ಭಾರತ, ಚೀನಾ ನಡುವೆ ಸಿಲುಕಲು ಬಯಸುವುದಿಲ್ಲ: ದಿಸ್ಸನಾಯಕೆ
x

ಭಾರತ, ಚೀನಾ ನಡುವೆ ಸಿಲುಕಲು ಬಯಸುವುದಿಲ್ಲ: ದಿಸ್ಸನಾಯಕೆ

ಶ್ರೀಲಂಕಾವನ್ನು ಭೌಗೋಳಿಕ ರಾಜಕೀಯ ಪೈಪೋಟಿಗೆ ಎಳೆಯಲು ಬಯಸುವುದಿಲ್ಲ; ರಾಜತಾಂತ್ರಿಕ ಪಾಲುದಾರಿಕೆಗಳನ್ನು ನಿರ್ಮಿಸುವುದರ ಮೇಲೆ ಕೇಂದ್ರೀಕರಿಸಲಾಗುತ್ತದೆ ಎಂದು ದಿಸ್ಸನಾಯಕೆ ಹೇಳಿದರು.


ಚೀನಾ ಮತ್ತು ಭಾರತ ಎರಡನ್ನೂ ಶ್ರೀಲಂಕಾ ಗೌರವಿಸುತ್ತದೆ. ಏಷ್ಯಾದ ಎರಡು ದೈತ್ಯರ ನಡುವೆ ಸ್ಯಾಂಡ್‌ವಿಚ್ ಆಗಲು ಬಯಸುವುದಿಲ್ಲ ಎಂದು ದೇಶದ ನೂತನ ಅಧ್ಯಕ್ಷ ಅನುರಾ ದಿಸ್ಸನಾಯಕೆ ಹೇಳಿದ್ದಾರೆ.

ಮೊನೊಕಲ್ ಮ್ಯಾಗಜಿನ್‌ಗೆ ನೀಡಿದ ಸಂದರ್ಶನದಲ್ಲಿ, ʻಭೌಗೋಳಿಕ ರಾಜಕೀಯ ಹೋರಾಟದಲ್ಲಿ ಪ್ರತಿಸ್ಪರ್ಧಿಯಾಗುವುದಿಲ್ಲ ಅಥವಾ ಯಾವುದೇ ಪಕ್ಷಕ್ಕೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ; ಚೀನಾ ಮತ್ತು ಭಾರತದ ಮಧ್ಯೆ ಸ್ಯಾಂಡ್‌ವಿಚ್ ಆಗಲು ಬಯಸುವುದಿಲ್ಲ,ʼ ಎಂದು ಹೇಳಿದ್ದಾರೆ.

ಭಾರತ, ಚೀನಾ ಮತ್ತು ಜಗತ್ತು: ʻಎರಡೂ ದೇಶಗಳು ಮೌಲ್ಯಯುತ ಸ್ನೇಹಿತರಾಗಿದ್ದು, ಅವರಿಬ್ಬರೂ ನಿಕಟ ಪಾಲುದಾರರಾಗಬೇಕೆಂದು ಎನ್‌ಪಿಪಿ ಸರ್ಕಾರ ನಿರೀಕ್ಷಿಸುತ್ತದೆ. ಯುರೋಪಿಯನ್‌ ಯೂನಿಯನ್, ಮಧ್ಯಪ್ರಾಚ್ಯ ಮತ್ತು ಆಫ್ರಿಕದೊಂದಿಗೆ ಸಂಬಂಧ ಉಳಿಸಿಕೊಳ್ಳಲು ಬಯಸುತ್ತೇವೆ,ʼ ಎಂದು ಹೇಳಿದರು.

ಸೋಮವಾರ ಅಧಿಕಾರ ವಹಿಸಿಕೊಂಡ ಅವರು, ಶ್ರೀಲಂಕಾ ಭೌಗೋಳಿಕ ರಾಜಕೀಯ ಪೈಪೋಟಿಗೆ ಇಳಿಯಲು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಶ್ರೀಲಂಕಾಕ್ಕೆ ತಟಸ್ಥತೆ ಅಗತ್ಯ: ನ್ಯಾಶನಲ್ ಪೀಪಲ್ಸ್ ಪವರ್ (ಎನ್‌ಪಿಪಿ) ಸರ್ಕಾರವು ಚೀನಾ ಮತ್ತು ಭಾರತ ಎರಡರೊಂದಿಗೂ ಸಮತೋಲಿತ ಸಂಬಂಧ ಬೆಳೆಸುತ್ತದೆ. ಎರಡೂ ದೇಶಗಳು ಶ್ರೀಲಂಕಾದ ನೆರೆಹೊರೆಯವರು. ಪ್ರಾದೇಶಿಕ ಉದ್ವಿಗ್ನತೆ ಮಧ್ಯೆ ಶ್ರೀಲಂಕಾ ತನ್ನ ಸಾರ್ವಭೌಮತ್ವವನ್ನು ಕಾಪಾಡಲು ಇಂತಹ ತಟಸ್ಥ ಧೋರಣೆ ಅತ್ಯಗತ್ಯ ಎಂದು ದಿಸ್ಸನಾಯಕೆ ಹೇಳಿದರು.

ಜಾಗತಿಕ ಮಹಾಶಕ್ತಿಗಳ ನಡುವಿನ ಅಧಿಕಾರದ ಹೋರಾಟದಲ್ಲಿ ಶ್ರೀಲಂಕಾ ಆಟಗಾರನಾಗುವುದಿಲ್ಲ; ಬದಲಿಗೆ, ಪರಸ್ಪರ ಪ್ರಯೋಜನಕಾರಿ ರಾಜತಾಂತ್ರಿಕ ಪಾಲುದಾರಿಕೆಗಳನ್ನು ನಿರ್ಮಿಸುವತ್ತ ಗಮನ ಹರಿಸುತ್ತದೆ ಎಂದು ಹೇಳಿದರು.

ಭಾರತೀಯ ಹಿತಾಸಕ್ತಿಗೆ ಧಕ್ಕೆ ತರುವುದಿಲ್ಲ: ʻಭಾರತದೊಟ್ಟಿಗೆ ನಮ್ಮ ಸಂಬಂಧವು ನಿಕಟ ಸಾಮೀಪ್ಯ ಮತ್ತು ಭೌಗೋಳಿಕ ರಾಜಕೀಯದಲ್ಲಿ ಅದರ ಮಹತ್ವದ ಪಾತ್ರವನ್ನು ಪ್ರತಿಬಿಂಬಿಸುತ್ತದೆ. ನಮ್ಮ ಭೂಮಿ ಮತ್ತು ವಾಯುಪ್ರದೇಶವನ್ನು ಭಾರತ ಅಥವಾ ಪ್ರಾದೇಶಿಕ ಸ್ಥಿರತೆಗೆ ಬೆದರಿಕೆ ಹಾಕುವ ರೀತಿಯಲ್ಲಿ ಬಳಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳುತ್ತೇವೆ,ʼ ಎಂದು ಹೇಳಿದರು.

ಚುನಾವಣೆ ಪ್ರಚಾರದ ಸಮಯದಲ್ಲೂ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾ ಮತ್ತು ಭಾರತದ ನಡುವಿನ ಸ್ಪರ್ಧೆ ಬಗ್ಗೆ ಶ್ರೀಲಂಕಾಗೆ ತಿಳಿದಿದೆ ಎಂದು ಹೇಳಿದ್ದರು.

Read More
Next Story