
ಕ್ರಿಪ್ಟೋ ಮಾರುಕಟ್ಟೆಯಲ್ಲಿ ಭಾರಿ ಕುಸಿತ: ಟ್ರಂಪ್ ಕುಟುಂಬಕ್ಕೆ 9,800 ಕೋಟಿ ರೂ. ನಷ್ಟ
ಈ ಬೃಹತ್ ನಷ್ಟಕ್ಕೆ ಪ್ರಮುಖ ಕಾರಣ ಟ್ರಂಪ್ ಒಡೆತನದ ಸಂಸ್ಥೆಗಳ ಷೇರು ಮೌಲ್ಯ ಕುಸಿತ. ಟ್ರಂಪ್ ಮೀಡಿಯಾ ಆ್ಯಂಡ್ ಟೆಕ್ನಾಲಜಿ ಗ್ರೂಪ್ ಷೇರುಗಳು ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕುಟುಂಬಕ್ಕೆ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯಲ್ಲಾದ ಹಠಾತ್ ಬದಲಾವಣೆ ದೊಡ್ಡ ಆಘಾತ ನೀಡಿದೆ. ಅಪಾಯಕಾರಿ ಕ್ರಿಪ್ಟೋ ಹೂಡಿಕೆಗಳಿಂದಾಗಿ ಟ್ರಂಪ್ ಕುಟುಂಬದ ಸಂಪತ್ತಿನಲ್ಲಿ ಬರೋಬ್ಬರಿ 1 ಬಿಲಿಯನ್ ಡಾಲರ್‌ಗೂ ಹೆಚ್ಚು (ಸುಮಾರು 9,800 ಕೋಟಿ ರೂ.) ನಷ್ಟವಾಗಿದೆ ಎಂದು ವರದಿಗಳು ತಿಳಿಸಿವೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಸೆಪ್ಟೆಂಬರ್‌ನಲ್ಲಿ 7.7 ಬಿಲಿಯನ್ ಡಾಲರ್‌ನಷ್ಟಿದ್ದ (ಅಂದಾಜು 64 ಸಾವಿರ ಕೋಟಿ ರೂ.) ಟ್ರಂಪ್ ಕುಟುಂಬದ ಆಸ್ತಿ ಮೌಲ್ಯ ಇದೀಗ 6.7 ಬಿಲಿಯನ್ ಡಾಲರ್‌ಗೆ (ಅಂದಾಜು 56 ಸಾವಿರ ಕೋಟಿ ರೂ.) ಇಳಿಕೆಯಾಗಿದೆ.[1]
ಟ್ರಂಪ್ ಕಂಪನಿ ಷೇರುಗಳ ಮೌಲ್ಯ ಪಾತಾಳಕ್ಕೆ
ಈ ಬೃಹತ್ ನಷ್ಟಕ್ಕೆ ಪ್ರಮುಖ ಕಾರಣ ಟ್ರಂಪ್ ಒಡೆತನದ ಸಂಸ್ಥೆಗಳ ಷೇರು ಮೌಲ್ಯ ಕುಸಿತ. ಟ್ರಂಪ್ ಮೀಡಿಯಾ ಆ್ಯಂಡ್ ಟೆಕ್ನಾಲಜಿ ಗ್ರೂಪ್ ಷೇರುಗಳು ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ಇದರಿಂದ ಟ್ರಂಪ್ ಅವರ ಪಾಲಿನ ಮೌಲ್ಯದಲ್ಲಿ ಸುಮಾರು 800 ಮಿಲಿಯನ್ ಡಾಲರ್ ಕರಗಿದೆ. ಇದರೊಂದಿಗೆ, ಟ್ರಂಪ್ ಬ್ರ್ಯಾಂಡ್‌ನ ‘ಮೀಮ್ ಕಾಯಿನ್’ ($TRUMP) ಮೌಲ್ಯದಲ್ಲಿ ಶೇ.25ರಷ್ಟು ಕುಸಿತ ಕಂಡಿದೆ. ಇನ್ನು ಎರಿಕ್ ಟ್ರಂಪ್ ಹೂಡಿಕೆ ಮಾಡಿದ್ದ ಬಿಟ್‌ಕಾಯಿನ್ ಮೈನಿಂಗ್ ಕಂಪನಿಯಾದ ಅಮೆರಿಕನ್ ಬಿಟ್‌ಕಾಯಿನ್ ಕಾರ್ಪೊರೇಷನ್ ಷೇರುಗಳು ಕೂಡ ಸೆಪ್ಟೆಂಬರ್‌ನಿಂದ ಶೇ.50ರಷ್ಟು ಬಿದ್ದು ಹೋಗಿದ್ದು, ಇದರಿಂದಲೇ ಕುಟುಂಬಕ್ಕೆ 300 ಮಿಲಿಯನ್ ಡಾಲರ್ ನಷ್ಟ ಉಂಟಾಗಿದೆ.
ನಷ್ಟವಾದರೂ ಎರಿಕ್ ಟ್ರಂಪ್ ಡೋಂಟ್ ಕೇರ್!
ಇಷ್ಟೆಲ್ಲಾ ನಷ್ಟ ಸಂಭವಿಸಿದರೂ ಟ್ರಂಪ್ ಅವರ ಪುತ್ರ ಎರಿಕ್ ಟ್ರಂಪ್ ಮಾತ್ರ ವಿಚಲಿತರಾಗಿಲ್ಲ. ಬದಲಾಗಿ, ಈ ಕುಸಿತವನ್ನು ಅವರು "ಹೂಡಿಕೆಗೆ ಇದೊಂದು ಸುವರ್ಣಾವಕಾಶ" (Great buying opportunity) ಎಂದು ಬಣ್ಣಿಸಿದ್ದಾರೆ. "ಯಾರು ಮಾರುಕಟ್ಟೆಯ ಈ ಇಳಿಕೆಯ ಲಾಭ ಪಡೆದು ಖರೀದಿಸುತ್ತಾರೋ ಅವರೇ ಅಂತಿಮವಾಗಿ ಗೆಲ್ಲುತ್ತಾರೆ. ಕ್ರಿಪ್ಟೋಕರೆನ್ಸಿಯ ಭವಿಷ್ಯದ ಬಗ್ಗೆ ಮತ್ತು ಆರ್ಥಿಕ ವ್ಯವಸ್ಥೆಯ ಆಧುನೀಕರಣದ ಬಗ್ಗೆ ನನಗೆ ಅಪಾರ ನಂಬಿಕೆಯಿದೆ" ಎಂದು ಎರಿಕ್ ಟ್ರಂಪ್ ಹೇಳಿಕೆ ನೀಡಿದ್ದಾರೆ.
ಹೂಡಿಕೆದಾರರಿಗೂ ಭಾರಿ ಪೆಟ್ಟು
ಟ್ರಂಪ್ ಕುಟುಂಬದ ಜೊತೆಗೆ, ಅವರ ಹೆಸರನ್ನು ನಂಬಿ ಹೂಡಿಕೆ ಮಾಡಿದ ಸಾಮಾನ್ಯ ಜನರಿಗೂ ಭಾರಿ ಪೆಟ್ಟು ಬಿದ್ದಿದೆ. ಜನವರಿಯಲ್ಲಿ ಟ್ರಂಪ್ ಮೀಮ್ ಕಾಯಿನ್ ಉತ್ತುಂಗದಲ್ಲಿದ್ದಾಗ ಹೂಡಿಕೆ ಮಾಡಿದವರು ಈಗ ತಮ್ಮ ಬಂಡವಾಳವನ್ನು ಬಹುತೇಕ ಕಳೆದುಕೊಳ್ಳುವಂತಾಗಿದೆ. ಅಮೆರಿಕನ್ ಬಿಟ್‌ಕಾಯಿನ್ ಕಾರ್ಪೊರೇಷನ್‌ನ ಐಪಿಒ (IPO) ಸಮಯದಲ್ಲಿ ಷೇರು ಖರೀದಿಸಿದ ಹೂಡಿಕೆದಾರರು ಈಗ ಶೇ.45ರಷ್ಟು ನಷ್ಟ ಅನುಭವಿಸುತ್ತಿದ್ದಾರೆ. ವರ್ಲ್ಡ್ ಲಿಬರ್ಟಿ ಫೈನಾನ್ಷಿಯಲ್ (WLFI) ಟೋಕನ್‌ಗಳ ಮೌಲ್ಯ ಕೂಡ 6 ಬಿಲಿಯನ್ ಡಾಲರ್‌ನಿಂದ 3.15 ಬಿಲಿಯನ್ ಡಾಲರ್‌ಗೆ ಕುಸಿದಿದ್ದು, ಹೂಡಿಕೆದಾರರನ್ನು ಕಂಗಾಲಾಗಿಸಿದೆ.

