
ಅಮೆರಿಕದಲ್ಲಿ ಅಪಘಾತಕ್ಕೆ ಒಳಗಾಗಿರುವ ಭಾರತೀಯ ಮೂಲದ ವಿದ್ಯಾರ್ಥಿನಿ ನೀಲಂ ಶಿಂಧೆ.
ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿನಿಗೆ ಅವಘಡ; ಪೋಷಕರಿಗೆ ತುರ್ತು ವೀಸಾ ಕೋರಿದ ಕೇಂದ್ರ
ಅಪಘಾತದಿಂದಾಗಿ ನೀಲಂ ಅವರ ಎರಡೂ ತೋಳುಗಳು ಮತ್ತು ಎರಡೂ ಕಾಲುಗಳ ಮೂಳೆ ಮುರಿತವಾಗಿದೆ. ತಲೆಗೆ ಏಟು ಬಿದ್ದಿದ್ದ ಕಾರಣ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆಯನ್ನೂ ನಡೆಸಲಾಗಿದೆ. ಅದಕ್ಕಾಗಿ ಅಲ್ಲಿನ ಆಸ್ಪತ್ರೆ ಒಪ್ಪಿಗೆ ಕೋರಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಅಮೆರಿಕದಲ್ಲಿ ಅಪಘಾತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ಭಾರತ ಮೂಲದ ವಿದ್ಯಾರ್ಥಿನಿಯನ್ನು ಭೇಟಿ ಮಾಡಲು ಅವರ ಕುಟುಂಬ ತುರ್ತು ವೀಸಾ ನೀಡುವಂತೆ ಕೋರಿದೆ. ಕೇಂದ್ರ ವಿದೇಶಾಂಗ ಸಚಿವಾಲಯ ಈ ಹಿನ್ನೆಲೆಯಲ್ಲಿ ಅಮೆರಿಕ ವಲಸೆ ಅಧಿಕಾರಿಗಳನ್ನು ಸಂಪರ್ಕಿಸಿದೆ. ಮಹಾರಾಷ್ಟ್ರದ ಸತಾರಾ ಮೂಲದ ನೀಲಂ ಶಿಂಧೆ (35) ಫೆಬ್ರವರಿ 14ರಂದು ಕ್ಯಾಲಿಫೋರ್ನಿಯಾದಲ್ಲಿ ಅಪಘಾತಕ್ಕೀಡಾಗಿದ್ದು, ಪ್ರಸ್ತುತ ಅವರನ್ನು ಅಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಸ್ತ್ರಚಿಕಿತ್ಸೆ ಬಳಿಕವೂ ಅವರು ಕೋಮಾ ಸ್ಥಿತಿಯಲ್ಲಿದ್ದಾರೆ ಎಂದು ವರದಿಗಳು ತಿಳಿಸಿವೆ.
ಕೋಮಾದಲ್ಲಿ ನೀಲಂ
ವರದಿ ಪ್ರಕಾರ, ಅಪಘಾತದಿಂದಾಗಿ ನೀಲಂ ಅವರ ಎರಡೂ ತೋಳುಗಳು ಮತ್ತು ಎರಡೂ ಕಾಲುಗಳ ಮೂಳೆ ಮುರಿತವಾಗಿದೆ. ತಲೆಗೆ ಏಟು ಬಿದ್ದಿದ್ದ ಕಾರಣ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆಯನ್ನೂ ನಡೆಸಲಾಗಿದೆ. ಅದಕ್ಕಾಗಿ ಅಲ್ಲಿನ ಆಸ್ಪತ್ರೆ ಒಪ್ಪಿಗೆ ಕೋರಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ನೀಲಂ ಅವರ ತಂದೆ ತಾನಾಜಿ ಶಿಂಧೆ ಅವರಿಗೆ ವೈದ್ಯಕೀಯ ತುರ್ತು ಪರಿಸ್ಥಿತಿಯ ಕಾರಣಕ್ಕೆ ತುರ್ತು ವೀಸಾ ಬೇಕಾಗಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಸಂಸದೆ ಸುಪ್ರಿಯಾ ಸುಳೆ ಎಕ್ಸ್ನಲ್ಲಿ (ಹಿಂದಿನ ಟ್ವಿಟರ್) ಬರೆದು, ಅದನ್ನು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಟ್ಯಾಗ್ ಮಾಡಿದ್ದಾರೆ. ಅದೇ ರೀತಿ ಯುಎಸ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ವಿದೇಶದಲ್ಲಿರುವ ಭಾರತೀಯರಿಗೆ ಸಹಾಯ ಮಾಡುವ ವಿದೇಶಾಂಗ ಸಚಿವಾಲಯದ 'ಮದದ್' ಹ್ಯಾಂಡಲ್ಗೂ ಟ್ಯಾಗ್ ಮಾಡಲಾಗಿದೆ.
ನೆರವು ಕೋರಿದ ಸಂಸದೆ
"ವಿದ್ಯಾರ್ಥಿನಿ ನೀಲಂ ಶಿಂಧೆ ಅಮೆರಿಕದಲ್ಲಿ ಅಪಘಾತಕ್ಕೀಡಾಗಿದ್ದು, ಅಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಹಾರಾಷ್ಟ್ರದ ಸತಾರಾದ ಆಕೆಯ ತಂದೆ ತಾನಾಜಿ ಶಿಂಧೆಗೆ ಅಮೆರಿಕಕ್ಕೆ ಹೋಗಲು ವೀಸಾ ಬೇಕಾಗಿದೆ. ಅವರು ತುರ್ತು ವೀಸಾಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ." ಎಂದು ಸುಳೆ ಬರೆದುಕೊಂಡಿದ್ದಾರೆ.
ನೀಲಂ ಅವರ ತಂದೆಗೆ ಯುಎಸ್ ವೀಸಾ ನೀಡುವ ಬಗ್ಗೆ ಎಂಇಎ ಯುಎಸ್ ಅಧಿಕಾರಿಗಳೊಂದಿಗೆ ಈ ಸಂಪರ್ಕ ಮಾಡಿದೆ ಎಂದು ಗುರುವಾರ ಮಧ್ಯಾಹ್ನ (ಫೆಬ್ರವರಿ 27) ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
"ವಿದೇಶಾಂಗ ಇಲಾಖೆ ವಿಷಯವನ್ನು ಕೈಗೆತ್ತಿಕೊಂಡಿದೆ. ಅರ್ಜಿದಾರರ ಕುಟುಂಬಕ್ಕೆ ಶೀಘ್ರ ವೀಸಾ ನೀಡುವ ಪ್ರಕ್ರಿಯೆಯನ್ನು ಅಮೆರಿಕದ ಅಧಿಕಾರಿಗಳು ನಡೆಸುತ್ತಿದ್ದಾರೆ" ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.