
ಜಾಗತಿಕ 'ಸ್ವಾನ್' ವೇದಿಕೆಯಲ್ಲಿ ಬೆಂಗಳೂರು ಜಲಮಂಡಳಿ ಐತಿಹಾಸಿಕ ಸಾಧನೆ
'ಸ್ಮಾರ್ಟ್ ವಾಟರ್ ನೆಟ್‌ವರ್ಕ್ ಫೋರಂ' (SWAN) ಸೇರಿದ ದೇಶದ ಮೊದಲ ಜಲಮಂಡಳಿ ಎಂಬ ಹೆಗ್ಗಳಿಕೆಗೆ BWSSB ಪಾತ್ರವಾಗಿದ್ದು, ನೀರಿನ ನಿರ್ವಹಣೆಯಲ್ಲಿ ಬೆಂಗಳೂರು ಜಾಗತಿಕ ಮಾದರಿಯಾಗಿ ಹೊರಹೊಮ್ಮಿದೆ.
ಸಿಲಿಕಾನ್ ಸಿಟಿ ಬೆಂಗಳೂರು ಈಗ ಕೇವಲ ಮಾಹಿತಿ ತಂತ್ರಜ್ಞಾನಕ್ಕೆ ಮಾತ್ರವಲ್ಲದೆ, ಜಾಗತಿಕ ಮಟ್ಟದ ನೀರಿನ ನಿರ್ವಹಣಾ ತಂತ್ರಜ್ಞಾನದಲ್ಲೂ ಮುಂಚೂಣಿಯಲ್ಲಿದೆ!
ನೀರಿನ ಪೂರೈಕೆ ವ್ಯವಸ್ಥೆಯಲ್ಲಿ ಆಧುನಿಕ ತಂತ್ರಜ್ಞಾನ ಮತ್ತು ದತ್ತಾಂಶವನ್ನು ಬಳಸಿಕೊಳ್ಳುವ ಜಾಗತಿಕ ಸಂಸ್ಥೆಯಾದ 'ಸ್ಮಾರ್ಟ್ ವಾಟರ್ ನೆಟ್‌ವರ್ಕ್ ಫೋರಂ' (SWAN) ಗೆ ಬೆಂಗಳೂರು ಜಲಮಂಡಳಿಯು (BWSSB) ಸೇರ್ಪಡೆಗೊಂಡಿದೆ. ಈ ಮೂಲಕ ಸ್ವಾನ್ (SWAN) ಗೆ ಸೇರಿದ ದೇಶದ ಮೊದಲ ಜಲಮಂಡಳಿ ಎಂಬ ಇತಿಹಾಸ ಬರೆದಿದೆ.
ಈ ಸಾಧನೆಯ ಬೆನ್ನಲ್ಲೇ, ಬೆಂಗಳೂರು ಜಲಮಂಡಳಿಯ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಅವರು ಸ್ವಾನ್ ಫೋರಂನ ಜಾಗತಿಕ 'ಸೀನಿಯರ್ ಯುಟಿಲಿಟಿ ಅಡ್ವೈಸರಿ ಗ್ರೂಪ್' (UAG) ಸದಸ್ಯರಾಗಿ ಫೆ. 18 ರಂದು ಆಯ್ಕೆಯಾಗಿದ್ದಾರೆ. ಜಗತ್ತಿನ 50ಕ್ಕೂ ಹೆಚ್ಚು ದೇಶಗಳ 100ಕ್ಕೂ ಹೆಚ್ಚು ಸಂಸ್ಥೆಗಳಿರುವ ಈ ಪ್ರಭಾವಿ ತಂಡದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಏಕೈಕ ವ್ಯಕ್ತಿ ಬೆಂಗಳೂರಿನಿಂದ ಆಯ್ಕೆಯಾಗಿರುವುದು ವಿಶೇಷ.
ರಾಜ್ಯಕ್ಕೆ ಸಿಗಲಿರುವ ತಾಂತ್ರಿಕ ಲಾಭಗಳೇನು?
ಸ್ವಾನ್ ಫೋರಂನ ಸದಸ್ಯತ್ವದಿಂದ ವಿಶೇಷವಾಗಿ ಬೆಂಗಳೂರಿಗೆ ಅನೇಕ ಲಾಭಗಳಿವೆ. ವಿಶ್ವದ ವಿವಿಧ ನಗರಗಳಲ್ಲಿ ನೀರಿನ ಪೋಲನ್ನು ತಡೆಗಟ್ಟಲು ಬಳಸುವ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬೆಂಗಳೂರಿನಲ್ಲಿ ಅಳವಡಿಸಿಕೊಳ್ಳಲು ಈ ವೇದಿಕೆ ಸಹಕಾರಿಯಾಗಿದೆ. ಕೃತಕ ಬುದ್ಧಿಮತ್ತೆ (AI) ಮತ್ತು ಸೆನ್ಸಾರ್‌ಗಳ ಮೂಲಕ ನೀರಿನ ಸೋರಿಕೆ ಹಾಗೂ ಕಳ್ಳತನವನ್ನು ಪತ್ತೆಹಚ್ಚಲು ಅಂತರರಾಷ್ಟ್ರೀಯ ಮಟ್ಟದ ಮಾರ್ಗದರ್ಶನ ದೊರೆಯಲಿದೆ. ನೀರಿನ ಪಂಪಿಂಗ್ ಮತ್ತು ವಿತರಣೆಯಲ್ಲಿ ವಿದ್ಯುತ್ ಉಳಿತಾಯ ಹಾಗೂ ನಿರ್ವಹಣಾ ವೆಚ್ಚವನ್ನು ತಗ್ಗಿಸಲು ಡಿಜಿಟಲ್ ಪರಿಹಾರಗಳನ್ನು ಅಳವಡಿಸಲು ಸಾಧ್ಯವಾಗಲಿದೆ.
ಸ್ವಾನ್ ಮೂಲಕ ಬೆಂಗಳೂರಿನಲ್ಲಿ ಸಾಧನೆ
ಸ್ವಾನ್ ಮಾದರಿಯನ್ನು ಅನುಸರಿಸಿ ಬೆಂಗಳೂರು ಜಲಮಂಡಳಿಯು ನಗರದ 78 ಪಂಪಿಂಗ್ ಸ್ಟೇಷನ್‌ಗಳಲ್ಲಿ AI ಅಳವಡಿಸುವ ಮೂಲಕ ವಾರ್ಷಿಕ ಸುಮಾರು 40 ಕೋಟಿ ರೂಪಾಯಿ ವಿದ್ಯುತ್ ವೆಚ್ಚ ಉಳಿತಾಯ ಮಾಡಿದೆ. ಪೈಪ್‌ಗಳ ಒಳಗೆ ಚಲಿಸುವ ರೋಬೋಟ್‌ಗಳ ಮೂಲಕ ರಸ್ತೆ ಅಗೆಯದೆ ನೀರಿನ ಸೋರಿಕೆ ಮತ್ತು ಅನಧಿಕೃತ ಸಂಪರ್ಕಗಳನ್ನು ಪತ್ತೆಹಚ್ಚುವ ಕೆಲಸ ನಡೆಯುತ್ತಿದೆ.
ಇಡೀ ಬೆಂಗಳೂರಿನ ಪೈಪ್‌ಲೈನ್ ಜಾಲದ ವರ್ಚುವಲ್ ಮಾದರಿಯನ್ನು ಸಿದ್ಧಪಡಿಸಲಾಗುತ್ತಿದ್ದು, ಎಲ್ಲೆಲ್ಲಿ ನೀರಿನ ಒತ್ತಡ ಎಷ್ಟಿದೆ ಎಂಬುದನ್ನು ಕಂಟ್ರೋಲ್ ರೂಮ್‌ನಿಂದಲೇ ಗಮನಿಸಲಾಗುತ್ತಿದೆ. ಬೃಹತ್ ಗ್ರಾಹಕರಿಗೆ AI ಆಧಾರಿತ ಮೀಟರ್‌ಗಳನ್ನು ಅಳವಡಿಸುವ ಮೂಲಕ ನಿಖರವಾದ ನೀರಿನ ಬಳಕೆಯ ಲೆಕ್ಕಾಚಾರ ಮಾಡಲಾಗುತ್ತಿದೆ. ಐಐಎಸ್‌ಸಿ (IISc) ಸಹಯೋಗದಲ್ಲಿ ಅಳವಡಿಸಲಾದ ಸೆನ್ಸಾರ್‌ಗಳು ನಗರದ ಅಂತರ್ಜಲ ಮಟ್ಟದ ಏರಿಳಿತದ ನಿಖರ ದತ್ತಾಂಶವನ್ನು ನೀಡುತ್ತವೆ.
ನೀರಿನ ಪ್ರತಿ ಹನಿಯೂ ಲೆಕ್ಕಕ್ಕೆ ಸಿಗುವಂತೆ ಮಾಡುವುದು ಮತ್ತು ಮಾನವ ಹಸ್ತಕ್ಷೇಪವಿಲ್ಲದೆ ತಂತ್ರಜ್ಞಾನದ ಮೂಲಕ ನೀರನ್ನು ದಕ್ಷತೆಯಿಂದ ನಿರ್ವಹಿಸುವುದು ಈ ಅಭಿಯಾನದ ಅಂತಿಮ ಗುರಿಯಾಗಿದೆ. ಬೆಂಗಳೂರು ಜಲಮಂಡಳಿಯ ಈ ಜಾಗತಿಕ ಸಾಧನೆಯು "ಜಲ ಜೀವನ ಮಿಷನ್" ನಂತಹ ಯೋಜನೆಗಳಿಗೆ ದೊಡ್ಡ ಬಲ ನೀಡಲಿದೆ ಎನ್ನುತ್ತಾರೆ ಅಧಿಕಾರಿಗಳು.
ಸ್ವಾನ್‌ನಲ್ಲಿ ಪ್ರಪಂಚದ 50ಕ್ಕೂ ಹೆಚ್ಚು ದೇಶಗಳ 100ಕ್ಕೂ ಹೆಚ್ಚು ಸಂಸ್ಥೆಗಳು ಇಲ್ಲಿವೆ. ಇದರಲ್ಲಿ ಅಮೆರಿಕ, ಯುರೋಪ್, ಪೋರ್ಚುಗಲ್, ನೆದರ್‌ಲ್ಯಾಂಡ್, ಬ್ರಿಟನ್, ಏಷ್ಯಾ, ಸಿಂಗಾಪುರ, ಮಲೇಷ್ಯಾ, ಬ್ರೆಜಿಲ್ ಸೇರಿದಂತೆ ಇತರೆ ದೇಶಗಳ ಸಂಸ್ಥೆಗಳಿವೆ. ಭಾರತದಿಂದ ಬೆಂಗಳೂರಿನ ಜಲಮಂಡಳಿ ಸಂಸ್ಥೆ ಮಾತ್ರವೇ ಕಾರ್ಯನಿರ್ವಹಿಸುತ್ತಿರುವುದು ವಿಶೇಷ.
ಕರ್ನಾಟಕದ ಪಾತ್ರ
ಭಾರದ ನೀರಿನ ಸಮಸ್ಯೆಗಳಿಗೆ ಡಿಜಿಟಲ್ ಪರಿಹಾರ ನೀಡಲು ರಚಿಸಲಾಗಿರುವ ಪ್ರತ್ಯೇಕ 'ಸ್ವಾನ್ ಇಂಡಿಯಾ ಅಲಯನ್ಸ್' ನಲ್ಲಿ ರಾಜ್ಯದ ಜಲಮಂಡಳಿಯು ಪ್ರಮುಖ ಪಾತ್ರ ವಹಿಸುತ್ತಿದೆ. ಫ್ರೆಡ್ರಿಕ್ ರಾಯನ್, ರವೀನಾ ಶಿಂದೆ ಮತ್ತು ಅಶೋಕ್ ನಟರಾಜನ್ ಅವರ ನೇತೃತ್ವದಲ್ಲಿ ಈ ತಂಡವು ಭಾರತದ ಇತರ ನಗರಗಳಿಗೂ ಬೆಂಗಳೂರಿನ 'ಸ್ಮಾರ್ಟ್ ವಾಟರ್' ಮಾದರಿಯನ್ನು ವಿಸ್ತರಿಸಲು ಶ್ರಮಿಸುತ್ತಿದೆ.

