Donald Trump: ಎಚ್‌ -1ಬಿ ವೀಸಾ ಪರವಾಗಿ ಮಾತನಾಡಿದ ಡೊನಾಲ್ಡ್‌ ಟ್ರಂಪ್‌; ಭಾರತೀಯರಿಗೆ ನೆಮ್ಮದಿ
x
ಡೊನಾಲ್ಡ್‌ ಟ್ರಂಪ್‌.

Donald Trump: ಎಚ್‌ -1ಬಿ ವೀಸಾ ಪರವಾಗಿ ಮಾತನಾಡಿದ ಡೊನಾಲ್ಡ್‌ ಟ್ರಂಪ್‌; ಭಾರತೀಯರಿಗೆ ನೆಮ್ಮದಿ

Donald Trump: ಟೆಸ್ಲಾ ಸಿಇಒ ಎಲಾನ್‌ ಮಸ್ಕ್ ಸೇರಿದಂತೆ ಟ್ರಂಪ್‌ ಅವರ ಕೆಲವು ಆಪ್ತರು ಎಚ್ -1 ಬಿ ವೀಸಾಗೆ ಬೆಂಬಲ ವ್ಯಕ್ತಪಡಿಸಿದ್ದರು. ಏಕೆಂದರೆ ಇದು ಅರ್ಹ ಟೆಕ್ ವೃತ್ತಿಪರರಿಗೆ ಅಮೆರಿಕಕ್ಕೆ ಬರಲು ನೆರವು ನೀಡುತ್ತದೆ.


ಅಮೆರಿಕದ 47ನೇ ಅಧ್ಯಕ್ಷರಾಗಿ ಸೋಮವಾರ ಅಧಿಕಾರ ವಹಿಸಿಕೊಂಡ ಡೊನಾಲ್ಡ್ ಟ್ರಂಪ್ (Donald Trump), ಎಚ್ -1ಬಿ ವೀಸಾದ ಪರವಾಗಿ ಮೃದು ಧೋರಣೆ ತಾಳಿದ್ದು, ಬೇಕು ಮತ್ತು ಬೇಡ ಎಂಬ ಎರಡೂ ಬದಿಯ ವಾದಗಳನ್ನು ಪರಿಗಣನೆ ತೆಗೆದುಕೊಳ್ಳುವೆ ಎಂದು ಹೇಳಿದ್ದಾರೆ. ಈ ಮೂಲಕ ಭಾರತ ಉದ್ಯೋಗಿಗಳ ವೀಸಾ ಆತಂಕ ನಿವಾರಣೆಯಾಗಿದೆ.

"ವೀಸಾ ವಿಚಾರದಲ್ಲಿ ನಾನು ಎರಡೂ ವಾದಗಳನ್ನು ಇಷ್ಟಪಡುತ್ತೇನೆ. ಯಾಕೆಂದರೆ ನಮ್ಮ ದೇಶಕ್ಕೆ ಸಮರ್ಥರು ಮತ್ತು ಪ್ರತಿಭಾವಂತರು ಬರುವುದನ್ನು ನಾನು ಇಷ್ಟಪಡುತ್ತೇನೆ." ಎಂದು ಅವರು ಮಂಗಳವಾರ ಶ್ವೇತಭವನದಲ್ಲಿ ಒರಾಕಲ್ ಸಿಟಿಒ ಲ್ಯಾರಿ ಎಲಿಸನ್, ಸಾಫ್ಟ್‌ಬ್ಯಾಂಕ್‌ ಸಿಇಒ ಮಸಯೋಶಿ ಸನ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು

ಟೆಸ್ಲಾ ಸಿಇಒ ಎಲಾನ್‌ ಮಸ್ಕ್ ಸೇರಿದಂತೆ ಟ್ರಂಪ್‌ ಅವರ ಕೆಲವು ಆಪ್ತರು ಚುನಾವಣೆ ಮುಗಿದ ಬಳಿಕ ಎಚ್ -1ಬಿ ವೀಸಾಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಟೆಕ್‌ ದೈತ್ಯ ಕಂಪನಿಗಳನ್ನು ಹೊಂದಿರುವ ಮಸ್ಕ್‌ಗೆ ಅರ್ಹ ಟೆಕ್ ವೃತ್ತಿಪರರು ಬೇಕಾಗುತ್ತದೆ. ಹೀಗಾಗಿ ಅವರು ಪರವಾಗಿ ಮಾತನಾಡಲು ಆರಂಭಿಸಿದ್ದಾರೆ. ಆದರೆ, ಟ್ರಂಪ್‌ಗೆ ಚುನಾವಣೆಯಲ್ಲಿ ಬೆಂಬಲ ಕೊಟ್ಟಿದ್ದ ಕೆಲವು ಸಂಪ್ರದಾಯವಾದಿಗಳು ಎಚ್‌-1ಬಿ ವೀಸಾಗೆ ವಿರೋಧ ವ್ಯಕ್ತಪಡಿಸಿದ್ದರು.

ಮಂಗಳವಾರದ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದ, "ನಮ್ಮ ದೇಶಕ್ಕೆ ಸಮರ್ಥ ಜನರು ಬರಬೇಕೆಂದು ನಾವು ಬಯಸುತ್ತೇವೆ. ಎಚ್ -1 ಬಿ ವೀಸಾ ಯೋಜನೆ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ,ʼʼ ಎಂದು ಹೇಳಿದರು.

"ನಾವು ನಮ್ಮ ದೇಶದಲ್ಲಿ ಗುಣಮಟ್ಟದ ವೃತ್ತಿಪರರನ್ನು ಹೊಂದಿರಬೇಕು. ಹೀಗಾಗಿ ವೀಸಾ ನೀತಿಗಳ ಕುರಿತು ಬೇಕು ಮತ್ತು ಬೇಡ ಎಂಬ ಎರಡೂ ವಾದವನ್ನು ಆಲಿಸಲು ಮುಂದಾಗಿದ್ದೇನೆ. ನಾವು ನಿಜವಾಗಿಯೂ ಸಮರ್ಥ ವ್ಯಕ್ತಿಗಳನ್ನು ನಮ್ಮ ದೇಶಕ್ಕೆ ಬರಲು ಬಿಡಬೇಕು. ನಾವು ಅದನ್ನು ಎಚ್ -1 ಬಿ ವೀಸಾ ಮೂಲಕ ಮಾಡುತ್ತೇವೆ" ಎಂದು ಅವರು ಟ್ರಂಪ್‌ ಹೇಳಿದ್ದಾರೆ. .

ಎಚ್ -1 ಬಿ ವೀಸಾಗಳು ಯುಎಸ್‌ನಲ್ಲಿ ಹೆಚ್ಚು ನುರಿತ ವಿದೇಶಿ ಪ್ರಜೆಗಳಿಗೆ ತಾತ್ಕಾಲಿಕ ವೀಸಾಗಳಾಗಿವೆ. ಈ ವೀಸಾಗಳಲ್ಲಿ ಶೇಕಡಾ 72ರಷ್ಟು ಭಾರತೀಯ ಪ್ರಜೆಗಳಿದ್ದಾರೆ. ಇದು ಒಬ್ಬ ವ್ಯಕ್ತಿಗೆ 6 ವರ್ಷಗಳ ಕಾಲ ಅಮೆರಿಕದಲ್ಲಿ ಉಳಿಯಲು ಅವಕಾಶ ಮಾಡಿಕೊಡುತ್ತದೆ. ವೀಸಾವನ್ನು ಆರಂಭದಲ್ಲಿ 3 ವರ್ಷಗಳವರೆಗೆ ನೀಡಲಾಗುತ್ತದೆ. ಇನ್ನೂ ಮೂರು ವರ್ಷಗಳವರೆಗೆ ವಿಸ್ತರಿಸಬಹುದು. ಎಚ್ -1 ಬಿ ವೀಸಾ ವಿಸ್ತರಣೆಗೆ ಅರ್ಜಿ ಸಲ್ಲಿಸುವ ಜನರು ಅರ್ಜಿ ಸಲ್ಲಿಸಿದ ನಂತರ ಯುಎಸ್ ಹೊರಗೆ ಪ್ರಯಾಣಿಸದಂತೆ ಸೂಚಿಸಲಾಗುತ್ತದೆ.

ದಕ್ಷಿಣ ಗಡಿಯಲ್ಲಿ ತುರ್ತು ಪರಿಸ್ಥಿತಿ

ಸೋಮವಾರ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳ ನಂತರ, ಮೆಕ್ಸಿಕೊದೊಂದಿಗಿನ ಅಮೆರಿಕದ ದಕ್ಷಿಣ ಗಡಿಯಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ ಮಾಡುವುದಾಗಿ ಹೇಳಿದ್ದರು. ಅದೇ ರೀತಿ ಜನ್ಮಸಿದ್ಧ ಪೌರತ್ವ ನೀಡುವ ಕಾನೂನಿಗೂ ಕೊನೆ ಹಾಡಿದ್ದರು.

"ಕಾನೂನುಬದ್ಧ ವಲಸೆಗೆ ಪರವಾಗಿದ್ದೇನೆ. ನಮಗೆ ಉತ್ತಮ ಜನರು ಬೇಕು" ಎಂದು ಓವಲ್ ಕಚೇರಿಯಲ್ಲಿ ಹೊಸ ಆದೇಶಕ್ಕೆ ಸಹಿ ಹಾಕಿದ ನಂತರ ಟ್ರಂಪ್ ಹೇಳಿದ್ದರು.

2024ರಲ್ಲಿ ಅಮೆರಿಕದ ವಲಸೆ ಅಧಿಕಾರಿಗಳು 270,000 ಕ್ಕೂ ಹೆಚ್ಚು ವಲಸಿಗರನ್ನು 192 ದೇಶಗಳಿಗೆ ಗಡೀಪಾರು ಮಾಡಿದ್ದರು. 2014ರ ನಂತರದ ಗರಿಷ್ಠ ಮಟ್ಟದ ಗಡಿಪಾರು ಪ್ರಕರಣವಾಗಿದೆ. ಅದರಲ್ಲಿ 1,529 ಮಂದಿ ಭಾರತೀಯರೇ ಇದ್ದರು.

2024ರ ಪ್ಯೂ ರಿಸರ್ಚ್ ವರದಿಯ ಪ್ರಕಾರ, ಮೆಕ್ಸಿಕೊ, ಸಾಲ್ವಡಾರ್‌ ಬಳಿಕ ಅಮೆರಿಕದಲ್ಲಿ ದಾಖಲೆ ರಹಿತ ವಲಸಿಗರ ಪೈಕಿ ಭಾರತೀಯರೇ ಹೆಚ್ಚಿದ್ದಾರೆ.

Read More
Next Story