ಅಲ್ಪಸಂಖ್ಯಾತರ ಮೇಲೆ ದಾಳಿಕೋರರ ವಿರುದ್ಧ ಕ್ರಮ: ಬಾಂಗ್ಲಾದೇಶ
ಅಲ್ಪಸಂಖ್ಯಾತರ ಮೇಲೆ ದಾಳಿ ಅಥವಾ ನಿಂದನೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ದೇಶದಲ್ಲಿ ಹಿಂಸೆ ಅಥವಾ ದ್ವೇಷಕ್ಕೆ ಯಾವುದೇ ಸ್ಥಳವಿಲ್ಲ ಎಂದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಹೇಳಿದೆ.
ಗೃಹ ವ್ಯವಹಾರಗಳ ಸಲಹೆಗಾರ, ಬ್ರಿಗೇಡಿಯರ್ ಜನರಲ್ (ನಿವೃತ್ತ) ಎಂ. ಸಖಾವತ್ ಹುಸೇನ್ ಅವರು ಗುರುವಾರ ಬಾಂಗ್ಲಾದೇಶದ ಇಸ್ಕಾನ್( ಕೃಷ್ಣ ಪ್ರಜ್ಞೆಯ ಅಂತಾರಾಷ್ಟ್ರೀಯ ಸೊಸೈಟಿ) ನಿಯೋಗಕ್ಕೆ ಈ ಭರವಸೆ ನೀಡಿದರು.
ʻಬಾಂಗ್ಲಾದೇಶ ಕೋಮು ಸೌಹಾರ್ದವ ನಂಬುತ್ತದೆ ಮತ್ತು ದೇಶದಲ್ಲಿ ಎಲ್ಲಾ ಧರ್ಮಗಳು ಸಹಬಾಳ್ವೆ ನಡೆಸಿವೆ. ಅಲ್ಪಸಂಖ್ಯಾತರ ಮೇಲೆ ಹಲ್ಲೆ ನಡೆಸಿದವರು ಅಥವಾ ದೌರ್ಜನ್ಯ ನಡೆಸಿದವರನ್ನು ಬಿಡುವುದಿಲ್ಲ, ಶೀಘ್ರ ಕಾನೂನು ಕ್ರಮ ಕೈಗೊಳ್ಳಲಾಗುವುದು,ʼ ಎಂದು ಹೇಳಿದರು.
ಇಸ್ಕಾನ್ ಬಾಂಗ್ಲಾದೇಶದ ಅಧ್ಯಕ್ಷ ಸತ್ಯರಂಜನ್ ಬರೋಯ್ ಅವರು ಅಲ್ಪಸಂಖ್ಯಾತರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು, ಕಾನೂನುಗಳ ಜಾರಿ ಮತ್ತು ಅಲ್ಪಸಂಖ್ಯಾತ ಆಯೋಗದ ರಚನೆ ಸೇರಿದಂತೆ ಎಂಟು ಪ್ರಸ್ತಾಪಗಳನ್ನು ಮಂಡಿಸಿದರು. ಸಲಹೆಗಾರರು ಈ ವಿಷಯಗಳಿಗೆ ತಮ್ಮ ಸಂಪೂರ್ಣ ಬೆಂಬಲದ ಭರವಸೆ ನೀಡಿದರು.
ಹಸೀನಾ ಸರ್ಕಾರದ ಪತನದ ನಂತರ ಅಲ್ಪಸಂಖ್ಯಾತ ಸಮುದಾಯವು 48 ಜಿಲ್ಲೆಗಳ 278 ಸ್ಥಳಗಳಲ್ಲಿ ದಾಳಿ ಮತ್ತು ಬೆದರಿಕೆಗಳನ್ನು ಎದುರಿಸುತ್ತಿದೆ ಎಂದು ಬಾಂಗ್ಲಾದೇಶ ರಾಷ್ಟ್ರೀಯ ಹಿಂದೂ ಮಹಾ ಒಕ್ಕೂಟ ಹೇಳಿದೆ. ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ನೇತೃತ್ವ ವಹಿಸಿರುವ ಮುಹಮ್ಮದ್ ಯೂನಸ್ ಅವರು ತಮ್ಮ ಸರ್ಕಾರವು ಅಲ್ಪಸಂಖ್ಯಾತರ ಮೇಲೆ ದಾಳಿ ಮಾಡಿದವರನ್ನು ಶಿಕ್ಷಿಸಲಿದೆ ಎಂದು ಮಂಗಳವಾರ ಹಿಂದೂ ಸಮುದಾಯದವರಿಗೆ ಹೇಳಿದ್ದಾರೆ.