ಜೆನ್-ಝಡ್ ಪ್ರತಿಭಟನೆ: ಭಾರತೀಯ ಸೇರಿದಂತೆ 51 ಮಂದಿ ಸಾವು
x

'ಜೆನ್-ಝಡ್' ಪ್ರತಿಭಟನೆ: ಭಾರತೀಯ ಸೇರಿದಂತೆ 51 ಮಂದಿ ಸಾವು

ಈ ವಾರದ ಆರಂಭದಲ್ಲಿ ಸಾವಿರಾರು ಯುವಕರು ಬೀದಿಗಿಳಿದು ನಡೆಸಿದ ಈ ಪ್ರತಿಭಟನೆಯು ಇಡೀ ನೇಪಾಳವನ್ನೇ ಬೆಚ್ಚಿಬೀಳಿಸಿತ್ತು.


ನೇಪಾಳದಲ್ಲಿ ವ್ಯಾಪಕ ಭ್ರಷ್ಟಾಚಾರ ಮತ್ತು ಸಾಮಾಜಿಕ ಮಾಧ್ಯಮಗಳ ನಿಷೇಧವನ್ನು ವಿರೋಧಿಸಿ 'ಜೆನ್-ಝಡ್' (Gen-Z) ಯುವಜನರು ನಡೆಸಿದ ಪ್ರತಿಭಟನೆಗಳಲ್ಲಿ ಒಬ್ಬರು ಭಾರತೀಯ ಪ್ರಜೆ ಸೇರಿದಂತೆ ಕನಿಷ್ಠ 51 ಜನರು ಮೃತಪಟ್ಟಿದ್ದಾರೆ ಎಂದು ನೇಪಾಳ ಪೊಲೀಸರು ಶುಕ್ರವಾರ ಅಧಿಕೃತವಾಗಿ ಘೋಷಿಸಿದ್ದಾರೆ.

ಈ ವಾರದ ಆರಂಭದಲ್ಲಿ ಸಾವಿರಾರು ಯುವಕರು ಬೀದಿಗಿಳಿದು ನಡೆಸಿದ ಈ ಪ್ರತಿಭಟನೆಯು ಇಡೀ ನೇಪಾಳವನ್ನೇ ಬೆಚ್ಚಿಬೀಳಿಸಿತ್ತು. ನೇಪಾಳ ಪೊಲೀಸ್‌ನ ಸಹ-ವಕ್ತಾರ, ಹಿರಿಯ ಪೊಲೀಸ್ ಅಧೀಕ್ಷಕ ರಮೇಶ್ ಥಾಪಾ ಅವರ ಪ್ರಕಾರ, ಮೃತಪಟ್ಟವರಲ್ಲಿ ಒಬ್ಬರು ಭಾರತೀಯ ಪ್ರಜೆ, ಮೂವರು ಪೊಲೀಸ್ ಸಿಬ್ಬಂದಿ, ಒಂಬತ್ತು ಕೈದಿಗಳು ಮತ್ತು 21 ಪ್ರತಿಭಟನಾಕಾರರು ಸೇರಿದ್ದಾರೆ. ಉಳಿದ 18 ಮಂದಿಯ ಸಾವಿಗೆ ನಿಖರ ಕಾರಣ ಇನ್ನಷ್ಟೇ ತಿಳಿಯಬೇಕಿದೆ. ಗುರು ಮತ್ತು ಶುಕ್ರವಾರ ದೇಶದ ವಿವಿಧ ಭಾಗಗಳಿಂದ 17 ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೋಮವಾರ, ಜೆನ್-ಝಡ್ ಬ್ಯಾನರ್ ಅಡಿಯಲ್ಲಿ ಪ್ರತಿಭಟನಾಕಾರರು ಕಠ್ಮಂಡುವಿನ ಸಂಸತ್ ಭವನಕ್ಕೆ ನುಗ್ಗಲು ಯತ್ನಿಸಿದಾಗ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 19 ವಿದ್ಯಾರ್ಥಿಗಳು ಮೃತಪಟ್ಟಿದ್ದರು. ಪ್ರಸ್ತುತ 36 ಶವಗಳನ್ನು ತ್ರಿಭುವನ್ ವಿಶ್ವವಿದ್ಯಾಲಯದ ಬೋಧನಾ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಆರಂಭವಾಗಿದೆ.

ಪ್ರಧಾನಿ ರಾಜೀನಾಮೆ, ಹಿಂಸಾಚಾರ ಮುಂದುವರಿಕೆ

ಸೋಮವಾರದ ಪ್ರತಿಭಟನೆಯಲ್ಲಿ ಸಂಭವಿಸಿದ ಸಾವುಗಳಿಗೆ ಹೊಣೆ ಹೊತ್ತು, ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರು ಮಂಗಳವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆದರೆ, ಅವರ ರಾಜೀನಾಮೆಯ ನಂತರವೂ ಹಿಂಸಾಚಾರ ನಿಂತಿಲ್ಲ. ಪ್ರತಿಭಟನಾಕಾರರು ಸಂಸತ್ ಭವನ, ರಾಷ್ಟ್ರಪತಿ ಭವನ, ಪ್ರಧಾನಿ ನಿವಾಸ ಹಾಗೂ ಹಿರಿಯ ನಾಯಕರ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ.

ಈ ಹಿಂಸಾಚಾರದಲ್ಲಿ ಸುಮಾರು 1,700 ಜನರು ಗಾಯಗೊಂಡಿದ್ದು, ಅವರಲ್ಲಿ 1,000 ಜನರು ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ. ಕಠ್ಮಂಡು ಕಣಿವೆಯಲ್ಲಿ ಹಾನಿಗೊಳಗಾಗಿದ್ದ ಪೊಲೀಸ್ ಠಾಣೆಗಳು ನಿಧಾನವಾಗಿ ಮತ್ತೆ ಕಾರ್ಯಾರಂಭ ಮಾಡುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ದೇಶಾದ್ಯಂತ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಸೇನೆಯನ್ನು ನಿಯೋಜಿಸಲಾಗಿದೆ.

Read More
Next Story