ಬಾಂಗ್ಲಾದೇಶದಲ್ಲಿ ತೀವ್ರಗೊಂಡ ಪ್ರತಿಭಟನೆ: ಭದ್ರತಾ ಪಡೆಗಳಿಂದ ಗುಂಡು, ಅಶ್ರುವಾಯು ಬಳಕೆ
x

ಬಾಂಗ್ಲಾದೇಶದಲ್ಲಿ ತೀವ್ರಗೊಂಡ ಪ್ರತಿಭಟನೆ: ಭದ್ರತಾ ಪಡೆಗಳಿಂದ ಗುಂಡು, ಅಶ್ರುವಾಯು ಬಳಕೆ

1971ರಲ್ಲಿ ಪಾಕಿಸ್ತಾನದ ವಿರುದ್ಧ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದ ಯೋಧರ ಸಂಬಂಧಿಕರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇ.30 ರಷ್ಟು ಮೀಸಲು ವ್ಯವಸ್ಥೆಯನ್ನು ಕೊನೆಗೊಳಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ.


ಢಾಕಾ, ಜುಲೈ 19- ಬಾಂಗ್ಲಾದೇಶದಲ್ಲಿ ಸರ್ಕಾರಿ ಉದ್ಯೋಗಗಳ ಹಂಚಿಕೆಗೆ ಸಂಬಂಧಿಸಿದಂತೆ ಕೆಲವು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯನ್ನು ಚದುರಿಸಲು ಪೊಲೀಸರು ಮತ್ತು ಭದ್ರತಾ ಅಧಿಕಾರಿಗಳು ಶುಕ್ರವಾರ ಗುಂಡುಗಳು ಹಾಗೂ ಅಶ್ರುವಾಯು ಪ್ರಯೋಗಿಸಿದರು.

ಇಂಟರ್ನೆಟ್ ಮತ್ತು ಮೊಬೈಲ್ ಸೇವೆಗಳನ್ನು ಸ್ಥಗಿತಗೊಳಿಸಿರುವುದಲ್ಲದೆ, ರಾಜಧಾನಿಯಲ್ಲಿ ಎಲ್ಲ ಸಭೆಗಳನ್ನು ನಿಷೇಧಿಸಲಾಗಿದೆ.

ವಾರದ ಹಿಂದೆ ಆರಂಭವಾದ ಪ್ರತಿಭಟನೆ, ಸೋಮವಾರದಿಂದ ತೀವ್ರಗೊಂಡಿದೆ. ವಿರೋಧ ಪಕ್ಷಗಳು ಬಹಿಷ್ಕರಿಸಿದ್ದ ಜನವರಿ ಚುನಾವಣೆ ಯಲ್ಲಿ ಸತತ ನಾಲ್ಕನೇ ಬಾರಿಗೆ ಗೆಲುವು ಸಾಧಿಸಿರುವ ಪ್ರಧಾನಿ ಶೇಖ್ ಹಸೀನಾ ಅವರಿಗೆ ಪ್ರತಿಭಟನೆಗಳು ದೊಡ್ಡ ಸವಾಲಾಗಿ ಪರಿಣಮಿಸಿವೆ.

ಪ್ರತಿಭಟಿಸುತ್ತಿರುವ ವಿದ್ಯಾರ್ಥಿಗಳು ದೇಶವನ್ನು ʻಸಂಪೂರ್ಣವಾಗಿ ಸ್ಥಗಿತಗೊಳಿಸಲುʼ ಪ್ರಯತ್ನಿಸಿದ್ದರಿಂದ, 22 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಶುಕ್ರವಾರ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ ಎಂದು ಸಮಯ್ ಟಿವಿ ವರದಿ ಮಾಡಿದೆ. ಸಾವಿನ ಅಂಕಿಅಂಶಗಳನ್ನು ಅಧಿಕಾರಿಗಳು ಖಚಿತಪಡಿಸಬೇಕಿದೆ.

ದೇಶದ ಆಡಳಿತ ಮತ್ತು ಆರ್ಥಿಕತೆಯಲ್ಲಿನ ಬಿರುಕುಗಳು ಮತ್ತು ಉತ್ತಮ ಉದ್ಯೋಗಗಳ ಕೊರತೆಯನ್ನು ಎದುರಿಸುತ್ತಿರುವ ಯುವ ಪದವೀಧರರ ಹತಾಶೆಯನ್ನು ಈ ಪ್ರತಿಭಟನೆಗಳು ಎತ್ತಿ ತೋರಿಸಿವೆ. ಕ್ಯಾಂಪಸ್‌ಗಳಿಗೆ ಬೀಗ ಹಾಕಲು ಮತ್ತು ಪ್ರತಿಭಟನೆಯನ್ನು ಮುರಿಯಲು ಸರ್ಕಾರವು ರಾಜಧಾನಿಯಾದ್ಯಂತ ಪೊಲೀಸ್ ಮತ್ತು ಅರೆಸೈನಿಕ ಪಡೆಗಳನ್ನು ನಿಯೋಜಿಸಿದೆ. ಬುಧವಾರದಂದು ದೇಶದ ಎಲ್ಲ ವಿಶ್ವವಿದ್ಯಾಲಯಗಳು ತರಗತಿಗಳನ್ನು ಅಮಾನತುಗೊಳಿಸಿದವು ಮತ್ತು ವಸತಿ ನಿಲಯಗಳನ್ನು ಮುಚ್ಚಿದವು. ಢಾಕಾ ಪೊಲೀಸರು ರಾಜಧಾನಿಯಲ್ಲಿ ಎಲ್ಲಾ ಸಭೆ ಮತ್ತು ಪ್ರದರ್ಶನಗಳನ್ನು ನಿಷೇಧಿಸುತ್ತಿರುವುದಾಗಿ ಹೇಳಿದರು.

ಟಿವಿ ಕೇಂದ್ರದ ಮೇಲೆ ದಾಳಿ: ಸರ್ಕಾರಿ ಸ್ವಾಮ್ಯದ ಬಾಂಗ್ಲಾದೇಶ ಟೆಲಿವಿಷನ್‌ನ ಮುಖ್ಯ ಕಚೇರಿ ಹೊರಗೆ ಜಮಾಯಿಸಿದ 1,000 ಕ್ಕೂ ಹೆಚ್ಚು ಪ್ರತಿಭಟನಾಕಾರರ ಗುಂಪಿನ ಮೇಲೆ ಗಡಿ ಕಾವಲು ಅಧಿಕಾರಿಗಳು ಗುಂಡು ಹಾರಿಸಿರುವುದಾಗಿ ವರದಿಯಾಗಿದೆ. ಪೊಲೀಸ್ ಅಧಿಕಾರಿಗಳು ಅಶ್ರುವಾಯು ಮತ್ತು ರಬ್ಬರ್ ಬುಲೆಟ್‌ ಬಳಸಿದರು. ಪ್ರತಿಭಟನಕಾರರು ಮುಖ್ಯ ದ್ವಾರವನ್ನು ಭೇದಿಸಿ ಒಳ ನುಗ್ಗಿ, ವಾಹನಗಳು ಮತ್ತು ಸ್ವಾಗತ ಪ್ರದೇಶಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಬಾಂಗ್ಲಾದೇಶ ಟೆಲಿವಿಷನ್‌ ಮೂಲಗಳು ತಿಳಿಸಿವೆ.

ʻನಾನು ಗೋಡೆ ಹಾರಿ ತಪ್ಪಿಸಿಕೊಂಡೆ. ಆದರೆ ನನ್ನ ಕೆಲವು ಸಹೋದ್ಯೋಗಿಗಳು ಒಳಗೆ ಸಿಕ್ಕಿಕೊಂಡರು. ದಾಳಿಕೋರರು ಕಟ್ಟಡವನ್ನು ಪ್ರವೇಶಿಸಿ, ಪೀಠೋಪಕರಣಗಳಿಗೆ ಬೆಂಕಿ ಹಚ್ಚಿದರು,ʼ ಎಂದು ಗುರುತು ಹೇಳಲು ಇಚ್ಛಿಸದ ಟಿವಿ ನಿರ್ಮಾಪಕರೊಬ್ಬರು ಹೇಳಿದರು.

ಗುರುವಾರ ರಾತ್ರಿಯಿಂದ ಇಂಟರ್ನೆಟ್ ಸೇವೆಗಳು ಮತ್ತು ಮೊಬೈಲ್ ಡೇಟಾ ವ್ಯಾಪಕವಾಗಿ ಅಸ್ತವ್ಯಸ್ತಗೊಂಡಿತು. ಫೇಸ್‌ಬುಕ್ ಮತ್ತು ವಾಟ್ಸಾಪ್‌ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳು ಸಕ್ರಿಯವಾಗಿಲ್ಲ.

ದೇಶದ ಟೆಲಿಕಮ್ಯುನಿಕೇಶನ್ ರೆಗ್ಯುಲೇಟರಿ ಕಮಿಷನ್‌ನ ಹೇಳಿಕೆ ಪ್ರಕಾರ, ಡೇಟಾ ಸೆಂಟರ್‌ನ ಮೇಲೆ ಪ್ರತಿಭಟನಾಕಾರರು ದಾಳಿ ಮಾಡಿದ ನಂತರ ಸೇವೆಯಲ್ಲಿ ವ್ಯತ್ಯಯವಾಗಿದೆ.

ಪ್ರತಿಭಟನೆಗೆ ಕಾರಣವೇನು?: 1971 ರಲ್ಲಿ ಪಾಕಿಸ್ತಾನದ ವಿರುದ್ಧ ಬಾಂಗ್ಲಾದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಯೋಧರ ಸಂಬಂಧಿಕರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇ.30 ರಷ್ಟು ಮೀಸಲು ವ್ಯವಸ್ಥೆಯನ್ನು ಕೊನೆಗೊಳಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ.

ಈ ವ್ಯವಸ್ಥೆ ತಾರತಮ್ಯದಿಂದ ಕೂಡಿದೆ. ಇದರಿಂದ ಪ್ರಧಾನಿ ಶೇಖ್ ಹಸೀನಾ ಅವರ ಬೆಂಬಲಿಗರಿಗೆ ಪ್ರಯೋಜನ ಆಗುತ್ತದೆ. ಇದನ್ನು ಅರ್ಹತೆ ಆಧಾರಿತ ವ್ಯವಸ್ಥೆಯಿಂದ ಬದಲಾಯಿಸಬೇಕೆಂಬುದು ವಿದ್ಯಾರ್ಥಿಗಳ ಬೇಡಿಕೆ. ಆದರೆ, ಹಸೀನಾ ಅವರು ಕೋಟಾ ವ್ಯವಸ್ಥೆಯನ್ನು ಸಮರ್ಥಿಸಿಕೊಂಡಿದ್ದಾರೆ. ಯೋಧರು ಯುದ್ಧದಲ್ಲಿ ನೀಡಿದ ಕೊಡುಗೆಗಳಿಂದಾಗಿ ಹೆಚ್ಚಿನ ಗೌರವಕ್ಕೆ ಅರ್ಹರು ಎಂದು ಹೇಳಿದ್ದಾರೆ.

ಬಾಂಗ್ಲಾ ದೇಶಕ್ಕೆ ಸ್ಥಿರವಾದ ಬೆಳವಣಿಗೆ ತಂದ ಕೀರ್ತಿ ಹಸೀನಾ ಅವರಿಗೆ ಸಲ್ಲುತ್ತದೆ. ಆದರೆ, ಹಣದುಬ್ಬರ ಹೆಚ್ಚಳವು ಕಾರ್ಮಿಕರಲ್ಲಿ ಅಶಾಂತಿ ಮತ್ತು ಸರ್ಕಾರದ ಬಗ್ಗೆ ಅತೃಪ್ತಿಯನ್ನು ಪ್ರಚೋದಿಸಿದೆ. ಖಾಸಗಿ ವಲಯದಲ್ಲಿ ಉದ್ಯೋಗಾವಕಾಶ ಹೆಚ್ಚಿದ್ದರೂ, ಸರ್ಕಾರಿ ಉದ್ಯೋಗಗಳಿಗೆ ಆದ್ಯತೆ ಇದೆ. ಏಕೆಂದರೆ, ಅವುಗಳು ಹೆಚ್ಚು ಸ್ಥಿರ ಮತ್ತು ಲಾಭದಾಯಕ ಎಂಭ ಭಾವನೆಯಿದೆ. ಪ್ರತಿ ವರ್ಷ ಸುಮಾರು 4,00,000 ಪದವೀಧರರು ನಾಗರಿಕ ಸೇವಾ ಪರೀಕ್ಷೆಯಲ್ಲಿನ ಸುಮಾರು 3,000 ಉದ್ಯೋಗಗಳಿಗೆ ಸ್ಪರ್ಧಿಸುತ್ತಾರೆ.

ʻವಿದ್ಯಾರ್ಥಿಗಳು ಸಾರ್ವಜನಿಕ ನೇಮಕಗಳಲ್ಲಿ ನ್ಯಾಯಯುತ ಅವಕಾಶ ಕೇಳುತ್ತಿದ್ದಾರೆ. ಶಾಂತಿಯುತ ಪ್ರತಿಭಟನೆಯು ಅರಾಜಕತೆಯೆಡೆಗೆ ತಿರುಗುತ್ತಿರುವುದು ಸರ್ಕಾರದ ದೂರದೃಷ್ಟಿ ಕೊರತೆ ಮತ್ತು ಅಸಮರ್ಥ ನೀತಿಯನ್ನು ತೋರಿಸು ತ್ತದೆ,ʼ ಎಂದು ಕೆನಡಾ ಮೂಲದ ಬಾಲ್ಸಿಲ್ಲಿ ಸ್ಕೂಲ್ ಆಫ್ ಇಂಟರ್ನ್ಯಾಷನಲ್ ಅಫೇರ್ಸ್‌ನ ನೀತಿ ಮತ್ತು ವಕಾಲತ್ತು ವಿಭಾಗದ ಸಾದ್ ಹಮ್ಮದಿ ಹೇಳಿದರು.

ʻಇಂಟರ್ನೆಟ್ ಸ್ಥಗಿತಗೊಳಿಸುವಿಕೆಯಿಂದ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. ದೇಶದ ಜನರಿಗೆ ಸಂವಹನ ಕಡಿತಗೊಳ್ಳುತ್ತದೆ. ಇದು ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗುತ್ತದೆ, ʼಎಂದು ಅವರು ಹೇಳಿದ್ದಾರೆ.

ವಿರೋಧ ಪಕ್ಷಗಳಿಂದ ಬೆಂಬಲ: ಪ್ರಮುಖ ವಿರೋಧ ಪಕ್ಷವಾದ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಕ್ಷ(ಬಿಎನ್ಪಿ) ವಿದ್ಯಾರ್ಥಿಗಳನ್ನು ಬೆಂಬಲಿಸಿದೆ.‌ ತನ್ನದೇ ಆದ ಪ್ರತಿಭಟನೆ ಆಯೋಜಿಸುವುದಾಗಿ ಹೇಳಿದೆ. ಶುಕ್ರವಾರ ಪೊಲೀಸರು ಕೆಲವು ನೂರು ಬಿಎನ್‌ಪಿ ಬೆಂಬಲಿಗರ ಮೇಲೆ ಅಶ್ರುವಾಯು ಪ್ರಯೋಗಿಸಿದರು ಮತ್ತು ಹಿರಿಯ ನಾಯಕ ರುಹುಲ್ ಕಬೀರ್ ರಿಜ್ವಿ ಅವರನ್ನು ಬಂಧಿಸಿದರು.

2018 ರಲ್ಲಿ ನಡೆದ ಪ್ರತಿಭಟನೆ ನಂತರ ಹಸೀನಾ ಅವರ ಸರ್ಕಾರವು ಉದ್ಯೋಗ ಮೀಸಲು ನಿಲ್ಲಿಸಿತ್ತು. ಆದರೆ, ಕಳೆದ ತಿಂಗಳು ಹೈಕೋರ್ಟ್ ಆ ನಿರ್ಧಾರವನ್ನು ರದ್ದುಗೊಳಿಸಿ, ಮೀಸಲು ಮರುಸ್ಥಾಪಿಸಿತು. ಇದರಿಂದ ಪ್ರತಿಭಟನೆಗಳು ಆರಂಭಗೊಂಡವು. ಮೇಲ್ಮನವಿ ವಿಚಾರಣೆಗೆ ಬಾಕಿ ಇರುವ ತೀರ್ಪನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದೆ.

ಹಸೀನಾ ಅವರು ಬುಧವಾರ ತಮ್ಮ ದೂರದರ್ಶನದ ಭಾಷಣದಲ್ಲಿ, ʻನ್ಯಾಯಾಲಯದ ತೀರ್ಪಿಗಾಗಿ ತಾಳ್ಮೆಯಿಂದ ಕಾಯಿರಿ. ವಿದ್ಯಾರ್ಥಿಗಳಿಗೆ ಸುಪ್ರೀಂ ಕೋರ್ಟ್‌ನಿಂದ ನ್ಯಾಯ ಸಿಗುತ್ತದೆ ಎಂದು ನಾನು ನಂಬುತ್ತೇನೆ,ʼ ಎಂದು ಹೇಳಿದ್ದರು.

Read More
Next Story