
Donald Trump Warning| ಇರಾನ್ ನಾಗರಿಕತೆಯೇ ನಾಶವಾಗಬಹುದು! ಟ್ರಂಪ್ ಎಚ್ಚರಿಕೆ
ಟ್ರಂಪ್ ಅವರ ಈ ಪೋಸ್ಟ್ ಕೇವಲ ರಾಜತಾಂತ್ರಿಕ ಬೆದರಿಕೆಯೇ ಅಥವಾ ನಿಜವಾಗಿಯೂ ಅಮೆರಿಕ ಇರಾನ್ ಮೇಲೆ ಸೈನಿಕ ಕಾರ್ಯಾಚರಣೆ ನಡೆಸಲಿದೆಯೇ ಎಂಬುದು ಮುಂದಿನ ಕೆಲವೇ ಗಂಟೆಗಳಲ್ಲಿ ಸ್ಪಷ್ಟವಾಗಲಿದೆ.
ಜಗತ್ತು ಮತ್ತೊಂದು ಮಹಾ ಸಂಘರ್ಷದ ಹೊಸ್ತಿಲಲ್ಲಿ ಬಂದು ನಿಂತಿದೆಯೇ? ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಸೋಷಿಯಲ್ ಮೀಡಿಯಾ ಪೋಸ್ಟ್ ಇಡೀ ಜಗತ್ತಿನಲ್ಲಿ ಸಂಚಲನ ಮೂಡಿಸಿದೆ.
ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಲು ಇರಾನ್‌ಗೆ ನೀಡಿದ್ದ 48 ಗಂಟೆಗಳ ಗಡುವು ಮುಗಿಯುವ ಕೆಲವೇ ಕ್ಷಣಗಳ ಮೊದಲು, ಟ್ರಂಪ್ ಅತ್ಯಂತ ಕಠಿಣ ಎಚ್ಚರಿಕೆಯನ್ನು ರವಾನಿಸಿದ್ದಾರೆ.
ತಮ್ಮ ' ಟ್ರುಥ್ ಸೋಶಿಯಲ್' ಖಾತೆಯಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಪದಗಳ ಮೂಲಕವೇ ಯುದ್ಧದ ಮುನ್ಸೂಚನೆ ನೀಡಿದ್ದಾರೆ. "ಇಂದು ರಾತ್ರಿ ಇಡೀ ನಾಗರಿಕತೆಯೇ ಸಾಯಬಹುದು. ಇದು ಜಗತ್ತಿನ ಸಂಕೀರ್ಣ ಇತಿಹಾಸದ ಪ್ರಮುಖ ಕ್ಷಣವಾಗಲಿದೆ. ಇಂತಹ ಘಟನೆ ನಡೆಯುವುದು ನನಗೆ ಇಷ್ಟವಿಲ್ಲ, ಆದರೆ ಅದು ಅನಿವಾರ್ಯವಾಗುವ ಸಾಧ್ಯತೆಯಿದೆ, ದೇವರು ಇರಾನ್‌ನ ಜನರನ್ನು ಆಶೀರ್ವದಿಸಲಿ!" ಎಂದು ಬರೆಯುವ ಮೂಲಕ ಇರಾನ್ ಮೇಲೆ ಬೃಹತ್ ದಾಳಿಯ ಸುಳಿವು ನೀಡಿದ್ದಾರೆ.
ಏನಿದು ಹಾರ್ಮುಜ್ ಜಲಸಂಧಿ ವಿವಾದ?
ಜಾಗತಿಕ ತೈಲ ವ್ಯಾಪಾರದ ಜೀವನಾಡಿಯಾಗಿರುವ ಹಾರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಲು ಯತ್ನಿಸುತ್ತಿರುವುದು ಈ ಎಲ್ಲಾ ಗೊಂದಲಕ್ಕೆ ಮೂಲ ಕಾರಣ. ಇದನ್ನು ತೆರೆಯದಿದ್ದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಮೆರಿಕ 48 ಗಂಟೆಗಳ ಡೆಡ್‌ಲೈನ್ ನೀಡಿತ್ತು. ಅಮೆರಿಕ ಕಾಲಮಾನ ಮಂಗಳವಾರ ರಾತ್ರಿ 8 ಗಂಟೆಗೆ ಈ ಗಡುವು ಮುಕ್ತಾಯವಾಗಲಿದೆ.
ಜಗತ್ತಿನ ಕಣ್ಣು ವಾಷಿಂಗ್ಟನ್ ಮೇಲೆ
ಟ್ರಂಪ್ ಅವರ ಈ ಪೋಸ್ಟ್ ಕೇವಲ ರಾಜತಾಂತ್ರಿಕ ಬೆದರಿಕೆಯೇ ಅಥವಾ ನಿಜವಾಗಿಯೂ ಅಮೆರಿಕ ಇರಾನ್ ಮೇಲೆ ಸೈನಿಕ ಕಾರ್ಯಾಚರಣೆ ನಡೆಸಲಿದೆಯೇ ಎಂಬುದು ಮುಂದಿನ ಕೆಲವೇ ಗಂಟೆಗಳಲ್ಲಿ ಸ್ಪಷ್ಟವಾಗಲಿದೆ. "ಇರಾನ್‌ನ ಜನರನ್ನು ದೇವರು ಆಶೀರ್ವದಿಸಲಿ" ಎಂಬ ಅವರ ಸಾಲುಗಳು ಕಾರ್ಯಾಚರಣೆ ಬಹುತೇಕ ಖಚಿತ ಎಂಬ ಭಾವನೆಯನ್ನು ಮೂಡಿಸಿವೆ.
ಆಡಳಿತ ಬದಲಾವಣೆಗೆ ಆಗ್ರಹ
ಇರಾನ್‌ನಲ್ಲಿ ಈಗಿರುವ ಆಡಳಿತ ವ್ಯವಸ್ಥೆ ಸಂಪೂರ್ಣ ಬದಲಾಗಬೇಕು ಎಂಬುದು ಡೊನಾಲ್ಡ್ ಟ್ರಂಪ್ ಆಗ್ರಹ. 1979ರ ಕ್ರಾಂತಿಯ ನಂತರದ ಇರಾನ್ ಆಡಳಿತವನ್ನು 'ಭ್ರಷ್ಟಾಚಾರ ಮತ್ತು ಸಾವಿನ ಆಡಳಿತ' ಎಂದು ಕರೆದಿರುವ ಟ್ರಂಪ್, ಅದಕ್ಕೆ ಇಂದು ರಾತ್ರಿ ಅಂತ್ಯ ಹಾಡುವುದಾಗಿ ಗುಡುಗಿದ್ದಾರೆ. ಈಗಾಗಲೇ ಜಾಗತಿಕ ಉತ್ಪನ್ನಗಳ ಮೇಲೆ ಶೇ. 15 ಸುಂಕ ವಿಧಿಸಿರುವ ಟ್ರಂಪ್ ನಿರ್ಧಾರದಿಂದ ಆರ್ಥಿಕತೆ ತತ್ತರಿಸಿದೆ. ಈಗ ಯುದ್ಧದ ಭೀತಿ ತೈಲ ಬೆಲೆ ಏರಿಕೆಗೆ ಕಾರಣವಾಗುವ ಸಾಧ್ಯತೆಯಿದೆ.

