ಇಬ್ರಾಹಿಂ ರೈಸಿ:  ಟೆಹ್ರಾನ್‌ನ ಕಟುಕ, ಸಂಪ್ರದಾಯವಾದಿ, ಕಠಿಣ ಹೃದಯಿ ನಾಯಕ
x

ಇಬ್ರಾಹಿಂ ರೈಸಿ: ಟೆಹ್ರಾನ್‌ನ ಕಟುಕ, ಸಂಪ್ರದಾಯವಾದಿ, ಕಠಿಣ ಹೃದಯಿ ನಾಯಕ

ಇಬ್ರಾಹಿಂ ರೈಸಿ ಪ್ರತಿಭಟನೆಯನ್ನು ಕ್ರೂರವಾಗಿ ಹತ್ತಿಕ್ಕಿದರು. ಭದ್ರತಾ ಪಡೆಗಳು ನೂರಾರು ಜನರನ್ನು ಕೊಂದವು ಮತ್ತು ಸಾವಿರಾರು ಮಂದಿಯನ್ನು ಬಂಧಿಸಿದವು. ಏಳು ಜನರನ್ನು ಗಲ್ಲಿಗೇರಿಸಲಾಯಿತು. ಇದರಿಂದ ಅಮೆರಿಕ ಮತ್ತಿತರ ದೇಶಗಳು ಇರಾನ್ ಮೇಲೆ ಹೆಚ್ಚುವರಿ ನಿರ್ಬಂಧ ಹೇರಿದವು.


ಇರಾನಿನಲ್ಲಿ ಸೆಪ್ಟೆಂಬರ್ 2022 ರಲ್ಲಿ ವಸ್ತ್ರಸಂಹಿತೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ಬಂಧಿತಳಾಗಿದ್ದ ಮಹ್ಸಾ ಅಮಿನಿ(22)ಯ ಸಾವು ದಂಗೆಗೆ ಕಾರಣವಾಯಿತು. ಮಹಿಳೆಯರು ಮತ್ತು ಯುವಜನರ ನೇತೃತ್ವದಲ್ಲಿ ಸಾವಿರಾರು ಇರಾನಿಯನ್ನರು ಬೀದಿಗಿಳಿದು, ದಮನಕಾರಿ ಆಡಳಿತ ಮತ್ತು ಆರ್ಥಿಕ ಕುಸಿತದ ವಿರುದ್ಧ ಪ್ರತಿಭಟಿಸಿದರು. ಇರಾನ್‌ನಲ್ಲಿ ತಿಂಗಳುಗಟ್ಟಲೆ ಪ್ರತಿಭಟನೆ ನಡೆದು, ಮಹಿಳೆಯರು ಹಿಜಾಬ್‌ ಸುಟ್ಟುಹಾಕಿದರು ಮತ್ತು ಕೂದಲು ಕತ್ತರಿಸಿದರು.

ಇಬ್ರಾಹಿಂ ರೈಸಿ ಕೇವಲ ಒಂದು ವರ್ಷದ ಹಿಂದೆ ಅಧ್ಯಕ್ಷರಾಗಿ ಚುನಾಯಿತರಾಗಿದ್ದರು. ಪ್ರತಿಭಟನೆಯನ್ನು ಕ್ರೂರವಾಗಿ ಹತ್ತಿಕ್ಕಿದರು. ಭದ್ರತಾ ಪಡೆಗಳು ನೂರಾರು ಜನರನ್ನು ಕೊಂದವು ಮತ್ತು ಸಾವಿರಾರು ಮಂದಿಯನ್ನು ಬಂಧಿಸಿದರು. ಏಳು ಜನರನ್ನು ಗಲ್ಲಿಗೇರಿಸಲಾಯಿತು. ಇದರಿಂದ ಅಮೆರಿಕ ಮತ್ತಿತರ ದೇಶಗಳು ಇರಾನ್ ಮೇಲೆ ಹೆಚ್ಚುವರಿ ನಿರ್ಬಂಧ ಹೇರಿದವು.

ಟೆಹ್ರಾನ್‌ನ ಕಟುಕ: ಇರಾನ್‌ನ ರಾಜಕೀಯ ವಲಯದಲ್ಲಿ ಪ್ರಬಲ, ವಿವಾದಾತ್ಮಕ ವ್ಯಕ್ತಿಯಾದ ಅವರನ್ನು ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ(85) ಅವರ ಉತ್ತರಾಧಿಕಾರಿ ಎಂದು ಪರಿಗಣಿತರಾಗಿದ್ದ ಅವರು ಅಂತಾರಾಷ್ಟ್ರೀಯ ಸಮುದಾಯದ ಪ್ರತಿಕ್ರಿಯೆಗಳಿಂದ ಹಿಂಜರಿಯಲಿಲ್ಲ.

1988 ರಲ್ಲಿ ರಾಜಕೀಯ ಖೈದಿಗಳ ಸರಣಿ ಮರಣದಂಡನೆಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಸಮುದಾಯದಿಂದ ತೀವ್ರ ಖಂಡನೆ ಎದುರಿಸಿದರು. ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಸಂಸ್ಥೆ ರೈಸಿಯನ್ನು ʻಸಾವಿನ ಆಯೋಗದ ಸದಸ್ಯʼ ಎಂದಿತು. ಖೊಮೇನಿಯ ಆದೇಶದ ಮೇರೆಗೆ ಸಾವಿರಾರು ಮಂದಿಯನ್ನು ʻಬಲವಂತವಾಗಿ ಕಣ್ಮರೆ ಮಾಡಲಾಯಿತು,ʼ ಮತ್ತು ಟೆಹ್ರಾನಿನ ಜೈಲುಗಳಲ್ಲಿ ಸಾವಿರಾರು ಭಿನ್ನಮತೀಯರನ್ನು ಗಲ್ಲಿಗೇರಿಸಿತು ಎಂದು ಆಮ್ನೆಸ್ಟಿ ಹೇಳಿತು. ಇದು ಅವರಿಗೆ 'ಟೆಹ್ರಾನಿನ ಕಟುಕ' ಎಂಬ ಹೆಸರು ತಂದುಕೊಟ್ಟಿತು. 2019 ರಲ್ಲಿ ಕೂಡ ಅಮೆರಿಕ ಇರಾನಿನ ಮೇಲೆ ದಿಗ್ಬಂಧನ ವಿಧಿಸಿತು.

ರೈಸಿ ಅವರ ಅಧಿಕಾರಾವಧಿ: ಇರಾನ್‌ನ ಅಧ್ಯಕ್ಷರಾಗಿ ರೈಸಿ ಅವರ ಮೂರು ವರ್ಷಗಳ ಅಧಿಕಾರಾವಧಿ ಭುಗಿಲೇಳುವಂತೆ ಇದ್ದಿತ್ತು. ಮಹಿಳೆಯರಿಗೆ ವಸ್ತ್ರಸಂಹಿತೆ, ಸರ್ಕಾರ ವಿರೋಧಿ ಪ್ರತಿಭಟನೆಗಳನ್ನು ಕ್ರೂರವಾಗಿ ಹತ್ತಿಕ್ಕುವುದಲ್ಲದೆ, ಅಂತಾರಾಷ್ಟ್ರೀಯ ನಿರ್ಬಂಧಗಳು ಮತ್ತು ಹೆಚ್ಚಿನ ನಿರುದ್ಯೋಗದಿಂದ ಅಶಾಂತಿ ಸೃಷ್ಠಿಯಾಗಿತ್ತ. ಅವರು 2021 ರಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗ, ದೇಶ ತೊಂದ ರೆಯಲ್ಲಿತ್ತು. ಸಾಂಕ್ರಾಮಿಕದ ನಂತರ ಆರ್ಥಿಕ ಬಿಕ್ಕಟ್ಟು, ಇಸ್ರೇಲ್ ಮತ್ತು ಪಾಶ್ಚಿಮಾತ್ಯ ದೇಶಗಳೊಂದಿಗೆ ಸಂಘರ್ಷಕ್ಕೆ ಸಿಲುಕಿತು.

ರೈಸಿಯ ಅಧ್ಯಕ್ಷತೆಯಲ್ಲಿ ಇಸ್ರೇಲ್‌ ಮೇಲೆ ಇರಾನ್‌ ಮೊದಲ ನೇರ ದಾಳಿ ನಡೆಸಿತು. ಏಪ್ರಿಲ್‌ನಲ್ಲಿ ಡಮಾಸ್ಕಸ್‌ನಲ್ಲಿರುವ ಇರಾನಿನ ಕಾನ್ಸುಲರ್ ಕಟ್ಟಡದ ಮೇಲೆ ದಾಳಿ ನಡೆಸಿ, ಉನ್ನತ ಕಮಾಂಡರ್ ಮತ್ತು ಅವರ ಡೆಪ್ಯೂಟಿ ಸೇರಿದಂತೆ ಏಳು ಜನರನ್ನು ಕೊಂದ ನಂತರ ಉದ್ವಿಗ್ನತೆ ಹೆಚ್ಚಿತು. ಇರಾನ್ ಏಪ್ರಿಲ್ 15 ರಂದು ಇಸ್ರೇಲಿನ ಮೇಲೆ 120 ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿಗಳು, 170 ಡ್ರೋನ್‌ಗಳು ಮತ್ತು 30 ಕ್ಕೂ ಹೆಚ್ಚು ಕ್ರೂಸ್ ಕ್ಷಿಪಣಿಗಳೊಂದಿಗೆ ದಾಳಿ‌ ನಡೆಸಿತು.

ಸಂಭಾವ್ಯ ಉತ್ತರಾಧಿಕಾರಿ: ನ್ಯಾಯಾಂಗದಲ್ಲಿ ಕಾರ್ಯ ನಿರ್ವಹಿಸುತ್ತದ್ದ ರೈಸಿ(63), 2021 ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದರು. ಖಮೇನಿಯವರ ಸಂಭಾವ್ಯ ಉತ್ತರಾಧಿಕಾರಿ ಎಂದು ಅವರನ್ನು ಪರಿಗಣಿಸಲಾಗಿತ್ತು.ಈಶಾನ್ಯ ಇರಾನಿನ ನಗರ ಮಶಾದ್‌ನ ಧಾರ್ಮಿಕ ಕುಟುಂಬದಲ್ಲಿ 1960ರಲ್ಲಿ ಜನಿಸಿದರು. 1979 ರಲ್ಲಿ ರಾಜಪ್ರಭುತ್ವವನ್ನು ಉರುಳಿಸಿದ ಇಸ್ಲಾಮಿಕ್ ಕ್ರಾಂತಿಯಲ್ಲಿ ಪಾಲ್ಗೊಂಡಿದ್ದರು. ಪ್ರಸಿದ್ಧ ಕೋಮ್ ಧಾರ್ಮಿಕ ಸೆಮಿನರಿಯಲ್ಲಿ ಅಧ್ಯಯನದ ಬಳಿಕ 20 ನೇ ವಯಸ್ಸಿನಲ್ಲಿ ಕರಾಜ್ ನಗರದಲ್ಲಿ ಪ್ರಾಸಿಕ್ಯೂಟರ್ ಆಗಿ ನೇಮಕಗೊಂಡರು.

ಇಸ್ಲಾಮಿಕ್ ಗಣರಾಜ್ಯದ ಬೆಂಬಲಿಗರಾಗಿದ್ದ ಅವರು ಭ್ರಷ್ಟಾಚಾರ ವಿರೋಧಿ ಜನರಲ್ ಇನ್‌ಸ್ಪೆಕ್ಷನ್ ಆಫೀಸ್‌ನ ಮುಖ್ಯಸ್ಥ ಮತ್ತು ಪಾದ್ರಿಗಳಿಗಾಗಿ ವಿಶೇಷ ನ್ಯಾಯಾಲಯದ ಪ್ರಾಸಿಕ್ಯೂಟರ್ ಜನರಲ್ ಆಗಿದ್ದರು.1989 ರಲ್ಲಿ ಅಯತೊಲ್ಲಾ ರುಹೊಲ್ಲಾ ಖೊಮೇನಿ ಅವರ ಮರಣದ ನಂತರ ಅವರನ್ನು ಟೆಹ್ರಾನ್‌ನ ಪ್ರಾಸಿಕ್ಯೂಟರ್ ಆಗಿ ನೇಮಿಸಲಾಯಿತು. ಮಾರ್ಚ್ 7, 2016 ರಂದು ಮಶ್ಹದ್‌ನ ಅತಿ ದೊಡ್ಡ ಧಾರ್ಮಿಕ ದತ್ತಿಯಾದ ಅಸ್ತಾನ್ ಕುದ್ಸ್ ರಝಾವಿಯ ಅಧ್ಯಕ್ಷರಾದರು. ನ್ಯಾಯಾಂಗದ ಮುಖ್ಯಸ್ಥರಾಗಿ ಭ್ರಷ್ಟಾಚಾರ ವಿರೋಧಿ ನಾಯಕ ಎಂಬ ಇಮೇಜ್ ಬೆಳೆಸಿಕೊಂಡರು. ಸಂಪ್ರದಾಯವಾದಿ ಮತದಾರರು ಅವರನ್ನು ಪ್ರೀತಿಸುತ್ತಿದ್ದರು. ಜೂನ್ 2021 ರಲ್ಲಿ ಹಸನ್ ರೌಹಾನಿ ಅವರನ್ನು ಸೋಲಿಸುವ ಮೂಲಕ ಶೇ.62 ಮತ ಗಳಿಸಿದರು.

ಅವರು ಅಮೆರಿಕ ಅಥವಾ ಬೇರೆ ಪಶ್ಚಿಮದ ದೇಶಗಳೊಂದಿಗೆ ರಾಜತಾಂತ್ರಿಕವಾಗಿ ತೊಡಗಿಸಿಕೊಳ್ಳಲು ಎಂದೂ ಇಚ್ಛಿಸಲಿಲ್ಲ. ಡೊನಾಲ್ಡ್‌ ಟ್ರಂಪ್‌ ಪರಮಾಣು ಒಪ್ಪಂದವನ್ನು ಏಕಪಕ್ಷೀಯವಾಗಿ ರದ್ದುಪಡಿಸಿದ್ದರಿಂದ, ಇರಾನ್ ತನ್ನದೇ ಪರಮಾಣು ಕಾರ್ಯಕ್ರಮವನ್ನು ಆರಂಭಿಸುತ್ತಿದೆ ಎಂದು ಘೋಷಿಸಿದ್ದರು.

Read More
Next Story