
ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿಗೆ ಹಿನ್ನಡೆ
ಅಮೆರಿಕದ ಓಹಿಯೋ ಗವರ್ನರ್ ಚುನಾವಣೆಯಲ್ಲಿ ಭಾರತೀಯ ಮೂಲದ ರಿಪಬ್ಲಿಕನ್ ನಾಯಕ ವಿವೇಕ್ ರಾಮಸ್ವಾಮಿ ಸೋಲು ಕಂಡಿದ್ದಾರೆ. ಡೆಮಾಕ್ರಟಿಕ್ ಅಭ್ಯರ್ಥಿ ಆಮಿ ಆಕ್ಟನ್ ಗೆಲುವು ಸಾಧಿಸಿದ್ದು, ಓಹಿಯೋ ಮೊದಲ ಮಹಿಳಾ ಗವರ್ನರ್ ಪಡೆಯುವತ್ತ ಹೆಜ್ಜೆಯಿಟ್ಟಿದೆ.
ಅಮೆರಿಕದ ಮಧ್ಯಂತರ ಚುನಾವಣೆಯ ಭಾಗವಾಗಿ ನಡೆದ ಓಹಿಯೋ ರಾಜ್ಯದ ಗವರ್ನರ್ ಚುನಾವಣೆಯಲ್ಲಿ ಭಾರತೀಯ ಮೂಲದ ರಿಪಬ್ಲಿಕನ್ ನಾಯಕ ವಿವೇಕ್ ರಾಮಸ್ವಾಮಿ ಅವರಿಗೆ ಭಾರೀ ಹಿನ್ನಡೆಯಾಗಿದೆ. ತೀವ್ರ ಕುತೂಹಲ ಮೂಡಿಸಿದ್ದ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಡಾ. ಆಮಿ ಆಕ್ಟನ್ ಅವರು ರಾಮಸ್ವಾಮಿ ಅವರನ್ನು ಸೋಲಿಸಿ ಗೆಲುವಿನ ನಗೆ ಬೀರಿದ್ದಾರೆ. ಈ ಮೂಲಕ ಓಹಿಯೋ ರಾಜ್ಯದ ಮೊದಲ ಚುನಾಯಿತ ಮಹಿಳಾ ಗವರ್ನರ್ ಎಂಬ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಚುನಾವಣಾ ಫಲಿತಾಂಶದಲ್ಲಿ ಆಮಿ ಆಕ್ಟನ್ ಶೇ.50.9ರಷ್ಟು ಮತಗಳನ್ನು ಪಡೆದರೆ, ವಿವೇಕ್ ರಾಮಸ್ವಾಮಿ ಶೇ.45.8ರಷ್ಟು ಮತಗಳನ್ನು ಗಳಿಸಿದ್ದಾರೆ. 2006ರ ಬಳಿಕ ಓಹಿಯೋದಲ್ಲಿ ಡೆಮಾಕ್ರಟಿಕ್ ಪಕ್ಷಕ್ಕೆ ಗವರ್ನರ್ ಸ್ಥಾನ ದೊರೆತಿರುವುದು ಇದೇ ಮೊದಲು. ಕಳೆದ ಹಲವು ವರ್ಷಗಳಿಂದ ರಿಪಬ್ಲಿಕನ್ ಪಕ್ಷದ ಪ್ರಾಬಲ್ಯ ಹೊಂದಿದ್ದ ರಾಜ್ಯದಲ್ಲಿ ಡೆಮಾಕ್ರಟಿಕ್ ಪಕ್ಷದ ಈ ಗೆಲುವು ಮಹತ್ವದ ರಾಜಕೀಯ ಬೆಳವಣಿಗೆಯಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಾಮಸ್ವಾಮಿ ಪರವಾಗಿ ಬಹಿರಂಗವಾಗಿ ಪ್ರಚಾರ ನಡೆಸಿದ್ದರು. ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಸೇರಿದಂತೆ ಹಲವು ಪ್ರಮುಖ ನಾಯಕರು ಕೂಡ ಅವರ ಬೆನ್ನಿಗೆ ನಿಂತಿದ್ದರು. ಆದರೂ ಮತದಾರರ ಬೆಂಬಲ ಗಳಿಸುವಲ್ಲಿ ರಾಮಸ್ವಾಮಿ ವಿಫಲರಾಗಿದ್ದಾರೆ. ಮತ್ತೊಂದೆಡೆ, ಮಾಜಿ ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ ಅಧಿಕಾರಿ ಆಮಿ ಆಕ್ಟನ್ ಅವರು ಜೀವನ ವೆಚ್ಚ, ಆರೋಗ್ಯ ಸೇವೆ ಸೇರಿದಂತೆ ಜನಸಾಮಾನ್ಯರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸಿದ್ದರು.
ರಾಮಸ್ವಾಮಿ ಅವರ ಪ್ರಚಾರದ ಕೊನೆಯ ಹಂತದಲ್ಲಿ ಬಿಡುಗಡೆಯಾದ ವಿವಾದಾತ್ಮಕ ಜಾಹೀರಾತು ಕೂಡ ಸೋಲಿಗೆ ಪ್ರಮುಖ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ. ಆಮಿ ಆಕ್ಟನ್ ಅವರ ಕುಟುಂಬದ ವೈಯಕ್ತಿಕ ವಿಚಾರಗಳನ್ನು ರಾಜಕೀಯ ಪ್ರಚಾರಕ್ಕೆ ಬಳಸಿಕೊಂಡಿದ್ದಕ್ಕೆ ಡೆಮಾಕ್ರಟಿಕ್ ನಾಯಕರಷ್ಟೇ ಅಲ್ಲದೆ, ರಿಪಬ್ಲಿಕನ್ ಪಕ್ಷದ ಪ್ರಮುಖರಿಂದಲೂ ವಿರೋಧ ವ್ಯಕ್ತವಾಗಿತ್ತು. ಬಾಲ್ಯದಲ್ಲಿ ಆಮಿ ಎದುರಿಸಿದ್ದ ಲೈಂಗಿಕ ದೌರ್ಜನ್ಯದ ಘಟನೆಯನ್ನು ಪ್ರಚಾರದ ಅಸ್ತ್ರವಾಗಿ ಬಳಸಿಕೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.
2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿ ಸ್ಪರ್ಧಿಸಿ ಗಮನ ಸೆಳೆದಿದ್ದ ರಾಮಸ್ವಾಮಿ, ಟ್ರಂಪ್ ಅವರ ಆಪ್ತ ವಲಯದಲ್ಲೂ ಗುರುತಿಸಿಕೊಂಡಿದ್ದರು. ಇದೀಗ ಗವರ್ನರ್ ಚುನಾವಣೆಯ ಸೋಲು ಅವರ ರಾಜಕೀಯ ಭವಿಷ್ಯದ ದೃಷ್ಟಿಯಿಂದ ದೊಡ್ಡ ಹಿನ್ನಡೆಯಾಗಿದೆ.
ಟ್ರಂಪ್ ಅವರ ಪ್ರಭಾವ, ಪಕ್ಷದ ಬಲ ಹಾಗೂ ಭಾರೀ ಪ್ರಮಾಣದ ಪ್ರಚಾರದ ನಡುವೆಯೂ ರಾಮಸ್ವಾಮಿ ಸೋತಿರುವುದು ಅಮೆರಿಕದ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಓಹಿಯೋದಲ್ಲಿ ಡೆಮಾಕ್ರಟಿಕ್ ಪಕ್ಷದ ಪುನರಾಗಮನವು ಮುಂದಿನ ರಾಜಕೀಯ ಸಮೀಕರಣಗಳ ಬಗ್ಗೆಯೂ ಕುತೂಹಲ ಮೂಡಿಸಿದೆ.
