ಅಮೆರಿಕದಲ್ಲಿ ನಾಲ್ವರ ಭೀಕರ ಹತ್ಯೆ, ಕಪಾಟಿನಲ್ಲಿ ಅಡಗಿ ಪ್ರಾಣ ಉಳಿಸಿಕೊಂಡ ಮಕ್ಕಳು!
x
ಆರೋಪಿ ವಿಜಯ್ ಕುಮಾರ್ ಮತ್ತು ಪತ್ನಿ ಮೀಮು ಡೋಗ್ರಾ

ಅಮೆರಿಕದಲ್ಲಿ ನಾಲ್ವರ ಭೀಕರ ಹತ್ಯೆ, ಕಪಾಟಿನಲ್ಲಿ ಅಡಗಿ ಪ್ರಾಣ ಉಳಿಸಿಕೊಂಡ ಮಕ್ಕಳು!

ಅಮೆರಿಕದ ಜಾರ್ಜಿಯಾದಲ್ಲಿ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಭಾರತೀಯ ಮೂಲದ ಮಹಿಳೆ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಕೌಟುಂಬಿಕ ವಿವಾದದಿಂದ ನಡೆದ ಈ ಹತ್ಯಾಕಾಂಡದ ಸಂಪೂರ್ಣ ವಿವರ ಇಲ್ಲಿದೆ.


Click the Play button to hear this message in audio format

ಅಮೆರಿಕದಲ್ಲಿ ಮತ್ತೊಮ್ಮೆ ಭಾರತೀಯ ಮೂಲದ ಕುಟುಂಬವೊಂದು ಗುಂಡಿನ ದಾಳಿಗೆ ಬಲಿಯಾಗಿದೆ. ಜಾರ್ಜಿಯಾದ ಲಾರೆನ್ಸ್‌ವಿಲ್ಲೆಯಲ್ಲಿ ನಡೆದ ಭೀಕರ ಶೂಟೌಟ್‌ನಲ್ಲಿ ಭಾರತೀಯ ಮೂಲದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕ್ಷುಲ್ಲಕ ಎನ್ನಲಾದ ಕಲಹವು ಗುಂಡಿನ ದಾಳಿಗೆ ತಿರುಗಿದ್ದು, ಈ ಘೋರ ದುರಂತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಮೃತರ ಪೈಕಿ ಒಬ್ಬರು ಭಾರತೀಯ ಪ್ರಜೆಯಾಗಿದ್ದಾರೆ ಎಂದು ಅಟ್ಲಾಂಟಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಧೃಡಪಡಿಸಿದೆ.

ಏನಿದು ಘಟನೆ?

ಶುಕ್ರವಾರ ಮುಂಜಾನೆ ಸುಮಾರು 2:30ರ ಸಮಯದಲ್ಲಿ, ಲಾರೆನ್ಸ್‌ವಿಲ್ಲೆಯ ಬ್ರೂಕ್ ಐವಿ ಕೋರ್ಟ್‌ನಲ್ಲಿರುವ ಮನೆಯೊಂದರಲ್ಲಿ ಗುಂಡಿನ ಸದ್ದು ಕೇಳಿಬಂದಿದೆ. 51 ವರ್ಷದ ವಿಜಯ್ ಕುಮಾರ್ ಎಂಬಾತ ತನ್ನ ಪತ್ನಿ ಮತ್ತು ಇತರ ಮೂವರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾನೆ.

ಪೊಲೀಸರ ವರದಿಯ ಪ್ರಕಾರ ಈ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಆರೋಪಿ ವಿಜಯ್ ಕುಮಾರ್ ಪತ್ನಿ ಮೀಮು ಡೋಗ್ರಾ (43), ಗೌರವ್ ಕುಮಾರ್ (33), ನಿಧಿ ಚಂದರ್ (37) ಮತ್ತು ಹರೀಶ್ ಚಂದರ್ (38) ಸೇರಿದ್ದಾರೆ.

ಅದೃಷ್ಟವಶಾತ್‌ ಬಜಾವ್‌ ಆದ ಮಕ್ಕಳು

ಈ ಭೀಕರ ಗುಂಡಿನ ದಾಳಿ ನಡೆಯುವಾಗ ಮನೆಯಲ್ಲಿ ಮೂವರು ಮಕ್ಕಳಿದ್ದರು. ಗುಂಡಿನ ಸದ್ದು ಕೇಳಿ ತಲ್ಲಣಗೊಂಡ ಮಕ್ಕಳು, ತಮ್ಮ ಪ್ರಾಣ ಉಳಿಸಿಕೊಳ್ಳಲು ಸಮಯಪ್ರಜ್ಞೆ ಮೆರೆದು ಮನೆಯೊಳಗಿನ ಕಪಾಟೊಂದರಲ್ಲಿ ಅಡಗಿಕೊಂಡಿದ್ದಾರೆ. ದಾಳಿಕೋರನ ಕಣ್ಣಿಗೆ ಬೀಳದೆ ತಪ್ಪಿಸಿಕೊಂಡ ಮಕ್ಕಳ ಪೈಕಿ ಒಬ್ಬ ಮಗು ಹೇಗೋ ಧೈರ್ಯ ಮಾಡಿ 911ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದೆ. ಈ ಮಾಹಿತಿಯ ಆಧಾರದ ಮೇಲೆ ಪೊಲೀಸರು ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿದ್ದಾರೆ. ಮಕ್ಕಳು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದು, ಸದ್ಯ ಸಂಬಂಧಿಕರ ಆಶ್ರಯದಲ್ಲಿದ್ದಾರೆ.

ಆರೋಪಿಯ ಬಂಧನ ಮತ್ತು ಕಾನೂನು ಕ್ರಮ

ಘಟನೆಯ ನಂತರ ಆರೋಪಿ ವಿಜಯ್ ಕುಮಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಮೇಲೆ ಕೊಲೆ, ಭೀಕರ ಹಲ್ಲೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಸೇರಿದಂತೆ ಹಲವು ಗಂಭೀರ ಪ್ರಕರಣಗಳನ್ನು ದಾಖಲಿಸಲಾಗಿದೆ.

ಭಾರತೀಯ ರಾಯಭಾರ ಕಚೇರಿಯ ಸ್ಪಂದನೆ

ಈ ದುರಂತದ ಬಗ್ಗೆ ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿರುವ ಅಟ್ಲಾಂಟಾದ ಭಾರತೀಯ ರಾಯಭಾರ ಕಚೇರಿ, "ಕೌಟುಂಬಿಕ ಕಲಹದಿಂದ ನಡೆದ ಈ ಹತ್ಯಾಕಾಂಡದಲ್ಲಿ ಭಾರತೀಯ ಪ್ರಜೆಯೂ ಬಲಿಯಾಗಿರುವುದು ನಮಗೆ ತೀವ್ರ ನೋವು ತಂದಿದೆ. ಮೃತರ ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ಕಾನೂನು ಮತ್ತು ವೈಯಕ್ತಿಕ ನೆರವು ನೀಡಲು ನಾವು ಬದ್ಧರಾಗಿದ್ದೇವೆ" ಎಂದು ತಿಳಿಸಿದೆ.

Read More
Next Story