
ಕ್ಯಾಲಿಫೋರ್ನಿಯಾದಲ್ಲೂ ದೀಪಾವಳಿಗೆ ಅಧಿಕೃತ ರಜೆ ಘೋಷಣೆ
ಕಳೆದ ವರ್ಷ, ಪೆನ್ಸಿಲ್ವೇನಿಯಾ ದೀಪಾವಳಿಯನ್ನು ರಾಜ್ಯ ರಜೆಯಾಗಿ ಅಧಿಕೃತವಾಗಿ ಅಂಗೀಕರಿಸಿದ ಮೊದಲ ಅಮೆರಿಕನ್ ರಾಜ್ಯವಾಗಿತ್ತು.
ದೀಪಾವಳಿ ಹಬ್ಬವನ್ನು ಅಧಿಕೃತ ರಾಜ್ಯ ರಜೆಯನ್ನಾಗಿ ಘೋಷಿಸಿದ ಅಮೆರಿಕದ ಮೂರನೇ ರಾಜ್ಯವಾಗಿ ಕ್ಯಾಲಿಫೋರ್ನಿಯಾ ಹೊರಹೊಮ್ಮಿದೆ. ಕ್ಯಾಲಿಫೋರ್ನಿಯಾದ ಗವರ್ನರ್ ಗೇವಿನ್ ನ್ಯೂಸಮ್ ಅವರು ಮಂಗಳವಾರ (ಅಕ್ಟೋಬರ್ 7) ಶಾಸಕ ಆಶ್ ಕಾಲ್ರಾ ಅವರು ಮಂಡಿಸಿದ್ದ ದೀಪಾವಳಿ ರಜೆ ಮಸೂದೆಗೆ ಅಂಕಿತ ಹಾಕಿದ್ದಾರೆ.
ಕಳೆದ ವರ್ಷ, ಪೆನ್ಸಿಲ್ವೇನಿಯಾ ದೀಪಾವಳಿಯನ್ನು ರಾಜ್ಯ ರಜೆಯಾಗಿ ಅಧಿಕೃತವಾಗಿ ಗುರುತಿಸಿದ ಮೊದಲ ಅಮೆರಿಕನ್ ರಾಜ್ಯವಾಗಿತ್ತು. ನಂತರ ಈ ವರ್ಷ ಕನೆಕ್ಟಿಕಟ್ ರಾಜ್ಯ ಕೂಡ ಇದೇ ಕ್ರಮ ಕೈಗೊಂಡಿತ್ತು. ಇದಲ್ಲದೆ, ನ್ಯೂಯಾರ್ಕ್ ನಗರದಲ್ಲಿ ದೀಪಾವಳಿ ಹಬ್ಬಕ್ಕೆ ಸಾರ್ವಜನಿಕ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
'ಎಬಿ 268' ಶೀರ್ಷಿಕೆಯ ಈ ಮಸೂದೆಯು ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಕ್ಯಾಲಿಫೋರ್ನಿಯಾದ ಶಾಸಕಾಂಗದ ಎರಡೂ ಸದನಗಳಲ್ಲಿ ಯಶಸ್ವಿಯಾಗಿ ಅಂಗೀಕಾರಗೊಂಡು, ಗವರ್ನರ್ ನ್ಯೂಸಮ್ ಅವರ ಅಂತಿಮ ಅಂಕಿತಕ್ಕಾಗಿ ಕಾಯುತ್ತಿತ್ತು. "ಕ್ಯಾಲಿಫೋರ್ನಿಯಾವು ಅಮೆರಿಕದಲ್ಲೇ ಅತಿ ಹೆಚ್ಚು ಭಾರತೀಯ ಅಮೆರಿಕನ್ನರನ್ನು ಹೊಂದಿರುವ ರಾಜ್ಯವಾಗಿದೆ. ದೀಪಾವಳಿಯನ್ನು ಅಧಿಕೃತ ರಾಜ್ಯ ರಜೆಯಾಗಿ ಘೋಷಿಸುವುದರಿಂದ ಹಬ್ಬವನ್ನು ಆಚರಿಸುವ ಲಕ್ಷಾಂತರ ಕ್ಯಾಲಿಫೋರ್ನಿಯನ್ನರಿಗೆ ಉತ್ತೇಜನ ನೀಡಿದಂತಾಗುತ್ತದೆ" ಎಂದು ಶಾಸಕ ಆಶ್ ಕಲ್ರಾ ಈ ಹಿಂದೆ ಹೇಳಿದ್ದರು.
ಭಾರತೀಯ ಸಮುದಾಯದ ಸಂಭ್ರಮ
ಕ್ಯಾಲಿಫೋರ್ನಿಯಾ ಸರ್ಕಾರದ ಈ ಘೋಷಣೆಯನ್ನು ಸಮುದಾಯದ ನಾಯಕರು ಮತ್ತು ಭಾರತೀಯರ ಪ್ರಮುಖ ಸಂಸ್ಥೆಗಳು ಸ್ವಾಗತಿಸಿವೆ. 'ಇಂಡಿಯಾಸ್ಪೊರಾ' ಎಂಬ ಲಾಭರಹಿತ ಸಂಸ್ಥೆಯು, "ಕ್ಯಾಲಿಫೋರ್ನಿಯಾದ ಈ ನಿರ್ಧಾರವು ಭಾರತೀಯ ಅಮೆರಿಕನ್ನರ ಸಾಂಸ್ಕೃತಿಕ ಸೇರ್ಪಡೆ ಮತ್ತು ಮನ್ನಣೆಯ ಪಯಣದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ. ಇದು ಕೇವಲ ದೀಪಾವಳಿಯ ಮಹತ್ವವನ್ನು ಮಾತ್ರವಲ್ಲದೆ, ಅಮೆರಿಕದಾದ್ಯಂತ ಭಾರತೀಯ ಸಮುದಾಯದ ಪ್ರಭಾವವನ್ನು ಪ್ರತಿಬಿಂಬಿಸುತ್ತದೆ," ಎಂದು ಹೇಳಿದೆ.
ಇಂಡಿಯಾಸ್ಪೊರಾದ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಎಂ.ಆರ್. ರಂಗಸ್ವಾಮಿ ಅವರು, "ಈ ಐತಿಹಾಸಿಕ ನಿರ್ಧಾರವು ಕ್ಯಾಲಿಫೋರ್ನಿಯಾದ ಬೆಳವಣಿಗೆ ಮತ್ತು ಯಶಸ್ಸಿಗೆ ಕೊಡುಗೆ ನೀಡಿದ ಭಾರತೀಯ ಅಮೆರಿಕನ್ನರ ತಲೆಮಾರುಗಳನ್ನು ಗೌರವಿಸುತ್ತದೆ. ವೈವಿಧ್ಯತೆಯೇ ನಮ್ಮ ನಿಜವಾದ ಶಕ್ತಿ ಎಂಬುದನ್ನು ಇದು ದೃಢಪಡಿಸುತ್ತದೆ" ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹೊಸ ಮೈಲಿಗಲ್ಲು
ಸಿಲಿಕಾನ್ ವ್ಯಾಲಿಯ ಪ್ರಮುಖ ಉದ್ಯಮಿ, ಲೋಕೋಪಕಾರಿ ಮತ್ತು ಅಧ್ಯಕ್ಷ ಜೋ ಬೈಡನ್ ಅವರ ಮಾಜಿ ಸಲಹೆಗಾರರಾದ ಅಜಯ್ ಭೂತೋರಿಯಾ ಅವರು, ಈ ಘೋಷಣೆಯನ್ನು "ಕ್ಯಾಲಿಫೋರ್ನಿಯಾದ ಸಾಂಸ್ಕೃತಿಕ ವೈಭವದ ಪಯಣದಲ್ಲಿ ಒಂದು ಉಜ್ವಲ ಮೈಲಿಗಲ್ಲು" ಎಂದು ಬಣ್ಣಿಸಿದ್ದಾರೆ. "ನಮ್ಮ ಪಾಲಿನ ಹೆಮ್ಮೆಯ ಬೆಳಕಿನ ಹಬ್ಬವಾದ ದೀಪಾವಳಿ, ಕಷ್ಟದ ಮೇಲೆ ಭರವಸೆಯ, ವಿಭಜನೆಯ ಮೇಲೆ ಏಕತೆಯ ಮತ್ತು ಅಜ್ಞಾನದ ಮೇಲೆ ಜ್ಞಾನದ ಶಾಶ್ವತ ವಿಜಯವನ್ನು ಸಂಕೇತಿಸುತ್ತದೆ. ಈ ಸಂದೇಶವು ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿರುವ ಸುಮಾರು ಒಂದು ದಶಲಕ್ಷ ದಕ್ಷಿಣ ಏಷ್ಯನ್ನರ ಮನಸ್ಸಿನಲ್ಲಿ ಆಳವಾಗಿ ಪ್ರತಿಧ್ವನಿಸುತ್ತದೆ," ಎಂದು ಅವರು ಹೇಳಿದ್ದಾರೆ.
ಕ್ಯಾಲಿಫೋರ್ನಿಯಾವನ್ನು ತಮ್ಮ ಮನೆಯಾಗಿಸಿಕೊಂಡಿರುವ ಒಂದು ದಶಲಕ್ಷಕ್ಕೂ ಹೆಚ್ಚು ಭಾರತೀಯ ಅಮೆರಿಕನ್ನರಿಗೆ ಇದು ಹೆಮ್ಮೆ ಮತ್ತು ಸಂತೋಷದ ಕ್ಷಣವಾಗಿದೆ. ಈ ನಿರ್ಧಾರವು ಭಾರತೀಯ ಅಮೆರಿಕನ್ನರು ಕ್ಯಾಲಿಫೋರ್ನಿಯಾದ ಕಥೆಯ ಭಾಗವಹಿಸುವವರು ಮಾತ್ರವಲ್ಲ, ಅವರು ಅದರ ಗುರುತಿನ ಅವಿಭಾಜ್ಯ ಅಂಗವಾಗಿದ್ದಾರೆ ಎಂಬುದನ್ನು ದೃಢಪಡಿಸಿದೆ ಎಂದು ಸಮುದಾಯವು ಹರ್ಷ ವ್ಯಕ್ತಪಡಿಸಿದೆ.