Fire at COP30 summit in Brazil: 21 injured, talks disrupted
x
ಬ್ರೆಜಿಲ್‌ನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಬೆಂಕಿ ನಂದಿಸುತ್ತಿರುವ ಭದ್ರತಾಪಡೆ

ಬ್ರೆಜಿಲ್‌ನ ಕಾಪ್-30 ಶೃಂಗಸಭೆಯಲ್ಲಿ ಅಗ್ನಿ ಅವಘಡ: 21 ಮಂದಿಗೆ ಗಾಯ, ಮಾತುಕತೆಗೆ ಅಡ್ಡಿ

ದಟ್ಟವಾದ ಕಪ್ಪು ಹೊಗೆ ಆವರಿಸುತ್ತಿದ್ದಂತೆಯೇ ಸಾವಿರಾರು ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜೀವ ಭಯದಿಂದ ಸುರಕ್ಷಿತ ಸ್ಥಳಗಳಿಗೆ ಓಡಿದ್ದಾರೆ. "ಘಟನೆಯಲ್ಲಿ 13 ಜನರು ಹೊಗೆಯಿಂದಾಗಿ ಅಸ್ವಸ್ಥರಾಗಿದ್ದು ಸ್ಥಳದಲ್ಲೇ ಚಿಕಿತ್ಸೆ ನೀಡಲಾಗಿದೆ.


Click the Play button to hear this message in audio format

ಬ್ರೆಜಿಲ್‌ನ ಬೆಲೆಮ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ವಿಶ್ವಸಂಸ್ಥೆಯ ಕಾಪ್-30 (COP30) ಹವಾಮಾನ ಶೃಂಗಸಭೆಯ ಪ್ರಮುಖ ವೇದಿಕೆಯಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದ ಹಠಾತ್ ಅಗ್ನಿ ಅವಘಡದಿಂದಾಗಿ 21 ಮಂದಿ ಗಾಯಗೊಂಡಿದ್ದಾರೆ. ಈ ಘಟನೆಯು ಶೃಂಗಸಭೆಯಲ್ಲಿ ಭಾರೀ ಆತಂಕ ಸೃಷ್ಟಿಸಿದ್ದು, ನಿರ್ಣಾಯಕ ಹವಾಮಾನ ಮಾತುಕತೆಗಳಿಗೆ ಅಡ್ಡಿಯುಂಟುಮಾಡಿದೆ.

ಶೃಂಗಸಭೆಯ 'ಬ್ಲೂ ಜೋನ್' (Blue Zone) ಎಂದು ಕರೆಯಲ್ಪಡುವ ಪ್ರಮುಖ ಪ್ರದೇಶದಲ್ಲಿ ಗುರುವಾರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತು. ಈ ಪ್ರದೇಶದಲ್ಲಿ ಎಲ್ಲಾ ಪ್ರಮುಖ ಸಭೆಗಳು, ಮಾತುಕತೆಗಳು, ವಿವಿಧ ದೇಶಗಳ ಪೆವಿಲಿಯನ್‌ಗಳು, ಮಾಧ್ಯಮ ಕೇಂದ್ರಗಳು ಮತ್ತು ವಿಶ್ವ ನಾಯಕರ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದವು. ಬ್ರೆಜಿಲ್‌ನ ಪ್ರವಾಸೋದ್ಯಮ ಸಚಿವ ಸೆಲ್ಸೊ ಸಬಿನೊ ಪ್ರಕಾರ, ಮೈಕ್ರೋವೇವ್ ಅಥವಾ ಜನರೇಟರ್‌ನಲ್ಲಿನ ವಿದ್ಯುತ್ ದೋಷದಿಂದ ಈ ಅಗ್ನಿ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

ಗಾಬರಿಯಿಂದ ಓಡಿದ ಪ್ರತಿನಿಧಿಗಳು

ದಟ್ಟವಾದ ಕಪ್ಪು ಹೊಗೆ ಆವರಿಸುತ್ತಿದ್ದಂತೆಯೇ ಸಾವಿರಾರು ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜೀವ ಭಯದಿಂದ ಸುರಕ್ಷಿತ ಸ್ಥಳಗಳಿಗೆ ಓಡಿದ್ದಾರೆ. "ಘಟನೆಯಲ್ಲಿ 13 ಜನರು ಹೊಗೆಯಿಂದಾಗಿ ಅಸ್ವಸ್ಥರಾಗಿದ್ದು ಸ್ಥಳದಲ್ಲೇ ಚಿಕಿತ್ಸೆ ನೀಡಲಾಗಿದೆ. ಒಟ್ಟು 21 ಜನರು ವೈದ್ಯಕೀಯ ನೆರವು ಪಡೆದಿದ್ದಾರೆ," ಎಂದು ಬ್ರೆಜಿಲ್ ಆರೋಗ್ಯ ಸಚಿವಾಲಯ ದೃಢಪಡಿಸಿದೆ. ಅದೃಷ್ಟವಶಾತ್, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಮತ್ತು ಭಾರತದ ಪರಿಸರ ಸಚಿವ ಭೂಪೇಂದರ್ ಯಾದವ್ ಸೇರಿದಂತೆ ಗಣ್ಯರು ಸುರಕ್ಷಿತವಾಗಿ ಹೊರಬಂದಿದ್ದಾರೆ.

6 ನಿಮಿಷದಲ್ಲಿ ಬೆಂಕಿ ನಿಯಂತ್ರಣ

ಸ್ಥಳದಲ್ಲಿದ್ದ ಅಗ್ನಿಶಾಮಕ ದಳ ಮತ್ತು ವಿಶ್ವಸಂಸ್ಥೆಯ ಭದ್ರತಾ ಸಿಬ್ಬಂದಿ ತ್ವರಿತವಾಗಿ ಕಾರ್ಯಪ್ರವೃತ್ತರಾಗಿ ಕೇವಲ 6 ನಿಮಿಷಗಳಲ್ಲಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಆದಾಗ್ಯೂ, ಮುನ್ನೆಚ್ಚರಿಕೆ ಕ್ರಮವಾಗಿ ಇಡೀ 'ಬ್ಲೂ ಜೋನ್' ಅನ್ನು ತಾತ್ಕಾಲಿಕವಾಗಿ ಮುಚ್ಚಲಾಯಿತು. ಸಂಜೆ 8:40ರ ವೇಳೆಗೆ ಸುರಕ್ಷತಾ ಪರಿಶೀಲನೆಯ ನಂತರ ಸ್ಥಳವನ್ನು ಮತ್ತೆ ತೆರೆಯಲಾಯಿತು ಎಂದು ಕಾಪ್-30 ಆಯೋಜಕರು ತಿಳಿಸಿದ್ದಾರೆ.

ನಿರ್ಣಾಯಕ ಮಾತುಕತೆಗೆ ಪೆಟ್ಟು

ಶೃಂಗಸಭೆಯು ಶುಕ್ರವಾರ ಮುಕ್ತಾಯಗೊಳ್ಳಬೇಕಿದ್ದು, ಅಂತಿಮ ಹಂತದ ನಿರ್ಣಾಯಕ ಮಾತುಕತೆಗಳು ನಡೆಯುತ್ತಿದ್ದ ಸಮಯದಲ್ಲೇ ಈ ಅವಘಡ ಸಂಭವಿಸಿದೆ. ಪೆವಿಲಿಯನ್‌ಗಳಲ್ಲಿನ ಅಲಂಕಾರಿಕ ಬಟ್ಟೆಗಳಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಅದು ವೇಗವಾಗಿ ಹಬ್ಬಿತು ಎಂದು ವರದಿಯಾಗಿದೆ. ಈ ಘಟನೆಯಿಂದಾಗಿ ಇಡೀ ದಿನದ ಕಾರ್ಯಕ್ರಮಗಳು ರದ್ದಾಗಿದ್ದು, ಹವಾಮಾನ ಬದಲಾವಣೆ ತಡೆಗಟ್ಟುವ ನಿಟ್ಟಿನಲ್ಲಿ ಅಂತಿಮ ಒಪ್ಪಂದಕ್ಕೆ ಬರಲು ಸಮಯದ ಅಭಾವ ಎದುರಾಗಿದೆ.

ಮಳೆ ತಂದಿಟ್ಟ ಮತ್ತಷ್ಟು ಸಂಕಷ್ಟ

ಬೆಂಕಿ ಅವಘಡದಿಂದ ಹೊರಗೆ ಓಡಿ ಬಂದಿದ್ದ ಸಾವಿರಾರು ಪ್ರತಿನಿಧಿಗಳಿಗೆ ನಂತರ ಸುರಿದ ಭಾರಿ ಮಳೆ ಮತ್ತಷ್ಟು ಸಂಕಷ್ಟ ತಂದೊಡ್ಡಿತ್ತು. ಈ ಎಲ್ಲಾ ಅನಿಶ್ಚಿತತೆಗಳ ನಡುವೆಯೂ, ಹವಾಮಾನ ಬಿಕ್ಕಟ್ಟನ್ನು ಎದುರಿಸಲು ಜಗತ್ತಿನ 190ಕ್ಕೂ ಹೆಚ್ಚು ದೇಶಗಳು ಒಮ್ಮತದ ನಿರ್ಧಾರಕ್ಕೆ ಬರಲು ಪ್ರಯತ್ನಿಸುತ್ತಿವೆ.

Read More
Next Story