ಬಾಂಗ್ಲಾ ಪ್ರತಿಭಟನೆ: 99 ಮಂದಿ ಸಾವು, ವಿದ್ಯಾರ್ಥಿ ಚಳವಳಿಗಾರರಿಂದ ಢಾಕಾ ಚಲೋ ಇಂದು
x

ಬಾಂಗ್ಲಾ ಪ್ರತಿಭಟನೆ: 99 ಮಂದಿ ಸಾವು, ವಿದ್ಯಾರ್ಥಿ ಚಳವಳಿಗಾರರಿಂದ 'ಢಾಕಾ ಚಲೋ' ಇಂದು

ಪ್ರತಿಭಟನೆನಿರತ ವಿದ್ಯಾರ್ಥಿಗಳು ಢಾಕಾ ಚಲೋಗೆ ಕರೆ ನೀಡಿದ್ದಾರೆ. ಹಿಂಸಾತ್ಮಕ ಘರ್ಷಣೆಗಳಿಂದಾಗಿ ದೇಶಾದ್ಯಂತ ಮೊಬೈಲ್ ಇಂಟರ್ನೆಟ್ ಕಡಿತಗೊಳಿಸಿದ್ದು, ಅನಿರ್ದಿಷ್ಟ ರಾಷ್ಟ್ರವ್ಯಾಪಿ ಕರ್ಫ್ಯೂ ವಿಧಿಸಲಾಗಿದೆ ಮತ್ತು ಮೂರು ದಿನಗಳ ರಜೆ ಘೋಷಿಸಲಾಗಿದೆ.


ಬಾಂಗ್ಲಾದಲ್ಲಿ ನಡೆದ ಘರ್ಷಣೆಯಲ್ಲಿ 99 ಜನ ಸಾವನ್ನಪ್ಪಿದ ಒಂದು ದಿನದ ನಂತರ ಪ್ರತಿಭಟನಾಕಾರರು ಸೋಮವಾರ (ಆಗಸ್ಟ್ 5) ʻಢಾಕಾ ಮಾರ್ಚ್ʼ ಗೆ ಕರೆಕೊಟ್ಟಿದ್ದು, ಕೈಜೋಡಿಸಬೇಕೆಂದು ಸಾರ್ವಜನಿಕರನ್ನು ಒತ್ತಾಯಿಸಿದ್ದಾರೆ.

ಉದ್ಯೋಗ ಮೀಸಲು ವ್ಯವಸ್ಥೆಗೆ ಸಂಬಂಧಿಸಿದ ತಾರತಮ್ಯಕ್ಕಾಗಿ ಪ್ರಧಾನಿ ಶೇಖ್ ಹಸೀನಾ ಅವರ ರಾಜೀನಾಮೆಯ ಒಂದಂಶದ ಬೇಡಿಕೆ ಯೊಂದಿಗೆ ಭಾನುವಾರ ಬೆಳಗ್ಗೆ ಆರಂಭಗೊಂಡ ಅಸಹಕಾರ ಕಾರ್ಯಕ್ರಮಕ್ಕೆ ಅವಾಮಿ ಲೀಗ್, ಛಾತ್ರ ಲೀಗ್ ಮತ್ತು ಜುಬೋ ಲೀಗ್ ಕಾರ್ಯಕರ್ತರಿಂದ ಪ್ರತಿರೋಧ ವ್ಶಕ್ತವಾಗಿ, ಘರ್ಷಣೆಗಳು ಪ್ರಾರಂಭವಾದವು. ಘರ್ಷಣೆಯಲ್ಲಿ 14 ಪೊಲೀಸರು ಸೇರಿದಂತೆ ಕನಿಷ್ಠ 99 ಜನರು ಸಾವನ್ನಪ್ಪಿದ್ದಾರೆ ಎಂದು ಬಂಗಾಳಿ ಭಾಷೆಯ ಪ್ರಮುಖ ಪತ್ರಿಕೆ ಪ್ರೋಥೋಮ್ ಅಲೋ ವರದಿ ಮಾಡಿದೆ.

ಅಧಿಕಾರಿಗಳು ಮೊಬೈಲ್ ಅಂತರ್ಜಾಲವನ್ನು ಕಡಿತಗೊಳಿಸಿದ್ದಾರೆ ಮತ್ತು ಅನಿರ್ದಿಷ್ಟಾವಧಿ ರಾಷ್ಟ್ರವ್ಯಾಪಿ ಕರ್ಫ್ಯೂ ಜಾರಿಗೊಳಿಸಿದ್ದಾರೆ.

ಢಾಕಾ ಚಲೋ ಇಂದು: ತಾರತಮ್ಯ ವಿರೋಧಿ ವಿದ್ಯಾರ್ಥಿ ಆಂದೋಲನವು ʻಢಾಕಾ ಚಲೋʼ ಸೋಮವಾರ ನಡೆಸಲು ನಿಗದಿಪಡಿಸಿದೆ. ತುರ್ತು ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಆಂದೋಲನದ ಸಂಯೋಜಕ ಆಸಿಫ್ ಮಹಮೂದ್ ಭಾನುವಾರ ರಾತ್ರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ʻಢಾಕಾ ಚಲೋ ಕಾರ್ಯಕ್ರಮವನ್ನು ಆಗಸ್ಟ್ 5 ಕ್ಕೆ ಬದಲಿಸಲಾಗಿದೆ. ಸೋಮವಾರ ಢಾಕಾಕ್ಕೆ ಪ್ರಯಾಣಿಸಲು ನಾವು ದೇಶಾದ್ಯಂತದ ವಿದ್ಯಾರ್ಥಿಗಳಿಗೆ ಕರೆ ನೀಡುತ್ತಿದ್ದೇವೆ. ಅಂತಿಮ ಯುದ್ಧ ಬಂದಿದೆ. ದೇಶದ ವಿದ್ಯಾರ್ಥಿಗಳು- ನಾಗರಿಕರ ಪ್ರತಿಭಟನೆಯ ಅಂತಿಮ ಸಮಯ ಇದು. ಇತಿಹಾಸದ ಭಾಗವಾಗಲು ಢಾಕಾಕ್ಕೆ ಬನ್ನಿ. ವಿದ್ಯಾರ್ಥಿಗಳು ಹೊಸ ಬಾಂಗ್ಲಾದೇಶವನ್ನು ಕಟ್ಟುತ್ತಾರೆ,ʼಎಂದು ಆಸಿಫ್ ಹೇಳಿದರು.

ಸೋಮವಾರ ಅವಾಮಿ ಲೀಗ್‌ ಆಯೋಜಿಸಿದ್ದ ಶೋಕಾಚರಣೆಯನ್ನು ಕರ್ಫ್ಯೂ ಕಾರಣ ರದ್ದುಗೊಳಿಸಲಾಗಿದೆ.

ಜಾಗರೂಕರಾಗಿರಲು ಭಾರತ ಸಲಹೆ: ಬಾಂಗ್ಲಾದೇಶದಲ್ಲಿ ನೆಲೆಸಿರುವ ಭಾರತೀಯರು ʻತೀವ್ರ ಎಚ್ಚರಿಕೆʼ ವಹಿಸಬೇಕು ಮತ್ತು ಚಲನವಲನವನ್ನು ಕಡಿಮೆ ಮಾಡಬೇಕು ಎಂದು ಭಾರತ ಸಲಹೆ ನೀಡಿದೆ. ಪರಿಸ್ಥಿತಿ ಸಹಜ ಸ್ಥಿತಿಗೆ ಬರುವವರೆಗೆ ಬಾಂಗ್ಲಾದೇಶಕ್ಕೆ ಪ್ರಯಾಣಿಸ ದಂತೆ ನಾಗರಿಕರಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ತಿಳಿಸಿದೆ.

ʻಬಾಂಗ್ಲಾದೇಶದಲ್ಲಿರುವ ಎಲ್ಲಾ ಭಾರತೀಯರು ತೀವ್ರ ಎಚ್ಚರಿಕೆ ವಹಿಸಲು, ಚಲನವಲನಗಳನ್ನು ನಿರ್ಬಂಧಿಸಲು ಮತ್ತು ಢಾಕಾದಲ್ಲಿರುವ ಭಾರತದ ಹೈಕಮಿಷನ್‌ನೊಂದಿಗೆ ಸಂಪರ್ಕದಲ್ಲಿರಲು ಸೂಚಿಸಲಾಗಿದೆ,ʼ ಎಂದು ಹೇಳಿದೆ.

'ಮಧ್ಯಂತರ ಸರ್ಕಾರ' ಪ್ರಸ್ತಾವನೆ: ವಿಶ್ವವಿದ್ಯಾನಿಲಯಗಳ ಶಿಕ್ಷಕರ ಜಾಲವು ವಿವಿಧ ವಿಭಾಗಗಳು ಮತ್ತು ವೃತ್ತಿಗಳ ಜನರನ್ನು ಒಳಗೊಂಡ ಮಧ್ಯಂತರ ಸರ್ಕಾರವನ್ನು ರಚಿಸಲು ಪ್ರಸ್ತಾವ ಮುಂದಿರಿಸಿದೆ. ಪ್ರಸ್ತಾವನೆ ಪ್ರಕಾರ, ಹಸೀನಾ ಅವರು ಹಂಗಾಮಿ ಸರ್ಕಾರಕ್ಕೆ ಅಧಿಕಾರ ಹಸ್ತಾಂತರಿಸಬೇಕಾಗುತ್ತದೆ.

ಶಿಕ್ಷಕರ ನೆಟ್‌ವರ್ಕ್ ಭಾನುವಾರ ಢಾಕಾ ವರದಿಗಾರರ ಒಕ್ಕೂಟದ ಸಾಗರ್-ರುನಿ ಆಡಿಟೋರಿಯಂನಲ್ಲಿ 'ತಾರತಮ್ಯ ಮುಕ್ತ ಪ್ರಜಾಪ್ರಭುತ್ವ- ಬಾಂಗ್ಲಾದೇಶಕ್ಕೆ ಪರಿವರ್ತನೆಯ ರೂಪರೇಷೆ' ಶೀರ್ಷಿಕೆಯ ಪತ್ರಿಕಾಗೋಷ್ಠಿಯನ್ನು ನಡೆಸಿತು.

ಬಾಂಗ್ಲಾದೇಶದ 1971ರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ನಿವೃತ್ತ ಯೋಧರ ಸಂಬಂಧಿಕರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇ.30 ರಷ್ಟು ಮೀಸಲು ನೀಡುವ ವ್ಯವಸ್ಥೆಯನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿ, ಪೊಲೀಸರು ಮತ್ತು ವಿದ್ಯಾರ್ಥಿ ಪ್ರತಿಭಟನಾಕಾರರ ನಡುವಿನ ಹಿಂಸಾತ್ಮಕ ಘರ್ಷಣೆಯಲ್ಲಿ 200 ಕ್ಕೂ ಹೆಚ್ಚು ಜನರು ಸಾವಿಗೀಡಾದ ಕೆಲವು ದಿನಗಳ ಬಳಿಕ ಭಾನುವಾರ ಘರ್ಷಣೆಗಳು ಭುಗಿಲೆದ್ದವು. ಅಂದಿನಿಂದ 11,000 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.

ಅವಾಮಿ ಲೀಗ್ ಕಚೇರಿ, ಮನೆಗಳ ಮೇಲೆ ದಾಳಿ: ಭಾನುವಾರದ ಪ್ರತಿಭಟನೆಯಲ್ಲಿ ಅಪರಿಚಿತರು ಮತ್ತು ಬಲಪಂಥೀಯ ಇಸ್ಲಾಮಿ ಸಂಘ ಟನೆಯಾದ ಶಶೋನ್ತಂತ್ರ ಆಂಡಲೋನ್ ಕಾರ್ಯಕರ್ತರು ಸೇರಿಕೊಂಡಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. ಇವರು ಪ್ರಮುಖ ಹೆದ್ದಾರಿಗಳಲ್ಲಿ ಮತ್ತು ರಾಜಧಾನಿಯೊಳಗೆ ಬ್ಯಾರಿಕೇಡ್‌ಗಳನ್ನು ನಿರ್ಮಿಸಿದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಭಾನುವಾರ 39 ಜಿಲ್ಲೆಗಳಲ್ಲಿ ಜನಪ್ರತಿನಿಧಿಗಳ ಮನೆಗಳು, ಅವಾಮಿ ಲೀಗ್ ಕಚೇರಿಗಳು, ಪೊಲೀಸ್ ಠಾಣೆಗಳು ಮತ್ತು ಇತರ ಸರ್ಕಾರಿ ಸಂಸ್ಥೆಗಳ ಮೇಲೆ ದಾಳಿ, ಧ್ವಂಸ ಮತ್ತು ಬೆಂಕಿ ಹಚ್ಚಲಾಗಿದೆ. ಇದರಿಂದ ಭಾನುವಾರ ಸಂಜೆ 6 ರಿಂದ ಅನಿರ್ದಿಷ್ಟ ಅವಧಿಗೆ ದೇಶದಾದ್ಯಂತ ಪ್ರಮುಖ ನಗರಗಳು ಮತ್ತು ಸಣ್ಣ ಪಟ್ಟಣಗಳಲ್ಲಿ ಕರ್ಫ್ಯೂ ವಿಧಿಸಲಾಯಿತು. ಪೊಲೀಸ್ ಪಡೆಗಳು, ಅರೆಸೈನಿಕ ಗಡಿ ‌ರಕ್ಷಕರು(ಬಿಜಿಬಿ) ಮತ್ತು ಗಣ್ಯ ಅಪರಾಧ ವಿರೋಧಿ ದಳವಾದ ರಾಪಿಡ್ ಆಕ್ಷನ್ ಬೆಟಾಲಿಯನ್ ಅನ್ನು ಸಜ್ಜುಗೊಳಿಸಲಾಯಿತು.

ಮೆಟಾ ಪ್ಲಾಟ್‌ಫಾರ್ಮ್‌ಗಳಾದ ಫೇಸ್‌ಬುಕ್, ಮೆಸೆಂಜರ್, ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಂನ್ನು ಸ್ಥಗಿತಗೊಳಿಸಲು ಸರ್ಕಾರ ಆದೇಶಿಸಿದೆ. 4ಜಿ ಮೊಬೈಲ್ ಇಂಟರ್‌ನೆಟ್ ಸ್ಥಗಿತಗೊಳಿಸುವಂತೆ ಮೊಬೈಲ್ ಆಪರೇಟರ್‌ಗಳಿಗೆ ಆದೇಶ ನೀಡಲಾಗಿದೆ. ಪ್ರಧಾನಿ ಹಸೀನಾ ಅವರು ಆಂದೋಲನದ ಸಂಯೋಜಕರೊಂದಿಗೆ ಮಾತುಕತೆಗೆ ಮುಂದಾಗಿದ್ದಾರೆ. ಆದರೆ, ಪ್ರತಿಭಟನಕಾರರು ಪ್ರಧಾನಿ ಅವರ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ.

ಈ ಶಾಂತಿಯುತ ಅಭಿಯಾನವನ್ನು ಮೂಲಭೂತವಾದಿ ಜಮಾತ್-ಎ-ಇಸ್ಲಾಮಿ ಮತ್ತು ಅದರ ವಿದ್ಯಾರ್ಥಿ ಸಂಘಟನೆ ಇಸ್ಲಾಮಿ ಛಾತ್ರ ಶಿಬಿರ ವನ್ನು ಬೆಂಬಲಿಸುತ್ತಿರುವ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಬಿಎನ್‌ಪಿ ಹೈಜಾಕ್ ಮಾಡಿದೆ ಎಂದು ಸರ್ಕಾರ ದೂರಿದೆ.

Read More
Next Story