
ಗಾಜಾ ನಿರಾಶ್ರಿತ ಕೇಂದ್ರದ ಬಳಿ ಮಕ್ಕಳು ಆಟವಾಡುತ್ತಿರುವ ದೃಶ್ಯ
ಗಾಜಾ ಕದನ ವಿರಾಮ 'ಇಸ್ರೇಲ್ ಸೇನೆ ನಿರ್ಗಮನವಿಲ್ಲದೆ ಶಾಂತಿ ಅಸಾಧ್ಯ: ಕತಾರ್ ಪ್ರಧಾನಿ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 20 ಅಂಶಗಳ ಶಾಂತಿ ಯೋಜನೆಯಡಿ ಮೊದಲ ಹಂತದಲ್ಲಿ ಯುದ್ಧ ನಿಲ್ಲಿಸಿ, ಒತ್ತೆಯಾಳುಗಳು ಮತ್ತು ಖೈದಿಗಳ ವಿನಿಮಯ ಮಾಡಿಕೊಳ್ಳಲಾಗಿತ್ತು.
ಗಾಜಾ ಪಟ್ಟಿಯಲ್ಲಿ ಜಾರಿಯಲ್ಲಿರುವ ಕದನ ವಿರಾಮದ ಮೊದಲ ಹಂತ ಮುಕ್ತಾಯದ ಹಂತ ತಲುಪಿದ್ದು, ಇದೊಂದು "ಅತ್ಯಂತ ನಿರ್ಣಾಯಕ ಕ್ಷಣ" ಎಂದು ಕತಾರ್ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ ರಹಮಾನ್ ಅಲ್ ಥಾನಿ ಎಚ್ಚರಿಸಿದ್ದಾರೆ. ಇಸ್ರೇಲ್ ಸೇನೆ ಗಾಜಾದಿಂದ ಸಂಪೂರ್ಣವಾಗಿ ಹಿಂದೆ ಸರಿಯದ ಹೊರತು ಈ ಕದನ ವಿರಾಮ ಪ್ರಕ್ರಿಯೆ ಪೂರ್ಣಗೊಳ್ಳುವುದಿಲ್ಲ ಎಂದು ಅವರು ಶನಿವಾರ ಸ್ಪಷ್ಟಪಡಿಸಿದ್ದಾರೆ
ದೋಹಾ ಫೋರಂನಲ್ಲಿ ಮಾತನಾಡಿದ ಕತಾರ್ ಪ್ರಧಾನಿ, "ನಾವು ಪ್ರಸ್ತುತ ಸಾಧಿಸಿರುವುದು ಕೇವಲ ಯುದ್ಧದ ವಿರಾಮ (Pause) ಮಾತ್ರ. ಇದನ್ನು ಇನ್ನೂ ಪೂರ್ಣ ಪ್ರಮಾಣದ ಕದನ ವಿರಾಮ ಎಂದು ಕರೆಯಲು ಸಾಧ್ಯವಿಲ್ಲ. ಅಮೆರಿಕ ನೇತೃತ್ವದ ಅಂತಾರಾಷ್ಟ್ರೀಯ ಮಧ್ಯವರ್ತಿಗಳು ಒಪ್ಪಂದದ ಎರಡನೇ ಹಂತವನ್ನು ಜಾರಿಗೊಳಿಸಲು ಒತ್ತಡ ಹೇರುತ್ತಿದ್ದಾರೆ," ಎಂದು ಹೇಳಿದರು. ಇಸ್ರೇಲ್ ಪಡೆಗಳ ಸಂಪೂರ್ಣ ಹಿಂತೆಗೆತ, ಗಾಜಾದಲ್ಲಿ ಸ್ಥಿರತೆ ಮತ್ತು ಜನರ ಮುಕ್ತ ಸಂಚಾರ ಸಾಧ್ಯವಾದಾಗ ಮಾತ್ರ ಕದನ ವಿರಾಮ ಅರ್ಥಪೂರ್ಣವಾಗುತ್ತದೆ ಎಂದು ಅವರು ಪ್ರತಿಪಾದಿಸಿದರು.
ಟ್ರಂಪ್ ಶಾಂತಿ ಯೋಜನೆ ಮತ್ತು ಮುಂದಿನ ಹಂತ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 20 ಅಂಶಗಳ ಶಾಂತಿ ಯೋಜನೆಯಡಿ ಮೊದಲ ಹಂತದಲ್ಲಿ ಯುದ್ಧ ನಿಲ್ಲಿಸಿ, ಒತ್ತೆಯಾಳುಗಳು ಮತ್ತು ಖೈದಿಗಳ ವಿನಿಮಯ ಮಾಡಿಕೊಳ್ಳಲಾಗಿತ್ತು. ಇದೀಗ ಎರಡನೇ ಹಂತ ಜಾರಿಯಾಗಬೇಕಿದೆ. ಈ ಹಂತದಲ್ಲಿ ಗಾಜಾದಲ್ಲಿ ಅಂತಾರಾಷ್ಟ್ರೀಯ ಭದ್ರತಾ ಪಡೆಯ ನಿಯೋಜನೆ, ಹಮಾಸ್ ನಿಶ್ಯಸ್ತ್ರೀಕರಣ, ಹೊಸ ತಾಂತ್ರಿಕ ಸರ್ಕಾರದ ರಚನೆ ಮತ್ತು ಇಸ್ರೇಲ್ ಪಡೆಗಳ ನಿರ್ಗಮನ ಸೇರಿದೆ. ಆದರೆ, ಈ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ.
ಕದನ ವಿರಾಮದ ನಡುವೆಯೂ ಸಾವು-ನೋವು
ಅಕ್ಟೋಬರ್ 10ರಂದು ಕದನ ವಿರಾಮ ಜಾರಿಗೆ ಬಂದಿದ್ದರೂ, ಅಂದಿನಿಂದ ಇಂದಿನವರೆಗೆ ಇಸ್ರೇಲ್ ದಾಳಿಯಲ್ಲಿ 360ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ ಎಂದು ಗಾಜಾ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಶನಿವಾರ ಕೂಡ ಗಾಜಾ ನಗರದ ವಾಯುವ್ಯ ಭಾಗದಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
70,000ಕ್ಕೂ ಹೆಚ್ಚು ಜನರ ಸಾವು
2023ರ ಅಕ್ಟೋಬರ್ 7ರಂದು ಹಮಾಸ್ ದಾಳಿಯ ನಂತರ ಆರಂಭವಾದ ಇಸ್ರೇಲ್-ಹಮಾಸ್ ಯುದ್ಧದಲ್ಲಿ ಈವರೆಗೆ 70,000ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಪ್ರಾಣ ಕಳೆದುಕೊಂಡಿದ್ದಾರೆ. ಮೃತರಲ್ಲಿ ಅರ್ಧದಷ್ಟು ಮಹಿಳೆಯರು ಮತ್ತು ಮಕ್ಕಳಿದ್ದಾರೆ ಎಂದು ವರದಿಗಳು ತಿಳಿಸಿವೆ. ಪ್ಯಾಲೆಸ್ಟೀನ್ ಪ್ರತ್ಯೇಕ ರಾಷ್ಟ್ರವಾಗುವವರೆಗೂ ಈ ಭಾಗದಲ್ಲಿ ಶಾಶ್ವತ ಶಾಂತಿ ಅಸಾಧ್ಯ ಎಂದು ಕತಾರ್ ಅಭಿಪ್ರಾಯಪಟ್ಟಿದೆ.
ಟರ್ಕಿ ಕಳವಳ
ಇದೇ ವೇಳೆ, ಟರ್ಕಿ ವಿದೇಶಾಂಗ ಸಚಿವ ಹಕನ್ ಫಿದಾನ್ ಮಾತನಾಡಿ, ಗಾಜಾದಲ್ಲಿ ನಿಯೋಜಿಸಲು ಉದ್ದೇಶಿಸಿರುವ ಅಂತಾರಾಷ್ಟ್ರೀಯ ಭದ್ರತಾ ಪಡೆಯ ಬಗ್ಗೆ ಹಲವು ಪ್ರಶ್ನೆಗಳಿವೆ ಎಂದಿದ್ದಾರೆ. ಯಾವ ದೇಶಗಳು ಇದರಲ್ಲಿ ಪಾಲ್ಗೊಳ್ಳುತ್ತವೆ, ಅದರ ನೇತೃತ್ವ ಯಾರು ವಹಿಸುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಅವರು ಹೇಳಿದ್ದಾರೆ.

