ಪ್ರಧಾನಿ ಅವರ ಉಕ್ರೇನ್ ಭೇಟಿ | ಶಾಂತಿಗೆ ಮುನ್ನುಡಿ ಆಗುವುದೇ?
ಯುದ್ಧವನ್ನು ಕೊನೆಗೊಳಿಸಲು ಮಾಸ್ಕೋ ಮತ್ತು ಕೈವ್ ಎರಡೂ ಮಾತುಕತೆಗೆ ಕುಳಿತುಕೊಳ್ಳಲು ಇನ್ನೂ ಸಿದ್ಧವಾಗಿಲ್ಲ ಎಂದು ಭಾರತಕ್ಕೆ ತಿಳಿದಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಉದ್ದೇಶಿತ ಉಕ್ರೇನ್ ಭೇಟಿಯು ಶಾಂತಿ ಪ್ರಕ್ರಿಯೆಗೆ ದಾರಿ ಮಾಡಿಕೊಡುವ ನಿರೀಕ್ಷೆಗಳ ನಡುವೆ ನಡೆಯುತ್ತಿದೆ. ಭಾರತ ಶಾಂತಿಯುತ ಪರಿಹಾರವನ್ನು ಬೆಂಬಲಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡಲಿದೆ ಎಂದು ಮೋದಿ ಹೇಳಿದ್ದಾರೆ.
1991ರಲ್ಲಿ ಸೋವಿಯತ್ ಒಕ್ಕೂಟದ ಪತನದ ನಂತರ, ಭಾರತದ ಪ್ರಧಾನಿಯೊಬ್ಬರು ಉಕ್ರೇನಿಗೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ಜು ಲೈ 2024 ರಲ್ಲಿ ಇಟಲಿಯಲ್ಲಿ ಜಿ7 ಶೃಂಗಸಭೆಯಲ್ಲಿ ಮೋದಿ ಅವರು ಝೆಲೆನ್ಸ್ಕಿ ಅವರನ್ನು ಭೇಟಿಯಾದ ನಂತರ, ಕೈವ್ ಗೆ ಆಹ್ವಾನ ನೀಡಿದ್ದರು.
ಭಾರತವು ಮಧ್ಯವರ್ತಿಯಂತೆ ಕಾರ್ಯನಿರ್ವಹಿಸಬೇಕೆಂದು ಉಕ್ರೇನ್ ಬಯಸುತ್ತದೆ. ಬೇರೆ ಪಾಶ್ಚಿಮಾತ್ಯ ದೇಶಕ್ಕೆ ಹೋಲಿಸಿದರೆ ನವ ದೆಹಲಿಯು ಮಾಸ್ಕೋ ಮೇಲೆ ಹೆಚ್ಚಿನ ಹತೋಟಿ ಹೊಂದಿದೆ ಎಂದು ಅದು ನಂಬುತ್ತದೆ.
ಮಾರ್ಚ್ 2024 ರಲ್ಲಿ ಭಾರತ ಮತ್ತು ಉಕ್ರೇನ್ ವಿದೇಶಾಂಗ ಮಂತ್ರಿಗಳು ನವದೆಹಲಿಯಲ್ಲಿ ಭೇಟಿಯಾಗಿದ್ದು, ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ಒಪ್ಪಿಕೊಂಡಿದ್ದರು. ಮೋದಿ ಅವರೊಂದಿಗಿನ ದೂರವಾಣಿ ಕರೆಯಲ್ಲಿ ಸ್ವಿಟ್ಜರ್ಲೆಂಡ್‌ನಲ್ಲಿ ನಡೆಯಲಿರುವ ಉಕ್ರೇನ್ ಶಾಂತಿ ಶೃಂಗಸಭೆಯಲ್ಲಿ ಭಾಗವಹಿಸಬೇಕೆಂದು ಝೆಲೆನ್ಸ್ಕಿ ಕೋರಿದ್ದರು. ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಮಾರ್ಗಗಳ ಬಗ್ಗೆಯೂ ಚರ್ಚಿಸಿದ್ದರು. ಆದರೆ, ಮೋದಿ ಅವರು ಶೃಂಗಸಭೆಯಲ್ಲಿ ಭಾಗವಹಿಸಲಿಲ್ಲ ಮತ್ತು ಶೃಂಗಸಭೆಯ ಜಂಟಿ ಹೇಳಿಕೆಯನ್ನು ಭಾರತ ಅನುಮೋದಿಸಲಿಲ್ಲ.
ಶಾಂತಿ ದೂತನ ಕಾರ್ಯ?: ಆದರೆ, ಭಾರತವು ʻಶಾಂತಿದೂತʼ ನಂತೆ ಕಾರ್ಯನಿರ್ವಹಿಸಬಹುದು ಎಂದು ರಾಜತಾಂತ್ರಿಕರು ಭಾವಿಸುತ್ತಾರೆ. ಪಶ್ಚಿಮ ರಾಷ್ಟ್ರಗಳು ಭಾರತ ಮತ್ತು ಮೋದಿ ಅವರು 28 ತಿಂಗಳ ಯುದ್ಧವನ್ನು ಅಂತ್ಯಗೊಳಿಸಲು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮೇಲೆ ಪ್ರಭಾವ ಬೀರಲು ಮತ್ತು ಮಧ್ಯಸ್ಥಗಾರರಾಗಿ ಕಾರ್ಯನಿರ್ವಹಿಸಬೇಕೆಂದು ಬಯಸುತ್ತವೆ.
ನವದೆಹಲಿ ಶಾಂತಿಗೆ ಸೀಮಿತ ಕೊಡುಗೆ ನೀಡಲು ಸಾಧ್ಯವಾದರೂ, ಅದು ಪ್ರಮುಖ ಮೈಲುಗಲ್ಲು ಆಗಲಿದೆ. ಭಾರತ ಒಂದು ʻಪ್ರಮುಖ ಶಕ್ತಿʼ ಎಂಬ ಸ್ಥಾನಮಾನವನ್ನು ದೃಡಪಡಿಸುತ್ತದೆ; ಇದನ್ನು ಮೋದಿಯವರು ಪದೇ ಪದೇ ಪ್ರಸ್ತಾಪಿಸುತ್ತಾರೆ. ಆದರೆ, ಭಾರತದ ಮಧ್ಯಸ್ಥಿಕೆಯು ಒಮ್ಮೆ ಮಾತ್ರ ನಡೆಯಬಹುದಾದ ಪ್ರಯತ್ನ ಆಗಿರುವುದಿಲ್ಲ. ನಿರಂತರ ಪ್ರಕ್ರಿಯೆಯ ಭಾಗವಾಗಿರುತ್ತದೆ.
ರಷ್ಯಾ ಅಥವಾ ಉಕ್ರೇನ್ ಶಾಂತಿಗೆ ಸಿದ್ಧವಾಗಿಲ್ಲ. ಮಾಸ್ಕೋ ಮತ್ತು ಕೈವ್ ಯುದ್ಧವನ್ನು ಕೊನೆಗೊಳಿಸಲು ಬಯಸುತ್ತೇವೆ ಎಂದು ಹೇಳಿದ್ದರೂ, ಅವು ತಮ್ಮದೇ ಶರತ್ತುಗಳನ್ನು ವಿಧಿಸುತ್ತವೆ.
ಉಕ್ರೇನಿನಿಂದ ಆಕ್ರಮಿಸಿಕೊಂಡಿರುವ ಪ್ರದೇಶಗಳಾದ ಡೊನೆಟ್ಸ್ಕ್, ಲುಹಾನ್ಸ್ಕ್, ಖೆರ್ಸನ್ ಮತ್ತು ಜಪೋರಿಝಿಯಾವನ್ನು ಬಿಟ್ಟುಕೊಡಲು ಮಾಸ್ಕೋ ಸಿದ್ಧಲಿಲ್ಲ. ಜೊತೆಗೆ, ಉಕ್ರೇನಿಯನ್ ಪಡೆಗಳು ರಷ್ಯಾದಿಂದ ಸ್ವಾಧೀನಪಡಿಸಿಕೊಂಡ ಪ್ರದೇಶಗಳಿಂದ ಹೊರಹೋಗಬೇಕೆಂದು ಮಾಸ್ಕೋ ಬಯಸುತ್ತದೆ. ಇದು ಕೈವ್‌ಗೆ ಸಮ್ಮತವಲ್ಲ; ಮತ್ತು, ಇದರಿಂದ ಸಂಧಾನ ಆರಂಭವಾಗಿಲ್ಲ.
ರಾಜಿಗೆ ಒಪ್ಪದ ಉಕ್ರೇನ್: ತನ್ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ರಾಜಿ ಮಾಡಿಕೊಳ್ಳಲು ಕೈವ್ ಬಯಸುವುದಿಲ್ಲ. ಇದು ಉಕ್ರೇನ್‌ನಲ್ಲಿ ಮತ್ತಷ್ಟು ಅಸ್ಥಿರತೆ ತರುವ ಕ್ರಾಂತಿಗೆ ಕಾರಣವಾಗಬಹುದು ಎನ್ನುವುದು ಅದರ ಆತಂಕ.
ಕ್ರಿಮಿಯಾ ಸೇರಿದಂತೆ ರಷ್ಯಾ ಆಕ್ರಮಿಸಿಕೊಂಡಿರುವ ಉಕ್ರೇನಿಗೆ ಸೇರಿದ ಎಲ್ಲ ಪ್ರದೇಶವನ್ನು ಹಿಂಪಡೆಯಲು ಕೈವ್ ಬಯಸಿದೆ. ಉಕ್ರೇನಿನಿಂದ ರಷ್ಯಾ ತನ್ನ ಸೈನ್ಯವನ್ನು ಹಿಂಪಡೆಯಬೇಕೆಂದು ಅದು ಬಯಸುತ್ತದೆ. ಮಾಸ್ಕೋ ಇದನ್ನು ಎಂದಿಗೂ ಮಾಡುವುದಿಲ್ಲ.
ಅಮೆರಿಕ ಮತ್ತು ನ್ಯಾಟೋ ಕೂಡ ಯುದ್ಧವನ್ನು ಕೊನೆಗೊಳಿಸಬೇಕೆಂಬ ರಷ್ಯಾದ ಬೇಡಿಕೆಯನ್ನು ತಿರಸ್ಕರಿಸಿವೆ. ಎರಡೂ ಕಡೆಯವರು ತಮ್ಮ ಭಿನ್ನಾಭಿಪ್ರಾಯಗಳನ್ನು ನಿವಾರಿಸುವುದು ತೀರಾ ಅಸಂಭವ. ಆದ್ದರಿಂದ ಯುದ್ಧವು ಮುಂದುವರಿಯುವ ಸಾಧ್ಯತೆಯಿದೆ. ಎರಡೂ ದೇಶಗಳು ಕಡೆ ಸುಸ್ತಾಗಿವೆ; ಆದರೆ, ಸಂಪೂರ್ಣವಾಗಿ ದಣಿದಿಲ್ಲ.
ಭಾರತವು ಯುದ್ಧದಲ್ಲಿ ಮಧ್ಯವರ್ತಿಯಂತೆ ಕಾರ್ಯನಿರ್ವಹಿಸಬಹುದು.
ಮೋದಿ ಅವರು ಪುಟಿನ್ ಮತ್ತು ಝೆಲೆನ್ಸ್ಕಿ ಅವರೊಂದಿಗಿನ ತಮ್ಮ ಹಲವಾರು ಫೋನ್ ಕರೆಗಳಲ್ಲಿ ಮಾತುಕತೆ ಮತ್ತು ಸಂಧಾನದ ಮೂಲಕ ಯುದ್ಧವನ್ನು ಕೊನೆಗೊಳಿಸುವಂತೆ ಕರೆ ನೀಡಿದ್ದಾರೆ. ಭಾರತ ಯುದ್ಧದಲ್ಲಿ ತಟಸ್ಥ ನಿಲುವು ತಳೆದಿದೆ.
ಸಂವಾದ ಮತ್ತು ರಾಜತಾಂತ್ರಿಕತೆ: ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹಲವು ಸಂದರ್ಭಗಳಲ್ಲಿ ರಾಜತಾಂತ್ರಿಕತೆ ಮತ್ತು ಮಾತುಕತೆ ಮೂಲಕ ರಷ್ಯಾ-ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ಭಾರತದ ನಿಲುವನ್ನು ಮೋದಿ ಪುನರುಚ್ಚರಿಸಿದ್ದಾರೆ. ಕಳೆದ ಜುಲೈಯಲ್ಲಿನ ಎರಡು ದಿನಗಳ ರಷ್ಯಾ ಭೇಟಿ ಸಂದರ್ಭದಲ್ಲಿ ಪುಟಿನ್ ಅವರಿಗೆ ʻಯುದ್ಧದಿಂದ ಪರಿಹಾರ ಸಾಧ್ಯವಿಲ್ಲ. ಮಾತುಕತೆ ಮತ್ತು ರಾಜತಾಂತ್ರಿಕತೆ ಉಳಿದ ದಾರಿ,ʼ ಎಂದು ಒತ್ತಿ ಹೇಳಿದ್ದರು.
ಆದರೆ, ತಟಸ್ಥ ಕಾರ್ಯನೀತಿಯಿಂದಾಗಿ ಉಕ್ರೇನ್ ಆಕ್ರಮಣಕ್ಕಾಗಿ ರಷ್ಯಾವನ್ನು ಸಾರ್ವಜನಿಕವಾಗಿ ಟೀಕಿಸಿಲ್ಲ. ಆದರೆ, ಯುದ್ಧವನ್ನು ಸಾರ್ವಜನಿಕವಾಗಿ ಮನ್ನಿಸಿಲ್ಲ ಮತ್ತು ಮಾಸ್ಕೋವನ್ನು ಟೀಕಿಸಿದ ಅಂತಾರಾಷ್ಟ್ರೀಯ ವೇದಿಕೆಗಳಿಂದ ದೂರ ಕಾಯ್ದುಕೊಂಡಿದೆ.
ಆದರೆ, ಸಾರ್ವಭೌಮತ್ವ ಮತ್ತು ದೇಶಗಳ ಪ್ರಾದೇಶಿಕ ಸಮಗ್ರತೆ, ಅಂತಾರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆಯ ಚಾರ್ಟರ್ ಅನ್ನು ಗೌರವಿಸುವ ಮೂಲಕ, ರಷ್ಯಾವನ್ನು ಪರೋಕ್ಷವಾಗಿ ಟೀಕಿಸಿದೆ. 2022, 2023ರಲ್ಲಿ ವಾರ್ಷಿಕ ಭಾರತ-ರಷ್ಯಾ ಶೃಂಗಸಭೆಗೆ ಮೋದಿ ಅವರು ಹೋಗಲಿಲ್ಲ.
ಉಜ್ಬೇಕಿಸ್ತಾನದ ಸಮರ್‌ಕಂಡದಲ್ಲಿ 2022ರಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಮೋದಿ ಅವರು ʻಇದು ಯುದ್ಧದ ಯುಗವಲ್ಲʼ ಎಂದು ಪುಟಿನ್ ಅವರಿಗೆ ಹೇಳಿದ್ದರು.
ಅಮೆರಿಕ ನೇತೃತ್ವದ ಪಶ್ಚಿಮ ದೇಶಗಳು ಭಾರತದ ತಟಸ್ಥ ನಿಲುವನ್ನು ಟೀಕಿಸಿವೆ. ತಮ್ಮ ಎರಡು ದಿನಗಳ ರಷ್ಯಾ ಭೇಟಿಯಲ್ಲಿ ಪುಟಿನ್ ಅವರನ್ನು ಮೋದಿ ಅಪ್ಪಿಕೊಂಡಿದ್ದನ್ನು ಯುಎಸ್ ಮತ್ತು ಉಕ್ರೇನ್ ತೀವ್ರವಾಗಿ ಟೀಕಿಸಿದ್ದವು. ಅದೇ ದಿನ, ಕೈವ್‌ನ ಮಕ್ಕಳ ಆಸ್ಪತ್ರೆ ಮೇಲೆ ಕ್ಷಿಪಣಿ ದಾಳಿ ನಡೆಸಿದ ರಷ್ಯಾ, ಮಕ್ಕಳು ಸೇರಿದಂತೆ ಅಮಾಯಕ ನಾಗರಿಕರನ್ನು ಕೊಂದಿತು. ಇದರಿಂದ ಪುಟಿನ್ ಅವರನ್ನು ಮೋದಿ ಪರೋಕ್ಷವಾಗಿ ಖಂಡಿಸುವಂತಾಯಿತು.
ಚೀನಾದ ಪಾತ್ರ: ಆದರೆ, ಯುಎಸ್ ನೇತೃತ್ವದ ಪಶ್ಚಿಮ ರಾಷ್ಟ್ರಗಳು ಚೀನಾದ ಬದಲು ಭಾರತ ಮಧ್ಯವರ್ತಿ ಆಗಿರಬೇಕು ಎಂದು ಬಯಸು ತ್ತವೆ. ಭಾರತವು ರಷ್ಯಾ ಮತ್ತು ಅಮೆರಿಕ ಎರಡರೊಂದಿಗೂ ಬಲವಾದ ಸಂಬಂಧವನ್ನು ಹೊಂದಿರುವುದು ಇದಕ್ಕೆ ಕಾರಣ. ಅಲ್ಲದೆ, ಭಾರತ ವು ರಷ್ಯಾಕ್ಕೆ ಯಾವುದೇ ವಸ್ತು ಬೆಂಬಲವನ್ನು ನೀಡಿಲ್ಲ.
ಅಮೆರಿಕ ನೇತೃತ್ವದ ಪಶ್ಚಿಮ ಮತ್ತು ನೇಟೋ ರಾಷ್ಟ್ರಗಳ ಪೂರ್ವಾಭಿಮುಖ ವಿಸ್ತರಣೆಯನ್ನು ಚೀನಾ ದೂಷಿಸಿದೆ. ಬೀಜಿಂಗ್‌ನಂತೆ ನವದೆಹಲಿಯು ಯಾವುದೇ ಗುಂಪಿನ ಅಧಿಕೃತ ನಿರೂಪಣೆಯನ್ನು ವರ್ಧಿಸಲು ರಾಜ್ಯ ನಿಯಂತ್ರಿತ ಮಾಧ್ಯಮಗಳನ್ನು ಬಳಸಿಲ್ಲ. ಫೆಬ್ರವರಿ 2023 ರಲ್ಲಿ ಪ್ರಕಟವಾದ ಚೀನಾದ ಶಾಂತಿ ಪ್ರಸ್ತಾಪವು ಉಕ್ರೇನ್‌ನೊಂದಿಗಿನ ಮಾಸ್ಕೋ ಕಡೆಗೆ ಒಲವು ತೋರಿದೆ. ಪಶ್ಚಿಮ ರಾಷ್ಟ್ರಗಳು ಬೀಜಿಂಗ್‌ನ ಈ ಪ್ರಸ್ತಾಪಕ್ಕೆ ನಿರಾಶಾದಾಯಕ ಪ್ರತಿಕ್ರಿಯೆ ನೀಡಿವೆ.
ಮೋದಿ ಅವರು ಇತ್ತೀಚೆಗೆ ರಷ್ಯಾಕ್ಕೆ ಭೇಟಿ ನೀಡಿದ್ದರು. ಅವರ ಕೈವ್ ಭೇಟಿಯು ಭಾರತ-ಉಕ್ರೇನ್ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸುತ್ತದೆ. ರಷ್ಯಾದಲ್ಲಿ ಆದಂತೆ ಮೋದಿ ಅವರು ಉಕ್ರೇನಿಗೂ ಶಾಂತಿಯ ಸಂದೇಶ ತರುತ್ತಾರೆ; ಯುದ್ಧ ಕೊನೆಗೊಳಿಸಿ ಶಾಂತಿ ಮರುಸ್ಥಾಪಿಸುವ ಬಗ್ಗೆ ಝೆಲೆನ್ಸ್ಕಿ ಅವರೊಂದಿಗೆ ಮಾತನಾಡುತ್ತಾರೆ.
ಆದರೆ, ಅವರು ತಮ್ಮ ಬಳಿ ಶಾಂತಿ ಪ್ರಸ್ತಾವವೊಂದನ್ನು ಹೊಂದಿಲ್ಲ. ಮಾಸ್ಕೋ ಮತ್ತು ಕೈವ್ ಎರಡೂ ಯುದ್ಧವನ್ನು ಕೊನೆಗೊಳಿಸಲು ಮಾತುಕತೆಗೆ ಕುಳಿತುಕೊಳ್ಳಲು ಸಿದ್ಧವಾಗಿಲ್ಲ ಎನ್ನುವುದು ಮೋದಿ ಅವರಿಗೆ ಚೆನ್ನಾಗಿ ಗೊತ್ತಿದೆ.
(ರಾಜ್ ವರ್ಮಾ, ಶಾಂಘೈ ಇಂಟರ್‌ನ್ಯಾಶನಲ್ ಸ್ಟಡೀಸ್ ಯೂನಿವರ್ಸಿಟಿ. ಕ್ರಿಯೇಟಿವ್ ಕಾಮನ್ಸ್ ಅಡಿಯಲ್ಲಿ 360info ಮೂಲಕ ಪ್ರಕಟಿಸಲಾಗಿದೆ.)