ಐಸಿಸ್ ಕಮಾಂಡರ್ ಅಬು-ಬಿಲಾಲ್ ಅಲ್-ಮಿನುಕಿ ಹತ್ಯೆ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ
x

ಐಸಿಸ್ ಕಮಾಂಡರ್ ಅಬು-ಬಿಲಾಲ್ ಅಲ್-ಮಿನುಕಿ ಹತ್ಯೆ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ

ಆಫ್ರಿಕಾದಲ್ಲಿ ಅಮೆರಿಕ ಮತ್ತು ನೈಜೀರಿಯಾ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಜಾಗತಿಕ ಐಸಿಸ್ (ISIS) ಉಗ್ರ ಸಂಘಟನೆಯ ಎರಡನೇ ಕಮಾಂಡರ್ ಅಬು-ಬಿಲಾಲ್ ಅಲ್-ಮಿನುಕಿಯನ್ನು ಹತ್ಯೆ ಮಾಡಲಾಗಿದೆ.


Click the Play button to hear this message in audio format

ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಅಮೆರಿಕ ಮತ್ತು ನೈಜೀರಿಯಾ ಪಡೆಗಳು ಜಂಟಿಯಾಗಿ ಭರ್ಜರಿ ಯಶಸ್ಸು ಸಾಧಿಸಿವೆ. ಜಾಗತಿಕ ಭಯೋತ್ಪಾದಕ ಸಂಘಟನೆ ಐಸಿಸ್ (ISIS)ನ ವಿಶ್ವದ ಎರಡನೇ ಪ್ರಮುಖ ಕಮಾಂಡರ್ ಆಗಿದ್ದ ಅಬು-ಬಿಲಾಲ್ ಅಲ್-ಮಿನುಕಿಯನ್ನು ಜಂಟಿ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕೃತವಾಗಿ ಘೋಷಿಸಿದ್ದಾರೆ.

ಆಫ್ರಿಕಾದಲ್ಲಿ ಈ ರಹಸ್ಯ ಕಾರ್ಯಾಚರಣೆ ನಡೆದಿದೆ ಎಂದು ತಿಳಿಸಿರುವ ಟ್ರಂಪ್, ಈ ಪ್ರಮುಖ ಉಗ್ರನ ಹೆಡೆಮುರಿ ಕಟ್ಟಿರುವುದರಿಂದ ಐಸಿಸ್‌ನ ಅಂತರರಾಷ್ಟ್ರೀಯ ಜಾಲವು ಗಣನೀಯವಾಗಿ ದುರ್ಬಲಗೊಂಡಿದೆ ಎಂದು ಪ್ರತಿಪಾದಿಸಿದ್ದಾರೆ. ಅಲ್ಲದೆ, ಈ ಕಾರ್ಯಾಚರಣೆಗೆ ಸಂಪೂರ್ಣ ಬೆಂಬಲ ನೀಡಿದ ನೈಜೀರಿಯಾ ಸರ್ಕಾರಕ್ಕೆ ಅವರು ಧನ್ಯವಾದ ಅರ್ಪಿಸಿದ್ದಾರೆ.

ಡೊನಾಲ್ಡ್ ಟ್ರಂಪ್ ಹೇಳಿದ್ದೇನು?

ತಮ್ಮ ಸ್ವಂತ ಸಾಮಾಜಿಕ ಜಾಲತಾಣವಾದ 'ಟ್ರೂತ್ ಸೋಶಿಯಲ್'ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಡೊನಾಲ್ಡ್ ಟ್ರಂಪ್, ತಮ್ಮ ನೇರ ನಿರ್ದೇಶನದ ಮೇರೆಗೆ ಅಮೆರಿಕನ್ ಪಡೆಗಳು ಮತ್ತು ನೈಜೀರಿಯಾದ ಸಶಸ್ತ್ರ ಪಡೆಗಳು ಒಟ್ಟಾಗಿ ಈ ಕಾರ್ಯಾಚರಣೆಯನ್ನು ನಡೆಸಿವೆ ಎಂದು ತಿಳಿಸಿದ್ದಾರೆ.

"ಇಂದು ರಾತ್ರಿ, ನನ್ನ ನಿರ್ದೇಶನದ ಮೇರೆಗೆ ಅಮೆರಿಕದ ಶೂರ ಪಡೆಗಳು ಮತ್ತು ನೈಜೀರಿಯಾದ ಸಶಸ್ತ್ರ ಪಡೆಗಳು ಜಗತ್ತಿನ ಅತ್ಯಂತ ಸಕ್ರಿಯ ಉಗ್ರನನ್ನು ಯುದ್ಧಭೂಮಿಯಿಂದ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಅತ್ಯಂತ ಸೂಕ್ಷ್ಮವಾಗಿ ಯೋಜಿಸಲಾಗಿದ್ದ ಮತ್ತು ಸಂಕೀರ್ಣವಾದ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿವೆ," ಎಂದು ಟ್ರಂಪ್ ಬರೆದುಕೊಂಡಿದ್ದಾರೆ.

ಮುಂದುವರಿದು ಬರೆದಿರುವ ಅವರು, ಅಬು-ಬಿಲಾಲ್ ಅಲ್-ಮಿನುಕಿ ತಾನು ಆಫ್ರಿಕಾದಲ್ಲಿ ಅಡಗಿಕೊಂಡು ಸುರಕ್ಷಿತವಾಗಿರಬಹುದು ಎಂದು ಭಾವಿಸಿದ್ದ. ಆದರೆ ಅಮೆರಿಕದ ಗುಪ್ತಚರ ಇಲಾಖೆಯ ಮೂಲಗಳು ಆತನ ಪ್ರತಿಯೊಂದು ಚಲನವಲನದ ಮೇಲೂ ನಿರಂತರ ಕಣ್ಣಿಟ್ಟಿದ್ದವು ಎಂದು ಹೇಳಿದ್ದಾರೆ.

"ಜಾಗತಿಕವಾಗಿ ಐಸಿಸ್ ಸಂಘಟನೆಯ ಎರಡನೇ ಅತ್ಯುನ್ನತ ಕಮಾಂಡರ್ ಆಗಿದ್ದ ಅಬು-ಬಿಲಾಲ್ ಅಲ್-ಮಿನುಕಿ, ತಾನು ಆಫ್ರಿಕಾದಲ್ಲಿ ಅಡಗಿಕೊಳ್ಳಬಹುದು ಎಂದು ಅಂದುಕೊಂಡಿದ್ದ. ಆದರೆ ಆತ ಏನು ಮಾಡುತ್ತಿದ್ದಾನೆ ಎಂಬುದರ ಬಗ್ಗೆ ನಮಗೆ ಮಾಹಿತಿ ನೀಡುವ ಮೂಲಗಳು ನಮ್ಮ ಬಳಿ ಇದ್ದವು ಎಂಬುದು ಆತನಿಗೆ ತಿಳಿದಿರಲಿಲ್ಲ," ಎಂದು ಟ್ರಂಪ್ ಟಾಂಗ್ ನೀಡಿದ್ದಾರೆ.

ಈ ಐಸಿಸ್ ನಾಯಕ ಇನ್ಮುಂದೆ ಆಫ್ರಿಕಾದ ಜನರನ್ನು ಭಯಭೀತರನ್ನಾಗಿಸಲು ಅಥವಾ ಅಮೆರಿಕನ್ನರ ವಿರುದ್ಧ ದಾಳಿ ನಡೆಸಲು ಸಂಚು ರೂಪಿಸಲು ಸಾಧ್ಯವಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. "ಆತನ ಅಂತ್ಯದೊಂದಿಗೆ ಐಸಿಸ್‌ನ ಜಾಗತಿಕ ಕಾರ್ಯಾಚರಣೆಗಳು ತೀವ್ರವಾಗಿ ಕುಂಠಿತಗೊಂಡಿವೆ. ಈ ಕಾರ್ಯಾಚರಣೆಯಲ್ಲಿ ಪಾಲುದಾರರಾದ ನೈಜೀರಿಯಾ ಸರ್ಕಾರಕ್ಕೆ ಧನ್ಯವಾದಗಳು. ದೇವರು ಅಮೆರಿಕವನ್ನು ಆಶೀರ್ವದಿಸಲಿ!" ಎಂದು ಯುಎಸ್ ಅಧ್ಯಕ್ಷರು ಸೇರಿಸಿದ್ದಾರೆ.

ಯಾರು ಈ ಅಬು-ಬಿಲಾಲ್ ಅಲ್-ಮಿನುಕಿ?

ಅಬು-ಬಿಲಾಲ್ ಅಲ್-ಮಿನುಕಿ ಎಂಬುದು ಆಫ್ರಿಕಾದ ಸಾಹೇಲ್ (Sahel) ಪ್ರದೇಶದಲ್ಲಿ ಭಯೋತ್ಪಾದಕ ಗುಂಪಿನ ಕಾರ್ಯಾಚರಣೆಗಳ ಉಸ್ತುವಾರಿ ವಹಿಸಿದ್ದ ಹಿರಿಯ ಐಸಿಸ್ ನಾಯಕ ಅಬು ಬಕರ್ ಇಬ್ನ್ ಮುಹಮ್ಮದ್ ಇಬ್ನ್ ಅಲಿ ಅಲ್-ಮೈನುಕಿಯ ಮತ್ತೊಂದು ಹೆಸರಾಗಿದೆ ಎಂದು ನಂಬಲಾಗಿದೆ.

ಅಮೆರಿಕದ ಗುಪ್ತಚರ ಇಲಾಖೆಯ ದಾಖಲೆಗಳ ಪ್ರಕಾರ, ಈತ ಐಸಿಸ್‌ನ ಪ್ರಾಂತ್ಯಗಳ ಸಾಮಾನ್ಯ ನಿರ್ದೇಶನಾಲಯದೊಂದಿಗೆ ನಿಕಟ ಸಂಬಂಧ ಹೊಂದಿದ್ದ ಮತ್ತು ಅಬು ಬಿಲಾಲ್ ಅಲ್-ಮಿನುಕಿ, ಅಬುಬಕರ್ ಮೈನೋಕ್ ಮತ್ತು ಅಬೋರ್ ಮೈನೋಕ್ ಸೇರಿದಂತೆ ಹಲವು ಅಲಿಯಾಸ್ (ನಕಲಿ) ಹೆಸರುಗಳನ್ನು ಬಳಸುತ್ತಿದ್ದ ಎನ್ನಲಾಗಿದೆ.

Read More
Next Story