ಭಾರತದೊಂದಿಗೆ ಮುನಿಸು; ರಕ್ತ ಸಿಕ್ತ ಅಧ್ಯಾಯ ಮರೆತು ಪಾಕ್​​ ಜತೆ ಕೈಜೋಡಿಸಿದ ಬಾಂಗ್ಲಾದೇಶ
x
ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್​ ಹಾಗೂ ಬಾಂಗ್ಲಾ ಪ್ರಧಾನಿ ಮೊಹಮ್ಮದ್​ ಯೂನುಸ್​.

ಭಾರತದೊಂದಿಗೆ ಮುನಿಸು; ರಕ್ತ ಸಿಕ್ತ ಅಧ್ಯಾಯ ಮರೆತು ಪಾಕ್​​ ಜತೆ ಕೈಜೋಡಿಸಿದ ಬಾಂಗ್ಲಾದೇಶ

1971ರ ಪ್ರತ್ಯೇಕತೆಯಿಂದ ಉಂಟಾದ ಕಹಿ ನಿವಾರಿಸಿ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಒಪ್ಪಿಕೊಂಡಿವೆ ಎಂದು ಢಾಕಾದ ಮಧ್ಯಂತರ ನಾಯಕ ಮುಹಮ್ಮದ್ ಯೂನುಸ್ ಹೇಳಿದ್ದಾರೆ.


ಪಾಕಿಸ್ತಾನದಿಂದ ವಿಮೋಚನೆಗೊಂಡು ಹೊಸ ರಾಷ್ಟ್ರವಾಗಿ ರೂಪುಗೊಂಡ ಬಾಂಗ್ಲಾದೇಶ ಇದೀಗ ಅದೇ ದೇಶದ ಜತೆಗೆ ಉತ್ತಮ ಸಂಬಂಧ ರೂಪಿಸಿಕೊಳ್ಳುವುದಕ್ಕೆ ಮುಂದಾಗಿದೆ. ಹಂಗಾಮಿ ಪ್ರಧಾನಿಯಾಗಿರುವ ಮೊಹಮ್ಮದ್​ ಯೂನುಸ್​ ಈ ನಿಟ್ಟಿನಲ್ಲಿ ಒಂದಡಿ ಮುಂದೆ ಇಟ್ಟಿದ್ದಾರೆ.

1971ರ ಪ್ರತ್ಯೇಕತೆಯಿಂದ ಉಂಟಾದ ಕಹಿ ನಿವಾರಿಸಿ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಒಪ್ಪಿಕೊಂಡಿವೆ ಎಂದು ಢಾಕಾದ ಮಧ್ಯಂತರ ನಾಯಕ ಮುಹಮ್ಮದ್ ಯೂನುಸ್ ಹೇಳಿದ್ದಾರೆ.

ಕೈರೋದಲ್ಲಿ ಗುರುವಾರ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಭೇಟಿಯಾದ ನಂತರ ಅವರು, ದ್ವಿಪಕ್ಷೀಯ ಸಹಯೋಗ ವೃದ್ಧಿಸಲು ಬದ್ಧತೆ ತೋರುತ್ತೇವೆ" ಎಂದು ಹೇಳಿದರು.

"ವ್ಯಾಪಾರ, ವಾಣಿಜ್ಯ ಮತ್ತು ಕ್ರೀಡೆ ಮತ್ತು ಸಾಂಸ್ಕೃತಿಕ ನಿಯೋಗಗಳ ವಿನಿಮಯದ ಮೂಲಕ ಉಭಯ ದೇಶಗಳ ನಡುವಿನ ಸಂಬಂಧ ಬಲಪಡಿಸಲು ಒಪ್ಪಿಕೊಂಡರು" ಎಂದು ಯೂನುಸ್ ಹೇಳಿಕೆ ತಿಳಿಸಿದೆ.

'1971ರ ಸಮಸ್ಯೆ ಬಗೆಹರಿಸೋಣ'

ಬಾಂಗ್ಲಾದೇಶವು ಒಂದು ಕಾಲದಲ್ಲಿ ಪಾಕಿಸ್ತಾನದ ಪೂರ್ವ ಭಾಗವನ್ನು ಒಳಗೊಂಡಿತ್ತು. 1971ರ ಯುದ್ಧದ ನಂತರ ಬಾಂಗ್ಲಾದೇಶ ಸ್ವತಂತ್ರ ದೇಶವಾಯಿತು. ಈ ದೇಶ ರಚನೆ ಪ್ರಕ್ರಿಯೆಯಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿತ್ತು. ಭಾರತವೇ ತನ್ನ ಮಿಲಿಟರಿ ಶಕ್ತಿ ಮೂಲಕ ಬಾಂಗ್ಲಾಕ್ಕೆ ನೆರವಾಗಿತ್ತು.

ಇಸ್ಲಾಮಾಬಾದ್​ನಿಂದ ಬಾಂಗ್ಲಾದೇಶ ಪ್ರತ್ಯೇಕವಾಗುವ ವೇಳೆಯ ರಕ್ತಸಿಕ್ತ ಅಧ್ಯಾಯದ ಕಹಿನೆನಪನ್ನು ಪರಿಹರಿಸಲು ಬಯಸುತ್ತೇನೆ ಎಂದು ಯೂನುಸ್ ಹೇಳಿದ್ದಾರೆ.

ಕೈರೋದಲ್ಲಿ ನಡೆದ ಎಂಟು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳ ಡಿ -8 ಆರ್ಗನೈಸೇಶನ್ ಫಾರ್ ಎಕನಾಮಿಕ್ ಕೋಆಪರೇಶನ್ ಶೃಂಗಸಭೆಯಲ್ಲಿ ಉಭಯ ನಾಯಕರು ಭಾಗವಹಿಸಿದ್ದರು. ಆ ಬಳಿಕ ಯೂನುಸ್ ಮತ್ತು ಷರಿಫ್​ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದರು.

ಉತ್ತಮ ಸಂಬಂಧಕ್ಕಾಗಿ ಷರೀಫ್

ಯೂನುಸ್ ಅವರೊಂದಿಗೆ ಆತ್ಮೀಯ ಮತ್ತು ಸೌಹಾರ್ದಯುತ ಮಾತುಕತೆ ನಡೆಸಿದ್ದೇನೆ ಎಂದು ಷರೀಫ್ ಹೇಳಿದ್ದಾರೆ. ಉಭಯ ದೇಶಗಳ ನಡುವಿನ ಐತಿಹಾಸಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಪರ್ಕಗಳನ್ನು ಷರೀಫ್ ಎತ್ತಿ ತೋರಿಸಿದರು. ದ್ವಿಪಕ್ಷೀಯ ಸಹಕಾರವನ್ನು, ವಿಶೇಷವಾಗಿ ವ್ಯಾಪಾರ, ಜನರ ನಡುವಿನ ಸಂಪರ್ಕ ಮತ್ತು ಸಾಂಸ್ಕೃತಿಕ ವಿನಿಮಯದಲ್ಲಿ ಹೆಚ್ಚಿಸುವ ಪಾಕಿಸ್ತಾನದ ತೀವ್ರ ಬಯಕೆ ವ್ಯಕ್ತಪಡಿಸಿದೆ ಎಂದು ಷರೀಫ್ ಕಚೇರಿಯ ಹೇಳಿಕೆಯನ್ನು ಡಾನ್ ಉಲ್ಲೇಖಿಸಿದೆ.

ಪಾಕಿಸ್ತಾನದಿಂದ ಬರುವ ಸರಕುಗಳ ಶೇಕಡಾ 100ರಷ್ಟು ತಪಾಸಣೆ ಮನ್ನಾ ಮಾಡಿದ್ದಕ್ಕಾಗಿ ಮತ್ತು ಪಾಕಿಸ್ತಾನಿ ಪ್ರಯಾಣಿಕರನ್ನು ಪರಿಶೀಲಿಸಲು ಢಾಕಾ ವಿಮಾನ ನಿಲ್ದಾಣದಲ್ಲಿ ವಿಶೇಷ ಭದ್ರತಾ ಡೆಸ್ಕ್ ರದ್ದುಗೊಳಿಸಿದ್ದಕ್ಕಾಗಿ ಷರೀಫ್ ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ಡಾನ್ ವರದಿ ಮಾಡಿದೆ.

ನವೆಂಬರ್​ನಲ್ಲಿ ಪಾಕಿಸ್ತಾನದಿಂದ ನೇರವಾಗಿ ಬಾಂಗ್ಲಾದೇಶಕ್ಕೆ ತೆರಳಿದ ಇದುವರೆಗಿನ ಮೊದಲ ಸರಕು ಹಡಗು ಕಂಟೇನರ್​​ಗಳನ್ನು ಯಶಸ್ವಿಯಾಗಿ ಇಳಿಸಿತ್ತು.

Read More
Next Story