Birthright Citizenship : ಜನ್ಮದತ್ತ ಪೌರತ್ವ ನಿಷೇಧಕ್ಕೆ ಭಾರತೀಯ ಮೂಲದ ಸಂಸದರ ವಿರೋಧ
Birthright Citizenship : ಟ್ರಂಪ್ ಅಧಿಕಾರ ವಹಿಸಿಕೊಂಡ ತಕ್ಷಣವೇ ಈ ಆದೇಶಕ್ಕೆ ಸಹಿ ಹಾಕಿದ್ದರು. ಇದರಿಂದ ಭಾರತೀಯ ಮೂಲದವರಿಗೆ ಸಮಸ್ಯೆ ಆಗಲಿದೆ.ಭಾರತದ ದೊಡ್ಡ ಮಟ್ಟದ ವಲಸೆ ಇರುವುದೇ ಅದಕ್ಕೆ ಕಾರಣ.
ಅಮೆರಿಕದಲ್ಲಿ ಜನಿಸಿದ ತಕ್ಷಣ ಲಭಿಸುವ ಪೌರತ್ವ ಕಾನೂನನ್ನು ರದ್ದು ಮಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರಕ್ಕೆ ಇಂಡೊ–ಅಮೆರಿಕನ್ ಸಂಸದರು ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಈ ನಿರ್ಧಾರದಿಂದ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳ ಮೇಲೂ ಪರಿಣಾಮ ಬೀರಲಿದೆ ಎಂದು ಅವರು ಹೇಳಿದ್ದಾರೆ.
‘ಇದೊಂದು ಅಸಂವಿಧಾನಿಕ ನಡೆ. ಅಧ್ಯಕ್ಷರ ಒಂದು ಸಹಿಯಿಂದ ಅಸಂವಿಧಾನಿಕ ನಿಲುವು ತೆಗೆದುಕೊಳ್ಳಲು ಆಗದು. ಇದು ನಮ್ಮ ದೇಶದ ಕಾನೂನು ಹಾಗೂ ಸಂವಿಧಾನದಲ್ಲಿ ಹೇಳಲಾದ ನಿಯಮಗಳ ಅಣಕ’ ಎಂದು ಅಲ್ಲಿನ ಭಾರತ ಮೂಲದ ಸಂಸದೆ ಪ್ರಮೀಳಾ ಜಯಪಾಲ್ ಕಿಡಿಕಾರಿದ್ದಾರೆ.
‘ಹುಟ್ಟಿನಿಂದ ಸಿಗುವ ಪೌರತ್ವ ನಿಯಮವನ್ನು ಕಾರ್ಯಕಾರಿ ಆದೇಶದ ಮೂಲಕ ರದ್ದು ಮಾಡಿದ ಟ್ರಂಪ್ ಅವರ ನಿರ್ಧಾರವು ಅಕ್ರಮ ವಲಸಿಗರ ಮಕ್ಕಳಿಗೆ ಮಾತ್ರವಲ್ಲದೆ, ಎಚ್–1ಬಿ ವಿಸಾ ಹೊಂದಿರುವವರ ಮೇಲೂ ಪರಿಣಾಮ ಬೀರಲಿದೆ’ ಎಂದು ಭಾರತ ಮೂಲದ ಅಮೆರಿಕ ಸಂಸದ ರೋ ಖನ್ನಾ ಆತಂಕ ವ್ಯಕ್ತಪಡಿಸಿದ್ದಾರೆ.
‘ಟ್ರಂಪ್ ನೀಡುತ್ತಿರುವ ಅಭಿಪ್ರಾಯ ಮುಖ್ಯವಲ್ಲ. ಹುಟ್ಟಿನಿಂದ ಸಿಗುವ ಪೌರತ್ವ ಈ ನೆಲದ ಕಾನೂನು. ಅದನ್ನು ಉಳಿಸಲು ಯಾವ ಬೆಲೆ ತೆರಲೂ ಸಿದ್ಧ’ ಎಂದು ಮತ್ತೊಬ್ಬರು ಭಾರತ ಮೂಲದ ಸಂಸದ ಶ್ರೀ ಥಾಣೆದಾರ್ ಹೇಳಿದ್ದಾರೆ. .
ವಲಸಿಗರ ಹಕ್ಕು ಸಂರಕ್ಷಣಾ ಸಂಘ, ಟ್ರಂಪ್ ಸಹಿ ಮಾಡಿರುವ ಆದೇಶವನ್ನು ಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದೆ. 22 ರಾಜ್ಯಗಳ ಅಟಾರ್ನಿ ಜನರಲ್‌ಗಳು ಕೂಡ ಈ ಆದೇಶಕ್ಕೆ ತಡೆ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ.