ವಿಶ್ವದ ಮೊದಲ ಟ್ರಿಲಿಯನೇರ್ ಎಲಾನ್ ಮಸ್ಕ್; SpaceX IPO ಬಳಿಕ ಆಸ್ತಿ 1.1 ಟ್ರಿಲಿಯನ್ ಡಾಲರ್‌ಗೆ ಏರಿಕೆ
x

ವಿಶ್ವದ ಮೊದಲ ಟ್ರಿಲಿಯನೇರ್ ಎಲಾನ್ ಮಸ್ಕ್; SpaceX IPO ಬಳಿಕ ಆಸ್ತಿ 1.1 ಟ್ರಿಲಿಯನ್ ಡಾಲರ್‌ಗೆ ಏರಿಕೆ

SpaceX IPO ಬಳಿಕ ಎಲಾನ್ ಮಸ್ಕ್ ವಿಶ್ವದ ಮೊದಲ ಟ್ರಿಲಿಯನೇರ್ ಆಗಿದ್ದಾರೆ ಎಂದು ಫೋರ್ಬ್ಸ್ ಘೋಷಿಸಿದೆ. ಮಸ್ಕ್ ಅವರ ಒಟ್ಟು ಆಸ್ತಿ ಮೌಲ್ಯ 1.1 ಟ್ರಿಲಿಯನ್ ಡಾಲರ್ ತಲುಪಿದೆ.


ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಖ್ಯಾತ ವ್ಯವಹಾರ ಪತ್ರಿಕೆ Forbes, ಜೂನ್ 12ರಂದು ಎಲಾನ್‌ ಮಸ್ಕ್‌ ಅವರನ್ನು ವಿಶ್ವದ ಮೊದಲ ಟ್ರಿಲಿಯನೇರ್ ಎಂದು ಘೋಷಿಸಿದೆ. ಮಸ್ಕ್ ಅವರ ಬಾಹ್ಯಾಕಾಶ ಸಂಸ್ಥೆ ಸ್ಪೇಸ್‌ ಎಕ್ಸ್‌ನ ಪ್ರತಿ ಷೇರಿಗೆ 150 ಡಾಲರ್ ದರದಲ್ಲಿ ವಹಿವಾಟು ಆರಂಭಿಸಿದ ಬಳಿಕ ಕಂಪನಿಯ ಮಾರುಕಟ್ಟೆ ಮೌಲ್ಯ ಸುಮಾರು 2 ಟ್ರಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ಇದರ ಪರಿಣಾಮವಾಗಿ ಮಸ್ಕ್ ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು 1.1 ಟ್ರಿಲಿಯನ್ ಡಾಲರ್ ತಲುಪಿದೆ ಎಂದು ಫೋರ್ಬ್ಸ್ ಅಂದಾಜಿಸಿದೆ.

ಇದಕ್ಕೂ ಮುನ್ನ IPO ಬೆಲೆಯನ್ನು ಪ್ರತಿ ಷೇರಿಗೆ 135 ಡಾಲರ್ ಎಂದು ನಿಗದಿಪಡಿಸಿದಾಗಲೇ ಮಸ್ಕ್ ಅವರ ಸಂಪತ್ತಿನಲ್ಲಿ ಒಂದೇ ದಿನದಲ್ಲಿ ಸುಮಾರು 188 ಬಿಲಿಯನ್ ಡಾಲರ್ ಹೆಚ್ಚಳ ಕಂಡುಬಂದಿತ್ತು. ಆಗ ಅವರ ಆಸ್ತಿ ಮೌಲ್ಯ ಸುಮಾರು 982 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿತ್ತು.

SpaceXನಲ್ಲಿ ಮಸ್ಕ್ ಪಾಲು ಎಷ್ಟು?

ಫೋರ್ಬ್ಸ್ ವರದಿ ಪ್ರಕಾರ, ಸ್ಪೇಸ್‌ ಎಕ್ಸ್‌ ಸಂಸ್ಥೆಯ ಅಧ್ಯಕ್ಷ, ಸಿಇಒ ಹಾಗೂ ಮುಖ್ಯ ತಾಂತ್ರಿಕ ಅಧಿಕಾರಿಯಾಗಿರುವ ಮಸ್ಕ್ ಕಂಪನಿಯ 4.8 ಬಿಲಿಯನ್ ಷೇರುಗಳನ್ನು ಹೊಂದಿದ್ದಾರೆ. ಇದರ ಮೌಲ್ಯ ಸುಮಾರು 715 ಬಿಲಿಯನ್ ಡಾಲರ್ ಆಗಿದೆ. ಇದರ ಜೊತೆಗೆ, ಅವರ ಬಳಿ ಸುಮಾರು 350 ಮಿಲಿಯನ್ ಸ್ಟಾಕ್ ಆಪ್ಷನ್‌ಗಳು ಇದ್ದು, ಅವುಗಳ ಮೌಲ್ಯ ಸುಮಾರು 50 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಒಟ್ಟಾರೆಯಾಗಿ SpaceXನಲ್ಲಿ ಮಸ್ಕ್ ಸುಮಾರು 38 ಶೇಕಡಾ ಪಾಲುದಾರಿಕೆ ಹೊಂದಿದ್ದಾರೆ.

2 ಬಿಲಿಯನ್‌ನಿಂದ 1 ಟ್ರಿಲಿಯನ್ ಡಾಲರ್ ತನಕ

ಎಲಾನ್ ಮಸ್ಕ್ ಮೊದಲ ಬಾರಿಗೆ 2012ರಲ್ಲಿ ಫೋರ್ಬ್ಸ್ ಪ್ರಕಟಿಸಿದ ವಿಶ್ವದ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು 2 ಬಿಲಿಯನ್ ಡಾಲರ್ ಆಗಿದ್ದು, ವಿಶ್ವದ 634ನೇ ಶ್ರೀಮಂತ ವ್ಯಕ್ತಿಯಾಗಿದ್ದರು.

ಅದಾದ ಬಳಿಕ ಟೆಸ್ಲಾ ಕಂಪನಿಯ ಷೇರುಗಳು ಭಾರೀ ಏರಿಕೆ ಕಂಡ ಹಿನ್ನೆಲೆಯಲ್ಲಿ ಕೇವಲ ಒಂಬತ್ತು ವರ್ಷಗಳಲ್ಲೇ ಮಸ್ಕ್ ವಿಶ್ವದ ಅತಿ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದರು. 2021ರ ಜನವರಿಯಲ್ಲಿ ಅವರು ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ್ದರು. ಈಗ ಸ್ಪೇಸ್‌ ಎಕ್ಸ್‌ ಯಶಸ್ಸಿನೊಂದಿಗೆ ಮಸ್ಕ್ ಟ್ರಿಲಿಯನ್ ಡಾಲರ್ ಆಸ್ತಿ ಮೌಲ್ಯ ದಾಟಿದ ಮೊದಲ ವ್ಯಕ್ತಿಯಾಗಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

Read More
Next Story