
ವೈಟ್‌ಹೌಸ್ ಪತ್ರಿಕಾ ಕಾರ್ಯದರ್ಶಿ ಕರೋಲಿನ್ ಲೆವಿಟ್ ರಾಜೀನಾಮೆ ನೀಡಲಿದ್ದಾರೆ.
ಡೊನಾಲ್ಡ್ ಟ್ರಂಪ್ ಪತ್ರಿಕಾ ಕಾರ್ಯದರ್ಶಿ ಕರೋಲಿನ್ ಲೆವಿಟ್ ರಾಜೀನಾಮೆ
ತಮ್ಮ ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಲು ವೈಟ್‌ಹೌಸ್ ಪತ್ರಿಕಾ ಕಾರ್ಯದರ್ಶಿ ಕರೋಲಿನ್ ಲೆವಿಟ್ ರಾಜೀನಾಮೆ ನೀಡಲಿದ್ದಾರೆ. ಟ್ರಂಪ್‌ರ ಹೊರಗಿನ ಸಲಹೆಗಾರರಾಗಿ ಮುಂದುವರಿಯಲಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವೈಟ್‌ಹೌಸ್ ಪತ್ರಿಕಾ ಕಾರ್ಯದರ್ಶಿ ಕರೋಲಿನ್ ಲೆವಿಟ್ ತಮ್ಮ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ. 28 ವರ್ಷದ ಲೆವಿಟ್ ಆಗಸ್ಟ್ ಅಂತ್ಯಕ್ಕೆ ವೈಟ್‌ಹೌಸ್ ತೊರೆಯಲಿದ್ದು, ಇನ್ನು ಮುಂದೆ ಟ್ರಂಪ್ ಅವರ ಪ್ರಮುಖ ಸಲಹೆಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಎರಡನೇ ಮಗುವಿನ ಜನನದ ಬಳಿಕ ಮೇ ತಿಂಗಳಲ್ಲಿ ಅಲ್ಪಾವಧಿಯ ರಜೆಯಲ್ಲಿದ್ದ ಲೆವಿಟ್ ಇತ್ತೀಚೆಗಷ್ಟೇ ವೈಟ್‌ಹೌಸ್ ಕರ್ತವ್ಯಕ್ಕೆ ಮರಳಿದ್ದರು. ಆದರೆ, ಇಬ್ಬರು ಚಿಕ್ಕ ಮಕ್ಕಳ ತಾಯಿಯಾಗಿ ಅವರಿಗೆ ಅಗತ್ಯವಿರುವ ಸಮಯ ನೀಡಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.
ತಮ್ಮ ನಿರ್ಧಾರವನ್ನು ‘ಕಹಿ-ಸಿಹಿ’ ನಿರ್ಧಾರ ಎಂದು ಬಣ್ಣಿಸಿರುವ ಲೆವಿಟ್, ತಮ್ಮ ಇಬ್ಬರು ಮಕ್ಕಳಿಗೆ ಅಗತ್ಯವಿರುವ ಅತ್ಯುತ್ತಮ ತಾಯಿಯಾಗಲು ಸಾಧ್ಯವಾಗುತ್ತಿಲ್ಲ ಎಂಬ ಭಾವನೆ ಮೂಡಿದ್ದರಿಂದ ಹೊಸ ಅಧ್ಯಾಯ ಆರಂಭಿಸಲು ನಿರ್ಧರಿಸಿರುವುದಾಗಿ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಟ್ರಂಪ್‌ರಿಂದ ಪ್ರಶಂಸೆ
ಲೆವಿಟ್ ಅವರ ನಿರ್ಧಾರವನ್ನು ಗೌರವಿಸಿರುವ ಅಧ್ಯಕ್ಷ ಟ್ರಂಪ್, ಅವರನ್ನು ತಮ್ಮ ಅತ್ಯಂತ ವಿಶ್ವಾಸಾರ್ಹ ಸಹಾಯಕರಲ್ಲಿ ಒಬ್ಬರು ಎಂದು ಕೊಂಡಾಡಿದ್ದಾರೆ. ಮಧ್ಯಂತರ ಚುನಾವಣೆಗಳಲ್ಲಿ ರಿಪಬ್ಲಿಕನ್ ಪಕ್ಷದ ಗೆಲುವಿಗಾಗಿ ಕೆಲಸ ಮಾಡುವ ಸಂದರ್ಭದಲ್ಲಿ ಲೆವಿಟ್ ಪ್ರಮುಖ ಹೊರಗಿನ ಸಲಹೆಗಾರರಾಗಿ ಹಾಗೂ ಪಕ್ಷದ ಪ್ರಭಾವಿ ಧ್ವನಿಯಾಗಿ ಮುಂದುವರಿಯಲಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ.
MAGA ಅಭಿಯಾನದ ಪ್ರಮುಖ ಮುಖ
ಲೆವಿಟ್ ಟ್ರಂಪ್ ಅವರ ‘Make America Great Again’ (MAGA) ಅಭಿಯಾನದ ಪ್ರಮುಖ ವಕ್ತಾರರಾಗಿ ಗುರುತಿಸಿಕೊಂಡಿದ್ದರು. ಟ್ರಂಪ್ ಪರ ಪ್ರಚಾರ ನಡೆಸುವ MAGA Inc. ಸೂಪರ್ PACನಲ್ಲಿ ವಕ್ತಾರರಾಗಿ ಕೆಲಸ ಮಾಡಿದ್ದ ಅವರು ಬಳಿಕ 2024ರ ಅಧ್ಯಕ್ಷೀಯ ಚುನಾವಣಾ ಪ್ರಚಾರ ತಂಡವನ್ನು ಸೇರಿಕೊಂಡಿದ್ದರು.
2022ರಲ್ಲಿ ನ್ಯೂ ಹ್ಯಾಂಪ್‌ಶೈರ್‌ನಿಂದ ಅಮೆರಿಕ ಕಾಂಗ್ರೆಸ್‌ಗೆ ಸ್ಪರ್ಧಿಸಿದ್ದ ಲೆವಿಟ್, 10 ಅಭ್ಯರ್ಥಿಗಳಿದ್ದ ರಿಪಬ್ಲಿಕನ್ ಪ್ರೈಮರಿಯಲ್ಲಿ ಗೆಲುವು ಸಾಧಿಸಿದ್ದರು. ಆದರೆ ಸಾರ್ವತ್ರಿಕ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಹಾಲಿ ಸಂಸದ ಕ್ರಿಸ್ ಪಪ್ಪಾಸ್ ವಿರುದ್ಧ ಸೋತಿದ್ದರು.
ಟ್ರಂಪ್ ಮೊದಲ ಅವಧಿಯಲ್ಲೂ ಕೆಲಸ
ಟ್ರಂಪ್ ಅವರ ಮೊದಲ ಅವಧಿಯಲ್ಲಿಯೂ ಲೆವಿಟ್ ವೈಟ್‌ಹೌಸ್ ಪತ್ರಿಕಾ ಕಚೇರಿಯಲ್ಲಿ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದರು. ನಂತರ ನ್ಯೂಯಾರ್ಕ್‌ನ ರಿಪಬ್ಲಿಕನ್ ಸಂಸದೆ ಎಲಿಸ್ ಸ್ಟೆಫಾನಿಕ್ ಅವರ ಸಂವಹನ ನಿರ್ದೇಶಕರಾಗಿದ್ದರು.
ಉತ್ತರಾಧಿಕಾರಿ ಯಾರು?
ಕರೋಲಿನ್ ಲೆವಿಟ್ ಅವರ ಸ್ಥಾನಕ್ಕೆ ಯಾರು ನೇಮಕವಾಗಲಿದ್ದಾರೆ ಎಂಬುದನ್ನು ಟ್ರಂಪ್ ಇನ್ನೂ ಪ್ರಕಟಿಸಿಲ್ಲ. ಇತ್ತೀಚಿನ ಕೆಲವು ಪತ್ರಿಕಾ ಕಾರ್ಯದರ್ಶಿಗಳಿಗಿಂತ ಲೆವಿಟ್ ವೈಟ್‌ಹೌಸ್ ಪತ್ರಿಕಾಗೋಷ್ಠಿಗಳನ್ನು ಕಡಿಮೆ ನಡೆಸಿದ್ದರು. ಟ್ರಂಪ್ ಅವರ ನೀತಿಗಳನ್ನು ಸಮರ್ಥಿಸಲು ಮತ್ತು ಡೆಮಾಕ್ರಟಿಕ್ ಪಕ್ಷ ಹಾಗೂ ಮುಖ್ಯವಾಹಿನಿ ಮಾಧ್ಯಮಗಳ ವಿರುದ್ಧ ವಾಗ್ದಾಳಿ ನಡೆಸಲು ಅವರನ್ನು ಹೆಚ್ಚಾಗಿ ಫಾಕ್ಸ್ ನ್ಯೂಸ್ ಸೇರಿದಂತೆ ಸಂಪ್ರದಾಯವಾದಿ ಮಾಧ್ಯಮಗಳಿಗೆ ಕಳುಹಿಸಲಾಗುತ್ತಿತ್ತು.
ಟ್ರಂಪ್ ಅವರ ಮೊದಲ ಅವಧಿಯಲ್ಲಿ ಸೀನ್ ಸ್ಪೈಸರ್, ಸಾರಾ ಹಕಬೀ ಸ್ಯಾಂಡರ್ಸ್, ಸ್ಟೆಫನಿ ಗ್ರಿಶಮ್ ಮತ್ತು ಕೇಲೀ ಮ್ಯಾಕ್‌ಎನಾನಿ ಸೇರಿದಂತೆ ಹಲವು ಮಂದಿ ಪತ್ರಿಕಾ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಿದ್ದರು.

