
ಪಾಕಿಸ್ತಾನದಲ್ಲಿ ಲಷ್ಕರ್, ಜೈಶ್ ಉಗ್ರರ ಮಹಾಸಭೆ- ಜಂಟಿ ದಾಳಿಗೆ ಮಾಸ್ಟರ್ ಪ್ಲ್ಯಾನ್?
ಭಾರತದಲ್ಲಿ ಇತ್ತೀಚೆಗೆ ನಡೆದಿದ್ದ ಪಹಲ್ಗಾಮ್ ಮತ್ತು ಕೆಂಪು ಕೋಟೆ ಬಾಂಬ್ ಸ್ಫೋಟ ನಡೆಸಿದ್ದ ಲಷ್ಕರ್ ಮತ್ತು ಜೈಶ್ ಉಗ್ರರು ಇದೀಗ ಪಾಕಿಸ್ತಾನದಲ್ಲಿ ಜಂಟಿ ಮಹಾಸಭೆ ನಡೆಸಿದ್ದಾರೆ.
ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂದೂರ್‌ನಲ್ಲಿ ತನ್ನ ನೆಲೆಗಳನ್ನು ಕಳೆದುಕೊಂಡು ದಿಕ್ಕೆಟ್ಟಿದ್ದ ಪಾಕ್ ಪೋಷಿತ ಉಗ್ರ ಸಂಘಟನೆಗಳಾದ ಲಷ್ಕರ್-ಎ-ತೈಬಾ ಮತ್ತು ಜೈಶ್-ಎ-ಮೊಹಮ್ಮದ್ ಇದೀಗ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಈಗಾಗಲೇ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಇದಕ್ಕೆ ಪೂರಕ ಎಂಬಂತೆ ಏಪ್ರಿಲ್‌ನಲ್ಲಿ ಲಷ್ಕರ್ ಉಗ್ರರು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ದಾಳಿ ನಡೆಸಿ 26 ಜನರನ್ನು ಬಲಿ ಪಡೆದರೆ, ನವೆಂಬರ್‌ನಲ್ಲಿ ದೆಹಲಿಯಲ್ಲಿ ಕಾರ್ ಬಾಂಬ್ ಸ್ಫೋಟಿಸಿ ಜೈಶ್ ಉಗ್ರರು ಸುಮಾರು 15 ಜನರನ್ನು ಸಾವಿಗೆ ಕಾರಣವಾಗಿತ್ತು. ಇದೀಗ ಇದರ ಬೆನ್ನಲ್ಲೇ ಈ ಎರಡು ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಸಂಘಟನೆ ಉಗ್ರರು ಜಂಟೀ ಸಭೆ ನಡೆಸಿರುವ ಬಗ್ಗೆ NDTV ವರದಿ ಮಾಡಿದೆ. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನೂ ಹಂಚಿಕೊಂಡಿದೆ.
ಸಭೆ ನಡೆದಿದ್ದೆಲ್ಲಿ?
ಹಾಗಿದ್ದರೆ ಉಗ್ರ ಸಂಘಟನೆಗಳು ಸಭೆ ನಡೆಸಿದ್ದು ಎಲ್ಲಿ? ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಆಪರೇಷನ್ ಸಿಂದೂರ್ ಕಾರ್ಯಾಚರಣೆ ನಡೆಸಿತ್ತು. ಈ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿದ್ದ ಹಲವು ಉಗ್ರ ನೆಲೆಗಳೂ ಧ್ವಂಸಗೊಂಡಿದ್ದವು. ಅವುಗಳಲ್ಲಿ ಬಹವಾಲ್‌ಪುರ ಕೂಡ ಒಂದು. ಇದು ಜೈಶ್ ಉಗ್ರ ಸಂಘಟನೆಯ ಪ್ರಧಾನ ಕಚೇರಿ. ಇದೀಗ ಈ ಪ್ರಧಾನ ಕಚೇರಿಯನ್ನು ಪುನರ್ ನಿರ್ಮಿಸಿರುವ ಉಗ್ರರು ಅಲ್ಲೇ ಈ ಜಂಠೀ ಸಭೆಯನ್ನು ನಡೆಸಿದ್ದಾರೆ.
ಎನ್‌ಡಿಟಿವಿಗೆ ಲಭಿಸಿರುವ ಫೋಟೋದಲ್ಲಿ LeTಯ ಉಪ ಮುಖ್ಯಸ್ಥ ಸೈಫುಲ್ಲಾ ಕಸೂರಿಯವರೂ ಕಾಣಿಸಿಕೊಂಡಿದ್ದಾರೆ. ಪಾಕ್ ಪೋಷಿತ ಉಗ್ರ ಸಂಘಟನೆಗಳಲ್ಲಿ ಅತ್ಯಂತ ಪ್ರಮುಖ ಮತ್ತು ಮಾರಕ ಸಂಘಟನೆಗಳೆರಡು ಒಟ್ಟಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಗುಪ್ತಚರ ಇಲಾಖೆ ಈಗಾಗಲೇ ಕಳವಳ ವ್ಯಕ್ತಪಡಿಸಿವೆ. ಇದೀಗ ಆ ವಿಚಾರಕ್ಕೆ ಈಗ ಸಿಕ್ಕಿರುವ ಫೋಟೋ ಮತ್ತಷ್ಟು ಪುಷ್ಠಿ ನೀಡುತ್ತಿದೆ.
ಪಿಒಕೆಯಲ್ಲಿ ಉಗ್ರರಿಂದ ಲಾಂಚಿಂಗ್ ಪ್ಯಾಡ್ ನಿರ್ಮಾಣ?
ಇನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ರಾವಲಕೋಟ್‌ನಲ್ಲಿ ಭಯೋತ್ಪಾದಕ ಉಡಾವಣಾ ಪ್ಯಾಡ್‌ಗಳನ್ನು ಪುನಃ ನಿರ್ಮಿಸಲಾಗುತ್ತಿದೆ ಎಂದು ಗುಪ್ತಚರ ಮೂಲಗಳು NDTV ಗೆ ತಿಳಿಸಿವೆ ಆಪರೇಷನ್ ಸಿಂದೂರ್ ಸಮಯದಲ್ಲಿ ಭಾರತೀಯ ಪಡೆಗಳು ಗುರಿಯಾಗಿಸಿಕೊಂಡ ಮತ್ತೊಂದು ಭಯೋತ್ಪಾದಕ ತಾಣ ಇದಾಗಿದೆ. ಕೆಂಪು ಕೋಟೆಯ ಕಾರ್ ಬಾಂಬ್ ನಂತರ ಹೊಸ ದಾಳಿ ನಡೆಸಲು ಜೈಶ್-ಎ-ಮೊಹಮ್ಮದ್ ಮತ್ತೊಂದು 'ಫಿದಾಯೀನ್' ಅಥವಾ ಆತ್ಮಹತ್ಯಾ ತಂಡವನ್ನು ಸಿದ್ಧಪಡಿಸುತ್ತಿದೆ ಮತ್ತು ಹಣವನ್ನು ಸಂಗ್ರಹಿಸುತ್ತಿದೆ ಎಂದು ಕಳೆದ ತಿಂಗಳು NDTV ವರದಿ ಮಾಡಿತ್ತು.
ಕೆಂಪು ಕೋಟೆ ಬಳಿ ಸಂಭವಿಸಿದ ಕಾರು ಬಾಂಬ್ ಸ್ಫೋಟದ ತನಿಖೆಯ ಸಮಯದಲ್ಲಿ ಪತ್ತೆಯಾದ ಸುಳಿವುಗಳಿಂದ ಸಡಾಪೇ ಎಂಬ ಪಾಕ್ ಅಪ್ಲಿಕೇಶನ್ ಸೇರಿದಂತೆ ಡಿಜಿಟಲ್ ವಿಧಾನಗಳ ಮೂಲಕ ನಿಧಿಸಂಗ್ರಹಣೆ ನಡೆಯುತ್ತಿದೆ ಎಂಬ ವಿಚಾರ ತಿಳಿದು ಬಂದಿತ್ತು. ಜಮ್ಮು ಮತ್ತು ಕಾಶ್ಮೀರವನ್ನು ಗುರಿಯಾಗಿಸಿಕೊಂಡು ಪಾಕ್ ಬೆಂಬಲಿತ ಉಗ್ರ ಸಂಘಟನೆಗಳು ವಿಧ್ವಂಸಕ ಕೃತ್ಯಕ್ಕೆ ಭಾರೀ ದೊಡ್ಡ ಮಟ್ಟದ ಸಂಚು ರೂಪಿಸುತ್ತಿವೆ ಎಂಬ ವರದಿಯನ್ನು ಗುಪ್ತಚರ ಇಲಾಖೆ ಕೆಂಪು ಕೋಟೆ ಕಾರ್ ಬಾಂಬ್ ಸ್ಫೋಟಕ್ಕಿಂತ ಕೆಲವೇ ದಿನಗಳ ಮುನ್ನ ನೀಡಿತ್ತು.
ವರದಿಯ ಪ್ರಕಾರ, ಸೆಪ್ಟೆಂಬರ್‌ನಿಂದ ಭಯೋತ್ಪಾದಕ ಗುಂಪುಗಳು ಒಳನುಸುಳುವಿಕೆ, ವಿಚಕ್ಷಣ ಮತ್ತು ಗಡಿಯಾಚೆಗಿನ ವಿಧ್ವಂಸಕ ಕೃತ್ಯಗಳನ್ನು ಹೆಚ್ಚಿಸಿವೆ ಮತ್ತು ಪಾಕಿಸ್ತಾನದ ವಿಶೇಷ ಸೇವೆಗಳ ಗುಂಪು (SSG) ಮತ್ತು ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ಕಾರ್ಯಕರ್ತರ ಸಹಾಯದಿಂದ ಹಲವಾರು LeT ಮತ್ತು JeM ಘಟಕಗಳು ಕಾಶ್ಮೀರವನ್ನು ಪ್ರವೇಶಿಸಿವೆ. ಇದೀಗ ಮತ್ತೆ ಅಪಾಯಕಾರಿ ಎರಡು ಉಗ್ರ ಸಂಘಟನೆಗಳು ಜಂಟಿಯಾಗಿ ಸಭೆ ನಡೆಸಿರುವುದು ಭಾರತಕ್ಕೆ ಒಂದು ರೀತಿಯ ಸವಾಲು ಎಂಬಂತೆ ಭಾಸವಾಗುತ್ತಿದೆ.

