US Presidential Election: ಕಮಲಾ ಹ್ಯಾರಿಸ್ 'ಐತಿಹಾಸಿಕ ಅಧ್ಯಕ್ಷೆ' ಆಗುತ್ತಾರೆ- ಜೋ ಬೈಡೆನ್
ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಡೆಮಾಕ್ರಟಿಕ್ ಪಕ್ಷದ ನಾಯಕತ್ವವನ್ನು ಕಮಲಾ ಹ್ಯಾರಿಸ್ ಅವರಿಗೆ ಮಂಗಳವಾರ (ಆಗಸ್ಟ್ 20) ಹಸ್ತಾಂತರಿಸಿದರು; ಅವರು ʻಐತಿಹಾಸಿಕ ಅಧ್ಯಕ್ಷೆʼ ಆಗಲಿದ್ದು, ಪ್ರಜಾಪ್ರಭುತ್ವವನ್ನು ಉಳಿಸುವ ಅತ್ಯುತ್ತಮ ವ್ಯಕ್ತಿ ಎಂದು ಬಣ್ಣಿಸಿದರು.
ಶಿಕಾಗೋದಲ್ಲಿ ಸೋಮವಾರ ರಾತ್ರಿ (ಅಮೆರಿಕ ಕಾಲಮಾನ) ನಡೆದ ಡೆಮಾಕ್ರಟಿಕ್ ನ್ಯಾಶನಲ್ ಕನ್ವೆನ್ಷನ್‌ನಲ್ಲಿ ಬೈಡೆನ್(81) ಅವರಿಗೆ ದೀರ್ಘ ಕತತಾಡನದ ಗೌರವ ನೀಡಲಾಯಿತು.
ನವೆಂಬರ್ 5 ರಂದು ನಡೆಯಲಿರುವ ಚುನಾವಣೆಯಲ್ಲಿ ರಿಪಬ್ಲಿಕನ್ ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್ (78) ಅವರನ್ನು ಎದುರಾಳಿಯಾಗಿ ಹ್ಯಾರಿಸ್(59) ಅವರು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ನಾಮನಿರ್ದೇಶನವನ್ನು ಗುರುವಾರ ಸ್ವೀಕರಿಸಲಿದ್ದಾರೆ.
ಹ್ಯಾರಿಸ್ ʻಐತಿಹಾಸಿಕ ಅಧ್ಯಕ್ಷೆʼ: ʻಕಮಲಾ ಹ್ಯಾರಿಸ್ ಅವರನ್ನು ಅಮೆರಿಕದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ನೀವು ಸಿದ್ಧರಿದ್ದೀರಾ?ʼ ಎಂದು ಶಿಕಾಗೋದಲ್ಲಿ ನಡೆದ ಸಮಾವೇಶದಲ್ಲಿ ಪಕ್ಷದ ಸದಸ್ಯರು ಮತ್ತು ನಾಯಕರ ಹರ್ಷೋದ್ಗಾರಗಳ ನಡುವೆ ಪ್ರಶ್ನಿಸಿದರು.
ʻಕಮಲಾ ಹ್ಯಾರಿಸ್ ಐತಿಹಾಸಿಕ ಅಧ್ಯಕ್ಷೆ ಆಗುತ್ತಾರೆ. ನಾನು ನನ್ನ ಕೆಲಸವನ್ನು, ದೇಶವನ್ನು ಪ್ರೀತಿಸುತ್ತೇನೆ. ಪ್ರಜಾಪ್ರಭುತ್ವವನ್ನು ನಾವು ಉಳಿಸಿಕೊಳ್ಳಬೇಕಿದೆ. ನೀವು ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸಬೇಕು; ಕಮಲಾ ಮತ್ತು ಟಿಮ್ ಅವರನ್ನು ದೇಶದ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು. 2024 ರಲ್ಲಿ ಟ್ರಂಪ್ ಅವರಿಗೆ ಮಹಿಳೆಯರ ಶಕ್ತಿಯ ಅರಿವಾಗಲಿದೆ,ʼ ಎಂದು ಬೈಡೆನ್ ಹೇಳಿದರು.
ʻಹ್ಯಾರಿಸ್ ಅವರು ದೇಶದ 47 ನೇ ಅಧ್ಯಕ್ಷರಾಗಲಿದ್ದಾರೆ. ನಾವು 2020 ರಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಿದ್ದೇವೆ; 2024 ರಲ್ಲಿಯೂ ಅದನ್ನೇ ಮತ್ತೆ ಮಾಡಬೇಕಿದೆ. ನಾನು ನಿಮ್ಮನ್ನು ಕೇಳುತ್ತೇನೆ: ನೀವು ಸ್ವಾತಂತ್ರ್ಯಕ್ಕಾಗಿ ಮತ ಚಲಾಯಿಸಲು ಸಿದ್ಧರಿದ್ದೀರಾ? ಪ್ರಜಾಪ್ರಭುತ್ವಕ್ಕಾಗಿ ಮತ್ತು ಅಮೆರಿಕಕ್ಕಾಗಿ ಮತ ಚಲಾಯಿಸಲು ಸಿದ್ಧರಿದ್ದೀರಾ? ಕಮಲಾ ಹ್ಯಾರಿಸ್ ಮತ್ತು ಟಿಮ್ ವಾಲ್ಟ್ಜ್ ಅವರನ್ನು ಅಧ್ಯಕ್ಷೆ- ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಸಿದ್ಧರಿದ್ದೀರಾ?,ʼ ಎಂದು ಕೇಳಿದರು.
ನಿಮಗೆ ಎಂದೆಂದಿಗೂ ಕೃತಜ್ಞರು: ಹ್ಯಾರಿಸ್- ʻಬೈಡೆನ್ ಅವರ ಐತಿಹಾಸಿಕ ನಾಯಕತ್ವ ಮತ್ತು ಜೀವಿತಾವಧಿಯ ಸೇವೆಗೆ ನಾವು ಎಂದೆಂದಿಗೂ ಕೃತಜ್ಞರಾಗಿರುತ್ತೇವೆ,ʼ ಎಂದು ಕಮಲಾ ಹ್ಯಾರಿಸ್ ಹೇಳಿದರು. ʻನವೆಂಬರ್‌ನಲ್ಲಿ ನಾವು ಒಟ್ಟಿಗೆ ಸೇರಿ, ಒಂದೇ ಧ್ವನಿಯಲ್ಲಿ ಘೋಷಿಸುತ್ತೇವೆ. ಆಶಾವಾದ, ಭರವಸೆ ಮತ್ತು ನಂಬಿಕೆಯೊಂದಿಗೆ ಮುನ್ನಡೆಯುತ್ತೇವೆ. ದೇಶಕ್ಕಾಗಿ ಪ್ರೀತಿಯಿಂದ ಮಾರ್ಗದರ್ಶನ ನೀಡುತ್ತೇವೆ,ʼ ಎಂದು ಹೇಳಿದರು.
ಹ್ಯಾರಿಸ್‌ಗೆ ಬೆಂಬಲ ಹೆಚ್ಚಳ: ಬೈಡೆನ್ ಕಳೆದ ತಿಂಗಳು ಶ್ವೇತಭವನಕ್ಕೆಸ್ಪರ್ಧೆಯಿಂದ ಹಿಂದೆ ಸರಿದು, ಕಮಲಾ ಹ್ಯಾರಿಸ್ ಅವರಿಗೆ ಬೆಂಬಲ ನೀಡಿದರು. ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರಿಂದ ಅನುಮೋದನೆ ಪಡೆದುಕೊಂಡರು. ಮಾಜಿ ವಿದೇಶಾಂಗ ಕಾರ್ಯದರ್ಶಿ ಮತ್ತು ಪ್ರಥಮ ಮಹಿಳೆ ಹಿಲರಿ ಕ್ಲಿಂಟನ್, ಹ್ಯಾರಿಸ್ ಅಮೆರಿಕವನ್ನು ಮುನ್ನಡೆಸುವ ಅನುಭವ ಮತ್ತು ದೂರದೃಷ್ಟಿಯನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.
ಸರ್ವಿಸ್ ಎಂಪ್ಲಾಯೀಸ್ ಇಂಟರ್‌ನ್ಯಾಶನಲ್ ಯೂನಿಯನ್(ಎಸ್‌ಇಐಯು), ಲೇಬರ್ಸ್ ಇಂಟರ್‌ನ್ಯಾಶನಲ್ ಯೂನಿಯನ್ ಆಫ್ ನಾರ್ತ್ ಅಮೆರಿಕಾ (ಎಲ್‌ಐಯುಎನ್‌ಎ), ಇಂಟರ್‌ನ್ಯಾಶನಲ್ ಬ್ರದರ್‌ಹುಡ್ ಆಫ್ ಎಲೆಕ್ಟ್ರಿಕಲ್ ವರ್ಕರ್ಸ್ (ಐಬಿಇಡಬ್ಲ್ಯು), ಅಮೆರಿಕನ್ ಫೆಡರೇಶನ್ ಆಫ್ ಲೇಬರ್ ಮತ್ತು ಕಾಂಗ್ರೆಸ್ ಆಫ್ ಇಂಡಸ್ಟ್ರಿಯಲ್ ಆರ್ಗನೈಸೇಶನ್ (ಎಎಫ್‌ಎಲ್-ಸಿಐಒ), ಅಮೆರಿಕನ್ ಫೆಡರೇಶನ್ ಆಫ್ ಸ್ಟೇಟ್, ಕೌಂಟಿ ಮತ್ತು ಮುನ್ಸಿಪಲ್ ಎಂಪ್ಲಾಯೀಸ್, ಮತ್ತು ಕಮ್ಯುನಿಕೇಷನ್ಸ್ ವರ್ಕರ್ಸ್ ಆಫ್ ಅಮೆರಿಕಾ ಸಂಘಟನೆಗಳು ಕಮಲಾ ಹ್ಯಾರಿಸ್ ಅವರಿಗೆ ಬೆಂಬಲ ಘೋಷಿಸಿವೆ.