂತರ, ನಾನು ನನ್ನ ಶೈಕ್ಷಣಿಕ ಮೂಲಗಳಿಗೆ ಮರಳಲು ನಿರ್ಧರಿಸಿದ್ದೇನೆ" ಎಂದು ಐಎಂಎಫ್‌ನ ಮೊದಲ ಮಹಿಳಾ ಮುಖ್ಯ ಅರ್ಥಶಾಸ್ತ್ರಜ್ಞೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಗೀತಾ ಗೋಪಿನಾಥ್ ಅವರು ಸೋಮವಾರ ರಾತ್ರಿ (ಜುಲೈ 21) ಎಕ್ಸ್ (ಹಿಂದಿನ ಟ್ವಿಟರ್) ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಹೊಸ ಹುದ್ದೆ ಮತ್ತು ಜವಾಬ್ದಾರಿ
ಗೋಪಿನಾಥ್ ಅವರು ಇದೇ ವರ್ಷ ಸೆಪ್ಟೆಂಬರ್ 1 ರಂದು ಹಾರ್ವರ್ಡ್ ಅರ್ಥಶಾಸ್ತ್ರ ವಿಭಾಗಕ್ಕೆ 'ಗ್ರೇಗರಿ ಮತ್ತು ಅನಿಯಾ ಕಾಫಿ ಪ್ರೊಫೆಸರ್ ಆಫ್ ಎಕನಾಮಿಕ್ಸ್' (Gregory and Ania Coffey Professor of Economics) ಎಂಬ ನೂತನ ಗೌರವ ಹುದ್ದೆಯೊಂದಿಗೆ ಮರುಸೇರ್ಪಡೆಯಾಗಲಿದ್ದಾರೆ.
ಐಎಂಎಫ್‌ನಲ್ಲಿನ ತಮ್ಮ ಸೇವೆಯ ಬಗ್ಗೆ ಕೃತಜ್ಞತೆ ಸಲ್ಲಿಸಿದ ಅವರು, "ಅಭೂತಪೂರ್ವ ಸವಾಲುಗಳ ಸಮಯದಲ್ಲಿ ಸದಸ್ಯ ರಾಷ್ಟ್ರಗಳಿಗೆ ಸೇವೆ ಸಲ್ಲಿಸಲು ದೊರೆತ ಈ ಅವಕಾಶ ಜೀವನದಲ್ಲಿ ಒಮ್ಮೆ ಮಾತ್ರ ಸಿಗುವಂಥದ್ದು" ಎಂದು ಬಣ್ಣಿಸಿದ್ದಾರೆ. "ಈಗ ನಾನು ನನ್ನ ಶೈಕ್ಷಣಿಕ ಕ್ಷೇತ್ರಕ್ಕೆ ಮರಳುತ್ತಿದ್ದು, ಜಾಗತಿಕ ಸವಾಲುಗಳನ್ನು ಎದುರಿಸಲು ಅಂತರಾಷ್ಟ್ರೀಯ ಹಣಕಾಸು ಮತ್ತು ಸ್ಥೂಲ ಅರ್ಥಶಾಸ್ತ್ರದಲ್ಲಿ ಸಂಶೋಧನೆಯನ್ನು ಮುಂದುವರಿಸಲು ಹಾಗೂ ಮುಂದಿನ ಪೀಳಿಗೆಯ ಅರ್ಥಶಾಸ್ತ್ರಜ್ಞರಿಗೆ ತರಬೇತಿ ನೀಡಲು ಎದುರು ನೋಡುತ್ತಿದ್ದೇನೆ," ಎಂದು ಅವರು ಹೇಳಿದ್ದಾರೆ.
ಐಎಂಎಫ್‌ನಲ್ಲಿನ ಸಾಧನೆ
ಗೀತಾ ಗೋಪಿನಾಥ್ ಅವರು ಜನವರಿ 2019 ರಲ್ಲಿ ಐಎಂಎಫ್‌ನ ಮುಖ್ಯ ಅರ್ಥಶಾಸ್ತ್ರಜ್ಞರಾಗಿ ಸೇರಿದರು ಮತ್ತು ಜನವರಿ 2022 ರಲ್ಲಿ ಮೊದಲ ಉಪ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ಬಡ್ತಿ ಪಡೆದರು. ಕೋವಿಡ್-19 ಬಿಕ್ಕಟ್ಟನ್ನು ಸಮರ್ಥವಾಗಿ ನಿಭಾಯಿಸಲು ವಿಶ್ವಕ್ಕೆ ಲಸಿಕೆ ನೀಡುವ ಗುರಿಗಳನ್ನು ಹೊಂದಿದ್ದ 'ಸಾಂಕ್ರಾಮಿಕ ಯೋಜನೆ'ಯ (Pandemic Plan) ಸಹ-ಲೇಖಕಿಯಾಗಿಯೂ ಅವರು ಮಹತ್ವದ ಕೊಡುಗೆ ನೀಡಿದ್ದಾರೆ.